ಪರೀಕ್ಷಾ ಪರ್ವ: ವಿದ್ಯಾರ್ಥಿ, ನೀನು ಏಕಾಂಗಿಯಲ್ಲ

Update: 2019-02-15 18:33 GMT

ಶಾಲಾ ಕಾಲೇಜುಗಳಲ್ಲಿನ ಪ್ರತೀ ಕಿರು, ಅರ್ಧ, ವಾರ್ಷಿಕ, ಪೂರ್ವ ಸಿದ್ಧತಾ ಪರೀಕ್ಷೆಗಳು ಕೂಡಾ ಮುಖ್ಯವಾದವುಗಳೇ ಆಗಿವೆ. ನೀವು ಪ್ರತೀ ಪರೀಕ್ಷೆಯನ್ನು ಆಸಕ್ತಿಯಿಂದ ಸ್ವೀಕರಿಸಿದಾಗ ಅಂತಿಮ ಪರೀಕ್ಷೆ ಇನ್ನೂ ಸುಲಭವಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ಒಂಟಿತನ ಕಾಡುವುದು ಸಹಜ, ಏಕೆಂದರೆ ಪರೀಕ್ಷಾ ಕೊಠಡಿಯಲ್ಲಿ ನೀವು ಏಕಾಂಗಿಯಾಗಿಯೇ ಉತ್ತರಿಸಬೇಕು. ಆದರೆ ಪರೀಕ್ಷೆಗೆ ಸಿದ್ಧರಾಗುವ ಪ್ರಕ್ರಿಯೆಯಲ್ಲಿ ನೀವು ಏಕಾಂಗಿಯಲ್ಲ.
ವಿದ್ಯಾರ್ಥಿಯ ಜೊತೆಗೆ ಶಿಕ್ಷಕರು, ಹೆತ್ತವರು ಸದಾ ಕಲಿಸುವ ಮತ್ತು ಹಾರೈಸುವ ಕಾರ್ಯವನ್ನು ಮಾಡುತ್ತಿರುತ್ತಾರೆ. ನಿಮ್ಮ ಶಿಕ್ಷಕರು ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳು. ಅವರು ನಿಮಗೆ ಗೊತ್ತಿಲ್ಲದ, ಸಂಶಯದ ವಿಷಯಗಳನ್ನು ತಿಳಿಸಬಲ್ಲರು, ಪರಿಹರಿಸ ಬಲ್ಲರು. ಅವರನ್ನು ಸಮೀಪಿಸುವ, ಕೇಳುವ ಕಾರ್ಯ ಮಾಡಬೇಕು. ನಿಮ್ಮ ಹೆತ್ತವರು ಸದಾ ನಿಮ್ಮ ಏಳಿಗೆಯನ್ನು ಬಯಸುತ್ತಾರೆ. ಅವರು ನಿಮಗೆ ಸದಾ ನೆರವನ್ನು ನೀಡುವವರು. ಬಹುತೇಕ ಪೋಷಕರಿಗೆ ನಿಮ್ಮ ವಿಷಯಗಳನ್ನು ಹೇಳಿ ಕೊಡಲು ಬಾರದಿರಬಹುದು. ಆದರೆ ಅವರು ನಿಮ್ಮ ದೈನಂದಿನ ಬೇಡಿಕೆಗಳಿಗೆ ಸ್ಪಂದಿಸುವವರಾಗಿದ್ದಾರೆ.
  ನೀವೆದುರಿಸುವ ಪ್ರತೀ ಪರೀಕ್ಷೆ ಕೂಡಾ ನಿಮ್ಮ ಶಿಕ್ಷಣದ ಭಾಗವೇ ಆಗಿದೆ. ಒಂದು ಪೂರ್ವಸಿದ್ಧತಾ ಪರೀಕ್ಷೆಯಿಂದ ಇನ್ನೊಂದು ಪೂರ್ವಸಿದ್ಧತಾ ಪರೀಕ್ಷೆಗೆ ಅಣಿಯಾಗುವಾಗ ಹಿಂದಿನದ್ದನ್ನು ಒಂದು ಮೆಟ್ಟಿಲು ಎಂದು ಪರಿಗಣಿಸಿ. ಈ ಮೂಲಕ ನಿಮ್ಮ ತಪ್ಪುಗಳನ್ನು ಸರಿಪಡಿಸಬೇಕು. ನಿಮ್ಮಲ್ಲಿರುವ ವಿವಿಧ ಪ್ರಶ್ನೆ ಪತ್ರಿಕೆಗಳು ಕೂಡಾ ಮಿತ್ರರೇ ಆಗಿವೆ. ಅವುಗಳನ್ನು ಅವಲೋಕಿಸಿ ತಾಳೆ ನೋಡಬೇಕು. ಪಠ್ಯ ಪುಸ್ತಕಗಳು, ನೋಟ್ಸ್ ಕೂಡಾ ನಿಮ್ಮ ಸಂಗಾತಿಗಳೇ ಆಗಿವೆ. ಇಷ್ಟೇ ಅಲ್ಲದೆ ದೂರದರ್ಶನ ವಾಹಿನಿ ನಿಮಗಾಗಿ ನಿತ್ಯ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆೆ. ಆಕಾಶವಾಣಿಯಲ್ಲಿ ಸಲಹೆ-ಸೂಚನೆಗಳು ಮೂಡಿ ಬರುತ್ತಿವೆ. ವಿವಿಧ ಮುದ್ರಣ ಮಾಧ್ಯಮಗಳು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡುತ್ತಿವೆ. ಇವೆಲ್ಲವೂ ನಿಮಗಾಗಿ. ನೀವು ಎಲ್ಲವನ್ನು ಸರಿಯಾಗಿ ಬಳಸಿಕೊಂಡರೆ ಪರೀಕ್ಷೆ ನಿಮ್ಮ ಸಂಗಾತಿಯಾಗುತ್ತದೆ.

Writer - ಎ. ಆರ್. ಅನಂತಾಡಿ

contributor

Editor - ಎ. ಆರ್. ಅನಂತಾಡಿ

contributor

Similar News