ದಾಸೋಹದ ಮಹಾಮನೆಯ ಒಡೆಯ
ಕಾಯಕ ಮತ್ತು ದಾಸೋಹ ಬಸವಣ್ಣ ಶರಣರಿಗೆ ನೀಡಿದ ತತ್ವ. ಇದನ್ನು ಅಕ್ಷರಶಃ ಕಾರ್ಯ ರೂಪಕ್ಕೆ ತಂದವರು ಡಾ.ಶಿವಕುಮಾರ ಸ್ವಾಮೀಜಿ. ಅನ್ನ ದಾಸೋಹಕ್ಕೆ ವಚನಕಾರರು ಆದ್ಯತೆ ನೀಡಿದಂತೆಯೇ ಮುಂದೆ ಲಿಂಗಾಯತ ಮಠಗಳಲ್ಲಿ ದಾಸೋಹಕ್ಕೆ ಮಾನ್ಯತೆ ಬಂದವು. ಮಠಗಳು ಬಯಸಿ ಬಂದವರಿಗೆ ಅನ್ನ ನೀಡುವ ಪರಿಪಾಠವನ್ನು ಸಿದ್ದಗಂಗೆ ಅಕ್ಷರಶಃ ಪಾಲಿಸಿಕೊಂಡು ಬಂದಿದೆ.
ಕ್ರಿ.ಶ 1300ರಲ್ಲಿ ಶ್ರೀ ಗೋಸಲ ಸಿದ್ದೇಶ್ವರ ಪ್ರಭುಸ್ವಾಮಿಯಿಂದ ಸ್ಥಾಪಿತಗೊಂಡು ಚರಿತ್ರಾರ್ಹ ಮಹಾ ಪರಂಪರೆಯನ್ನು ಹೊಂದಿದ್ದ ಸಿದ್ದಗಂಗಾ ಮಠದ ಉತ್ತರಾಧಿಕಾರವನ್ನು 1930ರಲ್ಲಿ ವಹಿಸಿಕೊಂಡ ಶಿವಕುಮಾರಸ್ವಾಮೀಜಿ ಮಠಕ್ಕೆ ಆಗ ಇದ್ದ ಕೇವಲ ಹದಿನಾರು ಎಕರೆ ಭೂಮಿ, ಬರುತ್ತಿದ್ದ ಅಲ್ಪ ಬಾಡಿಗೆ ಹಣ ಮುಂತಾದವುಗಳಿಂದ ಲೋಕಪ್ರಸಿದ್ಧ ದಾಸೋಹ ಸೇವೆ-ಗೋಸೇವೆ-ವಿದ್ಯಾದಾನವನ್ನು ಮಾಡುತ್ತಲೇ ಮಠವನ್ನು ಕಟ್ಟಿದವರು.
ಹಳ್ಳಿ-ಹಳ್ಳಿಗಳಲ್ಲಿ ವಿದ್ಯಾಕೇಂದ್ರಗಳನ್ನು ತೆರೆದು ಬಡ ಹಳ್ಳಿಯ ಮಕ್ಕಳಿಗೂ ಅಕ್ಷರ, ಜ್ಞಾನ, ವಿದ್ಯೆಯನ್ನು ನೀಡಿದ್ದರು. ಮಠದಲ್ಲಿ ಉಚಿತ ವಿದ್ಯಾರ್ಥಿ ನಿಲಯವನ್ನು ಪ್ರಾರಂಭಿಸಿದ್ದರು.ಜಾತಿಭೇದವಿಲ್ಲದೇ ಬಡ ಮಕ್ಕಳಿಗೆ ಆಶ್ರಯವಿತ್ತು, 90 ವರ್ಷಗಳ ಹಿಂದೆ 40 ವಿದ್ಯಾರ್ಥಿಗಳಿಂದ ಆರಂಭಗೊಂಡ ನಿತ್ಯ ದಾಸೋಹದ ಮನೆಯಿಂದ ಇಂದು ನಿತ್ಯ ಮಠದ 10 ಸಾವಿರ ವಿದ್ಯಾರ್ಥಿಗಳು, ಮಠಕ್ಕೆ ಬಂದು ಹೋಗುವ ಭಕ್ತರು ಪ್ರಸಾದವನ್ನು ಸೇವಿಸುತ್ತಿದ್ದಾರೆ.
ನಿತ್ಯ ದಾಸೋಹವನ್ನು ನಡೆಸಲು ಸುತ್ತಮುತ್ತಲ ಹಳ್ಳಿಗಳಿಗೆ ಕುದುರೆಯನ್ನೇರಿ ಭಿಕ್ಷಾಟನೆ ಮಾಡುತ್ತಿದ್ದ ಸಿದ್ದಗಂಗಾ ಶ್ರೀಗಳು ಇತ್ತೀಚೆಗೂ ಜಾತ್ರೆಯ ಸಮಯದಲ್ಲಿ ಸಾಂಕೇತಿಕ ಭಿಕ್ಷಾಟನೆಯನ್ನು ಮಾಡುವ ಪರಿಪಾಟವನ್ನು ಇಟ್ಟುಕೊಂಡಿದ್ದರು.ಇಂದು ಮಠದ ದಾಸೋಹಕ್ಕೆ ಧಾನ್ಯದ ಕೊರತೆಯಿಲ್ಲ, ನಗರದಲ್ಲಿರುವ ಎಲ್ಲ ವರ್ತಕರು ಹಾಗೂ ರೈತರು ಸಿದ್ಧಗಂಗೆಯ ಈ ನಿತ್ಯ ದಾಸೋಹಕ್ಕೆ ನಿರಂತರವಾಗಿ ಧಾನ್ಯ, ತರಕಾರಿಯನ್ನು ಪೂರೈಸುತ್ತಿದ್ದಾರೆ.
ಸಿದ್ದಗಂಗೆಯ ನೆರಳಲ್ಲಿ ತುಮಕೂರು
ಜಿಲ್ಲೆಯ ಬಹುಭಾಗದಲ್ಲಿ ಮಠ ಮತ್ತು ಡಾ.ಶಿವಕುಮಾರ ಸ್ವಾಮೀಜಿಯವರ ಕರುಣಾಹಸ್ತ ಚಾಚಿಕೊಂಡಿದೆ. ಚೈತನ್ಯರೂಪಿಗಳಾಗಿದ್ದ ಡಾ.ಶಿವಕುಮಾರಸ್ವಾಮೀಜಿ ಅವರು ಕಳೆದ 75 ವರ್ಷಗಳಿಂದ ಸಿದ್ದಗಂಗಾ ಮಠವನ್ನು ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬೆಳೆಯಲು ಕಾರಣರಾಗಿದ್ದರು. ಮಠದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟ ಕಾಲದಲ್ಲೂ ಶ್ರೀಗಳು ಅಭಿವೃದ್ಧಿ ಯೋಜನೆಗಳಿಗೆ ಹಿಂಜರಿಯಲಿಲ್ಲ. ಅವರು, ಸಂಘ-ಸಂಸ್ಥೆಗಳ ಸ್ಥಾಪನೆಯತ್ತ ಗಮನಹರಿಸಿದರು. ಎಣ್ಣೆ ಬತ್ತಿಗೂ ಕಾಸಿಲ್ಲದ ಕಾಲಘಟ್ಟದಲ್ಲಿ ಮಠದ ಚುಕ್ಕಾಣಿ ಹಿಡಿದು ಕಲ್ಲಿನ ಗುಹೆಯಂತಿದ್ದ ಸಿದ್ದಗಂಗೆಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಬೆಳೆಸಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು.
