ಚುನಾವಣೆ ಗೆಲ್ಲಿ, ರಾಜಕೀಯ ಸತ್ತೆ ಪಡೆಯಿರಿ

Update: 2019-02-28 18:53 GMT

ಭಾಗ-1

ಗುಜರಾತಿನ ಇತಿಹಾಸ ಪ್ರಸಿದ್ಧ ಅಹಮದಾಬಾದ್ ನಗರದಲ್ಲಿ ಗಾಂಧಿ-ವಲ್ಲಭರ ನಾಡಿನಲ್ಲಿ, ಸಬರಮತಿಯ ವಿಸ್ತೀರ್ಣ ತೀರದಲ್ಲಿಯ ಕೆಂಪುದ್ವಾರದ ಬಳಿ ನಿರ್ಮಿಸಿದ ಭವ್ಯಬುದ್ಧನಗರದಲ್ಲಿ ದಿನಾಂಕ 29 ಮತ್ತು 30 ನವೆಂಬರ್ 1945ರಂದು ಮುಂಬೈ ಪ್ರಾಂತದ ಶೆಡ್ಯೂಲ್ಡ್ಡ್ ಕಾಸ್ಟ್ಸ್ ಫೆಡರೇಶನ್ನಿನ ಮೊದಲ ಅಧಿವೇಶನವು ಅತ್ಯಂತ ಉತ್ಸಾಹದಿಂದ ನೆರವೇರಿತು. ಭಾರತೀಯ ಅಸ್ಪಶ್ಯರ ಮಹಾನ್ ನಾಯಕರಾದ ಡಾ. ಬಾಬಾಸಾಹೇಬ ಅಂಬೇಡ್ಕರರು ದಿನಾಂಕ 30ರಂದು ಈ ಇತಿಹಾಸ ಪ್ರಸಿದ್ಧ ಅಧಿವೇಶನಕ್ಕೆ ವಿಶೇಷವಾಗಿ ಆಗಮಿಸಿದ್ದರು. ಅವರ ಆಗಮನ ಪ್ರೀತ್ಯರ್ಥ ಅಹಮದಾಬಾದ್‌ನ ಎಲ್ಲ ಕಾರ್ಮಿಕರು ಗಿರಣಿಯನ್ನು ಮುಚ್ಚಿಸಿ, ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂಗತಿಯು ಅತ್ಯಂತ ಅಭಿಮಾನಾಸ್ಪದ ಮತ್ತು ಭೂಷಣಪ್ರಾಯವೂ ಆಗಿದ್ದರಿಂದ ಉಲ್ಲೇಖನೀಯವಾಗಿದೆ. ನಸುಕಿನ ಐದರಿಂದಲೇ ಅವರ ಸ್ವಾಗತಕ್ಕಾಗಿ ಸಾವಿರಾರು ಜನರು ಅಹಮದಾಬಾದ್ ರೈಲ್ವೆ ಸ್ಟೇಶನ್ನಿಗೆ ಆಗಮಿಸಿದರು. ಈ ವಿಶಾಲ ಜನಸಮುದಾಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ತರಲು ಸಮತಾ ಸೈನಿಕ ದಳದ ಕೆಚ್ಚೆದೆಯ ಸೈನಿಕರು ಶತಪ್ರಯತ್ನ ಮಾಡುತ್ತಿದ್ದರು.

ಹಲವು ವ್ಯಕ್ತಿ ಹಾಗೂ ಸಂಸ್ಥೆಗಳ ಪರವಾಗಿ ಮಾಲಾರ್ಪಣೆಯನ್ನು ಮಾಡಿ ಅವರನ್ನು ಸ್ವಾಗತಿಸಲಾಯಿತು. ‘ಡಾ ಅಂಬೇಡ್ಕರ್ ಜಿಂದಾಬಾದ್’, ‘ಅಂಬೇಡ್ಕರ ಯಾರು, ದಲಿತರ ದೇವರು’, ‘ದಲಿತ ಫೆಡರೇಶನ್‌ಗೆ ಜಯವಾಗಲಿ’, ‘ಪ್ರತ್ಯೇಕ ಮತಾಧಿಕಾರ ಪಡೆಯಿರಿ’ - ಮುಂತಾದ ಗಗನಭೇದಿ ಘೋಷಣೆಯಿಂದ ಅಹಮದಾಬಾದಿನ ಸಂಪೂರ್ಣ ವಾತಾವರಣ ಪ್ರತಿಧ್ವನಿಗೊಂಡಿತು. ಸ್ಟೇಶನ್‌ನ ಅವರ ಖಾಸಾ ಸಲೂನಿನಲ್ಲಿ ಕಮ್ಯೂನಿಷ್ಟ್ ಪಾರ್ಟಿ, ರಾಯಿಸ್ಟ್ ಪಾರ್ಟಿ ಮುಂತಾದ ಪಕ್ಷದ ಮುಖಂಡರು ಮತ್ತು ಹಲವು ಪ್ರಮುಖ ವ್ಯಕ್ತಿಗಳು ಅವರ ಸಂದರ್ಶನ ನಡೆಸಿದ ಬಳಿಕ ಅವರನ್ನು ಸನ್ಮಾನ ಮಾಡಲಾಯಿತು. ಅಹಮದಾಬಾದ್ ನಗರದ ವಾತಾವರಣವು ಅವರ ಆಗಮನದಿಂದ ತುಂಬ ಉಲ್ಲಾಸದಾಯಕವಾಗಿತ್ತು. ಕೇವಲ ಬೆರಗಿನದಷ್ಟೇ ಅಲ್ಲ, ಅಭಿಮಾನದ ಸಂಗತಿ ಏನೆಂದರೆ, ಅದೇ ದಿನ ಮುಂಬೈ ರಾಜ್ಯಪಾಲ ಸಾಹೇಬರು ಅಹಮದಾಬಾದ್‌ಗೆ ಆಗಮಿಸಿದ್ದರು. ಪ್ರಾಂತಾಧ್ಯಕ್ಷ ಗಾಯಕ್‌ವಾಡ್ ಮತ್ತು ಆಲ್ ಇಂಡಿಯಾ ಶೆಡ್ಯೂಲ್ಡ್ಡ್ ಕಾಸ್ಟ್ಸ್ ಫೆಡರೇಶನ್ನಿನ ಜನರಲ್ ಸೆಕ್ರೆಟರಿಯಾದ ರಾಜಭೋಜ ಅವರು ದರ್ಶನಕ್ಕಾಗಿ ಹಾತೊರೆಯುತ್ತಿದ್ದ ಜನಸಮುದಾಯಕ್ಕೆ ಶಾಂತತೆಯಿಂದ ಪರಿಷತ್ತು ನಡೆಯುವ ಸ್ಥಳಕ್ಕೆ ತೆರಳುವಂತೆ ಮತ್ತು ತಮ್ಮ ಮುಖಂಡನ ಸಂದೇಶ ಕೇಳಲು ವಿನಂತಿಸಿದರು.

