ಪರೀಕ್ಷಾ ಪರ್ವ: ಗುಂಪು ಕಲಿಕೆ

Update: 2019-02-17 18:32 GMT

ವಿದ್ಯಾರ್ಥಿಗಳು ಏಕಾಂತದಲ್ಲಿ ಕಲಿಯುವುದು ಒಂದು ಬಗೆಯಾದರೆ ಗುಂಪಿನಲ್ಲಿ ಕಲಿಯುವುದು ಮತ್ತೊಂದು ವಿಧಾನವಾಗಿದೆ. ಸ್ವ ಅಧ್ಯಯನ, ಅವಲೋಕನ, ಸ್ಮರಣೆ, ಕಂಠಪಾಠ ಇವುಗಳಿಗೆ ಏಕಾಂತದ ಕಲಿಕೆ ಉತ್ತಮವಾಗಿದೆ. ಗಣಿತದಂತಹ ವಿಷಯಗಳನ್ನು, ಭಾಷಾ ವಿಷಯಗಳ ವ್ಯಾಕರಣಗಳನ್ನು ಅಭ್ಯಾಸ ಮಾಡಲು ಗುಂಪು ಕಲಿಕೆ ಉತ್ತಮವಾಗಿದೆ. ಸಮಾನ ಮನಸ್ಕ ಮೂರರಿಂದ ನಾಲ್ಕು ವಿದ್ಯಾರ್ಥಿಗಳು ಸೇರಿ ಒಂದು ಗುಂಪು ಮಾಡಿಕೊಳ್ಳಬಹುದು. ಈ ಗುಂಪಿನಲ್ಲಿ ನಿರ್ದಿಷ್ಟ ಅಧ್ಯಯನದ ವಿಷಯದ ಬಗ್ಗೆ ಹೆಚ್ಚು ಗೊತ್ತಿರುವ ವಿದ್ಯಾರ್ಥಿ ಇತರ ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು. ಉಳಿದ ವಿದ್ಯಾರ್ಥಿಗಳು ಆತನನ್ನು ನಾಯಕನೆಂದು ಪರಿಗಣಿಸಿ ಆತನ ಬೋಧನೆಯನ್ನು ಸಹನೆಯಿಂದ ಕೇಳಬೇಕು. ಸಂಶಯಗಳು ಬಂದಾಗ ಪ್ರಶ್ನೆ ಕೇಳಿ ಬಗೆಹರಿಸಿಕೊಳ್ಳಬೇಕು. ನಿಮಗೆ ಅರ್ಥವಾಗದ ಗಣಿತದ ಸಮಸ್ಯೆಗಳನ್ನು ಮತ್ತೆ ಮತ್ತೆ ಆತನಿಂದ ಪಡೆದುಕೊಂಡು ಬಿಡಿಸುವ ಮೂಲಕ ನೀವು ಹಾಗೂ ತಿದ್ದುವ ಮೂಲಕ ಆತನೂ ಈ ರೀತಿ ಇಬ್ಬರೂ ತಮ್ಮ ಕಲಿಕೆಯನ್ನು ಉತ್ತಮಪಡಿಸಿಕೊಳ್ಳಲು ಇದು ಸಹಕಾರಿ. ಶಿಕ್ಷಕರಲ್ಲಿ ನಿಮಗೆ ಕೇಳಲು, ಮತ್ತೆ ಮತ್ತೆ ಪ್ರಶ್ನಿಸಲು ಹಿಂಜರಿಕೆಯಿರುವ ಸಂದರ್ಭದಲ್ಲಿ ಗುಂಪು ಕಲಿಕೆ ನಿಮ್ಮದೇ ಸಹಪಾಠಿಗಳೊಡನೆ ಬೆರೆತು ಕಲಿಯಲು ಅವಕಾಶ ನೀಡುತ್ತದೆ.
ಗುಂಪು ಕಲಿಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಸ್ವಯಂ ನಿರ್ಬಂಧಗಳು :
 ಗುಂಪಿನಲ್ಲಿ ಕನಿಷ್ಠ ಎರಡು ಗರಿಷ್ಠ ನಾಲ್ಕು ಮಂದಿ ವಿದ್ಯಾರ್ಥಿಗಳಿರತಕ್ಕದ್ದು.
