ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ: ಮತ್ತದೇ ವರಾತಗಳು
ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಜನವರಿ 29, 30 ಮತ್ತು 31ರಂದು ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಇಲ್ಲಿ ಎಷ್ಟರ ಮಟ್ಟಿಗೆ ಜಿಲ್ಲೆಯ ಜನಜೀವನ ಮತ್ತು ಕನ್ನಡ ಸಾಹಿತ್ಯದ ಕುರಿತ ಚರ್ಚೆ ನಡೆಯುತ್ತದೆ ಎಂಬುದಂತೂ ಕಳೆದ ಹಲವಾರು ವರ್ಷಗಳಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ನೋಡಿ ಬಲ್ಲವರಿಗೆ ಗೊತ್ತಿರುವ ವಿಚಾರ. ಈ ಬಾರಿಯೂ ಅದೇ ಧಾಟಿ ಅದೇ ರಾಗ, ಜಿಲ್ಲೆಯ ಜ್ವಲಂತ ಸಮಸ್ಯೆಗಳಲ್ಲೊಂದಾದ ಅಮಲು ವ್ಯಸನದ ಕುರಿತಂತೆ ನಡೆಯಲಿರುವ ಚರ್ಚೆಯ ಹೊರತಾಗಿ. ಏನೇ ಇರಲಿ ಈ ಬಾರಿಯಾದರೂ ಜಿಲ್ಲೆಯ ಸಮಸ್ಯೆಯೊಂದರ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮವಿದೆಯೆನ್ನುವುದೊಂದು ಸಮಾಧಾನಕರ ಸಂಗತಿ.
ಆದರೆ ಜಾತಿಯ ಭೂತ ಎಂದಿನಂತೆಯೇ ಈ ಬಾರಿಯೂ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಬಿಟ್ಟಂತಿಲ್ಲ. ಬಹುಶಃ ಅದು ಸದ್ಯಕ್ಕೆ ಬಿಟ್ಟು ಹೋಗುವ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಆದ್ದರಿಂದ ಈ ಬಾರಿಯ ಸಮ್ಮೇಳನದ ಒಟ್ಟು ವಿಷಯದ ಕುರಿತಂತೆ ಜಿಲ್ಲೆಯ ಪ್ರಜ್ಞಾವಂತರಿಗಿರುವ ಕೆಲವು ತಕರಾರುಗಳ ಕುರಿತಂತೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತೇನೆ.
-ಈ ಬಾರಿಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಬಿಷಪ್ ಮತ್ತು ಪೇಜಾವರ ಸ್ವಾಮಿಯವರ ಹೆಸರನ್ನು ಹಾಕಲಾಗಿತ್ತು. ಆದರೆ ಮುಸ್ಲಿಂ ಸಮುದಾಯಕ್ಕೆ ಆ ಕಾರ್ಯಕ್ರಮದಲ್ಲಿ ಪ್ರಾತಿನಿಧ್ಯ ಕೊಟ್ಟಿರಲಿಲ್ಲ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಒಂದಿಬ್ಬರು ಸದಸ್ಯರು ಈ ವಿಚಾರದಲ್ಲಿ ತಕರಾರೆತ್ತಿದಾಗ ಕೊನೆಯ ಗಳಿಗೆಯಲ್ಲಿ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್‌ಮುಸ್ಲಿಯಾರರ ಹೆಸರನ್ನು ಸೇರಿಸಲಾಯಿತು. ಮೊದಲ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರಿರಲಿಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಸವಾಲೇನೆಂದರೆ ಸಾಹಿತ್ಯ ಸಮ್ಮೇಳನದಲ್ಲಿ ಧಾರ್ಮಿಕ ಗುರುಗಳಿಗೇನು ಕೆಲಸ? ಒಂದು ವೇಳೆ ಅವರು ಸಾಹಿತಿಗಳಾಗಿದ್ದರೆ ಒಪ್ಪಬಹುದಿತ್ತೇನೋ...
