ವಿರೋಧಾಭಾಸಗಳ ಮೊತ್ತ -ಎಸ್. ಎಲ್. ಭೈರಪ್ಪ

Update: 2019-01-22 18:40 GMT

ಇಲ್ಲಿ ಪ್ರಶ್ನೆ ಇರುವುದು ಶುದ್ಧ ಸಾಹಿತ್ಯದ ಕುರಿತ ಅವರ ನಂಬಿಕೆ ಅಥವಾ ಮಾಂಸಾಹಾರ ಪಾಶ್ಚಾತ್ಯರದ್ದು ಎನ್ನುವ ಅವರು ನಿಲುವಿನ ಬಗ್ಗೆ ಅಲ್ಲ. ಕನಿಷ್ಠ ಅವರು ಆ ನಿಲುವಿಗೆ ಎಷ್ಟು ಬದ್ಧರಾಗಿದ್ದಾರೆ ಎನ್ನುವುದು ಚರ್ಚೆಯ ವಿಷಯವಾಗಬೇಕಾಗಿದೆ. ಗೋಮಾಂಸ ಭಾರತೀಯತೆಯ ಭಾಗವಾಗಿರುವುದನ್ನು ಒಂದೆಡೆ ತನ್ನ ಕಾದಂಬರಿಗಳಲ್ಲಿ ಬರೆಯುತ್ತಲೇ, ಮಾಂಸಾಹಾರ ಭಾರತೀಯತೆಗೆ ವಿರುದ್ಧವಾದುದು ಎಂದು ವೇದಿಕೆಗಳಲ್ಲಿ ಭಾಷಣ ಮಾಡುವ ಭೈರಪ್ಪರೊಳಗಿನ ‘ರಾಜಕಾರಣಿ’ಯನ್ನು ಬಯಲು ಮಾಡುವುದು ಕನ್ನಡ ಸಾಹಿತ್ಯವಲಯದೊಳಗೆ ಅತ್ಯಗತ್ಯವಾಗಿ ನಡೆಯಬೇಕಾಗಿದೆ.


ಎಲ್ಲ ಲಜ್ಜೆಗಳನ್ನು ಬಿಟ್ಟು ಸಾರ್ವಜನಿಕವಾಗಿ ಜನಸಾಮಾನ್ಯರ ತಲೆಗೆ ಹೊಡೆದಂತೆ ಸುಳ್ಳು ಹೇಳುವ ಭಂಡತನ ರಾಜಕಾರಣಿಗಳಿಗೆ ಸೀಮಿತವಾಗಿರಬೇಕಾಗಿಲ್ಲ ಎನ್ನುವುದನ್ನು ಇತ್ತೀಚೆಗೆ ಹಿರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಜಾಹೀರುಪಡಿಸಿದ್ದಾರೆ. ಒಬ್ಬ ಸೃಜನಶೀಲ ಸಾಹಿತಿಗಿರಬೇಕಾಗಿರುವ ಕನಿಷ್ಠ ನಾಚಿಕೆಯನ್ನೂ ಬಿಟ್ಟುಕೊಟ್ಟಿರುವ ಭೈರಪ್ಪ, ತನ್ನ ನಿಲುವು, ಸಿದ್ಧಾಂತ ಮತ್ತು ತಾನು ನಂಬಿರುವ ಚಳವಳಿಗಾಗಿ ಹಸಿ ಸುಳ್ಳುಗಳನ್ನು ಸತ್ಯವೆನ್ನುವಂತೆ ಹೇಳಬಲ್ಲೆ ಮತ್ತು ಜನರು ಅವುಗಳನ್ನು ಯಾವ ಪ್ರಶ್ನೆಗಳೂ ಇಲ್ಲದೇ ಒಪ್ಪಿಕೊಳ್ಳುತ್ತಾರೆ ಎಂದು ಬಲವಾಗಿ ನಂಬಿದಂತಿದೆ. ಇಲ್ಲದೇ ಇದ್ದರೆ ನೂರಾರು ಸಾಹಿತಿಗಳು, ಚಿಂತಕರು, ಓದುಗರು ನೆರೆದಿರುವ ವೇದಿಕೆಯೊಂದರಲ್ಲಿ ಭೈರಪ್ಪ ಅವರು ‘‘ಒಬ್ಬ ಸಾಹಿತಿ ಎಲ್ಲ ಚಳವಳಿಗಳಿಂದ ದೂರವಿರಬೇಕು, ನನಗೆ ನಂಬಿಕೆಯಿರುವುದು ಶುದ್ಧ ಸಾಹಿತ್ಯದಲ್ಲಿ ಮಾತ್ರ. ನನ್ನದು ಚಳವಳಿ ಸಾಹಿತ್ಯವಲ್ಲ, ಶುದ್ಧ ಸಾಹಿತ್ಯ. ಆದುದರಿಂದಲೇ ನನಗೆ ಇಷ್ಟು ಬರೆಯಲು ಸಾಧ್ಯವಾಯಿತು’’ ಎಂದು ಹೇಳಿಕೊಳ್ಳಲು ಸಾಧ್ಯವೇ?

