ಭಾರತದಲ್ಲಿ ರಾಜಪ್ರಭುತ್ವ ಮತ್ತು ದೇವಾಲಯಗಳ ನಡುವಣ ಸಂಬಂಧ

Update: 2019-01-25 18:47 GMT

ಸನ್ಮಾನ್ಯರು ಹೇಳಿದಂತೆ ಹಿಂದೂಗಳು ಮಸೀದಿ ಕೆಡವಿ ದೇವಾಲಯ ನಿರ್ಮಿಸದೆ ಇರಬಹುದು. ಆದರೆ ಹಿಂದೂ ರಾಜರು ಶತ್ರುರಾಜ್ಯಗಳಿಂದ ಹಿಂದೂ ದೇವತಾಮೂರ್ತಿಗಳನ್ನು ಅಪಹರಿಸುವುದರೊಂದಿಗೆ ದೇವಾಲಯಗಳನ್ನು ಸಹ ಕೆಡವುತ್ತಿದ್ದರು ಎಂಬ ಬಗ್ಗೆ ಚಾರಿತ್ರಿಕ ದಾಖಲೆಗಳು ಲಭ್ಯವಿವೆ. ಅದೇ ರೀತಿ ಹಿಂದೂಗಳು ಬೌದ್ಧ ಧರ್ಮದ ಆರಾಧನಾ ಕೇಂದ್ರಗಳನ್ನೂ ಧ್ವಂಸಗೊಳಿಸಿರುವ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. 


ಭಾಗ-1

ದೇ ಜನವರಿ 12ರಂದು ಮೈಸೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾಡಿನ ಹಿರಿಯ ಸಂಶೋಧಕ ಚಿದಾನಂದ ಮೂರ್ತಿಯವರು, ‘‘ದೇಶದಲ್ಲಿ ಹಿಂದೂಗಳು ಯಾವುದೇ ಮಸೀದಿ ಕೆಡವಿ ದೇವಾಲಯ ನಿರ್ಮಿಸಿಲ್ಲ, ಜೈನರು ಬಸದಿಗಳನ್ನು ಕಟ್ಟಿಲ್ಲ, ಧರ್ಮದ ಉಳಿವಿಗಾಗಿ ಹೋರಾಟ ನಡೆಸುವ ‘ಧರ್ಮಹಿಂಸೆ’ ಶ್ರೇಷ್ಠವಾದದ್ದು’’ ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಮಾನ್ಯರ ಹಕ್ಕನ್ನು ಒಪ್ಪಿಕೊಳ್ಳುತ್ತಲೇ ಅವರ ಈ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಪಟ್ಟಂತೆ ಚಾರಿತ್ರಿಕ ಆಧಾರಸಹಿತವಾದ ಪೂರ್ಣ ವಾಸ್ತವಾಂಶಗಳನ್ನು ಓದುಗರ ಮುಂದಿಡುವುದು ನನ್ನ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಭಾವಿಸಿದ್ದೇನೆ. ಭಾರತದ ಚರಿತ್ರೆಯಲ್ಲಿ ಆಗಿಹೋದ ನಾನಾ ಹಿಂದೂ ಅರಸರು ಹಿಂದೂ ಧರ್ಮದ ವಿವಿಧ ಪಂಥಗಳ ಅನುಯಾಯಿಗಳಾಗಿದ್ದುದು ನಿಜವಷ್ಟೇ. ಅವರಲ್ಲಿ ಹೆಚ್ಚಿನವರು ರಾಜ್ಯ ವಿಸ್ತರಣೆ ಮತ್ತಿತರ ಕಾರಣಗಳಿಗೋಸ್ಕರ ಪರಸ್ಪರ ಕಚ್ಚಾಟ, ಕಾಳಗಗಳಲ್ಲಿ ನಿರತರಾಗಿದ್ದುದರಿಂದ ಅವರ ನಡುವೆ ಒಗ್ಗಟ್ಟಿನ ಕೊರತೆ ಇದ್ದುದೂ ನಿಜವಷ್ಟೇ.

