ಆಧಾರ್ ಕಾರ್ಡ್ ಗೆ ಕಚೇರಿ ಸುತ್ತಿ ಬಸವಳಿದ ಬಡದಂಪತಿ !
ಶಿವಮೊಗ್ಗ, ಫೆ. 13: ಒಂದೆಡೆ ವಿವಿಧ ಸರಕಾರಿ ಸೌಲಭ್ಯ ಪಡೆಯಲು ‘ಆಧಾರ್’ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಮತ್ತೊಂದೆಡೆ ಕೆಲ ಸರಕಾರಿ ಕಚೇರಿಗಳಲ್ಲಿ, ‘ಆಧಾರ್’ ಇಲ್ಲದೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಇನ್ನೊಂದೆಡೆ ನಾನಾ ಕಾರಣಗಳಿಂದ, ‘ಆಧಾರ್’ ಮಾಡಿಸಲಾಗದವರ ಪಾಡೂ ಹೇಳತೀರದಾಗಿದೆ. ಇದಕ್ಕೆ ಶಿವಮೊಗ್ಗ ತಾಲೂಕಿನ ಹೊಸಮನೆ ಗ್ರಾಮದ ಬಡ ದಂಪತಿಯ ಗೋಳು ಸಾಕ್ಷಿಯಾಗಿದೆ. ವಿಕಲಾಂಗ ಪುತ್ರನಿಗೆ ‘ಆಧಾರ್’ ಮಾಡಿಸಲು ದಂಪತಿ ಪಡುತ್ತಿರುವ ಸಂಕಷ್ಟ ಮನ ಕಲಕುವಂತಿದೆ!
ಹೌದು. ಕಣ್ಣು ಕಾಣಿಸದ, ಮಾತನಾಡಲು ಆಗದ, ಕೈಕಾಲು ಸ್ವಾಧೀನವಿಲ್ಲದೆ ಎದ್ದು ಓಡಾಡಲಾಗದ ಸ್ಥಿತಿಯಲ್ಲಿರುವ 4 ವರ್ಷದ ಮಗುವಿನ ‘ಆಧಾರ್’ ನೊಂದಣಿಗಾಗಿ ಈ ಬಡ ದಂಪತಿ ಕಳೆದ ಸುಮಾರು 3 ತಿಂಗಳಿನಿಂದ ಮಗುವಿನೊಂದಿಗೆ ಸರಕಾರಿ ಕಚೇರಿಗಳಿಗೆ ಎಡತಾಕುತ್ತಿದ್ದಾರೆ. ಆದರೆ ನಾನಾ ದೈಹಿಕ ಸಮಸ್ಯೆಗಳಿಗೆ ತುತ್ತಾಗಿರುವ ಮಗುವಿನ ಬಯೋಮೆಟ್ರಿಕ್ ವಿವರ, ‘ಆಧಾರ್’ ಕೇಂದ್ರಗಳಲ್ಲಿ ಸ್ಕ್ಯಾನ್ ಆಗುತ್ತಿಲ್ಲ. ಕಂಪ್ಯೂಟರ್‌ನಲ್ಲಿ ದಾಖಲಾಗುತ್ತಿಲ್ಲ. ಮತ್ತೊಂದೆಡೆ ‘ಆಧಾರ್’ ಮಾಹಿತಿಯಿಲ್ಲದೆ ನಿಮ್ಮ ಮಗುವಿಗೆ ವಿಕಲಚೇತನ ಮಾಸಾಶನ ಮಂಜೂರು ಸಾಧ್ಯವಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕಾರಣದಿಂದ ವಿಕಲಾಂಗ ಮಗುವಿನೊಂದಿಗೆ ಈ ಬಡ ದಂಪತಿ ಸರಕಾರಿ ಕಚೇರಿಗಳಿಗೆ ಎಡತಾಕುವುದನ್ನು ಮುಂದುವರಿಸಿದೆ. ‘ಏನಾದರೂ ಮಾಡಿ ತಮ್ಮ ಮಗುವಿಗೆ ಆಧಾರ್ ಕಾರ್ಡ್ ಮಾಡಿಕೊಡಿ...’ ಎಂದು ಬೇಡಿಕೊಳ್ಳುತ್ತಿದೆ.
