ಕಾಶ್ಮೀರ: ಯುದ್ಧವೊಂದೇ ಪರಿಹಾರವಲ್ಲ

Update: 2019-02-17 18:32 GMT

ಸೇನೆಗೆ ತಮ್ಮ ಮಕ್ಕಳನ್ನು ಕಳುಹಿಸದವರು ಯುದ್ಧದ ಬಗ್ಗೆ ಮಾತನಾಡುತ್ತಾರೆ. ಯುದ್ಧ ಮಾಡಿ, ಪಾಕಿಸ್ತಾನದ ಸಮಾಧಿ ಮಾಡಲು ಕರೆ ಕೊಡುತ್ತಾರೆ. ಆದರೆ, ಸೇನೆಗೆ ತಮ್ಮ ಮಕ್ಕಳನ್ನು ಕಳುಹಿಸದವರು ಯುದ್ಧವೆಂದರೆ ದಿಗಿಲುಗೊಳ್ಳುತ್ತಾರೆ. ತಮ್ಮ ಮಕ್ಕಳ ಸ್ಥಿತಿ ಕಂಡು ಹಗಲು ರಾತ್ರಿ ಅದೇ ಚಿಂತೆಯಲ್ಲಿ ಕೊರಗುತ್ತಾರೆ.


ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದಕರ ದಾಳಿಗೆ 40 ಯೋಧರು ಹುತಾತ್ಮರಾದರು. ಈ ದೇಶದ ದುಡಿಯುವ ಜನರ ಮಕ್ಕಳು ಸೇನೆಗೆ ಸೇರಿ ಈ ರೀತಿ ಛಿದ್ರಛಿದ್ರವಾಗಿ ಬಿದ್ದಿದ್ದನ್ನು ಇಡೀ ದೇಶವೇ ಖಂಡಿಸುತ್ತಿದೆ. ನೋಟು ಅಮಾನ್ಯೀಕರಣದ ನಂತರ ಭಯೋತ್ಪಾದಕರ ಹಾವಳಿ ಕಡಿಮೆಯಾಗಿದೆ ಎಂಬ ನಂಬಿಕೆಯೂ ಹುಸಿಯಾಗಿದೆ. ಲೋಕಸಭೆ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಉಳಿದಿರುವಾಗ ಒಮ್ಮೆಲೇ ನಡೆದ ಈ ಘಟನೆ ಅನೇಕ ಸಂದೇಹಗಳಿಗೆ ಕಾರಣವಾಗಿದೆ. ಅದೇನೇ ಇರಲಿ, ಇಡೀ ದೇಶ ಒಂದಾಗಿ ಭಯೋತ್ಪಾದನೆಯನ್ನು ಖಂಡಿಸಬೇಕಾದ ಕಾಲವಿದು. ಆದರೆ ಇದನ್ನು ರಾಜಕೀಯ ಪಕ್ಷವೊಂದು ತನ್ನ ಚುನಾವಣಾ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಹುನ್ನಾರ ನಡೆದಿದೆ.

