ಬೌದ್ಧ ಧರ್ಮವು ಹಿಂದೂ ಧರ್ಮದ ಶಾಖೆ ಎಂಬುದು ಸತ್ಯವೇ!?
ಭಾಗ-2
ಆ ಸಂಘಕ್ಕೆ ಸಾಗರದ ಉಪಮೆಯನ್ನು ನೀಡಬಹುದಾಗಿದೆ. ಅಂದರೆ ಸಾಗರವನ್ನು ಸೇರಿದ ನಂತರ ನದಿಯ ಪೃತಗಾತ್ಮತೆಯು ಇರುವುದಿಲ್ಲ ಮತ್ತು ಎಲ್ಲ ಜಲವೂ ಏಕರೂಪತೆಯನ್ನು ಹೊಂದುತ್ತದೆ. ಹಾಗೆಯೇ ಸಂಘದಲ್ಲಿ ಬಂದಿರುವ ಭಿನ್ನವರ್ಣೀಯ ಭಿಕ್ಷುಗಳ ವರ್ಣ ವೈಶಿಷ್ಟತೆಯೂ ನಷ್ಟವಾಗುತ್ತದೆ. ಜೈನ ಮತದಲ್ಲಿಯೂ ಕೂಡಾ ಚಾತುರ್ವರ್ಣ್ಯವು ನಿಷಿದ್ದವಾಗಿತ್ತು. ಆದರೆ ಆ ವಿಷಯವನ್ನು ಕುರಿತಂತೆ ಅದು ಸಂಘರ್ಷಕ್ಕೆ ಇಳಿಯಲು ಸಿದ್ಧವಾಗಿರಲಿಲ್ಲ. ಬುದ್ಧನಿಗೆ ಮಾತ್ರ ತನ್ನ ವಿಷಯಗಳಲ್ಲಿ ಮನಸ್ಸಿನಲ್ಲಿಯೇ ತಳಮಳಿಸುತ್ತಾ ವೌನವಾಗಿರಲು ಆಗಿರಲಿಲ್ಲ. ತಮ್ಮ ಧರ್ಮದ ಬಗೆಗೆ ತಾವು ವೀರರಾಗಿದ್ದೇವೆ ಮತ್ತು ಅದರ ಸ್ಥಾಪನೆಗಾಗಿ ನಮಗೆ ಅಜ್ಞಾನದೊಂದಿಗೆ ಸಂಘರ್ಷ ಮಾಡಬೇಕಾದುದು ಅನಿವಾರ್ಯ ಎಂಬುದು ಅವನ ಅಭಿಪ್ರಾಯವಾಗಿತ್ತು. ಬುದ್ಧನ ಈ ಚತುರ್ವರ್ಣ್ಯ ವಿರೋಧದ ತೀವ್ರತೆಯು ಬ್ರಾಹ್ಮಣರ ಮನಸ್ಸಿನಲ್ಲಿ ಸದಾ ಚುಚ್ಚುತ್ತಲೇ ಇತ್ತು. ಹಾಗಾಗಿಯೇ ಚತುರ್ವರ್ಣ್ಯದ ವಿಷಯದಲ್ಲಿ ಮೂಕವಾಗಿದ್ದ ನಿರೀಶ್ವರವಾದಿ ಸಾಂಖ್ಯಾಚಾರ್ಯ ಕಪಿಲ ಮುನಿಯನ್ನು ಅವರು ತಮ್ಮವನೆಂದು ಒಪ್ಪಿಕೊಂಡಿದ್ದರು. ಆದರೆ ಬುದ್ಧನ ವಿಷಯದಲ್ಲಿ ಮಾತ್ರ ಸದಾ ವೈರಭಾವವನ್ನೇ ಹೊಂದಿದ್ದರು.