ದುಸ್ತರ: ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆ ಗ್ರಾಪಂ ವ್ಯಾಪ್ತಿಯ ಹೊಸಮನೆ ತಾಂಡಾದ ನಿವಾಸಿ, ಪರಿಶಿಷ್ಟ ಜಾತಿಗೆ ಸೇರಿದ, ಬಡ ಕುಟುಂಬದ ಪಾಪನಾಯ್ಕಿ ಹಾಗೂ ಸವಿತಾ ತಮ್ಮ ವಿಕಲಾಂಗ ಪುತ್ರ ಮನೋಜ್‌ಕುಮಾರ್‌ನ ಆಧಾರ್ ಮಾಡಿಸಲು ಹರಸಾಹಸ ನಡೆಸುತ್ತಿರುವ ದಂಪತಿಯಾಗಿದ್ದಾರೆ.
ತಮ್ಮ ಪುತ್ರ ಪ್ರಮೋದ್ ಕುಮಾರ್ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ಕಣ್ಣು ಕಾಣಿಸುವುದಿಲ್ಲ. ಮಾತನಾಡಲು ಬರುವುದಿಲ್ಲ. ಓಡಾಡುವುದಿಲ್ಲ. ಆತನ ಕೈಕಾಲುಗಳಲ್ಲಿ ಸ್ವಾಧೀನವೇ ಇಲ್ಲ. ಹಾಸಿಗೆಯಲ್ಲಿಯೇ ಮಲಗಿರಬೇಕಾದ ಸ್ಥಿತಿ ಆತನದ್ದು. ತಮಗೆ ಕಾಲು ಎಕರೆಯಷ್ಟು ಕೃಷಿ ಜಮೀನಿದ್ದು, ಇದೇ ಜೀವನದ ಆಧಾರವಾಗಿದೆ. ಮಗನ ಔಷೋಧಪಚಾರಕ್ಕೆ ಸಾವಿರಾರು ಖರ್ಚು ಮಾಡುತ್ತಿದ್ದು, ಕೆಲವರ ಸಲಹೆಯಂತೆ ಅಂಗವಿಕಲ ವೇತನ ಮಾಡಿಸಲು ಮುಂದಾಗಿದ್ದೇನೆ. ಅದರಂತೆ ಗ್ರಾಪಂ, ಶಿವಮೊಗ್ಗ ತಾಲೂಕು ಕಚೇರಿ ಸೇರಿದಂತೆ ಹಲವೆಡೆಯಿರುವ ಆಧಾರ್ ಕೇಂದ್ರಗಳಿಗೆ ಪುತ್ರನನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಇಲ್ಲಿಯವರೆಗೂ ಆಧಾರ್ ಮಾಡಿಸಲು ಸಾಧ್ಯವಾಗಿಲ್ಲ. ಮಗುವಿನ ಹೆಬ್ಬೆಟ್ಟಿನ ಗುರುತು ಕಂಪ್ಯೂಟರ್‌ನಲ್ಲಿ ನಮೂದಾಗುತ್ತಿಲ್ಲ. ಪುತ್ರನಿಗೆ ಕಣ್ಣು ಕಾಣಿಸುವುದಿಲ್ಲ. ಆತನ ಕಣ್ಣಿನ ಚಲನೆ ಮೇಲ್ಮುಖವಾಗಿರುವುದರಿಂದ, ಆಧಾರ್‌ನಲ್ಲಿ ಕಣ್ಣಿನ ವಿವರ ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಎಷ್ಟೇ ಪ್ರಯತ್ನ ನಡೆಸಿದರೂ ಪುತ್ರನ ಆಧಾರ್ ಕಾರ್ಡ್ ಮಾಡಿಸಲಾಗುತ್ತಿಲ್ಲ ಎಂದು ಪಾಪನಾಯ್ಕಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಪುತ್ರನಿಗೆ ಮಾಸಾಶನ ಸೌಲಭ್ಯ ಕಲ್ಪಿಸಲು ರೇಷನ್ ಕಾರ್ಡ್ ಜೊತೆ ಆತನ ಆಧಾರ್ ಮಾಹಿತಿಯೂ ಕೊಡಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ದಯಮಾಡಿ ತಮ್ಮ ಮಗನಿಗೆ ಆಧಾರ್ ಮಾಡಿಸಿಕೊಡಿ ಎಂದು ಎಲ್ಲರಲ್ಲಿಯೂ ಕೇಳಿಕೊಳ್ಳುತ್ತಿದ್ದೇನೆ ಎಂದು ನೋವಿನಿಂದ ಹೇಳುತ್ತಾರೆ.