ಪ್ರಾಯಶಃ ಒಗ್ಗಟ್ಟು ಇದ್ದಿದ್ದರೆ ಮಸೀದಿ, ಚರ್ಚುಗಳನ್ನು ಧ್ವಂಸಗೊಳಿಸದೆ ಇರುತ್ತಿದ್ದರೇ ಎಂಬುದು ಚಿಂತನೆಗೆ ಅರ್ಹವಾದ ವಿಷಯ. ಇರಲಿ, ಸನ್ಮಾನ್ಯರು ಹೇಳಿದಂತೆ ಹಿಂದೂಗಳು ಮಸೀದಿ ಕೆಡವಿ ದೇವಾಲಯ ನಿರ್ಮಿಸದೆ ಇರಬಹುದು. ಆದರೆ ಹಿಂದೂ ರಾಜರು ಶತ್ರುರಾಜ್ಯಗಳಿಂದ ಹಿಂದೂ ದೇವತಾಮೂರ್ತಿಗಳನ್ನು ಅಪಹರಿಸುವುದರೊಂದಿಗೆ ದೇವಾಲಯಗಳನ್ನು ಸಹ ಕೆಡವುತ್ತಿದ್ದರು ಎಂಬ ಬಗ್ಗೆ ಚಾರಿತ್ರಿಕ ದಾಖಲೆಗಳು ಲಭ್ಯವಿವೆ. ಅದೇ ರೀತಿ ಹಿಂದೂಗಳು ಬೌದ್ಧ ಧರ್ಮದ ಆರಾಧನಾ ಕೇಂದ್ರಗಳನ್ನೂ ಧ್ವಂಸಗೊಳಿಸಿರುವ ಸಂಗತಿ ಇತಿಹಾಸದ ಪುಟಗಳಲ್ಲಿ ದಾಖಲಿಸಲ್ಪಟ್ಟಿದೆ. ಶಂಕರಾಚಾರ್ಯರು ತಮ್ಮ ಅಸಂಖ್ಯಾತ ಅನುಯಾಯಿಗಳ ಜೊತೆಗೂಡಿ ಬೌದ್ಧ ಕೇಂದ್ರವಾಗಿದ್ದ ನಾಗಾರ್ಜುನಕೊಂಡವನ್ನು ನಾಶಪಡಿಸಿದರೆಂದು ಭಾರತ ಮತ್ತು ಶ್ರೀಲಂಕಾದ ಪ್ರಾಚ್ಯಶಾಸ್ತ್ರ ಇಲಾಖೆಯ ಮಹಾನಿರ್ದೇಶಕರಾಗಿದ್ದ ಎ.ಎಚ್.ಲಾಂಗ್‌ಹರ್ಸ್ಟ್ ದಾಖ ಲಿಸಿರುವುದನ್ನು (Memoirs of the Archaeological Survey of India, No.54. The Buddhist Antiquiities of Nagarjunakonda by A.H.Longhurst, Delhi, 1938) ಡಾ. ಕೆ.ಎಸ್. ಭಗವಾನ್‌ರವರು ತಮ್ಮ ‘ಶಂಕರಾಚಾರ್ಯ ಮತ್ತು ಪ್ರತಿಗಾಮಿತನ’ (ಮಹಿಮ ಪ್ರಕಾಶನ) ಎಂಬ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

ಭಾರತದ ಇತಿಹಾಸದಲ್ಲಿ ಜೈನ ಬಸದಿಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತಿಸಿದ ಉದಾಹರಣೆಗಳೂ ಸಾಕಷ್ಟಿವೆ. ಸ್ವತಃ ಹಿಂದೂ ಅರಸರೇ ಹಿಂದೂ ದೇವಾಲಯಗಳನ್ನು ಲೂಟಿ ಹೊಡೆದಿರುವ ಮತ್ತು ನಾಶಪಡಿಸಿರುವ ಅನೇಕ ದೃಷ್ಟಾಂತಗಳನ್ನು ಅಮೆರಿಕದ ಅರಿರೆನ ವಿಶ್ವವಿದ್ಯಾನಿಲಯದ ಇತಿಹಾಸಶಾಸ್ತ್ರಜ್ಞ ಡಾ. ರಿಚರ್ಡ್ ಎಂ. ಈಟನ್ ಬರೆದಿರುವ Temple Desecration and Indo-Muslim States ಎಂಬ ಪ್ರಬಂಧದಲ್ಲಿ ಕಾಣಬಹುದು. ಈಟನ್‌ರವರ ಪ್ರಬಂಧದ ನಾಲ್ಕನೆ ಅಧ್ಯಾಯದಲ್ಲಿ ಅಂದಿನ ಮಂದಿರ ಅಪವಿತ್ರೀಕರಣ ಮತ್ತು ರಾಜ್ಯ ನಿರ್ಮಾಣ ಪ್ರಕ್ರಿಯೆಗಳ ಮೇಲೆ ಬೆಳಕು ಚೆಲ್ಲಲಾಗಿದ್ದು ಅದರ ಕೆಲವು ಮುಖ್ಯಾಂಶಗಳನ್ನು ಪ್ರಬಂಧದ ಕನ್ನಡ ಆವೃತ್ತಿಯಿಂದ (ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು; ಅನುವಾದಕ: ಸುರೇಶ ಭಟ್ ಬಾಕ್ರಬೈಲು; ಲಡಾಯಿ ಪ್ರಕಾಶನ, 2015; ಅಧ್ಯಾಯ 4) ಉದ್ಧರಿಸುತ್ತಿದ್ದೇನೆ:

‘‘........ಭಾರತದಲ್ಲಿ ಅಂದು ಆಳುವ ರಾಜವಂಶದ ದೇವತೆ ಅಥವಾ ರಾಷ್ಟ್ರದೇವತೆಯ (ಹೆಚ್ಚಾಗಿ ವಿಷ್ಣು ಅಥವಾ ಶಿವ) ವಿಗ್ರಹವಿರುವ ದೇಗುಲವನ್ನು ರಾಜದೇಗುಲವೆಂದು ಪರಿಗಣಿಸಲಾಗುತ್ತಿತ್ತು. ನಿರ್ದಿಷ್ಟ ಪ್ರದೇಶವೊಂದರ ಮೇಲೆ ರಾಜಕೀಯ ಅಧಿಕಾರ ಹೊಂದಿದ್ದ ಅರಸನೊಬ್ಬನ ವೈಯಕ್ತಿಕ ನ್ಯಾಯಸಮ್ಮತತೆ ಒಂದು ರಾಜದೇಗುಲದೊಂದಿಗೆ ಬೆರೆತಿದ್ದ ಸಂದರ್ಭದಲ್ಲಿ ಆತನನ್ನು ಸೋಲಿಸಿದಾಗ ಸಾಮಾನ್ಯವಾಗಿ ಆ ರಾಜದೇಗುಲವನ್ನು ದೋಚಲಾಗುತ್ತಿತ್ತು ಅಥವಾ ಅದರ ಸ್ವರೂಪವನ್ನು ಬದಲಾಯಿಸಲಾಗುತ್ತಿತ್ತು ಅಥವಾ ಅದನ್ನು ಧ್ವಂಸಗೊಳಿಸಲಾಗುತ್ತಿತ್ತು. ಇವುಗಳಲ್ಲಿ ಯಾವುದೇ ಒಂದು ಕೃತ್ಯವನ್ನೆಸಗಿದರೂ ಪರಾಜಿತ ಅರಸನ ನ್ಯಾಯಸಮ್ಮತತೆಯ ಪ್ರತೀಕವಾಗಿದ್ದ ಅತ್ಯಂತ ಪ್ರಮುಖಾಂಶವನ್ನು ಆತನಿಂದ ಬೇರ್ಪಡಿಸಿದಂತಾಗುತ್ತಿತ್ತು. ಇಂತಹ ನ್ಯಾಯಸಮ್ಮತತೆಯನ್ನು ಹೊಂದಿರದ ಅಥವಾ ಮೊದಲು ಆ ರೀತಿಯಾಗಿ ಗುರುತಿಸಿಕೊಂಡು ನಂತರದಲ್ಲಿ ಆಶ್ರಯದಾತ ಅರಸರಿಂದ ತ್ಯಜಿಸಲ್ಪಟ್ಟು ರಾಜಕೀಯವಾಗಿ ಅಪ್ರಸ್ತುತವಾದ ಮಂದಿರಗಳನ್ನು ಸಾಮಾನ್ಯವಾಗಿ ಹಾನಿಗೀಡುಮಾಡಲಾಗುತ್ತಿರಲಿಲ್ಲ. ಉದಾಹರಣೆಗೆ, ಕಾಂಡೆಲ್ಲ ರಾಜರು ಮಧ್ಯ ಗಂಗಾನದಿ ಬಯಲಿನ ದಕ್ಷಿಣಕ್ಕಿರುವ ಖಜುರಾಹೊದ ಪ್ರಖ್ಯಾತ ದೇವಾಲಯಗಳ ಆಶ್ರಯದಾತರಾಗಿದ್ದರು. ಆದರೆ ಆ ಸಂಬಂಧಗಳನ್ನು ಅವರು, ಅಲ್ಲಿಗೆ 13ನೆ ಶತಮಾನದ ಆದಿಯಲ್ಲಿ ತುರ್ಕಿಯ ಸೇನೆಗಳು ಬಂದು ತಲಪುವುದಕ್ಕೂ ಮೊದಲು ಕಡಿದುಕೊಂಡಿರುವಂತೆ ತೋರುತ್ತದೆ; ಆದುದರಿಂದಲೆ ತುರುಕರ ಸೇನೆಗಳು ಖಜುರಾಹೊ ಮಂದಿರಗಳನ್ನು ಮುಟ್ಟಿಲ್ಲ (26.)

ಹಿಂದಿನ ರಾಜಕೀಯ ಪ್ರಾಧಿಕಾರಗಳನ್ನು ಕಿತ್ತುಹಾಕುವ ಈ ವಿದ್ಯಮಾನವನ್ನು ಇಸ್ಲಾಂ ಧರ್ಮದಲ್ಲಿ ಅಂತರ್ಗತವಾಗಿದೆಯೆಂದು ಭಾವಿಸಲಾಗಿರುವ ‘ಮೂರ್ತಿಭಂಜನ ಶಾಸ್ತ್ರ’ದ ಸಾರಾಂಶದ ಮೂಲಕ ವಿವರಿಸಲು ಹೊರಟರೆ ಅದು ತಪ್ಪಾಗುತ್ತದೆ. ಸಮಕಾಲೀನ ಪರ್ಷಿಯನ್ ದಾಖಲೆಗಳಲ್ಲಿ ವಿಗ್ರಹಾರಾಧನೆಯನ್ನು (ಬತ್-ಪರಸ್ತೀ) ಧಾರ್ಮಿಕ ನೆಲೆಯಲ್ಲಿ ಖಂಡಿಸುವ ವಾಡಿಕೆಯಿದ್ದುದು ನಿಜ. ಅದೇ ವೇಳೆ ಭಾರತದ ಅರಸರಲ್ಲಿ ಕೂಡಾ ಶತ್ರುರಾಜರ ಆಶ್ರಯದಲ್ಲಿದ್ದ ದೇವತಾಮೂರ್ತಿಗಳ ಮೇಲೆ ದಾಳಿ ನಡೆಸುವ ಸಂಪ್ರದಾಯವಿದ್ದುದು ಅಷ್ಟೇ ನಿಜ. ಸುಮಾರು ಕ್ರಿ.ಶ. ಆರನೆ ಶತಮಾನ ಲಾಗಾಯ್ತು ಇದು ಭಾರತದ ರಾಜಕೀಯ ನಡಾವಳಿಯ ಭಾಗವೇ ಆಗಿತ್ತು. ಮಧ್ಯಯುಗದ ಆದಿಯಲ್ಲಿ ರಾಜದೇಗುಲ ಸಂಕೀರ್ಣಗಳು ಸಂಪೂರ್ಣ, ಸರ್ವೋಚ್ಚ ರಾಜಕೀಯ ಸಂಸ್ಥೆಗಳಾಗಿದ್ದವು. ಅಂತಹ ಸಂಕೀರ್ಣಗಳೊಳಗೆ ಅರಸರು ಹಾಗೂ ದೇವರುಗಳ ಪರಸ್ಪರ ಅವಲಂಬನ ಮತ್ತು ಮಾನವ ಹಾಗೂ ದೈವಿಕ ಪ್ರಭುತ್ವದ ಸಮ್ಮಿಶ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಸಮೃದ್ಧ ಕೆತ್ತನೆಕೆಲಸಗಳು ಇರುತ್ತಿದ್ದವು....... ‘ಕ್ರಿ.ಶ. 700ರಿಂದ 1200ರ ವರೆಗಿನ ಅವಧಿಯಲ್ಲಿ ದೇಗುಲಗಳ ನಿರ್ಮಾಣ ಅಸಾಧಾರಣ ಮಟ್ಟದಲ್ಲಿತ್ತು.