ಈ ಘಟನೆ ನಡೆಯುವ ಮುನ್ನ ಮೋದಿಯವರ ಜನಪ್ರಿಯತೆ ಪಾತಾಳಕ್ಕೆ ಕುಸಿದಿತ್ತು. ನೋಟು ಅಮಾನ್ಯೀಕರಣದ ದುಷ್ಪರಿಣಾಮ, ನಿರುದ್ಯೋಗ, ಜಿಎಸ್‌ಟಿ, ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಹತ್ಯೆ, ಜನಪರ ಹೋರಾಟಗಾರರನ್ನು ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಕಳಿಸಿದ್ದು, ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ, ಬೆಲೆ ಏರಿಕೆ, ದಲಿತರ ಮೇಲಿನ ಹಲ್ಲೆ ಇವೆಲ್ಲವೂ ಈ ಘಟನೆ ನಂತರ ಮರೆಮಾಚಲ್ಪಟ್ಟಿವೆ. ಎಲ್ಲೆಡೆ ಭಕ್ತರು ಕೈಯಲ್ಲಿ ಮೇಣದ ಬತ್ತಿ ಹಿಡಿದು ಸೇನೆಯ ಸಾಧನೆಯ ಶ್ರೇಯಸ್ಸನ್ನೆಲ್ಲ ಮೋದಿಯವರ ಉಡಿಗೆ ಹಾಕಲು ಹೊರಟಿದ್ದಾರೆ. ಎಲ್ಲೆಡೆ ದೇಶಭಕ್ತಿಯ ಧಾರಾಳ ಉಪದೇಶ ನಡೆದಿದೆ. ಇದರ ಜೊತೆಗೆ ಒಂದು ಸಮುದಾಯದ ದೇಶಭಕ್ತಿಯನ್ನು ಸಂದೇಹಿಸುವ ಕುಚೇಷ್ಟೆಯೂ ನಡೆದಿದೆ. ಇದನ್ನು ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೋಮು ಧ್ರುವೀಕರಣ ಮಾಡಿ ಬಿಜೆಪಿಯನ್ನು ಮತ್ತೆ ಗೆಲ್ಲಿಸುವ ಹುನ್ನಾರ ನಡೆದಿವೆ.

ಆದರೆ ಇತಿಹಾಸದುದ್ದಕ್ಕೂ ಸೇನೆಗೆ ಸೇರಿ ಪ್ರಾಣಾರ್ಪಣೆ ಮಾಡುವವರು ಬಡವರ, ರೈತ, ಕಾರ್ಮಿಕರ, ದಲಿತರ ಮಕ್ಕಳು. ಅಂಬಾನಿ, ಅದಾನಿ ಸೇರಿದಂತೆ ಯಾವ ಕೋಟ್ಯಧೀಶರ ಮಗನೂ ಸೇನೆಗೆ ಸೇರುವುದಿಲ್ಲ. ಅಷ್ಟೇ ಅಲ್ಲ, ದೇಶಭಕ್ತಿ ಬಗ್ಗೆ ಪುಗಸಟ್ಟೆ ಉಪದೇಶ ನೀಡುವ ಮಧ್ಯಮ, ಮೇಲ್‌ಮಧ್ಯಮ ವರ್ಗದ ಯಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಿಲ್ಲ. ತಮ್ಮ ಮಕ್ಕಳನ್ನು ಅಮೆರಿಕದ ಸಾಫ್ಟ್‌ವೇರ್ ಕಂಪೆನಿಗಳಿಗೆ ಕೆಲಸಕ್ಕೆ ಕಳುಹಿಸುವ ಅವರು ಇಲ್ಲಿ ಬಡವರಿಗೆ ದೇಶಭಕ್ತಿಯ ಉಪದೇಶ ನೀಡುತ್ತಾರೆ. ಅಮೆರಿಕದಲ್ಲಿ ಕೂತ ಅವರ ಮಕ್ಕಳು ಅಲ್ಲಿಂದಲೇ ಸಾಮಾಜಿಕ ಜಾಲತಾಣದಲ್ಲಿ ವಿಷ ಕಕ್ಕುತ್ತಾರೆ. ಮೊನ್ನೆ ನಡೆದ ಸ್ಫೋಟದಲ್ಲಿ ಸತ್ತವರು ಕೂಡ ಎಲ್ಲ ಜಾತಿ, ಧರ್ಮದ ಬಡವರ ಮಕ್ಕಳು. ಮಗ ಗುರುವನ್ನು ಸೇನೆಗೆ ಕಳುಹಿಸಿದ ಕುಟುಂಬದ ಉದ್ಯೋಗ ಊರ ಜನರ ಬಟ್ಟೆ ತೊಳೆಯುವುದು. ಈ ರೀತಿ ದೋಬಿಗಳ, ಚಪ್ಪಲಿ ಹೊಲಿಯುವವರ, ಕಸು ಗುಡಿಸುವವರ, ಕೂಲಿಕಾರ್ಮಿಕರ ಮಕ್ಕಳೇ ನಮ್ಮ ಸೇನೆಯಲ್ಲಿ ದೇಶಕ್ಕಾಗಿ ಕೊರೆಯುವ ಹಿಮಾಲಯದ ಅಂಚಿನ ಚಳಿಯಲ್ಲಿ ಗಡಿ ಕಾಯುತ್ತಾರೆ. ಪ್ರಾಣಾರ್ಪಣೆ ಮಾಡುತ್ತಾರೆ. ಮಂತ್ರಿಗಳ ಮಕ್ಕಳು ಮಂತ್ರಿಗಳಾಗುತ್ತಾರೆ. ಶಾಸಕರ ಮಕ್ಕಳು ಶಾಸನಸಭೆಗೆ ಹೋಗುತ್ತಾರೆ. ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾಗುತ್ತಾರೆ. ಬಡವರು, ದಲಿತರು ಸೇನೆಗೆ ಸೇರುತ್ತಾರೆ. ನಮ್ಮ ಸಂವಿಧಾನ ಸಕಲರಿಗೂ ಸಮಾನ ಅವಕಾಶ ಒದಗಿಸಿದೆ. ಆದರೆ, ಆರ್ಥಿಕ, ಸಾಮಾಜಿಕ ಸಮಾನತೆ ಸಾಧಿಸಲು ಸಂವಿಧಾನ ನೀಡಿದ ಅವಕಾಶವನ್ನು ಬಡವರು ಅನುಭವಿಸದಂತೆ ಮಾಡಿದೆ. ಈ ನಡುವೆ ಸಂವಿಧಾನದ ಈ ಅವಕಾಶವನ್ನೂ ಕಿತ್ತುಕೊಳ್ಳುವ ಯತ್ನ ನಡೆದಿದೆ.