ತಮ್ಮದೇ ಹೆಸರಿನ ಪ್ರತಿಷ್ಠಾನ ಹಮ್ಮಿಕೊಂಡ ‘ಭೈರಪ್ಪ ಸಾಹಿತ್ಯೋತ್ಸವ’ದಲ್ಲಿ ತನ್ನ ಸೃಜನಶೀಲ ಬದುಕಿನ ಅನುಭವದ ನೆಲೆಯನ್ನು ಹೇಳಿಕೊಳ್ಳುತ್ತಾ ಈ ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಮಾತುಗಳ ಜೊತೆಗೆ ಮಾಂಸಾಹಾರದ ಬಗ್ಗೆಯೂ ಅವರು ಹೇಳಿಕೆಯನ್ನು ನೀಡಿದ್ದಾರೆ. ಗೋಮಾಂಸ ಮಾತ್ರವಲ್ಲ, ಮಾಂಸಾಹಾರವನ್ನೇ ತ್ಯಜಿಸಬೇಕು ಎನ್ನುವುದು ಅವರ ನಿಲುವು. ಪ್ರಾಣಿಗಳಿರುವುದು ಆಹಾರಕ್ಕೆ ಎನ್ನುವ ನಂಬಿಕೆ ಪಾಶ್ಚಾತ್ಯರದ್ದು ಎನ್ನುವ ಕಾರಣವನ್ನು ಅವರು ಅದಕ್ಕೆ ನೀಡುತ್ತಾರೆ. ಭಾರತೀಯರು ಪುನರ್ಜನ್ಮವನ್ನು ನಂಬುವುದರಿಂದ ನಮ್ಮ ಹಿರಿಯರು ಪ್ರಾಣಿಗಳಾಗಿಯೂ ಹುಟ್ಟಬಹುದು. ಆದುದರಿಂದಲೇ ಮಾಂಸಾಹಾರ ಪದ್ಧತಿ ಭಾರತೀಯರದ್ದಲ್ಲ ಎಂದು ಅವರು ಘೋಷಿಸುತ್ತಾರೆ.

ಇಲ್ಲಿ ಪ್ರಶ್ನೆ ಇರುವುದು ಶುದ್ಧ ಸಾಹಿತ್ಯದ ಕುರಿತ ಅವರ ನಂಬಿಕೆ ಅಥವಾ ಮಾಂಸಾಹಾರ ಪಾಶ್ಚಾತ್ಯರದ್ದು ಎನ್ನುವ ಅವರ ನಿಲುವಿನ ಬಗ್ಗೆ ಅಲ್ಲ. ಕನಿಷ್ಠ ಅವರು ಅವರದೇ ಆ ನಿಲುವಿಗೆ ಎಷ್ಟು ಬದ್ಧರಾಗಿದ್ದಾರೆ ಎನ್ನುವುದು ಚರ್ಚೆಯ ವಿಷಯವಾಗಬೇಕಾಗಿದೆ. ಗೋಮಾಂಸ ಭಾರತೀಯತೆಯ ಭಾಗವಾಗಿರುವುದನ್ನು ಒಂದೆಡೆ ತನ್ನ ಕಾದಂಬರಿಗಳಲ್ಲಿ ಬರೆಯುತ್ತಲೇ, ಮಾಂಸಾಹಾರ ಭಾರತೀಯತೆಗೆ ವಿರುದ್ಧವಾದುದು ಎಂದು ವೇದಿಕೆಗಳಲ್ಲಿ ಭಾಷಣ ಮಾಡುವ ಭೈರಪ್ಪರೊಳಗಿನ ‘ರಾಜಕಾರಣಿ’ಯನ್ನು ಬಯಲು ಮಾಡುವುದು ಕನ್ನಡ ಸಾಹಿತ್ಯ ವಲಯದೊಳಗೆ ಅತ್ಯಗತ್ಯವಾಗಿ ನಡೆಯಬೇಕಾಗಿದೆ.