ಇದಕ್ಕೆ ಅಂದು ವ್ಯಕ್ತಿಯ ರಾಜವಂಶದ ಮೂಲಗಳನ್ನು ಧಾರ್ಮಿಕ ಹಾಗೂ ದೈವಿಕ ಶಕ್ತಿಗಳೊಂದಿಗೆ ಜೋಡಿಸಿಕೊಳ್ಳುವ ಆವಶ್ಯಕತೆಯಿದ್ದುದೇ ಕಾರಣ’ ಎನ್ನುತ್ತಾರೆ ಬಿ.ಡಿ.ಚಟ್ಟೋಪಾಧ್ಯಾಯ (27.)ರಾಜದೇಗುಲದ ಗರ್ಭಗುಡಿಯೊಳಗಿನ ಮುಖ್ಯ ವಿಗ್ರಹವು ಪೋಷಕ ಅರಸನ ರಾಷ್ಟ್ರದೇವತೆಯಾಗಿತ್ತು. ಎಲ್ಲದಕ್ಕೂ ಮಿಗಿಲಾಗಿ ಅದು ಅರಸ ಮತ್ತು ದೇವತೆಯ ಸಮಾನ ಸಾರ್ವಭೌಮತ್ವದ ಸೂಚಕವಾಗಿತ್ತು. ಅರ್ಚಕರು ರಾಜದೇಗುಲದ ದೇವತೆಗೆ ಅತ್ಯುನ್ನತ ಮತ್ತು ಸಾರ್ವತ್ರಿಕ ಶಕ್ತಿಯಿದೆ ಎಂದು ಹೇಳುತ್ತಿದ್ದರು. ಇದರ ಹೊರತಾಗಿಯೂ ಆ ದೇವತೆಗೆ ಆ ನಿರ್ದಿಷ್ಟ ಸಂಕೀರ್ಣದೊಂದಿಗೆ ಒಂದು ಬಹಳ ವಿಶಿಷ್ಟವಾದ, ನಿಜಕ್ಕೂ ಸಾರ್ವಭೌಮಿಕ, ಸಂಬಂಧವೂ ಇದೆಯೆಂದು ತಿಳಿಯಲಾಗಿತ್ತು....... ದೇವತಾಮೂರ್ತಿಯೊಂದನ್ನು ಅದರ ಮೂಲಸ್ಥಾನದಿಂದ ಕಿತ್ತು ತೆಗೆದರೂ ಆ ದೇವತೆ ಮತ್ತು ಸ್ಥಳದ ನಡುವಿನ ಕೊಂಡಿಯನ್ನು ಮುರಿಯಲಾಗದೆಂದು ದೇವಾಲಯಗಳ ಕಥನಗಳು ಅರುಹುತ್ತವೆ (29.)