ಅರಸಿದವರಿಗೆ ಜ್ಞಾನ ನೀಡಿದ ಸ್ವಾಮೀಜಿ
ತುಮಕೂರು ಇಂದು ಶಿಕ್ಷಣ ಗಂಗೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ರಾಜ್ಯ, ಹೊರ ರಾಜ್ಯವಲ್ಲದೆ, ವಿದೇಶಗಳಲ್ಲಿ ಶಿಕ್ಷಣ ಕಾಶಿಯಾಗಿ ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ಸಿದ್ದಗಂಗಾ ಮಠ ಎಂದರೆ ತಪ್ಪಾಗಲಾರದು. 1917ರಲ್ಲಿ ಶ್ರೀ ಉದ್ಧಾನ ಶಿವಯೋಗಿ ಸ್ವಾಮೀಜಿ ಅವರಿಂದ ಸಂಸ್ಕೃತ ಮತ್ತು ವೇದ ಪಾಠಶಾಲೆ ಸ್ಥಾಪನೆ ಮೂಲಕ ಮಠದಲ್ಲಿ ಶಿಕ್ಷಣ ಯಜ್ಞ ಆರಂಭಗೊಂಡಿತು. ಇಂದು 144 ಶಿಕ್ಷಣ ಸಂಸ್ಥೆ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳನ್ನು ಹೊಂದಿದೆ.
ಶಿವಕುಮಾರ ಸ್ವಾಮೀಜಿ ಅವರು ಸಿದ್ದಗಂಗೆಯನ್ನು ಯೋಗಿ ಕಟ್ಟಿದ ನಾಡು ಎಂಬಂತೆ ಬೆಳೆಸಿದರು. 1937ರಲ್ಲಿಯೇ ತಮ್ಮ ಗುರು ಉದ್ಧಾನ ಶಿವಯೋಗಿಗಳ ಸಮ್ಮುಖದಲ್ಲಿಯೇ ಸಂಸ್ಕೃತ ಮತ್ತು ವೇದ ಪಾಠಶಾಲೆಯನ್ನು ಕಾಲೇಜಾಗಿ ಪರಿವರ್ತಿಸಿದರು. ಇಂದು 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಸಂಸ್ಕೃತ ಅಭ್ಯಾಸವನ್ನು ಮಾಡುತ್ತಿದ್ದಾರೆ. ವಸತಿ ಸೌಕರ್ಯದೊಡನೆ ಸಂಸ್ಕೃತ ವಿದ್ವತ್ ಮಟ್ಟದವರೆಗೆ ಓದಲು ಅವಕಾಶವನ್ನು ಮಠದಲ್ಲಿ ಕಲ್ಪಿಸಿಕೊಡಲಾಗಿದೆ.
ಉದ್ದಾನ ಶಿವಯೋಗಿಗಳ ಕಾಲದಲ್ಲಿ, ಅಂದರೆ 1940-41ರಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 60 ಮಾತ್ರ. ಕಾಲಕಾಲಕ್ಕೆ ಆ ಸಂಖ್ಯೆ ಗಣನೀಯವಾಗಿ ಬೆಳೆದು, ಇಂದು ಆ ಸಂಖ್ಯೆ ಸುಮಾರು 8 ಸಾವಿರಕ್ಕೆ ಏರಿದೆ. ತುಮಕೂರಿನಲ್ಲಿ 1944 ರಲ್ಲಿ ಆರಂಭವಾದ ಸಿದ್ಧಗಂಗಾ ಹೈಸ್ಕೂಲ್, ಆವತ್ತಿನಿಂದ ಈವರೆಗೂ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ವಿದ್ಯಾಭ್ಯಾಸ ಕೇವಲ ನಗರ ಪ್ರದೇಶಕ್ಕೆ ಸೀಮೀತವಾಗಬಾರದು. ಹಳ್ಳಿ ಮೂಲೆಯಲ್ಲೂ ಶಾಲೆಗಳು ಆರಂಭವಾಗಬೇಕು ಎಂಬ ಸಂಕಲ್ಪದೊಂದಿಗೆ ಶ್ರೀಗಳು ಶೈಕ್ಷಣಿಕ ಕ್ರಾಂತಿಗೆ ಮುಂದಾದರು. 1962ರಲ್ಲಿ ಗ್ರಾಮಾಂತರ ಪ್ರದೇಶಗಳಲ್ಲೂ ಶಾಲೆ ಆರಂಭಿಸುವ ಯೋಜನೆಯ ಕಡೆಗೆ ಹೆಜ್ಜೆ ಇರಿಸಿದರು.ಇದು ಶಿಕ್ಷಣ ಕ್ಷೇತದಲ್ಲಿ ಕ್ರಾಂತಿಯೇ ಸರಿ.ಅದರ ಫಲವೆಂಬಂತೆ ಇವತ್ತು 55 ಪ್ರೌಢ ಶಾಲೆಗಳಿಗೆ ಮಠ ಆಸರೆಯಾಗಿದೆ.
ದಣಿವರಿಯದ ಕಾಯಕಯೋಗಿ
ಉದ್ಧಾನ ಶಿವಯೋಗಿಗಳು ನಂತರ ತಮ್ಮ ಪೀಠಕ್ಕಾಗಿ ಶ್ರೀಮರುಳಾರಾಧ್ಯ ಅವರನ್ನು ಆರಿಸಿಕೊಂಡರು. ಅವರು ಅಕಾಲದಲ್ಲಿಯೇ ನಿಧನರಾದರು. ಆಗ ಮಾಗಡಿ ತಾಲೂಕು, ವೀರಾಪುರ ಗ್ರಾಮದ ಶಿವಣ್ಣ ಎಂಬವರನ್ನು 1930 ಮಾರ್ಚ್ 3ರಂದು ಶ್ರೀ ಶಿವಕುಮಾರಸ್ವಾಮಿ ಎಂಬ ನೂತನಾಭಿದಾನದಿಂದ ಕ್ಷೇತ್ರಾಧಿಪತಿಗಳಾಗಿ ನೇಮಿಸಿ ಅವರಿಗೆ ಹನ್ನೊಂದು ವರ್ಷಗಳ ಕಾಲ ವಿದ್ಯೆಯನ್ನು ಧಾರೆಯೆರೆದು, 1941 ಜನವರಿ 11 ರಂದು ಲಿಂಗೈಕ್ಯರಾದರು.
1930ರಿಂದ ಇಂದಿನವರೆಗೆ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಸಮಾಜದ ಕಲ್ಯಾಣಕ್ಕಾಗಿ, ಬಸವಾದಿ ಪ್ರಥಮರ ನಡೆನುಡಿಗಳ ಪಥದಲ್ಲಿ, ಶರಣ ತತ್ವಗಳ ಪ್ರಸಾರದಲ್ಲಿ ಸತತ 88 ವರ್ಷಗಳ ಅಖಂಡಸೇವೆ ಸಲ್ಲಿಸಿದ್ದಾರೆ. ಮಠದಲ್ಲಿ ಲಿಂಗಪೂಜೆ, ಜಂಗಮದಾಸೋಹ, ಶರಣತತ್ವ ಕ್ರಿಯಾನುಷ್ಠಾನ ಸೇವಾನಿರತರಾದ ಶ್ರೀಗಳು ಸಿದ್ದಗಂಗಾ ಮಠವನ್ನು ವಿದ್ಯಾದಾನ ಮತ್ತು ಜಂಗಮ ಕ್ಷೇತ್ರವಾಗಿ ಮುನ್ನಡೆಸಿದ್ದಾರೆ.
1963ರಿಂದ ವಸ್ತು ಪ್ರದರ್ಶನ
ಶಿವರಾತ್ರಿಯ ಶಿ್ರೀ ಸಿದ್ದಲಿಂಗೇಶ್ವರ ಜಾತ್ರಾ ಸಮಯದಲ್ಲಿ 15 ದಿನಗಳ ಕಾಲ ಈ ವಸ್ತು ಪ್ರದರ್ಶನ ನಡೆಯುತ್ತದೆ. ಈ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಾನಾ ಇಲಾಖೆಗಳು ಹಾಗೂ ಖಾಸಗಿ ಉದ್ಯಮಿಗಳೂ ತಮ್ಮ ಸಂಸ್ಥೆಗಳ ಮಳಿಗೆಗಳನ್ನೂ ಇಡುತ್ತಾರೆ. ರೈತರಿಗೆ ಕೃಷಿಯಲ್ಲಿನ ಹೊಸ ಅನ್ವೇಷಣೆಗಳನ್ನು ತಿಳಿಸಿಕೊಡುವ ಪ್ರಾತ್ಯಕ್ಷಿಕಾ ಕೇಂದ್ರವನ್ನಾಗಿ ವಸ್ತು ಪ್ರದರ್ಶನವನ್ನು ರೂಪಿಸಿದ ಶ್ರೀಗಳಿಂದ, ಜಾತ್ರಾ ಸಂದರ್ಭದಲ್ಲಿಯೇ ಲಕ್ಷಾಂತರ ಭಕ್ತರು, ರೈತರಿಗೆ ಉಪಯುಕ್ತ ಮಾಹಿತಿಗಳನ್ನು ನೀಡುವಂತಾಯಿತು.