ವೈದಿಕ ಧರ್ಮದ ಬಗೆಗಿನ 5ನೆಯ ವಿರೋಧವೆಂದರೆ ದೇವರು ಮತ್ತು ಆತ್ಮಗಳ ಅಸ್ತಿತ್ವವನ್ನು ಕುರಿತು ವಿಷಯದ್ದಾಗಿತ್ತು. ಬುದ್ಧನ ಅಭಿಪ್ರಾಯದಲ್ಲಿ ಸರ್ವಶಕ್ತಿಮಾನ್, ಸರ್ವಜ್ಞ, ಸರ್ವವ್ಯಾಪಿ ಮತ್ತು ನ್ಯಾಯೀ ಮತ್ತು ಪ್ರೇಮಮಯವಾದಂತಹ ದೇವರ ಅಸ್ತಿತ್ವವನ್ನು ಜ್ಞಾನದ ಸಾಧನಗಳಾದ ಪಂಚೇಂದ್ರಿಯಗಳು ಮತ್ತು ತರ್ಕಗಳ ಸಹಾಯದಿಂದ ಸಿದ್ಧಪಡಿಸಿತೋರಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಧರ್ಮದ ಉದ್ದೇಶವು ದುಃಖದ ಪರಿಹಾರವೇ ಆಗಿದೆ. ದೇವರನ್ನು ಒಪ್ಪಿಕೊಳ್ಳುವುದರಿಂದ ದುಃಖವು ಕಡಿಮೆಯಾಗುವುದಿಲ್ಲ. ಮನುಷ್ಯನು ಬೇರೆ ಮನುಷ್ಯನ ಜೊತೆಯಲ್ಲಿ ಹೇಗೆ ನಡೆದು ಕೊಳ್ಳಬೇಕು ಮತ್ತು ಎಲ್ಲಾ ಜನರು ಸುಖವಾಗಿರುವ ಹಾಗೆ ಬೋಧಿಸುವುದು ಧರ್ಮದ ಮುಖ್ಯ ಕಾರ್ಯವಾಗಿದೆ. ಹಾಗಾಗಿ ದೇವರ ಜೊತೆಯಲ್ಲಿ ಯಾವುದೇ ಸಂಬಂಧವು ಬರುವುದಿಲ್ಲ. ದೇವರ ಅಸ್ತಿತ್ವವು ಕೇವಲ ಪೊಳ್ಳು ತರ್ಕವನ್ನು ಆಧರಿಸಿದುದಾಗಿದೆ. ಆ ಅಸ್ತಿತ್ವದ ಶ್ರದ್ದೆಯಿಂದಲೇ ಪೂಜೆ, ಪ್ರಾರ್ಥನೆ, ಪುರೋಹಿತ ಇತ್ಯಾದಿ ಅಷ್ಟಾಂಗ ಮಾರ್ಗದಲ್ಲಿನ ಏಕ ಚಿಂತನಮಯ ಧ್ಯಾನಕ್ಕೆ ಘಾತುಕವೆಂಬ ಹುಚ್ಚು ತಿಳಿವಳಿಕೆಯ ಧ್ಯಾನ ಕೂಪ ಒಡೆದು ಹೋಗುತ್ತದೆ. ಮನುಷ್ಯರ ಪರಸ್ಪರ ಸಂಬಂಧವು ಪ್ರಜ್ಞೆ, ಕರುಣೆ, ಮೈತ್ರಿಗಳಿಂದ ನಿಯಂತ್ರಿತವಾಗುವುದರ ಬದಲಾಗಿ ಪಾವಿತ್ರ, ಉಚ್ಚನೀಚಗಳಂತಹ ಭ್ರಾಮಕ ತಿಳುವಳಿಕೆಯಿಂದ ನಿಯಂತ್ರಿತವಾಗುತ್ತಿದೆ.