ಸೇನೆಗೆ ತಮ್ಮ ಮಕ್ಕಳನ್ನು ಕಳುಹಿಸದವರು ಯುದ್ಧದ ಬಗ್ಗೆ ಮಾತನಾಡುತ್ತಾರೆ. ಯುದ್ಧ ಮಾಡಿ, ಪಾಕಿಸ್ತಾನದ ಸಮಾಧಿ ಮಾಡಲು ಕರೆ ಕೊಡುತ್ತಾರೆ. ಆದರೆ, ಸೇನೆಗೆ ತಮ್ಮ ಮಕ್ಕಳನ್ನು ಕಳುಹಿಸದವರು ಯುದ್ಧವೆಂದರೆ ದಿಗಿಲುಗೊಳ್ಳುತ್ತಾರೆ. ತಮ್ಮ ಮಕ್ಕಳ ಸ್ಥಿತಿ ಕಂಡು ಹಗಲು ರಾತ್ರಿ ಅದೇ ಚಿಂತೆಯಲ್ಲಿ ಕೊರಗುತ್ತಾರೆ.

ಕಾಶ್ಮೀರದ ಸಮಸ್ಯೆಗೆ ಯುದ್ಧ ಎಂದಿಗೂ ಪರಿಹಾರವಲ್ಲ. ಪಾಕಿಸ್ತಾನದ ದುಷ್ಕೃತ್ಯಗಳನ್ನು ಜಗತ್ತಿನ ಗಮನಕ್ಕೆ ತಂದು ಅದನ್ನು ಏಕಾಂಗಿ ಆಗಿಸಬೇಕಿದೆ. ಭಯೋತ್ಪಾದನೆ ವಿರುದ್ಧ ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳು ಜೊತೆಗೂಡಿ ಹೋರಾಟ ಮಾಡಬೇಕಿದೆ. ಪಾಕಿಸ್ತಾನದ ಯಾರೋ ಕೆಲವರಿಗೆ ಯುದ್ಧ ಬೇಕಿರಬಹುದು. ಆದರೆ ಭಾರತದ ಜೊತೆ ಕರುಳು ಬಳ್ಳಿಯ ಸಂಬಂಧ ಹೊಂದಿರುವ ಪಾಕಿಸ್ತಾನದ ಜನರಿಗೆ ಯುದ್ಧ ಬೇಕಾಗಿಲ್ಲ. ಭಾರತದ ಜನರಿಗೂ ಯುದ್ಧ ಬೇಕಾಗಿಲ್ಲ. ಆದರೆ ಹಿತಾಸಕ್ತಿಗಳಿಗೆ ಯುದ್ಧ ಬೇಕಾಗಿದೆ. ನಮ್ಮ ದೇಶದ ಅಂಬಾನಿ, ಅದಾನಿ ಸೇರಿ ಅನೇಕ ಕಾರ್ಪೊರೇಟ್ ಉದ್ಯಮಪತಿಗಳು ಪಾಕಿಸ್ತಾನದ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದಾರೆ. ಇಂಥ ವ್ಯವಹಾರ ಕುದುರಿಸಲೆಂದೇ ನಮ್ಮ ಪ್ರಧಾನಿ ಮೋದಿಯವರು ಅದಾನಿಯವರನ್ನು ಕರೆದುಕೊಂಡು ಕರಾಚಿಗೆ ಹೋಗಿ ಪಾಕ್ ಅಧ್ಯಕ್ಷ ನವಾಝ್ ಷರೀಫ್ ಮನೆಯಲ್ಲಿ ಬಿರಿಯಾನಿ ತಿಂದು ಬಂದರು.

ದೇಶಭಕ್ತಿ ಎಂದು ನಮ್ಮ ಉದ್ಯಮಪತಿಗಳು ಪಾಕಿಸ್ತಾನದಲ್ಲಿರುವ ತಮ್ಮ ಉದ್ಯಮಗಳಿಗೆ ಬೀಗ ಹಾಕುವುದಿಲ್ಲ. ಕಾಶ್ಮೀರ ಸಮಸ್ಯೆ ಉಲ್ಬಣಗೊಳ್ಳಲು ಮೋದಿಯವರ ನಾಲ್ಕೂವರೆ ವರ್ಷಗಳ ವೈಫಲ್ಯ ಕಾರಣ ಅಂದ ಮಾತ್ರಕ್ಕೆ, ಭಯೋತ್ಪಾದಕರ ಕ್ರೌರ್ಯ ಕಡೆಗಣಿಸಲು ಆಗುವುದಿಲ್ಲ. ಅದೇನೆ ಇರಲಿ, ಶಾಂತಿ-ಮಾತುಕತೆ ಹಾಗೂ ಜಾಗತಿಕ ಒತ್ತಡಗಳ ಮೂಲಕ ಭಯೋತ್ಪಾದನೆ ಸೆದೆ ಬಡಿಯಬೇಕಿದೆ. ಭಯೋತ್ಪಾದಕರನ್ನು ಸೆದೆ ಬಡಿಯಲು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರನ್ನು ಸೋಲಿಸಿದರು. ಐವತ್ತಾರು ಇಂಚಿನ ಎದೆಯ ನರೇಂದ್ರ ಮೋದಿಯಿಂದ ದೇಶ ಸುರಕ್ಷಿತವಾಗಿರುತ್ತದೆ ಎಂದು ಮತ ಹಾಕಿ ಗೆಲ್ಲಿಸಿದರು. ಆದರೆ ಏನಾಯಿತು? ನಲವತ್ತೊಂಬತ್ತು ಯೋಧರನ್ನು ಭಯೋತ್ಪಾದಕರು ಕೊಂದರು. ಇದು ಗುಪ್ತಚರ ದಳದ ವೈಫಲ್ಯ ಮಾತ್ರವಲ್ಲ, ಸರಕಾರದ ವೈಫಲ್ಯ ಕೂಡ ಹೌದು. ಪ್ರಧಾನಿ ಮೋದಿ ತಕ್ಷಣ ರಾಜೀನಾಮೆ ನೀಡಬೇಕು. ಅವರು ಅಲ್ಲದಿದ್ದರೂ ರಕ್ಷಣಾ ಸಚಿವರಾದರೂ ರಾಜೀನಾಮೆ ಕೊಡಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News