ಸಾಮಾಜಿಕ ಮಾಧ್ಯಮಗಳನ್ನು ಪ್ರಜಾತಾಂತ್ರೀಕರಿಸುವುದು ಸಾಧ್ಯವೇ?

Update: 2019-02-21 18:51 GMT

2019ರ ಸಾರ್ವತ್ರಿಕ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಹಾಲಿ ಸರಕಾರವು ಸಾಮಾಜಿಕ ಮಾಧ್ಯಮಗಳ ಬಗ್ಗೆ ವಿಶೇಷ ಆಸಕ್ತಿಯನ್ನು ತೋರಿಸುತ್ತಿರುವಂತಿದೆ. ಚುನಾವಣಾ ರಾಜಕಾರಣದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಅಗತ್ಯವಿದೆಯಾದರೂ ಮೊದಲು ಈ ವಿಚಾರಣೆಯಲ್ಲೇ ಅಂತರ್ಗತವಾಗಿರುವ ಕೆಲವು ‘ಕುರುಡು’ಗಳನ್ನು ಕೂಡಾ ಪರಿಶೀಲಿಸಬೇಕಿದೆ.


ಸಂಸದ ಅನುರಾಗ್ ಠಾಕೂರ್ ಅವರ ಅಧ್ಯಕ್ಷತೆಯ 31 ಸದಸ್ಯರ ಸಂಸದೀಯ ಸಮಿತಿಯು ಸಾಮಾಜಿಕ ಮಾಧ್ಯಮಗಳಲ್ಲಿ ‘ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಕುರಿತು’ ಚರ್ಚಿಸಲು ಟ್ವಿಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಜಾಕ್ ಡೊರ್ಸಿಯವರನ್ನು ತಮ್ಮ ಮುಂದೆ ಹಾಜರಾಗಲು ಸೂಚಿಸಿದೆ. ಇದು ಸಂಶಯಾಸ್ಪದವಾದ ಹಲವಾರು ಟ್ವಿಟರ್ ಖಾತೆಗಳನ್ನು ಇತ್ತೀಚೆಗೆ ಟ್ವಿಟರ್ ತಾಣದಿಂದ ತೆಗೆದುಹಾಕಿರುವುದರ ಹಿನ್ನೆಲೆಯಲ್ಲಿ ಸೂಚಿಸಿರುವ ಕ್ರಮವಾಗಿರಬಹುದೆಂಬ ಬಗ್ಗೆ ದಟ್ಟವಾದ ಅನುಮಾನವಿದೆ. ಅದೇ ರೀತಿ ಫೇಸ್‌ಬುಕ್‌ನಂತಹ ಇತರ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರೂ ಈ ಸಮಿತಿಯ ಮುಂದೆ ಹಾಜರಾಗುವುದು ಅಗತ್ಯವೆಂದು ಬಿಜೆಪಿಯ ಹಿರಿಯ ನಾಯಕರಾದ ಎಲ್. ಕೆ. ಅಡ್ವಾಣಿಯವರು ಅಭಿಪ್ರಾಯ ಪಡುತ್ತಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. 2019ರ ಸಾರ್ವತ್ರಿಕ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಹಾಲಿ ಸರಕಾರವು ಸಾಮಾಜಿಕ ಮಾಧ್ಯಮಗಳ ಬಗ್ಗೆ ವಿಶೇಷ ಆಸಕ್ತಿಯನ್ನು ತೋರಿಸುತ್ತಿರುವಂತಿದೆ. ಚುನಾವಣಾ ರಾಜಕಾರಣದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಅಗತ್ಯವಿದೆಯಾದರೂ ಮೊದಲು ಈ ವಿಚಾರಣೆಯಲ್ಲೇ ಅಂತರ್ಗತವಾಗಿರುವ ಕೆಲವು ‘ಕುರುಡು’ಗಳನ್ನು ಕೂಡಾ ಪರಿಶೀಲಿಸಬೇಕಿದೆ. ಈ ಡಿಜಿಟಲ್ ಕ್ಷೇತ್ರವು ಭಾರತದಲ್ಲಿನ ಸಾರ್ವಜನಿಕ ಕ್ಷೇತ್ರವನ್ನು ಮೂಲಭೂತವಾಗಿಯೇ ಬದಲಿಸಿಬಿಟ್ಟಿದೆ. ಈಗ ಮುದ್ರಣ ಮತ್ತು ಟೆಲಿವಿಷನ್‌ನಂಥ ಹಳೆಯ ಮಾಧ್ಯಮಗಳೂ ಮತ್ತು ಈ ಹೊಸ ಸಾಮಾಜಿಕ ಮಾಧ್ಯಮಗಳೂ ಪರಸ್ಪರ ಅವಲಂಬಿತವಾಗಿದ್ದು ಸುದ್ದಿ ಸಂಗ್ರಹಣೆಯ ಪ್ರಕ್ರಿಯೆಯೇ ರಚನಾತ್ಮಕ ಬದಲಾವಣೆಗೆ ಒಳಗಾಗಿದೆ. ಆದರೆ ಇಂತಹ ಬಲಾವಣೆಗಳು ಎಷ್ಟರ ಮಟ್ಟಿಗೆ ಸಾರ್ವಜನಿಕ ಸಂಕಥನಗಳಮೇಲೆ ಪ್ರಭಾವ ಬೀರಬಲ್ಲವು? ಅವು ವೋಟುಗಳಾಗಿ ಬದಲಾಗಬಲ್ಲವೇ? ಭಾರತದಲ್ಲಿ ಅಸ್ತಿತ್ವದಲ್ಲಿರುವ ಸಮಾಜೋ-ಆರ್ಥಿಕ ಮತ್ತು ಸಾಂಸ್ಕೃತಿಕ ಅಸಮಾನತೆಗಳು ಡಿಜಿಟಲ್ ಕ್ಷೇತ್ರವನ್ನು ಎಟುಕಿಸಿಕೊಳ್ಳುವ ಮತ್ತು ಅದರಲ್ಲಿ ತೊಡಗಿಕೊಳ್ಳುವಿಕೆಯ ಸ್ಥರದ ಮೇಲೆ ತೀವ್ರವಾದ ಮಿತಿಯನ್ನು ಹೇರುವುದನ್ನು ಗಮನದಲ್ಲಿಟ್ಟುಕೊಂಡಾಗ ಡಿಜಿಟಲ್ ಕ್ಷೇತ್ರದೊಳಗೆ ನಡೆಯುವ ವಾಗ್ವಾದಗಳು ಎಷ್ಟರ ಮಟ್ಟಿಗೆ ವಾಸ್ತವಿಕ ರಾಜಕೀಯ ಸತ್ಯಗಳನ್ನು ಪ್ರತಿನಿಧಿಸಬಲ್ಲವು? ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಅವರು ಗೆದ್ದ ರೀತಿಯು ಸಾಮಾಜಿಕ ಮಾಧ್ಯಮಗಳನ್ನು ಹೇಗೆ ಪ್ರಚಾರದಲ್ಲಿ ಕೈವಾಡ ನಡೆಸುವ ಮೂಲಕ, ಏಕಮುಖಿ ಮಾಹಿತಿಗಳನ್ನು ಮಾತ್ರ ಒದಗಿಸುವ (ಫಿಲ್ಟರ್ ಬಬಲ್), ಕಿರುಕುಳ ಕೊಡುವ, ಟ್ರೋಲಿಂಗ್ ಮಾಡುವ ಹಾಗೂ ನಕಲಿ ಟ್ರೆಂಡುಗಳನ್ನು ಸೃಷ್ಟಿಸುವ ಮೂಲಕ ಚುನಾವಣೆಯನ್ನು ಪ್ರಭಾವಿಸುವ ಅಸ್ತ್ರಗಳನ್ನಾಗಿ ಬಳಸಬಹುದೆಂಬುದನ್ನು ತೋರಿಸಿಕೊಟ್ಟಿತು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಅಭಿವ್ಯಕ್ತಿಗಳು ನೈಜ ಜಗತ್ತಿನ ಮೇಲೆ ಬೀರುವ ಪ್ರಭಾವವನ್ನು ಕಂಡು ಹಿಂಜರಿದಿರುವ ಸಾಮಾಜಿಕ ಮಾಧ್ಯಮ ಕಂಪೆನಿಗಳು ಕಾನೂನು ಸಮಸ್ಯೆಗಳಿಂದ ಬಚಾವಾಗಲು ಪ್ರಕಾಶಕನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಟ್ರಂಪ್ ಅವರ ಆಯ್ಕೆಯಾದ ನಂತರ ಅದಕ್ಕೆ ಫೇಸ್‌ಬುಕ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾದ ಮಾರ್ಕ್ ಝುಕರ್‌ಬರ್ಗ್ ಅವರನ್ನು ಹೊಣೆಗಾರರನ್ನಾಗಿಸಿದ ಮೇಲೆ ಅವರು ಫೇಸ್‌ಬುಕ್ಕನ್ನು ಮತ್ತಷ್ಟು ಪಾರದರ್ಶಕವಾಗಿಸುವ ಪ್ರಮಾಣ ಮಾಡಿದ್ದಾರೆ. ಇತರ ಸಾಮಾಜಿಕ ಮಾಧ್ಯಮಗಳು ಸಹ ಅದೇ ಮೇಲ್ಪಂಕ್ತಿಯನ್ನು ಅನುಸರಿಸಿವೆ. ಇತ್ತೀಚೆಗೆ ತಾನೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಒದಗಿಸುವ ಸುದ್ದಿಮಾಹಿತಿಯಲ್ಲಿ ರಾಜಕೀಯ ಪಕ್ಷಗಳಿಗೆ ಸಂಬಂಧಪಟ್ಟ ಜಾಹೀರಾತುಗಳಿಗೆ ಸಂಬಂಧಪಟ್ಟ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿದೆ. ಹಾಗೆಯೇ ಟ್ವಿಟರ್ ಸಂಸ್ಥೆಯು ತನ್ನ ತಾಣದ ಬಳಕೆದಾರರ ಮೇಲೆ ಹಾಗೂ ದ್ವೇಷಾಭಿವ್ಯಕ್ತಿಗಳ ಮೇಲೆ ನಿಕಟವಾದ ನಿಗಾ ಇಡುವ ಪ್ರಯತ್ನಗಳನ್ನು ಮಾಡುತ್ತಿದೆ.

ಭಾರತದಲ್ಲೂ ಸಹ ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಭಾರತದ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದರ ಬಗ್ಗೆ ಕೆಲವು ಸೂಚನೆಗಳನ್ನು ಸಿದ್ಧಪಡಿಸಿದೆ. ಆದರೆ ಇವೆಲ್ಲವೂ ಪೂರ್ವಯೋಜಿತವಲ್ಲದ ಕ್ರಮಗಳಾಗಿದ್ದು ಸಮಸ್ಯೆಯ ಗಾತ್ರಕ್ಕೆ ಹೋಲಿಸಿದಲ್ಲಿ ತಾಳಮೇಳವಿಲ್ಲದ ಅರೆಬರೆ ಕ್ರಮಗಳಾಗಿವೆ. ಡಿಜಿಟಲ್ ಪ್ರಜಾತಂತ್ರವನ್ನು ರಕ್ಷಿಸುವ ಮೂಲಕ ವಾಸ್ತವ ಪ್ರಪಂಚದಲ್ಲಿ ಮುಕ್ತ ಹಾಗೂ ನ್ಯಾಯಯುತ ಚುನಾವಣೆಯನ್ನು ಖಾತರಿಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಾವು ಉತ್ತರ ಕೊಟ್ಟುಕೊಳ್ಳಬೇಕಿದೆ. ಈ ಡಿಜಿಟಲ್-ಸಾಮಾಜಿಕತೆಯೆಂಬುದು ನಮ್ಮ ನೈಜ ವಾಸ್ತವಿಕತೆಯ ಒಂದು ವಿಸ್ತರಣೆಯೇ ಆಗಿದ್ದು ಅದನ್ನು ದುರ್ಬಲಗೊಳಿಸುವುದು ಎಂದರೇನು ಎಂಬುದನ್ನು ಸರಿಯಾಗಿ ಗುರುತಿಸಿಕೊಳ್ಳಬೇಕಿದೆ. ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಪಟ್ಟಂತೆ ಒಂದು ಸಮಾನ ಅವಕಾಶವುಳ್ಳ ವೇದಿಕೆಯ ಸೃಷ್ಟಿ ಎಂಬುದಕ್ಕೆ ಅರ್ಥವೇನು? ಸಾಮಾನ್ಯವಾಗಿ ಅಂತರ್ಜಾಲ-ಇಂಟರ್‌ನೆಟ್ ಎಂಬುದು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ನಂಬಿಕೊಂಡಿದ್ದೇವೆ. ಆದರೆ ಏಕೆ ಅಂತರ್‌ಜಾಲದಲ್ಲೂ ಕೆಲವು ಧ್ವನಿಗಳು ಮಾತ್ರ ಗಟ್ಟಿಯಾಗಿ ಕೇಳಿಸುತ್ತವೆ.

