ಮಾಲ್ ರೆಡಿ ಸಾರ್...ಯಾವ ರೆಸಾರ್ಟಿಗೆ ಬರಲಿ?
ಶಾಸಕ ಗುಳ್ಳಪ್ಪನ ಮೊಬೈಲ್‌ಗೆ ಫೋನ್ ರಿಂಗಣಿಸಿತು.
‘‘ಸಾರ್...ತಮ್ಮ ರೇಟೆಷ್ಟು....’’ ಅತ್ತ ಕಡೆಯಿಂದ ಕರೆ.
‘‘ಯಾರದು? ಯಾರು ಮಾತನಾಡ್ತಾ ಇರುವುದು?’’ ಗುಳ್ಳಪ್ಪ ಕೇಳಿದ.
‘‘ಏ ಧ್ವನಿ ನೋಡಿದರೆ ಗೊತ್ತಾಗುವುದಿಲ್ಲವೇನ್ರೀ....?’’ ಅತ್ತ ಕಡೆಯಿಂದ.
ಗುಳ್ಳ ಈಗ ನವಿರಾಗಿ ಕಂಪಿಸಿದ. ಯಡಿಯೂರಪ್ಪನ ಧ್ವನಿ ಇದ್ದ ಹಾಗಿದೆ. ಹೇಗೂ ಸರಕಾರದಲ್ಲಿ ಸಚಿವ ಸ್ಥಾನ ಬಿಡಿ, ನಿಗಮ ಮಂಡಳಿಯೂ ಸಿಗಲಿಲ್ಲ. ಗಂಟಲು ಸರಿಪಡಿಸಿದವನೇ ‘‘ನೋಡಿ ಸಾರ್...ನೀವೇ ಒಂದು ಅಂದಾಜು ದರ ಫಿಕ್ಸ್ ಮಾಡಿ....’’
‘‘ಅದು ಹೇಗಾಗತ್ತೆ? ನಾಳೆ ನೀವು ಕಡಿಮೆ ಆಯಿತು ಎಂದು ಹೇಳಬಾರದಲ್ವ? ನೀವೇ ಹೇಳಿ...’’ ಅತ್ತ ಕಡೆಯಿಂದ ಯಡಿಯೂರಪ್ಪ ಧ್ವನಿ.
ಗುಳ್ಳಪ್ಪನಿಗೆ ಕಸಿವಿಸಿ. ಒಂದು ಹತ್ತು ಕೋಟಿ ಕೇಳೋಣ ಎನ್ನುವ ಆಸೆ. ಒಂದು ವೇಳೆ ಯಡಿಯೂರಪ್ಪ ಅವರು 20 ಕೋಟಿ ಕೊಡಲು ತಯಾರಿದ್ದರೆ?
‘‘ಸಾರ್...ಆದ್ರೂ ಸದ್ಯ ನಿಮ್ಮ ಮಾರ್ಕೆಟ್‌ನಲ್ಲಿ ರೇಟು ಹೇಗಿದೆ....ನೀವು ಈಗಾಗಲೇ ಖರೀದಿಸಿದ ದರ ಹೇಳಿ....ನಾನು ಹೆಚ್ಚು ಕಡಿಮೆ ಮಾಡುವೆ....’’ ಗುಳ್ಳಪ ಮೆಲ್ಲಗೆ ಚೌಕಾಶಿ ಮಾಡಿದ.
‘‘ನಿಮಗೇನೂ ಗೊತ್ತಿಲ್ಲದ ವಿಷಯವೇ? ಪೇಪರ್‌ನಲ್ಲಿ ಓದುವುದಿಲ್ಲವೆ? ಹೇಳಿ ಹೇಳಿ...ವ್ಯಾಪಾರ ಬೇಗ ಮುಗಿಯಬೇಕು....ಬಜೆಟ್ ಮುಗಿಯುವ ಮುನ್ನ...’’
‘‘ಸಾರ್....ನೀವೇ ಹೇಳಿ ಸಾರ್....ನೋಡಿ....ನನ್ನ ಜಾತಿ ನಿಮಗೆ ಗೊತ್ತೇ ಇದೆ...ನಮ್ಮ ಜಾತಿಗೆ ತುಂಬಾ ಡಿಮಾಂಡ್....’’ ಗುಳ್ಳಪ್ಪ ಹೇಳಿದ.