ದೇವರ ಅಸ್ತಿತ್ವದಲ್ಲಿನ ಬುದ್ಧನ ಅಕ್ಷೇಪವು ಕೇವಲ ವ್ಯಾವಹಾರಿಕ ದೃಷ್ಟಿಯಿಂದಲೇ ಇತ್ತು ಎಂದಲ್ಲ. ‘ಪ್ರತಿಚ್ಚ ಸಮುತ್ಪಾದ’ ಎಂಬ ಅವನ ಸಿದ್ಧಾಂತದಲ್ಲಿ ದೇವರ ಅಸ್ತಿತ್ವದ ಬಗೆಗೆ ಸರ್ವೇಸಾಮಾನ್ಯವಾದ ತಾರ್ಕಿಕ ಸ್ವರೂಪದ ಅಕ್ಷೇಪಗಳು ಕಂಡುಬರುತ್ತವೆ. ಈ ಸಿದ್ಧಾಂತದ ಪ್ರಕಾರ ದೇವರು ಇದ್ದಾನೆ ಅಥವಾ ಇಲ್ಲ ಎಂಬುದು ಮುಖ್ಯ ಪ್ರಶ್ನೆಯಲ್ಲ. ಅದರಂತೆ ವಿಶ್ವವು ದೇವರ ಸೃಷ್ಟಿಯೋ ಅಲ್ಲವೋ ಎಂಬುದೂ ಮುಖ್ಯ ಪ್ರಶ್ನೆಯಲ್ಲ. ಅವಕ್ಕಿಂತಲೂ ಮುಖ್ಯವಾದ ಪ್ರಶ್ನೆಯೆಂದರೆ, ದೇವರು ಈ ಜಗತ್ತನ್ನು ಹೇಗೆ ಸೃಷ್ಟಿಸಿದ? ಎಂಬುದು. ದೇವರ ಅಸ್ತಿತ್ವದ ಮಂಡನೆ ಅಥವಾ ಖಂಡನೆಯು ಈ ಪ್ರಶ್ನೆಯ ಉತ್ತರದಿಂದ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಮಹತ್ವದ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ, ‘‘ದೇವರು ಈ ಜಗತ್ತನ್ನು ಶೂನ್ಯದಿಂದ ನಿರ್ಮಿಸಿದನೋ ಅಥವಾ ಈ ಪೂರ್ವದಲ್ಲಿ ಇದ್ದಂತಹ ಯಾವುದಾದರೂ ಒಂದರಿಂದ ಸೃಷ್ಟಿಸಿದನೋ?’’ ಏನೂ ಇರಲಿಲ್ಲ, ಅದರಿಂದ ಇದನ್ನು ದೇವರು ಸೃಷ್ಟಿಸಿದನು ಎಂಬ ವಿಚಾರದ ಮೇಲೆ ಮನುಷ್ಯನ ಬುದ್ಧಿಯು ವಿಶ್ವಾಸವನ್ನು ಹೊಂದುವುದಕ್ಕೆ ಸಾಧ್ಯವೇ ಇಲ್ಲ. ಒಂದೊಮ್ಮೆ ಈ ತಥಾಕಥಿತ ದೇವನು ಈ ಜಗತ್ತನ್ನು ಪೂರ್ವದಲ್ಲಿ ಇದ್ದಂತಹ ಯಾವುದೋ ಒಂದರಿಂದ ನಿರ್ಮಿಸಿದ್ದರೆ ಅಥವಾ ಬೇರೆ ಏನೋ ಒಂದು ಹೊಸದನ್ನು ಸೃಷ್ಟಿಸಿದನು ಎನ್ನುವುದಾದರೆ ಅದಕ್ಕೂ ಮೊದಲು ಏನೋ ಒಂದು ಇತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂದರೆ ಆ ಪೂರ್ವದಲ್ಲಿ ಏನೋ ಒಂದು ಇದ್ದಿತ್ತೋ ಅದರ ನಿರ್ಮಾಣದ ಕರ್ತನು ಮಾತ್ರ ದೇವನಲ್ಲ. ದೇವರು ಏನಾದರೂ ನಿರ್ಮಿಸುವುದಕ್ಕೆ ಮೊದಲೇ ಯಾರಾದರೂ ಏನನ್ನಾದರೂ ನಿರ್ಮಿಸಿದ್ದರೆ ದೇವರಿಗೆ ಆದ್ಯನಿರ್ಮಾತ ಅಥವಾ ಆದಿಕಾರಣ ಎಂಬುದಾಗಿ ಹೇಳುವುದಕ್ಕೆ ಬರುವುದಿಲ್ಲ. ಒಟ್ಟಾರೆ ಕಾರಣ ಅಸ್ತಿತ್ವ ಸಂಬಂಧದ ವಿಚಾರಸರಣಿಯು ತರ್ಕದೃಷ್ಟಿ ಹೊಂದಿರುವುದರಿಂದ ದೇವರ ಮೇಲಿನ ಶ್ರದ್ಧೆಯು ಬುದ್ಧನ ಸಮಾದಿಟ್ಟಿ ಪ್ರಧಾನ ಧರ್ಮಕ್ಕೆ ಅಮಾನ್ಯವಾದುದೇ ಆಗಿದೆ.