ಮತ್ತು ಕೆಲವು ಧ್ವನಿಗಳು ಕೇಳದಂತಾಗುತ್ತವೆ? ಈ ಡಿಜಿಟಲ್ ಪ್ರಜಾತಂತ್ರ ಎಂಬುದು ಒಂದು ಮಿಥ್ಯೆಯೆಂಬುದನ್ನೂ ಹಾಗೂ ತನ್ನ ತಾಂತ್ರಿಕ ವಾಸ್ತುಶಿಲ್ಪದ ಕಾರಣದಿಂದಾಗಿ ಅದು ಸಾಂಪ್ರದಾಯಿಕ ಸ್ಥಿತಿವಂತಿಕೆಯು ಕೊಡಮಾಡಿರುವ ಸೌಲಭ್ಯಗಳ ಅಸಮಾನತೆಯನ್ನು ಮೀರುವ ಅವಕಾಶಗಳನ್ನೇನೂ ಒದಗಿಸುವುದಿಲ್ಲವೆಂಬುದನ್ನೂ ಹಾಗೂ ಅವೂ ಸಹ ಅಸ್ತಿತ್ವದಲ್ಲಿರುವ ದಮನಕಾರಿ ರಚನೆಗಳನ್ನು ಉಳಿಸಿಕೊಂಡು ಪುನರುತ್ಪಾದನೆ ಮಾಡುತ್ತವೆ ಎಂಬುದನ್ನು ಮಾಧ್ಯಮಗಳ ಬಗ್ಗೆ ನಡೆದಿರುವ ವಿದ್ವತ್‌ಪೂರ್ಣ ಅಧ್ಯಯನಗಳು ಸಾಬೀತು ಮಾಡಿವೆ. ಅಪಾರ ಬಂಡವಾಳವಿರುವ ಒಂದು ಖಾಸಗಿ ಅನಾಮಿಕ ಸಂಸ್ಥೆಯೊಂದು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ಪಡೆದುಕೊಳ್ಳಲು ಬೇಕಾದ ಹಣವನ್ನು ಪಾವತಿ ಮಾಡುತ್ತಿದೆಯೆಂದರೆ ಅದು ತನ್ನ ಧ್ವನಿಯು ಇತರರಿಗಿಂತ ಹೆಚ್ಚು ಗಟ್ಟಿಯಾಗಿ ಕೇಳಿಸುವ ಅವಕಾಶವನ್ನು ಕೊಂಡುಕೊಳ್ಳುತ್ತಿದೆಯೆಂದೇ ಅರ್ಥ. ಅಂತರ್ಜಾಲದಲ್ಲಿರುವ ಎಲ್ಲರ ಧ್ವನಿಗೂ ಇದೇ ಬಗೆಯ ಕೇಳುಗರೇನೂ ದೊರೆಯುವುದಿಲ್ಲ. ಚುನಾವಣೆಗಳು ಮುಗಿಯುವ ತನಕ ತನ್ನ ವಿರೋಧಿಗಳ ಧ್ವನಿ ಕೇಳದಂತಾಗುವ ಮಟ್ಟಿಗೆ ಎತ್ತರದ ಧ್ವನಿಯಲ್ಲಿ ತಮ್ಮ ಅಭಿಪ್ರಾಯವನ್ನು ಮಾತ್ರ ಹೇಳುತ್ತಾ ಹೋಗುವುದೇ ಡಿಜಿಟಲ್ ಕ್ಷೇತ್ರದಲ್ಲಿ ನಡೆಯುವ ವಾಗ್ವಾದಗಳಾಗಿಬಿಡುವುದರಿಂದ ರಾಜಕೀಯದ ಗುಣಮಟ್ಟಕ್ಕೆ ದೊಡ್ಡ ಹಾನಿಯಾಗುತ್ತದೆ. ದೊಡ್ಡದೊಡ್ಡ ಪಕ್ಷಗಳಿಗೆ ತಮ್ಮ ಮತಬ್ಯಾಂಕುಗಳನ್ನು ರೂಢಿಸಿಕೊಳ್ಳಲು ಲಭ್ಯವಿರುವಷ್ಟು ಸಂಪನ್ಮೂಲಗಳು ಬುಡಮಟ್ಟದ ಹೋರಾಟದ ಧ್ವನಿಗಳಿಗೆ ಇರುವುದಿಲ್ಲ. ಒಂದು ರಾಜಕೀಯ ಪಕ್ಷವು ಸಾಮಾಜಿಕ ಮಾಧ್ಯಮಗಳಿಗಾಗಿ ವೆಚ್ಚ ಮಾಡಿರುವ ಹಣದ ಲೆಕ್ಕಾಚಾರಗಳನ್ನು ಪರಿಶೀಲಿಸಬಹುದಾದರೂ ಒಬ್ಬ ಅನಾಮಿಕ ವ್ಯಕ್ತಿಯು ಒಂದು ಪಕ್ಷದ ಪರವಾಗಿ ಮಾಡುವ ವೆಚ್ಚದ ಲೆಕ್ಕ ಹೇಗೆ ಸಿಗುತ್ತದೆ? ಸಾಮಾಜಿಕ ಜಾಲತಾಣದೊಳಗೆ ಲಭ್ಯವಿರುವ ಇಂತಹ ಪತ್ತೆಗೆ ಸಿಗದ ಸಂಬಂಧಗಳನ್ನು ಬಳಸಿಕೊಂಡೇ ರಾಜಕೀಯ ಪಕ್ಷಗಳು ಲಾಭದಾಯಕ ಮತ್ತು ಜನಪ್ರಿಯತೆ ಎರಡನ್ನೂ ಏಕಕಾಲದಲ್ಲಿ ಸಾಧಿಸಿಕೊಳ್ಳುತ್ತಿದ್ದಾರೆ.