ಭಾರತದಲ್ಲಿ ಮಧ್ಯಯುಗದ ಆದಿಯಲ್ಲಿ ಪ್ರಚಲಿತವಿದ್ದ ಅರಸು, ದೇವತೆ, ದೇಗುಲ ಹಾಗೂ ಭೂಮಿ ನಡುವಣ ಸಂಬಂಧಗಳನ್ನು ಆರನೇ ಶತಮಾನದ ಗ್ರಂಥವಾದ ‘ಬೃಹತ್‌ಸಂಹಿತಾ’ ಬಹಳ ಚೆನ್ನಾಗಿ ವಿವರಿಸುತ್ತದೆ: ‘ಒಂದು ಶಿವಲಿಂಗ, ವಿಗ್ರಹ ಅಥವಾ ಮಂದಿರ ಛಿದ್ರಗೊಂಡರೆ, ಸ್ಥಳಾಂತರಗೊಂಡರೆ, ಬೆವರಿದರೆ, ಅತ್ತರೆ, ಮಾತನಾಡಿದರೆ ಅಥವಾ ಮೇಲ್ನೋಟಕ್ಕೆ ಅಕಾರಣವೆನಿಸುವ ಕೃತ್ಯಗಳನ್ನು ಮಾಡಿದರೆ ಅದು ರಾಜನ ಹಾಗೂ ರಾಜ್ಯದ ವಿನಾಶದ ಮುನ್ನೆಚ್ಚರಿಕೆ’ (30.) ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಮಾರು ಆರನೇ ಶತಮಾನದಿಂದ ಆರಂಭಿಸಿ ಆಳುವ ರಾಜವಂಶಗಳೊಂದಿಗೆ ಸಂಬಂಧ ಹೊಂದಿದ್ದ ದೇಗುಲ ಮತ್ತು ವಿಗ್ರಹಗಳೆಲ್ಲವೂ ರಾಜಕೀಯವಾಗಿ ಅಭದ್ರವೆಂದು ಪರಿಗಣಿಸಲ್ಪಡುತ್ತಿದ್ದವು.

ಭಾರತದ ಮಂದಿರಗಳು, ಮೂರ್ತಿಗಳು ಮತ್ತು ಅವುಗಳ ಆಶ್ರಯದಾತ ಅರಸರ ನಡುವೆ ಇಂತಹ ಗ್ರಹೀತ ಸಂಬಂಧಗಳಿದ್ದುದರಿಂದಲೇ ಆದಿ ಮಧ್ಯಯುಗೀನ ಕಾಲದಲ್ಲಿ ವಿವಿಧ ಭಾರತೀಯ ಅರಸೊತ್ತಿಗೆಗಳ ಮಧ್ಯೆ ಯುದ್ಧಗಳು ನಡೆದಾಗಲೆಲ್ಲ ಮಂದಿರ ಅಪವಿತ್ರೀಕರಣ ಕೃತ್ಯಗಳು ಸಾಮಾನ್ಯವಾಗಿದ್ದವು. ಹಾಗಾಗಿ ಅಂದಿನ ಇತಿಹಾಸದ ಪುಟಗಳು ಇಂತಹ ದೇವಾಲಯಗಳ ಪಾವಿತ್ರ್ಯನಾಶದ ದೃಷ್ಟಾಂತಗಳಿಂದ ತುಂಬಿಹೋಗಿರುವುದರಲ್ಲಿ ಸೋಜಿಗವೇನಿದೆ?. ಪಲ್ಲವ ಅರಸ ಮೊದಲನೆಯ ನಾರಸಿಂಹವರ್ಮನ್ ಕ್ರಿ.ಶ. 642ನೆ ಇಸವಿಯಲ್ಲಿ ಚಾಳುಕ್ಯರ ರಾಜಧಾನಿ ವಾತಾಪಿಯಿಂದ ಗಣೇಶ ವಿಗ್ರಹವನ್ನು ಕೊಳ್ಳೆಹೊಡೆದಿದ್ದನೆಂದು ಸ್ಥಳಪುರಾಣಗಳು ಹೇಳುತ್ತವೆ. ಇದಾಗಿ ಐವತ್ತು ವರ್ಷಗಳು ಕಳೆಯುವಷ್ಟರಲ್ಲಿ ಚಾಳುಕ್ಯರ ಸೈನ್ಯಗಳು ಉತ್ತರ ಭಾರತಕ್ಕೆ ಲಗ್ಗೆಯಿಟ್ಟಿದ್ದವು. ಅಲ್ಲಿ ಅವರು ಯಾರನ್ನೆಲ್ಲ ಸೋಲಿಸಿದರೋ ಆ ರಾಜ್ಯಗಳಿಂದ ವಿಗ್ರಹಗಳನ್ನು ಲೂಟಿಗೈದು ದಖ್ಖಣಕ್ಕೆ ತಂದಿದ್ದರು. ಇವು ಗಂಗೆ ಮತ್ತು ಯಮುನೆಯರ ವಿಗ್ರಹಗಳೆಂದು ಕಾಣುತ್ತದೆ.