ವೇದಾಂತದಲ್ಲಿನ ಮೋಕ್ಷ ಸಿದ್ಧಾಂತ ಎಂದರೆ ಆತ್ಮನು ಬ್ರಹ್ಮನಲ್ಲಿ ವಿಲೀನವಾಗುವುದು. ಇದನ್ನೂ ತರ್ಕ ದೃಷ್ಟಿಯಿಂದ ನಿರ್ಧರಿಸಿ ಮನುಷ್ಯ ಜೀವನವನ್ನು ಸುಖಮಯವಾಗಿಸುವ ನೆಲೆಯಿಂದ ನಿರುಪಯೋಗಿ ಎಂದೇ ಅದನ್ನು ಬುದ್ಧನು ವಿರೋಧಿಸಿದ್ದಾನೆ. ಬ್ರಹ್ಮ ವಿಷಯಕವಾಗಿನ ಬುದ್ಧನ ವಿಚಾರ ಸರಣಿಯು ಅವನ ವಸಿಷ್ಠ ಮತ್ತು ಭಾರದ್ವಾಜ ಎಂಬ ಇಬ್ಬರು ಬ್ರಾಹ್ಮಣರೊಂದಿಗೆ ನಡೆಸಿದ ಸಂವಾದದಲ್ಲಿ ವ್ಯಕ್ತವಾಗಿದೆ. ಬುದ್ಧನ ಆತ್ಮದ ಅಸ್ತಿತ್ವದ ಮೇಲಿನ ವ್ಯಾವಹಾರಿಕ ದೃಷ್ಟಿಯ ಅಕ್ಷೇಪಣೆಯು ಕೂಡಾ ಅವನ ದೇವರ ಕಲ್ಪನೆಯ ಮೇಲಿನ ಆಕ್ಷೇಪದ ಹಾಗೆಯೇ ಇದೆ. ಅಲ್ಲದೆ ಆತ ಆತ್ಮ ಎಂಬುದಾಗಿ ಒಪ್ಪಿಕೊಳ್ಳುವ ವ್ಯಾಪಾರವು ನಾಮರೂಪ ಎಂಬ ಸಿದ್ಧಾಂತದ ಆಧಾರದಿಂದ ಸ್ಪಷ್ಟಪಡಿಸಿ ತೋರಿಸುತ್ತಾನೆ. ದೇಹದ ಉತ್ಪತ್ತಿಯ ಜೊತೆಯಲ್ಲಿಯೇ ಅರಿವಿನ (್ಚಟ್ಞಠ್ಚಜಿಟ್ಠಠ್ಞಛಿ) ಪ್ರಾರಂಭವೂ ಆಗುತ್ತದೆ. ಇಚ್ಛಾತ್ಮಕ, ಭಾವನಾತ್ಮಕ ಮತ್ತು ವಿಚಾರಾತ್ಮಕ ಕಾರ್ಯಗಳು ಈ ಅರಿವಿನ ಸ್ವರೂಪಗಳೇ ಆಗಿವೆ. ಹಾಗಿರುವಾಗ ಆತ್ಮ ಎಂಬ ಬೇರೆಯೇ ಆದ ತತ್ತ್ವವೊಂದನ್ನು ಗೃಹೀತಗೊಳಿಸಿಕೊಳ್ಳುವ ಆವಶ್ಯಕತೆಯೇ ಬರುವುದಿಲ್ಲ.
ಈ ರೀತಿಯಲ್ಲಿ ವೈದಿಕ ಧರ್ಮದೊಂದಿಗೆ ವಿರೋಧವನ್ನು ಹೊಂದಿರುವ ಬೌದ್ಧ ಧರ್ಮವನ್ನು ಇಲ್ಲವಾಗಿಸಬೇಕು ಎಂಬ ಕಾರಣವನ್ನು ಹಿಡಿದು ಬ್ರಾಹ್ಮಣರು ಒಳ್ಳೆಯದು, ಕೆಟ್ಟದ್ದು ಎನ್ನದೆ ಎಲ್ಲಾ ಬಗೆಯ ಸಾಧನಗಳನ್ನು ಉಪಯೋಗಿಸಿಕೊಂಡರು. ಬೌದ್ಧ ಧರ್ಮವು ಯಾವ ವಿಚಾರಗಳಿಂದ ಜನಪ್ರಿಯವಾಗಿದ್ದಿತೋ ಆ ವಿಚಾರಗಳನ್ನು ತಮ್ಮ ಪೂರ್ವಾಪರ ಧರ್ಮಕ್ಕೆ ಸಮ್ಮತವಿಲ್ಲದೆ ಇದ್ದರೂ ಅವುಗಳನ್ನು ಅವರು ಸ್ವೀಕರಿಸಿದರು. ಈ ಪ್ರಚಾರ ಪದ್ಧತಿಯನ್ನು ಅನುಸರಿಸಿಯೇ ಅವರು ವೇರುಳದ ಬೌದ್ಧ ಗುಹೆಯ ಹತ್ತಿರ ಒಂದು ಬ್ರಾಹ್ಮಣ ಗುಹೆಯನ್ನು ಕೊರೆದರು. ವಸ್ತುತಃ ಬ್ರಾಹ್ಮಣರು ಗೃಹಸ್ಥಾಶ್ರಮಿಗಳು. ಅಗ್ನಿಹೋತ್ರವೇ ಅವರ ನಿತ್ಯದ ವ್ರತ. ಅದಕ್ಕೆ ಪರಮಾರ್ಜಿತ ಭಿಕ್ಷುವಿನ ಹಾಗೆ ಗುಹೆಯಲ್ಲಿ ಇರುವ ಕಾರಣವೇ ಇರಲಿಲ್ಲ. ಭಿಕ್ಷುಗಳು ಮಳೆಗಾಲದ ಮೂರು ತಿಂಗಳುಗಳ ಕಾಲ ಎಲ್ಲಿಯಾದರೂ ಒಂದೆಡೆಯಲ್ಲಿ ನೆಲೆ ನಿಲ್ಲಬೇಕೆಂಬುದು ಬುದ್ಧನ ಆದೇಶವಾಗಿತ್ತು. ಹಾಗಾಗಿಯೇ ಅವರಿಗೆ ಗುಹೆಯ ಆವಶ್ಯಕತೆ ಇತ್ತು. ಗೃಹಸ್ಥಾಶ್ರಮಿ ಬ್ರಾಹ್ಮಣರಿಗೆ ಅಂಥದ್ದು ಬೇಕಾಗಿರಲಿಲ್ಲ. ಆದರೆ ಬೌದ್ಧರ ಗುಹೆಯ ಹತ್ತಿರ ಉಪಾಸಕರ ದೊಡ್ಡ ಸಮಾವೇಶಗಳು ಉತ್ಕೃಷ್ಟವಾಗಿ ಆಗುತ್ತಿದ್ದವು. ಹಾಗಾಗಿಯೇ ಅವರ ಗುಹೆಗಳ ಪಕ್ಕದಲ್ಲಿ ತಮ್ಮ ಗುಹೆಗಳನ್ನು ಕೊರೆದು ತಮ್ಮ ಧರ್ಮದ ಕಡೆಗೆ ಉಪಾಸಕರನ್ನೆಲ್ಲ ಸೆಳೆದುಕೊಳ್ಳುವುದಕ್ಕೆ ಅವರು ಪ್ರಯತ್ನ ಮಾಡಿದರು.
ಬೌದ್ಧ ಧರ್ಮವು ಹ್ರಾಸಗೊಂಡುದರ ಮತ್ತೊಂದು ಕಾರಣ ಏನೆಂಬುದನ್ನು ಹಿಂದೂ ಪಂಡಿತರು ಹೇಳಿರುವಂತೆ, ಕುಮಾರಿಲಭಟ್ಟ, ಶಂಕರಾಚಾರ್ಯ ಮುಂತಾದವರು ಬುದ್ಧನ ಬೋಧನೆಗಳ ಮಧ್ಯವರ್ತಿ ಸಿದ್ಧಾಂತಗಳಾದ ಸಾಮಾಜಿಕ ಸಮಾನತೆ, ಜಗತ್ತಿನ ದುಃಖದ ಪರಿಹಾರಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನ ಪರಿವರ್ತನೆ, ನೀತಿ ತತ್ವಗಳು ಸಾಮಾಜಿಕ ಜಿವನದಲ್ಲಿ ಪ್ರತಿಷ್ಠಾಪನೆ, ಬುದ್ಧಿವಾದ ಇತ್ಯಾದಿಗಳ ಮೇಲೆ ಪಂಡಿತರು ಸ್ವಲ್ಪವೂ ಆಘಾತವನ್ನು ಉಂಟುಮಾಡಲಿಲ್ಲ. ಇವರಿಬ್ಬರೂ ಪಂಡಿತರ ನಂತರ ಬೌದ್ಧ ಧರ್ಮವು ಭಾರತದಲ್ಲಿ ಹಲವಾರು ವರ್ಷಗಳ ಕಾಲ ಸಮೃದ್ಧಾವಸ್ಥೆಯಲ್ಲಿಯೆ ಇತ್ತು. ಬೌದ್ಧ ಧರ್ಮದ ಹ್ರಾಸದ ಮುಖ್ಯ ಕಾರಣವೇನೆಂದರೆ ಯಾವ ಭಿನ್ನ ಸಂಸ್ಕೃತಿಯ ಮತ್ತು ಭಿನ್ನ ಸಾಂಸ್ಕೃತಿಕ ಪಾತಳಿಯ ಜನರಲ್ಲಿ ಅದರ ಪ್ರಚಾರವಾಯಿತೋ ಆ ಜನರ ಆಚಾರಗಳು ಮತ್ತು ತಿಳಿವಳಿಕೆಗಳು ಬೌದ್ಧ ಧರ್ಮದ ಬಗ್ಗೆ ತೋರಿಸಿದ ಅನುಚಿತವಾದ ಪ್ರತಿಕ್ರಿಯೆಗಳು. ಭಾರತದಲ್ಲಿನ ಬೌದ್ಧ ಧರ್ಮದ ಮೇಲೆ ಆದಂತಹ ನಂತರದ ಆಘಾತವೆಂದರೆ, ಮುಸ್ಲಿಮರ ಆಕ್ರಮಣ. ಅವರು ಭಾರತದ ಕಡೆಗೆ ಹೊರಳಿದಾಗ ಆ ಆಕ್ರಮಣಕಾರಿಗಳಿಗೆ ಮೊದಲು ಸಿಕ್ಕ ಜನರು ಬೌದ್ಧ ಧರ್ಮೀಯರೇ ಆಗಿದ್ದರು. ಹಿಂದೂಗಳ ಹಾಗೆಯೇ ಬೌದ್ಧರಲ್ಲಿ ಧರ್ಮಪ್ರಚಾರವನ್ನು ತಲೆತಲಾಂತರವಾಗಿ ಮಾಡುವಂತಹ ಬ್ರಾಹ್ಮಣ ವರ್ಗದವರು ಇಲ್ಲದೆ ಇದ್ದ ಕಾರಣ ಬಹಳ ಬೇಗನೇ ಬೌದ್ಧ ಧರ್ಮದ ಅವಸಾನವಾಯಿತು.
ಸತ್ಯದ ಪರಾಭವವೂ ಆಗಾಗ ಸಂಭವಿಸುತ್ತಿರುತ್ತದೆ ಎಂಬುದಕ್ಕೆ ಇದು ಸ್ಪಷ್ಟವಾದ ಉದಾಹರಣೆಯಾಗಿದೆ. ಆದರೆ ಇಂದು ಅಂದರೆ ಆರು ನೂರು ವರ್ಷಗಳ ನಂತರ ಭಾರತಕ್ಕೆ ಬೌದ್ಧ ಧರ್ಮದ ನೆನಪುಂಟಾಗುತ್ತಿದೆ. ಅಲ್ಲದೆ ಇಂದು ಅವರು ಬುದ್ಧನ ವಿಚಾರ ಸರಣಿಗಳನ್ನು ಸ್ವೀಕಾರ ಮಾಡದೆ ಹೋದರೆ, ಅವರ ಭವಿತವ್ಯಕ್ಕೆ ಒಳ್ಳೆಯದಾಗುವುದಿಲ್ಲ. ಭಾಷಣದ ನಂತರ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ವರ್ಗದವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಬಾಬಾಸಾಹೇಬರು ಉತ್ತರಗಳನ್ನು ನೀಡಿದರು. ಆ ಪ್ರಶ್ನೋತ್ತರಗಳು ಒಂದು ಸ್ವತಂತ್ರ ಪ್ರಕರಣವೇ ಆಗುವುದು. ವಿಷಯವು ಐತಿಹಾಸಿಕವೇ ಆಗಿದ್ದರೂ ವ್ಯಾಖ್ಯಾನದ ಅಭಿನವ ದೃಷ್ಟಿಕೋನದಿಂದ ಪ್ರತಿಗಾಮಿ ಎಂಬುದಾಗಿ ಭಾವಿಸಲಾಗಿದ್ದ ಕಾಶಿ ವಿದ್ಯಾಪೀಠದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವರ್ಗದವರು ಸಂಪೂರ್ಣವಾಗಿ ಗಡಬಡಿಸಿ ಹೋಗಿದ್ದರು.