‘ನನ್ನದು ಚಳವಳಿ ಸಾಹಿತ್ಯವಲ್ಲ, ಯಾವುದೇ ಚಳವಳಿಯಲ್ಲಿ ನಾನು ಭಾಗಿಯಾಗಿಲ್ಲ, ನನ್ನದು ಶುದ್ಧ ಸಾಹಿತ್ಯ’ ಎಂಬ ಅವರ ಹೇಳಿಕೆಯನ್ನು ಗಮನಿಸೋಣ. ಇಂತಹ ಹೇಳಿಕೆಯನ್ನು ಜಯಂತ್ ಕಾಯ್ಕಿಣಿ, ವೈದೇಹಿ, ಅಬ್ದುಲ್ ರಶೀದ್, ನಾಗತಿಹಳ್ಳಿ ಚಂದ್ರಶೇಖರ್‌ರಂಥವರು ಹೇಳಿದ್ದಿದ್ದರೆ ಅದಕ್ಕೊಂದು ವ್ಯಾಖ್ಯಾನವನ್ನು ಕೊಡಲು ಪ್ರಯತ್ನಿಸಬಹುದಿತ್ತು. ವರ್ತಮಾನದ ಬೆಳವಣಿಗೆಗಳ ಜೊತೆಗೆ ಗರಿಷ್ಠವಾದ ಅಂತರಗಳನ್ನು ಇಟ್ಟುಕೊಂಡು ತಮ್ಮದೇ ಭಾವಲೋಕದ ಮನುಷ್ಯರ ಜೊತೆಗೆ ಇವರು ಬದುಕುತ್ತಿರುವವರು. ಅವರು ಬರೆದ, ಬರೆಯುತ್ತಿರುವ ಸಾಹಿತ್ಯ ಪ್ರಕಾರಗಳೇ ‘ಶುದ್ಧ ಸಾಹಿತ್ಯ’ಕ್ಕಿರುವ ಉದಾಹರಣೆಗಳಿರಬಹುದು ಎಂದು ಹೇಳಿ ಸುಮ್ಮಗಾಗಬಹುದು. ಆದರೆ ಎಸ್. ಎಲ್. ಭೈರಪ್ಪ ಪ್ರಖರ ಹಿಂದುತ್ವವಾದಿ ಚಳವಳಿಯಲ್ಲಿ ಗುರುತಿಸಿಕೊಳ್ಳುತ್ತಾ ಬಂದವರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಹಿಂದುತ್ವದ ತಳಹದಿಯಲ್ಲಿ ನಿಂತ ರಾಷ್ಟ್ರೀಯವಾದಿ ಚಳವಳಿಗೆ ಅವರ ಕಾದಂಬರಿಗಳ ಕೊಡುಗೆಗಳು ಸಣ್ಣದೇನಲ್ಲ. ಹೀಗೆ ಬಹಿರಂಗವಾಗಿಯೇ ಒಂದು ಚಳವಳಿಯೊಳಗೆ ತೊಡಗಿಕೊಳ್ಳುತ್ತಾ, ‘‘ನನ್ನದು ಚಳವಳಿ ಸಾಹಿತ್ಯ ಅಲ್ಲ’’ ಎಂದು ಹೇಳುವುದು ಭಂಡತನವಲ್ಲದೆ ಇನ್ನೇನೂ ಅಲ್ಲ.

