ಯುದ್ಧದ ಭೀಕರತೆಯನ್ನು ಕಣ್ಣಮುಂದಿರಿಸುವ ಚಿತ್ರ ‘ಎಟರ್ನಲ್ ವಿಂಟರ್’

Update: 2019-02-23 18:40 GMT

‘ನಿಮ್ಮ ಹಿಟ್ಲರ್ ನಮ್ಮ ಬದುಕನ್ನು ಛಿದ್ರಗೊಳಿಸಿದ್ದಾನೆ. ದೇಶವನ್ನು ನಾಶ ಮಾಡಿದ್ದಾನೆ. ನಮ್ಮ ಸುಖ ಸಂತೋಷವನ್ನು ಕಿತ್ತುಕೊಂಡಿದ್ದಾನೆ. ಅದಕ್ಕಾಗಿ ನೀವು ನಮ್ಮ ಗಣಿಗಳಲ್ಲಿ ದುಡಿದು ನಮ್ಮ ದೇಶವನ್ನು ಪುನರ್ ನಿರ್ಮಿಸಬೇಕು...’

ಬೆಂಗಳೂರು ಅಂತರ್‌ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಂಡ ಹಂಗೇರಿಯನ್ ದೇಶದ ‘ಎಟರ್ನಲ್ ವಿಂಟರ್’ ಚಿತ್ರದ ಸಂಭಾಷಣೆ ಇದು. ಸೋವಿಯತ್ ಸೇನಾಧಿಕಾರಿಯೊಬ್ಬ ಪಕ್ಕದಲ್ಲಿ ಭಾಷಾಂತರ ಬಲ್ಲ ಜರ್ಮನ್ ಮಹಿಳೆಯನ್ನು ನಿಲ್ಲಿಸಿಕೊಂಡು, ಆಕೆಯ ಮೂಲಕ ಮುಗ್ಧ ಜರ್ಮನ್ ಮಹಿಳೆಯರಿಗೆ, ಅವರನ್ನು ಅಲ್ಲಿಗೆ ಕರೆತಂದ ಕಾರಣವನ್ನು ಮೇಲಿನ ಮಾತುಗಳ ಮೂಲಕ ಬಿಚ್ಚಿಡುತ್ತಾನೆ. ಅದು 1944. ಹಂಗೇರಿ, ಸೋವಿಯತ್ ಒಕ್ಕೂಟದ ವಶದಲ್ಲಿದ್ದ ಸಮಯ. ಸೋವಿಯತ್ ರಶ್ಯಾದ ವಿರುದ್ಧ ಜರ್ಮನಿಯ ಹಿಟ್ಲರ್ ಕೈಗೊಂಡ ನಿಲುವು, ಅದರಿಂದಾದ ಯುದ್ಧ, ಯುದ್ಧದಿಂದಾದ ಘೋರ ಪರಿಣಾಮಗಳ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಚಿತ್ರ. ಹಂಗೇರಿಯ ಹಳ್ಳಿಯೊಂದರಲ್ಲಿದ್ದ ಸ್ವಾಬಿಯನ್ಸ್ ಸಮುದಾಯ- ಜರ್ಮನ್ ಭಾಷೆ ಮಾತನಾಡುವ ಅಲ್ಪಸಂಖ್ಯಾತರು. ನಾಜಿಸಮ್ ಪ್ರತಿಪಾದಕರು. ಆ ಕಾರಣಕ್ಕಾಗಿ ಆ ಸಮುದಾಯದ ಮುಗ್ಧ ಮಹಿಳೆಯರನ್ನು ಸೋವಿಯತ್ ಒಕ್ಕೂಟದ ಸೇನೆ ಬಲವಂತವಾಗಿ ವಶಕ್ಕೆ ಪಡೆದು, ಉಕ್ರೇನಿನ ಜೀತಗಾರರ ಶಿಬಿರಕ್ಕೆ ಕರೆತರುತ್ತದೆ.