ಬಿಡಿ, ಅದು ಒತ್ತಟ್ಟಿಗಿರಲಿ. ದ.ಕ.ಜಿಲ್ಲಾ ಖಾಝಿ ಮತ್ತು ಬಿಷಪರನ್ನು ಆಹ್ವಾನಿಸಿರುವಾಗ ಜಿಲ್ಲೆಯವರೇ ಆದ ಯಾವೊಬ್ಬ ಸ್ವಾಮಿಗಳೂ ಪರಿಷತ್ತಿನವರಿಗೆ ಸಿಗಲಿಲ್ಲವೇ..? ನೆರೆ ಜಿಲ್ಲೆಯ ಸ್ವಾಮೀಜಿಯವರನ್ನು ಕರೆದಿರುವುದರ ಔಚಿತ್ಯವೇನು?
ಜಿಲ್ಲೆಯಲ್ಲಿ ಯಾರೂ ಹೆಸರಾಂತ ಸ್ವಾಮಿಗಳಿಲ್ಲವೆಂದೇ....? ಜಿಲ್ಲೆಯ ಜನಜೀವನದ ಸಮಸ್ಯೆಗಳ ವಿರುದ್ಧ ಸದಾ ಧ್ವನಿಯೆತ್ತುವ ಜಿಲ್ಲೆಯವರೇ ಆದ ಕೇಮಾರು ಸ್ವಾಮೀಜಿಯವರನ್ನು ಯಾಕೆ ಕರೆಯಬಾರದಿತ್ತು?
* ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೂ ಜಾತಿ ಸಂಘಗಳಿಗೂ ಏನು ಸಂಬಂಧ? ಸಾಹಿತ್ಯ ಸಮ್ಮೇಳನವೆಂದರೆ ಜಾತಿ ಸಮ್ಮೇಳನವೇ..?
ಆಮಂತ್ರಣ ಪತ್ರಿಕೆಯಲ್ಲಿ ಕೆಲವು ಜಾತಿ ಸಂಘಗಳ ಹೆಸರು ಮುದ್ರಿಸಿರುವುದರ ಔಚಿತ್ಯವೇನು? ಹಾಗೂ ಅದರಲ್ಲಿ ದಲಿತ, ಮುಸ್ಲಿಂ ಮತ್ತಿತರ ಹಿಂದುಳಿದ ಜಾತಿಗಳವರ ಸಂಘಗಳಿಗೇಕೆ ಪ್ರಾತಿನಿಧ್ಯವಿಲ್ಲ ? ಬೇರೆ ಬೇರೆ ಹೆಸರುಗಳಲ್ಲಿ ನಾಲ್ಕಾರು ಬ್ರಾಹ್ಮಣ ಜಾತಿ ಸಂಘಗಳದ್ದೇ ಹೆಸರೇಕೆ?
* ಈ ಹಿಂದೆ ನಾವು ಹಲವು ಬಾರಿ ತಕರಾರೆತ್ತಿದ್ದರೂ ಈ ಬಾರಿಯೂ ಪುನಃ ವಿದ್ವತ್ ಸಮ್ಮಾನ ಮತ್ತು ಸಾದಾ ಸಮ್ಮಾನಗಳೆಂಬ ವರ್ಗೀಕರಣವೇಕೆ? ಏನಿದರ ಅರ್ಥ? ವಿದ್ವತ್ ಸಮ್ಮಾನದಲ್ಲಿ ಸಮ್ಮಾನಿಸಲ್ಪಡುವವರು ಮಾತ್ರ ವಿದ್ವತ್ತುಳ್ಳವರು, ಸಾದಾ ಸಮ್ಮಾನದಲ್ಲಿ ಸಮ್ಮಾನಿಸಲ್ಪಡುವವರು ವಿದ್ವತ್ ರಹಿತರೆಂದರ್ಥವೇ?
* ಸಾಹಿತ್ಯ ಸಮ್ಮೇಳನದಲ್ಲಿ ಭಜನಾ ಪ್ರವೀಣರಿಗೆ ಮತ್ತು ಅಡುಗೆ ಪ್ರವೀಣರಿಗೆ ಸಮ್ಮಾನವೇಕೆ? ಕನ್ನಡ ಸಾಹಿತ್ಯಕ್ಕೂ ಭಜನೆ ಮತ್ತು ಅಡುಗೆ ಪ್ರವೀಣರಿಗೆ ಯಾವ ಸಂಬಂಧ ?
* ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಬ್ರಾಹ್ಮಣರ ಒಂದು ವರ್ಗಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಅದೇನೆಂದರೆ ಆಚಾರ್ಯ ಮಧ್ವರ ತತ್ವವಾದದ ಬೆಳಕು ಎಂಬ ವಿಶೇಷ ಗೋಷ್ಠಿ. ಕನ್ನಡ ಸಾಹಿತ್ಯಕ್ಕೂ ಮಧ್ವ ತತ್ವಕ್ಕೂ ಎಲ್ಲಿಯ ಸಂಬಂಧ ? ಹಾಗೂ ಸಂಬಂಧವಿದೆಯೆಂದಾದರೆ ಎಲ್ಲಾ ಜಾತಿ ಧರ್ಮಗಳ ಕುರಿತಂತೆ ಕನ್ನಡದಲ್ಲಿ ಧಾರಾಳ ಪುಸ್ತಕಗಳು ಬಂದಿವೆ. ಅವೆಲ್ಲದಕ್ಕೂ ಯಾಕೆ ಪ್ರಾತಿನಿಧ್ಯ ಕೊಡಬಾರದು? ಹಾಗೆ ನೋಡ ಹೋದರೆ ದ.ಕ.ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯದ ಕೆಲಸವನ್ನು ಕ್ರೈಸ್ತ ಮಿಷನರಿಗಳಷ್ಟು ಯಾವ ಜಾತಿ ಧರ್ಮೀಯರೂ ಮಾಡಿಲ್ಲ. ಆದುದರಿಂದ ಕನಿಷ್ಠ ಕ್ರೈಸ್ತ ಮಿಷನರಿಗಳು ಮತ್ತು ಕನ್ನಡ ಸಾಹಿತ್ಯ ಎಂಬ ಗೋಷ್ಠಿಯನ್ನೂ ಹಮ್ಮಿಕೊಳ್ಳಬಹುದಿತ್ತಲ್ಲವೇ...?
ಇಂತಹ ತಕರಾರುಗಳನ್ನು ನಾವು ಕೆಲವು ವರ್ಷಗಳಿಂದೀಚೆಗೆ ಎತ್ತುತ್ತಾ ಬಂದಿದ್ದೇವೆ. ಈ ವರೆಗೆ ನಮ್ಮ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಈ ಬಾರಿಯೂ ದೊರೆಯುವುದೆಂಬ ನಂಬಿಕೆಯೇನೂ ಇಲ್ಲ. ಅದಾಗ್ಯೂ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಹೇಗೆ ಜಿಲ್ಲಾ ಕಸಾಪ ಅಧ್ಯಕ್ಷರು ಧಾರ್ಮಿಕ ಮತ್ತು ಜಾತೀಯ ಕೆಲಸದ ಮಟ್ಟಕ್ಕಿಳಿಸಿದ್ದಾರೆ ಎಂಬುದನ್ನು ಜಿಲ್ಲೆಯ ಸಾಹಿತ್ಯಾಸಕ್ತರಿಗೆ ತಿಳಿಸುವ ಉದ್ದೇಶದಿಂದಷ್ಟೇ ಈ ಬರಹ.
ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಐದು ಲಕ್ಷ ರೂಪಾಯಿ ಅನುದಾನ ಬರುತ್ತದೆ. ಸಾಹಿತ್ಯ ಸಮ್ಮೇಳನವನ್ನು ಜಾತಿ ಸಮ್ಮೇಳನದ ಮಟ್ಟಕ್ಕಿಳಿಸಲಾಗಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗೊತ್ತಿಲ್ಲದ್ದೇನಲ್ಲ. ರಾಜ್ಯ ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರಿಗೂ ತಿಳಿಯದ್ದೇನಲ್ಲ. ಆದಾಗ್ಯೂ ಸರಕಾರದ ದುಡ್ಡು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ದುರ್ಬಳಕೆಯಾಗುತ್ತಿದ್ದರೂ ಈ ವರೆಗೆ ಯಾವ ಸರಕಾರವೂ ಅದರ ವಿರುದ್ಧ ಚಕಾರವೆತ್ತದ್ದರಿಂದ ಇದು ಪ್ರತೀ ಸಲವೂ ಯಾವ ಅಡೆತಡೆಯಿಲ್ಲದೇ ಮುಂದುವರಿಯುತ್ತಿದೆ.
ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿರುವ ಡಾ.ಜಯಮಾಲಾ ಅವರಾದರೂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುವರೇ?