ಅಮೆರಿಕ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲು ಮುಂದಾದ ಟ್ರಂಪ್
ವಾಶಿಂಗ್ಟನ್, ಫೆ. 16: ತನ್ನ ಮಹತ್ವಾಕಾಂಕ್ಷೆಯ ಮೆಕ್ಸಿಕೊ ಗಡಿ ಗೋಡೆಗೆ ಹಣವನ್ನು ಹೊಂದಿಸುವುದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ.
‘‘ನಾವು ಇಂದು ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಸಹಿ ಹಾಕಲಿದ್ದೇವೆ. ಇದು ನಾನು ಮಾಡುತ್ತಿರುವ ಅತ್ಯಂತ ಶ್ರೇಷ್ಠ ಕೆಲಸವಾಗಿದೆ’’ ಎಂದು ಶ್ವೇತಭವನದಿಂದ ಮಾಡಿದ ಸುದೀರ್ಘ ಭಾಷಣದಲ್ಲಿ ಅಧ್ಯಕ್ಷರು ಹೇಳಿದರು.
‘‘ದಕ್ಷಿಣದಲ್ಲಿ ಮೆಕ್ಸಿಕೊ ಜೊತೆಗೆ ನಾವು ಹೊಂದಿರುವ ಗಡಿಯ ಮೂಲಕ ಒಳಬರುವ ಮಾದಕದ್ರವ್ಯ ಮತ್ತು ಕ್ರಿಮಿನಲ್‌ಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ’’ ಎಂದು ಅವರು ನುಡಿದರು.
ತುರ್ತು ಪರಿಸ್ಥಿತಿ ಘೋಷಣೆ ಅಭೂತಪೂರ್ವ ಕ್ರಮ ಎಂಬ ಟೀಕೆಯನ್ನು ಅವರು ತಳ್ಳಿಹಾಕಿದರು. ಆದರೆ, ಇದಕ್ಕೆ ವಿರೋಧ ಮತ್ತು ಕಾನೂನು ಸವಾಲುಗಳು ಎದುರಾಗುವುದನ್ನು ನಾನು ನಿರೀಕ್ಷಿಸಿದ್ದೇನೆ ಎಂದರು.
ಇತ್ತೀಚೆಗೆ ಗಡಿ ಗೋಡೆಗೆ 1.375 ಬಿಲಿಯ ಡಾಲರ್ (ಸುಮಾರು 9,800 ಕೋಟಿ ರೂಪಾಯಿ) ಮೊತ್ತವನ್ನು ಅಮೆರಿಕದ ಸಂಸತ್ತು ಕಾಂಗ್ರೆಸ್‌ನ ಆಡಳಿತ ಮತ್ತು ಪ್ರತಿಪಕ್ಷ ಸಂಸದರ ನಡುವೆ ಏರ್ಪಟ್ಟ ರಾಜಿ ಒಪ್ಪಂದದಲ್ಲಿ ಇಟ್ಟಿರುವುದನ್ನು ಸ್ಮರಿಸಬಹುದಾಗಿದೆ.
ಫೆಬ್ರವರಿ 16ರಿಂದ ಅಮೆರಿಕ ಸರಕಾರ ಇನ್ನೊಮ್ಮೆ ಬಂದ್ ಆಗುವುದನ್ನು ತಪ್ಪಿಸುವುದಕ್ಕಾಗಿ ಈ ಒಪ್ಪಂದಕ್ಕೆ ಬರಲಾಗಿತ್ತು.
ಈಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ಬೇಕಾಗುವ ಮೊತ್ತವನ್ನು ಪಡೆಯುವುದಕ್ಕಾಗಿ ಟ್ರಂಪ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಗಡಿ ಗೋಡೆಗಾಗಿ 5.7 ಬಿಲಿಯ ಡಾಲರ್ (ಸುಮಾರು 40,660 ಕೋಟಿ ರೂಪಾಯಿ) ನೀಡುವಂತೆ ಟ್ರಂಪ್ ಕಾಂಗ್ರೆಸ್ಸನ್ನು ಕೇಳಿರುವುದನ್ನು ಸ್ಮರಿಸಬಹುದಾಗಿದೆ.
►ಈವರೆಗೆ 58 ಬಾರಿ ತುರ್ತು ಪರಿಸ್ಥಿತಿ
ಇದಕ್ಕೂ ಮೊದಲು, ಅಮೆರಿಕದಲ್ಲಿ ವಿವಿಧ ಕಾರಣಗಳಿಗಾಗಿ 58 ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಸಿಯರಾ ಲಿಯೋನ್‌ನಿಂದ ತರಲಾಗುವ ಕೆತ್ತದ ವಜ್ರಗಳನ್ನು ತಡೆಯಲು ಹಾಗೂ ಎರಡು ಸಂದರ್ಭಗಳಲ್ಲಿ ನಿಧಿ ಸಂಗ್ರಹಕ್ಕಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು ಎಂದು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.