ಎಂಟನೇ ಶತಮಾನದಲ್ಲಿ ಬಂಗಾಳದ ಸೈನ್ಯಗಳು ಕಾಶ್ಮೀರದ ರಾಜ ಲಾಲಿತಾದಿತ್ಯನ ಮೇಲಣ ಹಗೆ ತೀರಿಸುವುದಕ್ಕೋಸ್ಕರ ಕಾಶ್ಮೀರಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ವಿಷ್ಣು ವೈಕುಂಠನ ಬಿಂಬವನ್ನು ಲಾಲಿತಾದಿತ್ಯ ಸಾಮ್ರಾಜ್ಯದ ರಾಷ್ಟ್ರದೇವತೆಯೆಂದು ಭಾವಿಸಿ ಅದನ್ನು ನಾಶಪಡಿಸಿದ್ದವು.

ಒಂಬತ್ತನೆ ಶತಮಾನದ ಆದಿಯಲ್ಲಿ ರಾಷ್ಟ್ರಕೂಟರ ಅರಸ ಮೂರನೆ ಗೋವಿಂದನು ಕಾಂಚೀಪುರಂ ಮೇಲೆ ದಂಡೆತ್ತಿ ಹೋಗಿ ಅದನ್ನು ಆಕ್ರಮಿಸಿಕೊಂಡಿದ್ದ. ಇದನ್ನು ಕಂಡು ಬೆದರಿದ ಶ್ರೀಲಂಕಾದ (ಸಿಂಹಳ) ಅರಸ ತನ್ನ ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಹಲವಾರು ವಿಗ್ರಹಗಳನ್ನು (ಪ್ರಾಯಶಃ ಬೌದ್ಧ) ಗೋವಿಂದನಿಗೆ ಕಳುಹಿಸಿಕೊಟ್ಟ. ಗೋವಿಂದ ಅವುಗಳನ್ನೆಲ್ಲ ತನ್ನ ರಾಜಧಾನಿಯಲ್ಲಿದ್ದ ಶೈವ ದೇವಾಲಯವೊಂದರಲ್ಲಿ ಸ್ಥಾಪಿಸಿದ. ಸರಿಸುಮಾರು ಇದೇ ಕಾಲಘಟ್ಟದಲ್ಲಿ ಪಾಂಡ್ಯ ರಾಜ ಶ್ರೀಮಾರ ಶ್ರೀವಲ್ಲಭನು ನೇರವಾಗಿ ಶ್ರೀಲಂಕಾದ ಮೇಲೆ ದಾಳಿಮಾಡಿದ. ಆ ಸಂದರ್ಭದಲ್ಲಿ ಬುದ್ಧನಿಗೆ ಸಿಂಹಳ ಪ್ರಭುತ್ವದೊಂದಿಗೆ ಇದ್ದ ಅವಿನಾಭಾವ ಸಂಬಂಧದ ದ್ಯೋತಕವಾಗಿ ಅಲ್ಲಿನ ಆಭರಣ ಮಹಲ್‌ನಲ್ಲಿ ಸ್ಥಾಪಿಸಲ್ಪಟ್ಟಿದ್ದ ಬುದ್ಧನ ಸ್ವರ್ಣಮೂರ್ತಿಯೊಂದನ್ನು ಕಿತ್ತುಅದನ್ನು ತನ್ನ ರಾಜಧಾನಿಗೆ ಒಯ್ದಿದ್ದ.