ಭೈರಪ್ಪರ ಕಾದಂಬರಿಗಳನ್ನೇ ತೆಗೆದುಕೊಳ್ಳೋಣ. ‘ಧರ್ಮಶ್ರೀ’ ಕಾದಂಬರಿ ಚರ್ಚಿಸುವುದೇ ಪಾಶ್ಚಿಮಾತ್ಯರ ಮತಾಂತರಗಳ ಕುರಿತಂತೆ. ಆರೆಸ್ಸೆಸ್ ಮತ್ತು ಸಂಘ ಪರಿವಾರ ಮತಾಂತರ ಚರ್ಚೆಗಳನ್ನು ಕೈಗೆತ್ತಿಕೊಂಡು ದೇಶಾದ್ಯಂತ ಜನರಲ್ಲಿ ದ್ವೇಷಭಾವನೆಯನ್ನು ಬಿತ್ತುತ್ತಿರುವ ಸಂದರ್ಭದಲ್ಲಿ ಅವರು ಧರ್ಮಶ್ರೀಯನ್ನು ಬರೆದರು. ಆ ಕಥಾಪಾತ್ರವೇ ವೈದಿಕ ಧರ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತದೆ. ಮತಾಂತರಗೊಂಡು ತನ್ನ ಹೆಸರನ್ನು ‘ಧರ್ಮಶ್ರೀ’ ಎಂದು ಪರಿವರ್ತಿಸಿಕೊಂಡ ಹೆಣ್ಣುಮಗಳು ಕಥಾನಾಯಕಿ. ಆರೆಸ್ಸೆಸ್ ಪ್ರತಿಪಾದಿಸುವ ಭಾರತೀಯತೆಯ ವೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕೆ ಸೃಷ್ಟಿಯಾದ ಪಾತ್ರ ಇದು. ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ‘ಗೋವಿನ ಹಾಡು’ ಕತೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದಿರುವುದಾದರೂ, ಗೋವಿನ ಮೂಲಕ ಆರೆಸ್ಸೆಸ್ ದೇಶಾದ್ಯಂತ ಹಮ್ಮಿಕೊಂಡ ಚಳವಳಿಗೆ ಪೂರಕವಾಗಿ ಸೃಷ್ಟಿಯಾದ ಕಥಾನಕವಾಗಿದೆ. ಹೈನೋದ್ಯಮವನ್ನು ಬದಿಗೆ ಸರಿಸಿ, ಗೋವಿಗೆ ಮಾತೃ ಪಾವಿತ್ರತೆಯನ್ನು ನೀಡುವ, ಆರೆಸ್ಸೆಸ್ ಕಾರ್ಯಕರ್ತರನ್ನು ಗೋರಕ್ಷಕ ರೆಂದು ಬಿಂಬಿಸುವ ಕಾದಂಬರಿ ಇದಾಗಿದೆ. ‘ಆವರಣ’ ಕಾದಂಬರಿಯಂತೂ ಬಾಬರಿ ಮಸೀದಿ ಧ್ವಂಸವನ್ನು ಸಮರ್ಥಿಸುತ್ತಾ, ಕಾಶಿ, ಮಥುರಾದಲ್ಲಿರುವ ದೇವಸ್ಥಾನಗಳನ್ನು ಕೆಡಹಬೇಕು ಎನ್ನುವ ಪರೋಕ್ಷ ಸಂದೇಶವನ್ನು ಹಿಂದುತ್ವವಾದಿಗಳಿಗೆ ನೀಡುವ ಕಾದಂಬರಿ. ಇತಿಹಾಸವನ್ನು ಕಪ್ಪು-ಬಿಳುಪು ಕಣ್ಣಿನಲ್ಲಿ ನೋಡುತ್ತಾ, ಆರೆಸ್ಸೆಸ್ ಪ್ರತಿಪಾದಿಸುವ ಇತಿಹಾಸವನ್ನು ಕಾದಂಬರಿಯ ರೂಪದಲ್ಲಿ ತಂದು ಓದುಗರಿಗೆ ಹಂಚಿದ್ದಾರೆ. ‘ಕವಲು’ ಕಾದಂಬರಿಯೂ ಮನುವಾದಿ ಹಿಂದುತ್ವದಲ್ಲಿ ಮಹಿಳೆಯ ಪಾತ್ರವನ್ನು ಗುರುತಿಸುವಂತಹದು. ಶಿಕ್ಷಿತ ಆಧುನಿಕ ಮಹಿಳೆಯರನ್ನು ವ್ಯಭಿಚಾರಿಗಳೆಂದು, ವಂಚಕಿಯರೆಂದು ಬಹಿರಂಗವಾಗಿಯೇ ಘೋಷಿಸುವ ಕಾದಂಬರಿ. ಇವೆಲ್ಲವನ್ನೂ ಅವರ ಕಾದಂಬರಿಗಳ ಒಳಗಿಳಿದು ಶೋಧಿಸಿ ತೆಗೆಯಬೇಕಾದ ಅಗತ್ಯವೇನೂ ಇಲ್ಲ.