‘‘ಅದು ಗೊತ್ತು. ನಿಮ್ಮ ಜಾತಿಯನ್ನು ನೋಡಿಯೇ ಕೇಳ್ತಾ ಇರುವುದು....ನಿಮ್ಮ ಜಾತಿ ಮಾರ್ಕೆಟ್‌ನಲ್ಲಿ ಬಹಳ ಕಡಿಮೆ....’’
ಗುಳ್ಳಪ್ಪನಿಗೆ ಅದು ಕೇಳಿ ಖುಷಿ ಖುಷಿಯಾಯಿತು.
‘‘ಸರಿ...ಒಂದು 200 ಕೊಡ್ತೇವೆ...’’ ಅತ್ತ ಕಡೆಯಿಂದ ದರ ನಿಗದಿಯಾಯಿತು. ಗುಳ್ಳಪ್ಪರಿಗೆ ತಲೆ ಗಿರ್ ಅನ್ನಿಸಿತು. 200 ಕೋಟಿ ರೂಪಾಯಿ...!! ಎರಡು ಪೀಳಿಗೆ ಕುಳಿತು ಉಣ್ಣಬಹುದು.
‘‘ಅಯ್ಯೋ....ಆಗಬಹುದು ಸಾರ್...ದುಡ್ಡು ಹೇಗೆ ತಲುಪಿಸುತ್ತೀರಿ.....?’’ ಗುಳ್ಳಪ್ಪ ಕೇಳಿದ.
‘‘ಮೊದಲು ಮಾಲ್ ಬರಬೇಕು....ಕ್ಯಾಶ್ ಕೈಯಲ್ಲೇ ಕೊಡುತ್ತೇವೆ....’’ ಅತ್ತಲಿಂದ ಸೂಚನೆ ಸಿಕ್ಕಿತು.
‘‘ಮಾಲ್ ರೆಡಿ ಸಾರ್...ಯಾವ ರೆಸಾರ್ಟ್‌ಗೆ ಬರಬೇಕು ಹೇಳಿ. ಬಂದು ಬಿದ್ದುಕೊಳ್ತೇನೆ. ಹೊತ್ತು ಹೊತ್ತಿಗೆ ಗುಂಡು ತುಂಡು ಹಾಕಿದರೆ ಸಾಕು....’’
ಅತ್ತ ಕಡೆಯಿಂದ ಧ್ವನಿ ಒಮ್ಮೆಲೆ ಜೋರಾಯಿತು ‘‘ರೆಸಾರ್ಟ್ ...ಯಾವ ರೆಸಾರ್ಟ್....? ನೇರವಾಗಿ ಮಾರ್ಕೆಟ್‌ಗೆ ಬನ್ನಿ....’’
ಶಾಸಕರನ್ನು ಖರೀದಿಸುವ ಮಾರ್ಕೆಟ್ ಇದೆಯೇ? ‘‘ಸಾರ್ ಎಲ್ಲಿ ಸಾರ್?’’ ಗುಳ್ಳಪ್ಪ ಕೇಳಿದ.
‘‘ಶಿವಾಜಿ ನಗರ ಚಿಕನ್ ಮಾರ್ಕೆಟ್‌ಗೆ ಬನ್ನಿ....’’ ಅತ್ತಲಿಂದ ಧ್ವನಿ.
‘‘ಯಾರು ಸಾರ್ ಇದು? ಝಮೀರ್ ಅಹಮದ?’’ ಗುಳ್ಳಪ್ಪ ಕಂಗಾಲಾಗಿ ಕೇಳಿದ.
‘‘ಏನ್ರೀ...ನೀವು ಚಿಕನ್ ರಂಗಣ್ಣ ಅಲ್ವ? ದಿನಾ ನಮಗೆ ಕೋಳಿ ಸಪ್ಲೈ ಮಾಡೋ ರಂಗಣ್ಣ? ನಮ್ಮ ಬಜೆಟ್‌ಗೆ ತಕ್ಕ ಹಾಗೆ ಕೋಳಿ ಸಪ್ಲೈ ಮಾಡೋರು ನೀವೇ ಅಲ್ವಾ?’’
ಗುಳ್ಳಪ್ಪ ಒಮ್ಮೆಲೆ ರಾಂಗಾದ ‘‘ನಾನು ಶಾಸಕ ಗುಳ್ಳಪ್ಪ ಮಾತನಾಡ್ತ ಇರೋದು...ನೀವು ಯಾರು?’’
ಅತ್ತಲಿಂದ ‘ರಾಂಗ್ ನಂಬರ್’ ಎಂದು ಪೋನ್ ಕುಕ್ಕಿದ ಸದ್ದು.