ಭಾರತದ ಈವರೆಗಿನ ಅತ್ಯಂತ ಪರಿಣಾಮಕಾರಿ ಸರ್ಜಿಕಲ್ ದಾಳಿ ಮಾಡಿಸಿದ್ದು ಜಾರ್ಜ್ ಫೆರ್ನಾಂಡಿಸ್!

Update: 2019-01-29 16:13 GMT

1999ರಲ್ಲಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ನಿಯಂತ್ರಣ ರೇಖೆಯಲ್ಲಿ ಅತ್ಯಂತ ರಹಸ್ಯ ಕಾರ್ಯಾಚರಣೆಯೊಂದನ್ನು ನಡೆಸಲು ಸೇನೆಗೆ ಆದೇಶ ಹೊರಡಿಸಿದ್ದರು. ತನ್ನ ರಾಜಕೀಯ ಹಾಗು ಮಿಲಿಟರಿ ಗುರಿಗಳನ್ನು ಸಂಪೂರ್ಣವಾಗಿ ಈಡೇರಿಸಿದ ಭಾರತದ ಏಕೈಕ ಸೇನಾ ಕಾರ್ಯಾಚರಣೆ ಅದು. ಆದರೆ ಆ ಬಗ್ಗೆ ಭಾರತೀಯ ಮಾಧ್ಯಮಗಳಲ್ಲಿ ಯಾವುದೇ ವರದಿ ಆಗಲಿಲ್ಲ.

ಕೆಲವು ಪಾಕಿಸ್ತಾನಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಯಿತಾದರೂ ಬಳಿಕ ಅದನ್ನು ಹಿಂಗೆದುಕೊಳ್ಳಲಾಯಿತು. ಆಗ ಯಾರೂ ಆ ಕಾರ್ಯಾಚರಣೆಯನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿ ಬೊಬ್ಬಿಡಲಿಲ್ಲ. ಅದು ಅತ್ಯಂತ ಸಹಜ ಮಿಲಿಟರಿ ಕಾರ್ಯಾಚರಣೆಯಾಗಿ ನಡೆದು ಮುಗಿದು ಹೋಯಿತು. ಆದರೆ ಆ ದಾಳಿಯ ಪರಿಣಾಮ ಮಾತ್ರ ಅತ್ಯಂತ ಗಮನಾರ್ಹವಾಗಿತ್ತು. ಶತ್ರು ಪಡೆಯ ಹಲವು ಜೀವಗಳನ್ನು ಈ ದಾಳಿ ಬಲಿ ಪಡೆಯಿತು. ಪಾಕಿಸ್ತಾನದ ಮೇಲೆ ಈ ದಾಳಿ ಭಾರೀ ಪರಿಣಾಮ ಬೀರಿ  ಅದನ್ನು ತಣ್ಣಗಾಗಿಸಿತು.

ಕಾರ್ಮಿಕ ಚಳವಳಿಯಿಂದ ಬೆಳೆದು ಬಂದು ಕಾರ್ಮಿಕ ನಾಯಕರಂತೆಯೇ ಕಾಣುತ್ತಿದ್ದ ಜಾರ್ಜ್ ರಕ್ಷಣಾ ಸಚಿವರಾಗಿ ಯಶಸ್ವಿಯಾಗುತ್ತಾರೆಯೇ ಎಂಬ ಬಗ್ಗೆ ಎಲ್ಲರಿಗೂ ಸಂಶಯವಿತ್ತು. ಆದರೆ ಅವರು ರಕ್ಷಣಾ ಸಚಿವರಾಗಿ ಅತ್ಯಂತ ದಕ್ಷತೆಯಿಂದ , ಅಷ್ಟೇ ಮುಲಾಜಿಲ್ಲದ, ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಆಡಳಿತ  ನೀಡಿದರು. ಸೈನಿಕರ ಬಗ್ಗೆ ಅವರಿಗೆ ಪ್ರಾಮಾಣಿಕ ಕಳಕಳಿ ಇತ್ತು. ಅವರಿಗಾಗಿ ಏನನ್ನೂ ಮಾಡಲು ಅವರು ಸಿದ್ಧರಿದ್ದರು. ಸಿಯಾಚಿನ್ ನಲ್ಲಿ ಸೈನಿಕರಿಗೆ ಸ್ನೋ ಸ್ಕೂಟರ್ ಖರೀದಿಸುವುದನ್ನು ಖರ್ಚಿನ ಕಾರಣ ನೀಡಿ ವಿಳಂಬಿಸುತ್ತಿದ್ದ ಇಬ್ಬರು ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಸಿಯಾಚಿನ್ ಗೆ ಕಳಿಸುವಂತೆ ಆದೇಶ ನೀಡಿದ್ದರು ಜಾರ್ಜ್ ಫೆರ್ನಾಂಡಿಸ್!.

ಸಿಯಾಚಿನ್ ಗೆ ಅತ್ಯಂತ ಹೆಚ್ಚು ಬಾರಿ ಭೇಟಿ ನೀಡಿದ ರಕ್ಷಣಾ ಸಚಿವ ಎಂಬ ಕೀರ್ತಿಯೂ ಅವರಿಗೆ ಸಂದಿತ್ತು .

(theprint.in ಬರೆದ ಲೇಖನ ಆಧರಿತ) 

►ಮಾನವೇಂದ್ರ ಸಿಂಗ್ ಕಾಂಗ್ರೆಸ್ ನಾಯಕ, ಮಾಜಿ ಸಂಸದ Defence & Security Alert ಮಾಸಿಕದ ಸಂಪಾದಕ

Writer - ಮಾನವೇಂದ್ರ ಸಿಂಗ್

contributor

Editor - ಮಾನವೇಂದ್ರ ಸಿಂಗ್

contributor

Similar News