ಭೈರಪ್ಪರ ಕಾದಂಬರಿಗಳು ಯಾವ ಚಳವಳಿಗೆ ಪೂರಕವಾಗಿ ಹುಟ್ಟಿಕೊಂಡಿವೆ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿರುವಂತಹದು. ಹೀಗಿದ್ದರೂ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗವಾಗಿ ‘‘ನನ್ನದು ಶುದ್ಧ ಸಾಹಿತ್ಯ. ಯಾವ ಚಳವಳಿಯ ಹಿಂದೆಯೂ ನಾನಿಲ್ಲ’’ ಎಂದು ಹೇಳಬೇಕಾದರೆ ಒಂದೋ ಅವರು ಕನ್ನಡದ ಓದುಗರನ್ನು ಸಂಪೂರ್ಣ ಮೂರ್ಖರೆಂದು ತಿಳಿದುಕೊಂಡಿದ್ದಾರೆ ಅಥವಾ ಅವರು ತಮ್ಮಾಳಗೆ ಉಳಿಸಿಕೊಂಡ ಅಲ್ಪಸ್ವಲ್ಪ ಲಜ್ಜೆಯನ್ನೂ ಕಳೆದುಕೊಂಡಿದ್ದಾರೆ. ಬಹುಶಃ ವೈದಿಕ ತಾತ್ವಿಕ ಹಿನ್ನೆಲೆಯಿಲ್ಲದ ಶೂದ್ರರು ಬರೆಯುವ ಎಲ್ಲ ಸಾಹಿತ್ಯಗಳೂ ಅಶುದ್ಧ ಎಂದು ವಾದಿಸಲು ಮುಂದಾಗಿದ್ದಾರೆ. ಈ ‘ಅಶುದ್ಧ’ ಕಲ್ಪನೆಯ ತಾಯಿ, ಶೂದ್ರರು ಬರೆಯಬಾರದು, ಓದಬಾರದು ಎನ್ನುವ ಮನುಸ್ಮತಿಯ ನೀತಿಸಂಹಿತೆಯಾಗಿದೆ ಎನ್ನುವುದನ್ನು ನಾವು ಗಮನಿಸಬೇಕು. ವೈದಿಕರು ಬರೆದಿರುವುದಷ್ಟೇ ಶುದ್ಧ ಉಳಿದುದೆಲ್ಲ ಸಾಹಿತ್ಯ ಕ್ಷೇತ್ರಗಳನ್ನು ಅಶುದ್ಧ ಮಾಡುತ್ತಿವೆ ಎನ್ನುವ ಹಂತಕ್ಕೆ ಭೈರಪ್ಪ ಸಜ್ಜಾಗುತ್ತಿದ್ದಾರೆ. ಎರಡನೆಯದಾಗಿ ಗೋಮಾಂಸ. ಈ ದೇಶದಲ್ಲಿ ಗೋಮಾಂಸ ಸೇವನೆ ಹಿಂದೂ ವಿರೋಧಿ ಎಂದು ಪ್ರಾಮಾಣಿಕವಾಗಿ ನಂಬಿ, ಅದನ್ನು ಪ್ರತಿಪಾದಿಸುವ ಒಂದು ಗುಂಪಿದೆ. ಭೈರಪ್ಪ ಆ ಗುಂಪಿಗೆ ಸೇರಿದವರು ಖಂಡಿತ ಅಲ್ಲ. ಯಾಕೆಂದರೆ ಗೋಮಾಂಸ ಸೇವನೆ ಭಾರತೀಯವಾದುದು ಎನ್ನುವುದನ್ನು ತನ್ನ ಕಾದಂಬರಿಗಳಲ್ಲಿ ಬರೆಯುತ್ತಲೇ, ವೇದಿಕೆಯಲ್ಲಿ ಗೋಮಾಂಸ ಮಾತ್ರವಲ್ಲ ಮಾಂಸಾಹಾರವನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಮಾಂಸಾಹಾರ ಪಾಶ್ಚಾತ್ಯವಾದುದು ಎಂದು ಭಾಷಣಗಳಲ್ಲಿ ಘೋಷಣೆ ಮಾಡುವ ಭೈರಪ್ಪ ಅವರದೇ ಮಹತ್ವದ ಕಾದಂಬರಿ ‘ಪರ್ವ’ವನ್ನು ಓದಿದರೆ ಸಾಕು, ಅವರ ಮಾತುಗಳು ಎಷ್ಟು ಟೊಳ್ಳುತನದಿಂದ ಕೂಡಿದ್ದು ಮತ್ತು ರಾಜಕೀಯವಾದುದು ಎನ್ನುವುದನ್ನು ಸಾಬೀತು ಮಾಡಲು.