ಹತ್ತನೆ ಶತಮಾನದ ಆದಿಯಲ್ಲಿ ಪ್ರತಿಹಾರ ರಾಜ ಹೆರಂಬಪಾಲನು ಕಾಂಗ್ರಾದ ಸಾಹೀ ಅರಸನನ್ನು ಸೋಲಿಸಿದ ನಂತರ ಅಲ್ಲಿಂದ ವಿಷ್ಣು ವೈಕುಂಠನ ಸ್ವರ್ಣಬಿಂಬವೊಂದನ್ನು ಅಪಹರಿಸಿ ತನ್ನ ಜೊತೆ ಕೊಂಡೊಯ್ದಿದ್ದ. ಹತ್ತನೆ ಶತಮಾನದ ಮಧ್ಯಭಾಗದಲ್ಲಿ ಕಾಂಡೆೆಲ್ಲ ರಾಜ ಯಶೋವರ್ಮನ್‌ನು ಪ್ರತಿಹಾರರಿಂದ ಅದೇ ವಿಷ್ಣು ವೈಕುಂಠ ವಿಗ್ರಹವನ್ನು ವಶಪಡಿಸಿಕೊಂಡು ಅದನ್ನು ಖಜುರಾಹೊದ ಲಕ್ಷ್ಮಣ ದೇವಸ್ಥಾನದಲ್ಲಿ ಸ್ಥಾಪಿಸಿದ. ಹನ್ನೊಂದನೆ ಶತಮಾನದ ಆದಿಯಲ್ಲಿ ಚೋಳರಾಜ ಮೊದಲನೆ ರಾಜೇಂದ್ರನು ನೆರೆಹೊರೆಯ ಹಲವಾರು ಪ್ರಮುಖ ರಾಜ್ಯಗಳಿಂದ ದೇವತಾಮೂರ್ತಿಗಳನ್ನು ಅಪಹರಿಸಿ ಅವುಗಳನ್ನೆಲ್ಲ ತನ್ನ ರಾಜಧಾನಿಯಲ್ಲಿ ಸ್ಥಾಪಿಸಿದ್ದ. ಅದರಲ್ಲಿ ಚಾಳುಕ್ಯರಿಂದ ವಶಪಡಿಸಿಕೊಂಡ ದುರ್ಗಾ ಮತ್ತು ಗಣೇಶ; ಒರಿಸ್ಸಾದ ಕಳಿಂಗರಿಂದ ವಶಪಡಿಸಿಕೊಂಡ ಭೈರವ, ಭೈರವಿ ಹಾಗೂ ಕಾಳಿ; ಪೂರ್ವದ ಚಾಳುಕ್ಯರಿಂದ ವಶಪಡಿಸಿಕೊಂಡ ಒಂದು ನಂದಿ; ಮತ್ತು ಬಂಗಾಳದ ಪಾಲರಿಂದ ವಶಪಡಿಸಿಕೊಂಡ ಕಂಚಿನ ಶಿವನ ಮೂರ್ತಿಗಳು ಸೇರಿವೆ. ಹನ್ನೊಂದನೆ ಶತಮಾನದ ಮಧ್ಯದಲ್ಲಿ ಚಾಳುಕ್ಯರನ್ನು ಸದೆಬಡಿದ ಚೋಳರಾಜ ರಾಜಾಧಿರಾಜನು ಕಲ್ಯಾಣಿಯನ್ನು ಸೂರೆಗೈದು ಅಲ್ಲಿಂದ ಕಗ್ಗಲ್ಲಿನ ದೊಡ್ಡ ದ್ವಾರಪಾಲಕ ಮೂರ್ತಿಯೊಂದನ್ನು ತನ್ನ ರಾಜಧಾನಿ ತಂಜಾವೂರಿಗೆ ಸಾಗಿಸಿದ್ದನಲ್ಲದೆ ಅದನ್ನು ಯುದ್ಧದ ಪಾರಿತೋಷಕವೆಂದು ತನ್ನೆಲ್ಲಾ ಪ್ರಜೆಗಳಿಗೆ ಪ್ರದರ್ಶಿಸಿದ್ದ. ಮೇಲಿನ ಉದಾಹರಣೆಗಳಲ್ಲಿ ರಾಜದೇಗುಲಗಳನ್ನು ಕೊಳ್ಳೆಹೊಡೆದು ರಾಷ್ಟ್ರದೇವತೆಗಳ ಮೂರ್ತಿಗಳನ್ನು ಅಪಹರಿಸಿ ಕೊಂಡೊಯ್ಯುವ ಮಾದರಿಯೇ ಪ್ರಧಾನವಾಗಿದೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News