ಆ ಜೀತಗಾರರ ಶಿಬಿರದಲ್ಲಿ ಅವರು ಕಲ್ಲಿದ್ದಲು ಗಣಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವ, ಆ ಮೂಲಕ ಅವರ ದೇಶವನ್ನು ಕಟ್ಟುವ ಕೆಲಸ ಮಾಡಬೇಕಿರುತ್ತದೆ. ಆ ಜೀತಗಾರರ ಶಿಬಿರ- ಯಾತನಾ ಶಿಬಿರದಂತಿದ್ದು, ಊಟ, ತಿಂಡಿ, ಬಟ್ಟೆ, ಔಷಧಿ ಕೂಡ ಸಿಗದ ನರಕದಂತಿರುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ನಿರ್ದಾಕ್ಷಿಣ್ಯವಾಗಿ ಗುಂಡಿಟ್ಟು ಕೊಲ್ಲುವುದು ಅಲ್ಲಿ ಕಾಮನ್. ಅದು ಆ ಅಮಾಯಕ ಮಹಿಳೆಯರ ಕಣ್ಣಮುಂದೆಯೇ ನಡೆದು ನಡುಕ ಹುಟ್ಟಿಸುತ್ತದೆ. ಹಾಗೆಯೇ ನೋಡುಗರಾದ ನಮ್ಮನ್ನೂ. ಉಕ್ರೇನ್ ದೇಶದ ಹಿಮಚ್ಛಾದಿತ ಬೆಟ್ಟ ಗುಡ್ಡಗಳ ಭೂ ಪ್ರದೇಶ. ಸದಾ ಉದುರುತ್ತಲೇ ಇರುವ ಹಿಮ. ಮೂಳೆ ಕೊರೆಯುವ ಚಳಿ ಗಾಳಿ. ಮೈಗೆ ಹತ್ತಾರು ಕೋಟುಗಳನ್ನು ಧರಿಸಿದರೂ ಬಿಸಿಯಾಗದ ಮೈ. ಅಂತಹ ಸ್ಥಿತಿಯಲ್ಲಿ ಆ ಸೇನಾಧಿಕಾರಿಗಳ ಮುಂದೆ ಈ ಮುಗ್ಧ ಮಹಿಳೆಯರು ಬಟ್ಟೆ ಬಿಚ್ಚಿ ನಿಲ್ಲುವ, ಐಸ್ ಗಡ್ಡೆಯಂತಹ ತಣ್ಣೀರಲ್ಲಿ ಸ್ನಾನ ಮಾಡುವ ದಯನೀಯ ಸ್ಥಿತಿ- ನೋಡುಗರ ಕಣ್ಣಿಗೆ ಕಡ್ಡಿ ಚುಚ್ಚಿದಂತಾಗುತ್ತದೆ.

ಕರುಣೆ, ಕನಿಕರಕ್ಕೆ ಅಲ್ಲಿ ಜಾಗವಿಲ್ಲ. ಮನುಷ್ಯತ್ವ ಮೊದಲೇ ಇಲ್ಲ. ಮಹಾಯುದ್ಧದ ಕಾಲದ ಯಾತನಾ ಶಿಬಿರಗಳ ಕತೆ ರೋಚಕವಾದುದು. ಅದಕ್ಕೆ ದೊಡ್ಡ ಇತಿಹಾಸವೇ ಇದೆ. ಅಂಥದೇ ಒಂದು ಯಾತನಾ ಶಿಬಿರದ ನೈಜ ಘಟನೆಯನ್ನಾಧರಿಸಿ ತೆರೆಗೆ ತಂದಿರುವ ‘ಎಟರ್ನಲ್ ವಿಂಟರ್’ ಸಿನೆಮಾ, ಈಗಾಗಲೇ ಪ್ರಪಂಚದಾದ್ಯಂತ ಹತ್ತು ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದೆ. ಸೂಕ್ಷ್ಮಸಂವೇದನಾಶೀಲರ ಮೆಚ್ಚುಗೆಗೆ, ಗಂಭೀರ ಸಿನಿ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ. ನಿರ್ದೇಶಕ ಅಟಿಲಾ ಸಾಸ್ ಅವರ ಸೃಜನಶೀಲ ಕಸುಬುಗಾರಿಕೆ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ನೋಡುಗನನ್ನು ಆ ಕಾಲಕ್ಕೇ ಕರೆದುಕೊಂಡು ಹೋಗಿ, ಯುದ್ಧದ ಭೀಕರತೆಯನ್ನು ಕಣ್ಣ ಮುಂದಿರಿಸುತ್ತದೆ. ಕಥಾನಾಯಕಿ ಇರೇನ್ ನಿಧಾನವಾಗಿ ಜೀತಗಾರರ ಶಿಬಿರಕ್ಕೆ ಹೊಂದಿಕೊಳ್ಳುತ್ತಿರುವಾಗಲೇ, ಬಂಧಿತ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಸೇನೆಯೊಳಗಿನ ಭ್ರಷ್ಟತೆ, ಬಾಧಿಸುವ ಟೈಫಾಯ್ಡಿ ಕಾಯಿಲೆ, ಆಹಾರಕ್ಕಾಗಿ ಹಪಹಪಿ, ಸೆಟೆದು ನಿಂತರೆ ಚಳಿ ಗಾಳಿಗೆ ಬಲಿಯಾಗಿ ಬೀದಿ ಹೆಣವಾಗುವ ಭೀಕರತೆಯನ್ನು ಅನುಭವಿಸುತ್ತಲೇ ಅರಗಿಸಿಕೊಳ್ಳುತ್ತಾಳೆ.