ಭೈರಪ್ಪ ಅವರು ಬರೆದ ಮಹತ್ವದ ಕೃತಿಗಳಲ್ಲಿ ‘ಪರ್ವ’ ಒಂದು. ಈ ಕಾದಂಬರಿ ‘ಮಹಾಭಾರತ’ ಮಹಾಕಾವ್ಯವನ್ನು ಆಧರಿಸಿದೆ. ಹಲವು ವರ್ಷಗಳ ಸಂಶೋಧನೆಗಳ ಬಳಿಕ ಈ ಕಾದಂಬರಿಯನ್ನು ಬರೆದಿದ್ದೇನೆ ಎಂದು ಭೈರಪ್ಪ ಹೇಳಿಕೊಂಡಿದ್ದಾರೆ. ಇದಕ್ಕಾಗಿ ಅವರು ಉತ್ತರ ಭಾರತದ ಹಲವು ಪ್ರದೇಶಗಳನ್ನು ಸುತ್ತಿದ್ದಾರಂತೆ. ಕುರುಕ್ಷೇತ್ರ ಯುದ್ಧ ನಡೆದಿರಬಹುದಾದ ಪ್ರದೇಶಗಳಲ್ಲಿ ಅಲೆದಾಡಿದ್ದಾರಂತೆ. ಅಂದರೆ ಮಹಾಭಾರತವೆಂಬ ಪೌರಾಣಿಕ ಕಾವ್ಯವನ್ನು ‘ಪರ್ವ’ ಕಾದಂಬರಿಯ ಮೂಲಕ ಇತಿಹಾಸವನ್ನಾಗಿಸಿದ್ದಾರೆ. ಅಂದರೆ ಅಲ್ಲಿನ ಪಾತ್ರಗಳನ್ನೆಲ್ಲ ವಾಸ್ತವ ರೂಪಕ್ಕೆ ಇಳಿಸಿದ್ದಾರೆ. ಇದೇ ಕಾದಂಬರಿಯಲ್ಲಿ ಪದೇ ಪದೇ ಗೋಮಾಂಸ ಭಕ್ಷಣೆಯ ಸಂದರ್ಭ ಬರುತ್ತದೆ. ಪಾಂಡವರು, ಕೌರವರು ಗೋಮಾಂಸವನ್ನು ಭಕ್ಷಿಸುತ್ತಾರೆ ಎನ್ನುವುದನ್ನು ಈ ಕಾದಂಬರಿ ಹೇಳುತ್ತದೆ. ಅತಿಥಿಗಳಿಗೆ ಹೋರಿಯನ್ನು ಕಡಿದು ಸತ್ಕಾರ ಮಾಡುವುದು ಗೌರವದ ಕೆಲಸ ಎನ್ನುವುದನ್ನು ಕಾದಂಬರಿ ಹೇಳುತ್ತದೆ. ‘ಪರ್ವ’ ಕಾದಂಬರಿಯ ನಾಲ್ಕನೇ ಮುದ್ರಣದ 16ನೆ ಪುಟದಲ್ಲಿ ಭೈರಪ್ಪ ಹೀಗೆ ಬರೆಯುತ್ತಾರೆ ‘‘.......ರುಕ್ಮರಥನ ಮನೆಗೆ ಹೊಂದಿಕೊಂಡ ಅತಿಥಿಗೃಹದಲ್ಲಿ ಸುಶರ್ಮ ಸ್ನಾನಾದಿಗಳನ್ನು ಮುಗಿಸಿ ವಿಶ್ರಮಿಸಿಕೊಳ್ಳುತ್ತಿರುವಾಗ ರುಕ್ಮರಥ ಬಂದ. ಗೆಳೆಯರು ಒಬ್ಬರನ್ನೊಬ್ಬರು ತಬ್ಬಿಕೊಂಡರು. ಅಲ್ಲಿಗೇ ತರಿಸಿಕೊಂಡು ಊಟ ಮಾಡಿದರು. ‘ನೀನು ಬರುವ ಹೊತ್ತಿಗಾಗಲೇ ಅಡುಗೆಯಾಗಿತ್ತು. ನಿನ್ನ ಗೌರವಕ್ಕೆಂದು ರಾತ್ರಿಗೆ ದೊಡ್ಡ ಹೋರಿಯನ್ನೇ ಕಡಿದು ಮಾಡುತ್ತಾರೆ. ಕಡೆಗಣಿಸಿದರು ಅಂತ ಸಿಟ್ಟು ಮಾಡಿಕೋ ಬೇಡ’-ರುಕ್ಮರಥ ಉಪಚಾರ ಹೇಳಿದ. ಸುಶರ್ಮ ಆಡಿನ ಮಾಂಸದ ಚೂರನ್ನು ಕೈಲಿ ಹಿಡಿದು ಚೀಪುತ್ತಿರುವಾಗ ರುಕ್ಮರಥ ಕೇಳಿದ......’’

