2. ಆಲಿಸುವುದನ್ನು ಕಲಿ
ವಿದ್ಯಾರ್ಥಿಗಳ ಬಹುದೊಡ್ಡ ಸಮಸ್ಯೆ ಆಲಿಸುವಿಕೆಗೆ ಸಂಬಂಧಿಸಿದ್ದು. ಎಲ್ಲಾ ಅವಧಿಯಲ್ಲಿ ಎಲ್ಲಾ ವಿಷಯಗಳನ್ನು ಚಾಚು ತಪ್ಪದೆ ಆಲಿಸಲು ಕೆಲವರಿಗೆ ತೊಡಕಿರಬಹುದು. ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಒಂದು ದಿನದಲ್ಲಿ ಬಹುತೇಕ ಅಂಶಗಳ ಕಡೆ ಆಲಿಸುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಆಲಿಸುವಿಕೆಯ ಸಾಮರ್ಥ್ಯ ಕ್ಕಿಂತಲೂ ಕಡಿಮೆ ಆಲಿಸುತ್ತಾರೆ. ಉದ್ದೇಶ ಪೂರ್ವಕವಾಗಿ ಆಲಿಸುವಿಕೆಯಿಂದ ವಿಮುಖರಾಗುತ್ತಾರೆ. ಅನ್ಯ ವಿಷಯಗಳಿಗೆ ಗಮನ ನೀಡುತ್ತಾರೆ. ನೀವು ಬಹುತೇಕ ತರಗತಿಯ ಪಾಠವನ್ನು ಆಲಿಸಿದ್ದೀರಿ ಎಂದಾದರೆ ಅದುವೇ ನಿಮಗೆ ಬಹುದೊಡ್ಡ ಕೊಡುಗೆ. ಸರಿಯಾದ ಆಲಿಸುವಿಕೆ ನಿಮಗೆ ಒಂದು ವಿಷಯವನ್ನು ಅರ್ಥಮಾಡಿಸುತ್ತದೆ. ಇಲ್ಲವೇ ಅರ್ಧ ಅರ್ಥ ಮಾಡಿಸುತ್ತದೆ. ಇಲ್ಲವೇ ಏನೂ ಅರ್ಥ ಆಗದಂತೆಯೂ ಮಾಡಿಸುತ್ತದೆ. ಇವೆಲ್ಲವುಗಳಿಗೂ ಪರಿಹಾರವಿದೆ. ಸರಿಯಾಗಿ ಅರ್ಥ ಆಗದಿದ್ದರೆ ನಿಮ್ಮಲ್ಲಿ ಪ್ರಶ್ನೆಗಳು ಮೂಡಬೇಕು. ಆ ಪ್ರಶ್ನೆಗಳೊಂದಿಗೆ ನೀವು ನಿಮ್ಮ ಶಿಕ್ಷಕರನ್ನು ಸಮೀಪಿಸಬೇಕು. ಅವರಲ್ಲಿ ಮತ್ತೆ ಮತ್ತೆ ಪ್ರಶ್ನೆ ಕೇಳಿ ಮನನ ಮಾಡಿಕೊಳ್ಳುವುದು ನಿಮ್ಮ ಹಕ್ಕಾಗಿದೆ. ಓದು, ಕಿವಿಯ ಮೂಲಕ ಕೇಳಿಸಿಕೊಳ್ಳುವುದು, ಮನಸ್ಸಿನ ಮೂಲಕ ಅರ್ಥ ಮಾಡಿಕೊಳ್ಳುವುದು ಮತ್ತು ಮೆದುಳಿನ ಮೂಲಕ ಮುದ್ರಿಸಿ ಕೊಳ್ಳುವುದು ಮುಖ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದು ಲೋಪವಾದರೂ ಕಲಿಕೆ ಅಪೂರ್ಣವಾಗುತ್ತದೆ. ಅದಕ್ಕಾಗಿ ಓದನ್ನು ಯಾಂತ್ರಿಕವಾಗಿಸದೆ ಅಥವಾ ಪುಟ ತಿರುಗಿಸುವ ಪ್ರಯತ್ನ ಮಾತ್ರ ಮಾಡದೆ ನಿಧಾನವಾದರೂ ಈ ಮೇಲಿನ ಪ್ರಕ್ರಿಯಗಳ ಮೂಲಕ ಹಾದು ಹೋದರೆ ಅದು ನಿಮಗೆ ಹೆಚ್ಚು ಆಪ್ಯಾಯಮಾನವಾಗುತ್ತದೆ. ಕಲಿತದ್ದು ಮರೆತು ಹೋಗುತ್ತದೆ ಎಂಬ ಸಮಸ್ಯೆಯಿಂದಲೂ ಹೊರಬರಬಹುದು.