ಸಿದ್ದಗಂಗಾ ಶ್ರೀ ಜಾರಿಗೆ ತಂದ ಅನೇಕ ಕಾರ್ಯಗಳು ಮಠದೊಂದಿಗೆ ಜನರನ್ನು ಒಗ್ಗೂಡಿಸುವ, ಮಾಹಿತಿ ನೀಡುವ ಕೇಂದ್ರವನ್ನಾಗಿ ರೂಪಿಸುವಂತಾಯಿತು. ಜಿಲ್ಲೆಯಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಭಕ್ತ ಸಮೂಹವನ್ನು ಹೊಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
10 ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ
ಸಿದ್ದಗಂಗೆ ಯಲ್ಲಿ ಸಂಸ್ಕೃತ ಪಾಠ ಶಾಲೆಯಿಂದ ಆರಂಭವಾದ ಶಿಕ್ಷಣ ಜ್ಯೋತಿ ಇಂದಿಗೂ ನಿರಂತರವಾಗಿ ಬೆಳಗುತ್ತಲೇ ಇದೆ. ಸಿದ್ದಗಂಗಾ ಶಿಕ್ಷಣ ಸಂಸ್ಥೆ ಮಹಾವೃಕ್ಷವಾಗಿ ಬೆಳೆದಿದೆ. ಪ್ರಾಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೂ ಶೈಕ್ಷಣಿಕ ಸೇವೆ ಕವಲೊಡೆದಿದೆ. ಮಠದಲ್ಲಿ ಎಲ್ಲ ಜಾತಿಗೆ ಸೇರಿದ 10 ಸಾವಿರಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ. ಮಠದ ಮಕ್ಕಳಿಗೆ ಮಾತೃ ಪ್ರೀತಿ ತೋರುವ ಶ್ರೀಗಳು ಶಿಕ್ಷಣದ ಜತೆಗೆ ಸಂಸ್ಕೃತ, ಸಂಸ್ಕಾರವನ್ನು ಹೇಳಿಕೊಡುತ್ತಿದ್ದಾರೆ. 130 ವಿದ್ಯಾಸಂಸ್ಥೆಗಳ ಮೂಲಕ ಶೈಕ್ಷಣಿಕ ಅಭಿಯಾನವನ್ನೇ ನಡೆಸುತ್ತಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆಯನ್ನೇ ನಿರ್ಮಿಸಿದ್ದಾರೆ.
ಶಿವಕುಮಾರ ಸ್ವಾಮೀಜಿ ಪ್ರತಿದಿನವೂ ಬೆಳಗಿನ 3ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾ ಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ತಪಸ್ಸಿನಲ್ಲಿ ತಲ್ಲೀನರಾಗುತ್ತಿದ್ದರು. ಈ ವೇಳೆಯಲ್ಲಿ ಯಾರೂ ಕೂಡ ಆ ಕೋಣೆಗೆ ಪ್ರವೇಶಿಸುವಂತಿರಲಿಲ್ಲ. ತಪಸ್ಸು ಮುಗಿದ ಬಳಿಕ ಶ್ರೀಗಳು ಆಜ್ಞೆಯಂತೆ ಕೊಠಡಿಯ ಬಾಗಿಲನ್ನು ತೆರೆಯಲಾಗುತ್ತಿತ್ತು.ಇನ್ನು ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಭಕ್ತರು ಬೆಳಗಿನ ಜಾವ 3ರಿಂದಲೇ ಶ್ರೀಗಳ ದರ್ಶನಕ್ಕೆ ಬಾಗಿಲಲ್ಲಿ ಕಾದು ಕುಳಿತಿರುತ್ತಿದ್ದರು.