  ಈ ಪ್ರಸಂಗ ಏನನ್ನು ಹೇಳುತ್ತದೆ? ಊಟಕ್ಕೆ ಆಡಿನ ಮಾಂಸ ಮಾಡಿದ್ದರೂ, ಅದು ಉಪಚಾರ ಅಲ್ಲ. ಗೌರವ ಕೊಡಬೇಕಾದರೆ ‘ದೊಡ್ಡ ಹೋರಿಯನ್ನೇ ಕಡಿಯಬೇಕು’ ಎನ್ನುತ್ತದೆಯಲ್ಲವೇ? ಮುಂದಿನ 20ನೇ ಪುಟದಲ್ಲಿ ಹೀಗೆ ಬರೆಯುತ್ತಾರೆ, ‘‘....ರುಕ್ಮರಥ ತನ್ನ ತಮ್ಮಂದಿರನ್ನು ಕರೆಸಿದ. ಅವರೊಡನೆಯೂ ಸುಶರ್ಮ ಕೌರವರ ಪರವಾಗಿ ಮಾತನಾಡಿದ. ರಾತ್ರಿ ಪ್ರಾಯದ ಹೋರಿ ಕಡಿದು ಔತಣ ಮಾಡಿದ್ದರು...’’ ಹೀಗೆ ಮಾಂಸ ಭಕ್ಷಣೆಯಲ್ಲ, ಗೋಮಾಂಸ ಭಕ್ಷಣೆ ‘ಪರ್ವ’ದಲ್ಲಿ ಪದೇ ಪದೇ ಬರುತ್ತದೆ. ‘‘ಎಳೆ ಕರುವಿನ ಮಾಂಸ ತುಂಬಾ ರುಚಿ’ ಎಂದು ಒಂದೆಡೆ ಕೌರವನ ಬಾಯಿಯಿಂದ ಭೈರಪ್ಪ ಸ್ವತಃ ಸವಿದವರಂತೆ ಹೇಳುತ್ತಾರೆ. ಈಗ ಪ್ರಶ್ನೆ, ಪರ್ವವನ್ನು ಸಂಶೋಧನೆ ಮಾಡಿ ಬರೆದಿದ್ದೇನೆ ಎನ್ನುವ ಭೈರಪ್ಪ ‘ಮಹಾಭಾರತ ವಿದೇಶದಲ್ಲಿ ನಡೆದಿರುವುದು’ ಎಂದು ವಾದಿಸುತ್ತಿದ್ದಾರೆಯೇ? ಅಥವಾ ಕೌರವ, ಪಾಂಡವರು ವಿದೇಶದಿಂದ ಬಂದವರೇ? ಗೋಮಾಂಸ ಭಕ್ಷಕರ ಜೊತೆಗೆ ಗೋಪಾಲಕನಾಗಿರುವ ಶ್ರೀಕೃಷ್ಣ ಸಂಬಂಧವನ್ನು ಹೊಂದಿರುವುದನ್ನು ಪರ್ವ ಕಾದಂಬರಿ ಹೇಳುತ್ತದೆ. ಹಾಗಾದರೆ ಗೋಮಾಂಸ ಮತ್ತು ಮಾಂಸಾಹಾರವನ್ನು ಸ್ವತಃ ಕೃಷ್ಣನೇ ಒಪ್ಪಿಕೊಂಡಿದ್ದಾನೆ ಎನ್ನುವುದನ್ನು ಭೈರಪ್ಪರು ದಾಖಲಿಸಿದಂತಾಗಲಿಲ್ಲವೇ? ಬಹುಶಃ ಇದನ್ನು ಬೇರೆ ಯಾವುದೇ ಎಡಪಂಥೀಯ ಲೇಖಕ ಬರೆದಿದ್ದರೆ ಸಂಘಪರಿವಾರ ಅವರ ಮೇಲೆ ಹಲ್ಲೆ ನಡೆಸುತ್ತಿರಲಿಲ್ಲವೇ?