ಈ ನಡುವೆ, ಆ ಕಠೋರ ಬದುಕಿನಲ್ಲಿಯೂ ತನ್ನಂತೆಯೇ ಯುದ್ಧಕೈದಿಯಾಗಿ ಕಲ್ಲಿದ್ದಲು ಗಣಿಯಲ್ಲಿ ಮನುಷ್ಯ ಸಂವೇದನೆಗಳನ್ನುಳ್ಳ, ತನ್ನಂತೆಯೇ ಜೀತದಾಳಾಗಿರುವ ರಾಜ್‌ಮುಂಡ್ ಮುಲ್ಲರ್‌ನ ಪರಿಚಯವಾಗುತ್ತದೆ. ಆ ಪರಿಚಯ ಸ್ನೇಹಕ್ಕೆ, ಪ್ರೀತಿ ಪ್ರೇಮಕ್ಕೆ ತಿರುಗುತ್ತದೆ. ಒಂದಾಗಿ, ಅವರವರ ಸಂಸಾರಗಳನ್ನು ಮರೆತು, ಅವರದೇ ಆದ ಹೊಸ ಸಂಸಾರ ಹೂಡುತ್ತಾರೆ. ಹಾಗೆ ಒಂದಾಗಿರುವಾಗಲೇ ಯಾತನಾ ಶಿಬಿರದಲ್ಲಿ ಬದುಕುಳಿಯುವುದು ಹೇಗೆ ಎನ್ನುವುದನ್ನು ಆತನಿಂದ ಕಲಿಯುತ್ತಾಳೆ.

ಈ ಹಂತದಲ್ಲಿ ಕೊಂಚ ಗೆಲುವಾಗುವ ಇರೇನ್‌ಗೆ ಆದಷ್ಟು ಬೇಗ ಅಲ್ಲಿಂದ ಹೊರ ಹೋಗುವ, ಮಗಳನ್ನು ಕಾಣುವ ತವಕ. ಆದರೆ ರಾಜ್‌ಮುಂಡ್‌ಗೆ ಇಬ್ಬರೂ ಒಂದಾಗಿ ಸಂಸಾರ ಸಾಗಿಸುವ ಕನಸು. ಆದರೆ ಅಲ್ಲಿ ಕನಸು ಕಾಣುವಂತಿಲ್ಲ. ಪ್ರಾರ್ಥನೆ, ಕರುಣೆಗೆ ಬೆಲೆ ಇಲ್ಲ. ಆ ಯಾತನಾ ಶಿಬಿರದ ಬರ್ಬರ ಬದುಕಿಗೆ ಭವಿಷ್ಯವೇ ಇಲ್ಲ. ಕನಸು ಕಾಣುವುದನ್ನು ನಿಲ್ಲಿಸದ, ಭರವಸೆಯನ್ನು ಬಿಡದ ಇರೇನ್‌ಗೆ, ಕೊನೆಗೊಂದು ದಿನ ಹಿಟ್ಲರ್ ಸತ್ತ ಸುದ್ದಿ ಸಿಗುತ್ತದೆ. ಎಲ್ಲ ಯುದ್ಧ ಕೈದಿಗಳನ್ನು ಬಿಡುಗಡೆಗೊಳಿಸಿ, ಅವರವರ ಊರುಗಳಿಗೆ ಕಳುಹಿಸಿಕೊಡುವ ಗಳಿಗೆಯೂ ಕೂಡಿ ಬರುತ್ತದೆ. ಆದರೆ ರಾಜ್‌ಮುಂಡ್ ಮತ್ತು ಇರೇನ್ ಒಂದಾದರೆ, ಬದುಕಿನಲ್ಲಿ ಬೆಳಕು ಕಂಡರೆ, ತಮ್ಮ ತಮ್ಮ ಕುಟುಂಬ ಸೇರಿ ನೆಮ್ಮದಿಯ ನಿಟ್ಟುಸಿರು ಬಿಟ್ಟರೆ... ನೀವೂ ಚಿತ್ರ ನೋಡಿ. ದೇಶದಲ್ಲಿ ಯುದ್ಧದ ಸನ್ನಿ ಆವರಿಸಿರುವ ಈ ಹೊತ್ತಿನಲ್ಲಿ ಯುದ್ಧದ ಭೀಕರತೆ ನಿಮ್ಮ ಭಾವಬಿತ್ತಿಗೂ ಇಳಿಯಲಿ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News