ಪರೀಕ್ಷಾ ಪರ್ವ: ಏಕಾಗ್ರತೆಯೇ ಮೊದಲು

Update: 2019-02-16 18:47 GMT

ಅರವತ್ತು ನಿಮಿಷ ಏಕಾಗ್ರತೆಯಿಂದ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳ ಏಕಾಗ್ರತೆ ವರ್ಷಗಳು ಉರುಳಿದಂತೆ ಕಡಿಮೆಯಾಗ ತೊಡಗಿದೆ. ತದೇಕಚಿತ್ತದಿಂದ ವಿಷಯದ ಕಡೆಗೆ ಗಮನ ನೀಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ತರಗತಿಗಳಲ್ಲಿ ಕಡಿಮೆ. ಏಕಾಗ್ರತೆ ಕಡಿಮೆ ಹೊಂದಿರುವ ವಿದ್ಯಾರ್ಥಿಗಳು ಸಹಜ ವಾಗಿಯೇ ಕಲಿಕೆಯಲ್ಲಿ ಹಿಂದುಳಿಯು ತ್ತಾರೆ. ಇದು ವಿದ್ಯಾರ್ಥಿಗಳ ಪರೀಕ್ಷೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಏಕಾಗ್ರತೆಯನ್ನು ಹೊಂದುವುದು ಆವಶ್ಯಕ. ಏಕಾಗ್ರತೆ ಇಲ್ಲದೆ ಯಾವ ಕೆಲಸ ನಿರ್ವಹಿಸಿದರೂ ಅದು ಅಪೂರ್ಣವೇ ಸರಿ, ವಿದ್ಯಾರ್ಥಿಗಳು ತಮ್ಮ ಎಳೆಯ ವಯಸ್ಸಿನಲ್ಲಿ ಏಕಾಗ್ರತೆ ಹೊಂದಲು ಅಭ್ಯಾಸ ಮಾಡಿಕೊಂಡರೆ ಅದು ನಿಮ್ಮ ಪರೀಕ್ಷೆಗೂ ಭವಿಷ್ಯದ ವೃತ್ತಿ ಜೀವನಕ್ಕೂ ಸಹಕಾರಿಯಾಗಲಿದೆ.
ತಮ್ಮ ದೇಹ ಮತ್ತು ಮನಸ್ಸನ್ನು ಒಂದು ವಿಷಯದ ಅಥವಾ ಅಂಶದ ಕಡೆಗೆ ಕೇಂದ್ರೀಕರಿಸುವುದೇ ಏಕಾಗ್ರತೆ. ಆರೋಗ್ಯ ವಂತ ದೇಹದೊಂದಿಗೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ ಮಾತ್ರ ನಿಮ್ಮ ಓದು, ಬರಹ, ಲೆಕ್ಕ, ಚಿತ್ರ ನಿಮಗೆ ಅರ್ಥವಾಗುತ್ತದೆ. ನಿಮ್ಮ ಗಮನ ವಿಕೇಂದ್ರೀಕರಿಸಿ ಓದಿದಾಗ ಅದು ನಿರರ್ಥಕ. ಈ ರೀತಿ ಪರೀಕ್ಷೆ ಬರೆದರೂ, ಪಾಠ ಕೇಳಿದರೂ ಅದು ನಿಷ್ಪ್ರಯೋಜಕ. ಅದಕ್ಕಾಗಿ ವಿದ್ಯಾರ್ಥಿಗಳೇ, ನೀವು ನಿಮ್ಮ ತಯಾರಿಯ ಸಂದರ್ಭದಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡು ತಯಾರಾಗಿ. ಗಮನವನ್ನು ಪೂರ್ಣ ಪ್ರಮಾಣದಲ್ಲಿ ವಿಷಯದ ಕಡೆಗೆ ನೀಡಿ. ಮನಸ್ಸು ಚಂಚಲವಾಗುತ್ತಿದ್ದರೆ ತಮ್ಮ ಕಣ್ಣನ್ನು ಒಂದು ಬಾರಿ ಮುಚ್ಚಿ ನಿರ್ದಿಷ್ಟ ಸಂಖ್ಯೆ ಯಿಂದ (ಉದಾ: 10, 20,2 5ರಿಂದ) ಅವರೋಹಣ ಕ್ರಮದಲ್ಲಿ ಎಣಿಸುತ್ತಾ ಶೂನ್ಯಕ್ಕೆ ಬನ್ನಿ. ಕಣ್ಣು ತೆರೆದು ಮತ್ತೆ ಓದಲು ಪ್ರಾರಂಭಿಸಿ ಶಬ್ದ ಮಾಲಿನ್ಯದ ಸ್ಥಳದಿಂದ ದೂರವಿದ್ದು ಸಿದ್ಧತೆ ಮಾಡಿ. ಧ್ವನಿವರ್ಧಕ, ಜನರ ಕಲರವ ಪುಟ್ಟ ಪುಟ್ಟ ಮಕ್ಕಳ ಆಟದ ಸ್ಥಳದಿಂದ ಅಂತರ ಕಾಪಾಡಿಕೊಂಡು ಕಲಿಯಿರಿ. ವಾಹನಗಳ ಓಡಾಟ ಕರ್ಕಶ ಹಾರ್ನ್‌ಗಳ ಸ್ಥಳದಿಂದ ಅಂತರ ಕಾಪಾಡಿಕೊಳ್ಳಿ. ಏಕಾಗ್ರತೆಗೆ ಭಂಗ ತರುವ ವಿಷಯಗಳಿಂದ ಸದಾ ಅಂತರ ಕಾಪಾಡಿಕೊಂಡು ತಯಾರಿ ನಡೆಸುವುದು ಅತೀ ಮುಖ್ಯವಾಗಿದೆ.

Writer - ಎ. ಆರ್. ಅನಂತಾಡಿ

contributor

Editor - ಎ. ಆರ್. ಅನಂತಾಡಿ

contributor

Similar News