ಇದೀಗ ಭೈರಪ್ಪ ಓದುಗರ ಗೊಂದಲವನ್ನು ನಿವಾರಿಸಬೇಕು. ತಾವು ಯಾವುದೇ ಚಳವಳಿಯಲ್ಲಿ ಗುರುತಿಸಿಲ್ಲ ಎಂದಾದರೆ ಧರ್ಮಶ್ರೀ, ತಬ್ಬಲಿಯು ನೀನಾದೆ ಮಗನೆ, ದಾಟು, ಆವರಣ, ಕವಲು ಹೇಗೆ ಹುಟ್ಟಿತು? ಇದನ್ನು ಯಾವ ರೀತಿಯಲ್ಲಿ ಶುದ್ಧ ಸಾಹಿತ್ಯ ಎಂದು ಕರೆಯುತ್ತೀರಿ? ಗೋಮಾಂಸ ಅಥವಾ ಮಾಂಸಾಹಾರ ಪಾಶ್ಚಾತ್ಯರದ್ದೇ ಆಗಿದ್ದರೆ, ಪರ್ವ ಕಾದಂಬರಿಯಲ್ಲಿ ಪಾಂಡವ, ಕೌರವರು ಮಾಂಸಾಹಾರ ಅದರಲ್ಲೂ ಗೋಮಾಂಸವನ್ನು ಸೇವಿಸುತ್ತಿದ್ದರು ಎಂದು ಬರೆದುದರ ಅರ್ಥವೇನು? ಇವೆರಡರಲ್ಲಿ ಯಾವುದು ನಿಜ? ಕನ್ನಡ ಸಾಹಿತ್ಯ ವಲಯವನ್ನು ಸದ್ಯದ ದಿನಗಳಲ್ಲಿ ಆವರಿಸಿಕೊಂಡಿರುವ ಜಡತೆ, ಓಲೈಕೆ, ಪ್ರಭುಸ್ತುತಿ ಇತ್ಯಾದಿಗಳ ಪರಿಣಾಮವಾಗಿ ಬರಹಗಾರರು ಹೆಚ್ಚು ಹೆಚ್ಚು ಕಿವುಡರಂತೆಯೂ ಕುರುಡರಂತೆಯೂ ನಟಿಸುತ್ತಿದ್ದಾರೆ ಮತ್ತು ಇದರ ಲಾಭವನ್ನು ಭೈರಪ್ಪನಂತಹ ಸಮಯಸಾಧಕ ರಾಜಕೀಯ ಕಾದಂಬರಿಕಾರರು ಬಹಿರಂಗವಾಗಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದಷ್ಟೇ ಹೇಳಬೇಕಾಗುತ್ತದೆ.

Writer - ಬಿ. ಎಂ. ಬಶೀರ್

contributor

Editor - ಬಿ. ಎಂ. ಬಶೀರ್

contributor

Similar News