 ಗುಂಪಿನಲ್ಲಿ ಓರ್ವ ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಯಿರಬೇಕು.
 ಹೆಚ್ಚು ಗೊತ್ತಿರುವ ವಿದ್ಯಾರ್ಥಿಯನ್ನು ನಾಯಕನೆಂದು ಪರಿಗಣಿಸಿ ಆತನ ಕಲಿಕಾ ಸೂಚನೆಗಳನ್ನು ಉಳಿದವರು ಪಾಲಿಸಬೇಕು.
 ಕಲಿಕೆಗೆ ಹೊರತಾದ, ಕಲಿಕೆಗೆ ಭಂಗ ತರುವ ಚಟುವಟಿಕೆಯಲ್ಲಿ ಯಾರು ತೊಡಗಬಾರದು. ಒಂದು ವೇಳೆ ಯಾರಾದರೂ ಓರ್ವ ವಿದ್ಯಾರ್ಥಿ ಈ ರೀತಿ ವರ್ತಿಸಿದರೆ ತಕ್ಷಣವೇ ಉಳಿದ ವಿದ್ಯಾರ್ಥಿಗಳು ಆತನನ್ನು ಎಚ್ಚರಿಸಿ ಕಲಿಕಾ ಪ್ರಕ್ರಿಯೆಗೆ ಮರಳುವಂತೆ ಮಾಡಬೇಕು.
 ಗುಂಪು ಕಲಿಕೆಗೆ ಆಯ್ದುಕೊಳ್ಳುವ ಸ್ಥಳವು ನಿಶ್ಯಬ್ದತೆಯಿಂದ ಕೂಡಿರಬೇಕು, ಜನನಿಬಿಡತೆಯಿಂದ ದೂರವಿರಬೇಕು.
 ಕಲಿಸುವ ಮತ್ತು ಕಲಿಯುವ ವಿದ್ಯಾರ್ಥಿಗಳಲ್ಲಿ ಪಠ್ಯ, ನೋಟ್ಸ್, ಹಳೆಯ ಪ್ರಶ್ನೆ ಪತ್ರಿಕೆ, ಬರೆದು ಕಲಿಯಲು ಬೇಕಾದ ಹೆಚ್ಚುವರಿ ಪುಸ್ತಕಗಳಿರಬೇಕು.
 ಗುಂಪಿನಲ್ಲಿ ನಾಯಕ/ಕಿ ಇತರ ಗುಂಪಿನ ನಾಯಕ/ಕಿ ಯರೊಂದಿಗೆ ಸೇರಿ ತಮ್ಮ ಕಲಿಕೆಯನ್ನು ಉತ್ತಮ ಪಡಿಸಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ ತಮ್ಮ ಗುಂಪಿನ ಸದಸ್ಯರಿಗೆ ಪರಿಣಾಮಕಾರಿ ಕೆಲಸ ನೀಡಿ ಅವರನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು.
 ಅನವಶ್ಯಕ ಮಾತು, ಹಾಡು, ಮೊಬೈಲ್ ಇತ್ಯಾದಿಗಳಿಂದ ಸ್ವಯಂ ದೂರವಿರಬೇಕು.
ಈ ರೀತಿ ವಿದ್ಯಾರ್ಥಿಗಳು ಗುಂಪು ಕಲಿಕೆಯಲ್ಲಿ ತೊಡಗಿಸಿಕೊಂಡರೆ ಇಡೀ ವರ್ಷದಲ್ಲಿ ಅರ್ಥ ಮಾಡಿಕೊಳ್ಳಲಾಗದ ವಿಷಯಗಳನ್ನೂ ತಮ್ಮ ಸಹಪಾಠಿಯಿಂದಲೇ ಅರ್ಥೈಸಿಕೊಳ್ಳಬಹುದು

Writer - ಎ. ಆರ್. ಅನಂತಾಡಿ

contributor

Editor - ಎ. ಆರ್. ಅನಂತಾಡಿ

contributor

Similar News