ಒಂದು ಮಾಹಿತಿ ಮೂಲವು ಸೃಷ್ಟಿಸಹುದಾದ ಮಾಹಿತಿಪ್ರಮಾಣದ ನಿಯಂತ್ರಣದ ಬಗ್ಗೆ ಗಮನ ನೀಡಲಾಗಿದೆಯಾದರೂ ಆ ಮಾಹಿತಿಗಳ ಪ್ರಚೋದಕತೆಯ ಬಗ್ಗೆ ಗಮನವನ್ನು ನೀಡುತ್ತಿಲ್ಲ. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಕಂಪೆನಿಗಳು ಸಹ ಇತರ ಉದ್ಯಮಗಳಂತೆ ಲಾಭಗಳಿಕೆಗಾಗಿ ಕಟ್ಟಿಕೊಂಡಿರುವ ಉದ್ಯಮವೇ ವಿನಃ ಅವು ಒಂದು ಸಿದ್ಧಾಂತವೂ ಅಲ್ಲ, ಆದರ್ಶವೂ ಅಲ್ಲ ಅಥವಾ ನೈತಿಕ ಸಂಸ್ಥೆಗಳೂ ಅಲ್ಲವೆಂಬುದನ್ನು ಮರೆತುಬಿಡುತ್ತೇವೆ. ಪ್ರಜಾತಂತ್ರದ ಮುಖವಾಡ ಹೊದ್ದಿರುವ ಈ ತಾಣಗಳ ಕಾರ್ಯನಿರ್ವಹಣಾ ತತ್ವವು ವ್ಯಾಪಾರವೇ ವಿನಃ ಪ್ರಜಾತಂತ್ರವಲ್ಲ. ಹೀಗಾಗಿಯೇ ಅವನ್ನು ‘ಹಲವು ಆಲೋಚನೆಗಳ ವ್ಯಾಪಾರ ಕೇಂದ್ರ’ವೆಂದು ಮಾತ್ರ ಕರೆಯಬಹುದು. ಇದು ಡಿಜಿಟಲ್ ಕ್ಷೇತ್ರದಲ್ಲಿನ ವಾಗ್ವಾದಗಳನ್ನು ಧ್ರುವೀಕರಿಸಿದೆ. ಅಂತರ್ಜಾಲವು ಒದಗಿಸುವ ಅನಾಮಿಕತೆಯು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಹಕರಿಸಿ ಪ್ರಜಾತಂತ್ರವು ಮತ್ತಷ್ಟು ಅರಳಲು ಸಹಕರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ರಾಜಕೀಯ ನಾಯಕರು ಸಾರ್ವಜನಿಕ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರುವ ಸಲುವಾಗಿ, ತಮ್ಮ ರಾಜಕೀಯ ಅಜೆಂಡಾಗಳನ್ನು ಪ್ರಚಾರ ಮಾಡುವ ಸಲುವಾಗಿ ಮತ್ತು ಜನರನ್ನು ದಾರಿ ತಪ್ಪಿಸುವ ಸುಳ್ಳು ಸುದ್ದಿ ಮತ್ತು ಮಾಹಿತಿಗಳನ್ನು ಹರಡುವ ಸಲುವಾಗಿ ಅನಾಮಿಕತೆ, ಬಂಡವಾಳ ಮತ್ತು ತಂತ್ರಜ್ಞಾನಗಳ ನಡುವೆ ಒಂದು ಅಪಾಯಕಾರಿ ಮೈತ್ರಿಯನ್ನು ಸಾಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೈತ್ರಿಯು ಚುನಾವಣಾ ರಾಜಕಾರಣದ ಅರೋಗ್ಯಕ್ಕೆ ಅದರಲ್ಲೂ ಜಗತ್ತಿನ ‘ಅತಿ ದೊಡ್ಡ ಪ್ರಜಾತಂತ್ರ’ದ ಚುನಾವಣಾ ಆರೋಗ್ಯಕ್ಕಂತೂ ಒಳ್ಳೆಯದನ್ನು ಮಾಡುವುದಿಲ್ಲ. ಆದರೆ ಇದನ್ನು ಸರಿತಿದ್ದಿಕೊಂಡುಬಿಟ್ಟರೆ ಸಾಮಾಜಿಕ ಮಾಧ್ಯಮ ಕಂಪೆನಿಗಳ ಮತ್ತು ರಾಜಕೀಯ ಪಕ್ಷಗಳೆರಡರ ಹಿತಾಸಕ್ತಿಗಳಿಗೂ ಪೆಟ್ಟುಬೀಳುತ್ತದೆ. ಹೀಗಾಗಿ ಅಂತರ್ಜಾಲವು ಹೇಗೆ ನಮ್ಮ ರಾಜಕೀಯ ಜೀವನದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡು, ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಬಲ್ಲ ಹೊಸ ಕಾನೂನು ಪ್ರಣಾಳಿಕೆಯೊಂದನ್ನು ರೂಪಿಸುವ ಮೂಲಕ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನೂ ಮತ್ತು ರಾಜಕೀಯ ಪಕ್ಷಗಳನ್ನು ಉತ್ತರದಾಯಿಗಳನ್ನಾಗಿ ಮಾಡುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News