ಆಧಾರ್ ನೋಂದಣಿ ವ್ಯತ್ಯಯ
ಆಧಾರ್ ತಂತ್ರಾಂಶವನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಕೆಲ ದಿನಗಳಿಂದ ಆಧಾರ್ ನೋಂದಣಿಯಂತಹ ಕಾರ್ಯಗಳಲ್ಲಿ ವ್ಯತ್ಯಯ ಕಂಡುಬಂದಿದೆ. ಆಧಾರ್ ಕೇಂದ್ರಗಳಲ್ಲಿ ನಾಗರಿಕರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ಸಾಫ್ಟ್‌ವೇರ್ ಅಪ್‌ಡೇಟ್ ಕಾರ್ಯ ನಡೆಯುತ್ತಿದೆ. ಒಂದೆರೆಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಎಂದಿನಂತೆ ನಾಗರಿಕರಿಗೆ ಆಧಾರ್ ಕೇಂದ್ರಗಳಲ್ಲಿ ಸೇವೆ ಲಭ್ಯವಾಗಲಿದೆ ಎಂದು ಜಿಲ್ಲಾಡಳಿತದ ಮೂಲಗಳು ಮಾಹಿತಿ ನೀಡುತ್ತವೆ.
ನೆರವಿಗೆ ಧಾವಿಸಿದ ಜಿಲ್ಲಾಧಿಕಾರಿ
ಬುಧವಾರ ಕೂಡ ದಂಪತಿಯು ವಿಕಲಾಂಗ ಪುತ್ರನೊಂದಿಗೆ ಆಧಾರ್ ಮಾಡಿಸಲು ಶಿವಮೊಗ್ಗ ತಾಲೂಕು ಕಚೇರಿಗೆ ಆಗಮಿಸಿದ್ದರು. ಅಲ್ಲಿ ‘ನಿಮ್ಮ ಪುತ್ರನ ಬಯೋಮೆಟ್ರಿಕ್ ವಿವರ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತಿಲ್ಲ. ಆಧಾರ್ ನೋಂದಣಿ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಧಾರ್ ವಿಭಾಗದ ಸಿಬ್ಬಂದಿಯನ್ನು ಭೇಟಿಯಾಗಿ ಅವರಿಂದ ಏನಾದರೂ ನೆರವು ದೊರಕಬಹುದು’ ಎಂದು ತಿಳಿಸಿದ್ದಾರೆ. ಅದರಂತೆ ದಂಪತಿಯು ಪುತ್ರನೊಂದಿಗೆ ಸಮೀಪದಲ್ಲಿಯೇ ಇರುವ ಡಿಸಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿ ಕೆ. ಎ. ದಯಾನಂದ್‌ರನ್ನು ದಂಪತಿಯು ಭೇಟಿಯಾಗಿ ತಾವು ಪಡುತ್ತಿರುವ ಸಂಕಷ್ಟದ ವಿವರಗಳನ್ನು ತಿಳಿಸಿದರು. ತಡಮಾಡದ ಡಿಸಿ ದಂಪತಿ ಸಮೇತ ಆಧಾರ್ ವಿಭಾಗಕ್ಕೆ ಆಗಮಿಸಿ ಅಲ್ಲಿನ ಸಿಬ್ಬಂದಿ ಬಳಿ ಸಮಾಲೋಚನೆ ನಡೆಸಿದರು. ಪ್ರಸ್ತುತ ಆಧಾರ್‌ನ ಸಾಫ್ಟ್‌ವೇರ್ ಅಪ್‌ಡೇಟ್ ಕಾರ್ಯ ನಡೆಯುತ್ತಿದ್ದು, ಸದ್ಯ ಆಧಾರ್ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ವಿವರವನ್ನು ಸಿಬ್ಬಂದಿ ನೀಡಿದರು. ಇನ್ನೆರೆಡು ದಿನ ಬಿಟ್ಟು ಬನ್ನಿ. ಆಧಾರ್ ಕಾರ್ಡ್ ಸೇರಿದಂತೆ, ಸರಕಾರದಿಂದ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯವನ್ನು ನಿಮ್ಮ ಪುತ್ರನಿಗೆ ದೊರಕಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದು ತಮಗೆ ಅತೀವ ಸಂತಸ ಉಂಟು ಮಾಡಿದೆ ಎಂದು ಪಾಪನಾಯ್ಕಾ ದಂಪತಿ ತಿಳಿಸಿದರು.