ಇಡೀ ರಾತ್ರಿ ಜಾಗರಣೆಯಾಗಿದ್ದರೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಬಾಬಾಸಾಹೇಬರು ಹಲವು ಕಾರ್ಯಕ್ರಮಗಳಿಗೆ ಹಾಜರಾದರು. ಬೆಳಗ್ಗೆಯಿಂದ ಸಂಜೆಯವರೆಗೆ ಎಡೆ ಬಿಡದೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಸಮಯದ ಅಭಾವದಿಂದ ಸಹಜವಾಗಿಯೇ ಕೆಲವನ್ನು ರದ್ದು ಪಡಿಸಬೇಕಾಯಿತು. ಮಧ್ಯಾಹ್ನ ರಖಿಯಾ ರೋಡ್‌ನಲ್ಲಿರುವ ಕಾರ್ಮಿಕರ ಚಾಳದಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಡಾ. ಅಂಬೇಡ್ಕರ್‌ರ ಹೇಳಿಕೆಯಂತೆ ಅನ್ನ, ಬೇಳೆ, ಪಲ್ಯದಂತಹ ಸರಳ ಊಟವನ್ನು ಸಿದ್ಧಪಡಿಸಲಾಗಿತ್ತು. ಅವರ ಜೊತೆಗೆ ಫೆಡರೇಶನ್ನಿನ ಕಾರ್ಯಕರ್ತರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು. ಭೋಜನದ ಬಳಿಕ ಗುಜರಾತಿನ ಪ್ರಚಲಿತ ಪರಿಸ್ಥಿತಿಯ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಮಾಡಿದರು. ಕೊನೆಗೆ ತೀರ ಸರಳ, ಸುಲಭವಾದ ಗುಜರಾತಿ ಭಾಷೆಯಲ್ಲಿ ಡಾ. ಅಂಬೇಡ್ಕರರು ಫೆಡರೇಶನ್ನಿನ ಕಾರ್ಯದ ಮತ್ತು ಮುಂಬರುವ ಚುನಾವಣೆಯ ಕುರಿತು ಅಮೂಲ್ಯವಾದ ಸೂಚನೆಯನ್ನು ನೀಡಿದ ಬಳಿಕ, ಅವರು ತಕ್ಷಣ ಅಹಮದಾಬಾದ್ ಮುನ್ಸಿಪಾಲಿಟಿಯ ಸನ್ಮಾನ ಸಮಾರಂಭಕ್ಕೆ ತೆರಳಿದರು.

ಈ ಸಮಾರಂಭವನ್ನು ಮುಗಿಸಿ ಅವರು ಪರಿಷತ್ತಿಗಾಗಿ ಸಿದ್ಧಪಡಿಸಿದ ಬುದ್ಧನಗರದಲ್ಲಿ ಪ್ರವೇಶಿಸಿದರು. ಅವರು ಬರುವ ಮೊದಲೇ ಹಲವು ಗುಜರಾತಿ ಕವಿ ಮತ್ತು ಶಾಹಾರರು ಸಾಮಾಜಿಕ ಕ್ರಾಂತಿಯ ಗೀತೆಗಳನ್ನು ಹಾಡಿ ಸಭಿಕರಲ್ಲಿ ಉತ್ಸಾಹವನ್ನು ನಿರ್ಮಾಣ ಮಾಡಿದ್ದರು. ಡಾ. ಬಾಬಾಸಾಹೇಬ ಅಂಬೇಡ್ಕರ ಆಗಮನವಾದ ಕೂಡಲೇ ಜನರು ಹಾಕಿದ ಜಯಘೋಷದಿಂದಾಗಿ ವಾತಾವರಣವು ಉಲ್ಲಾಸದಾಯಕಗೊಂಡಿತು. ಸ್ವಾಗತಾಧ್ಯಕ್ಷರಾದ ಪಿ. ಎಂ. ಪಟನಿಯವರ ಭಾಷಣದ ನಂತರ, ಜನರು ಚಪ್ಪಾಳೆ ಮತ್ತು ಜಯಘೋಷದ ಮಧ್ಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್‌ರು ಭಾಷಣ ಮಾಡಲು ಎದ್ದುನಿಂತರು. ಧ್ವನಿವರ್ಧಕದ ವ್ಯವಸ್ಥೆ ಮಾಡಿದ್ದರಿಂದ ಬುದ್ಧನಗರ ವಿಶಾಲ ಜನಸಮುದಾಯವು ಅವರ ಓಜಸ್ವಿ ಭಾಷಣವನ್ನು ಅತ್ಯಂತ ಶಾಂತವಾಗಿ ಮತ್ತು ಭಕ್ತಿಭಾವದಿಂದ ಆಲಿಸಿದರು.
ಡಾ. ಬಾಬಾಸಾಹೇಬ ಅಂಬೇಡ್ಕರರು ತಮ್ಮ ಭಾಷಣದಲ್ಲಿ ಹೇಳಿದ ಮಾತು:

‘‘ಬಂಧುಗಳೇ ಮತ್ತು ಭಗಿನಿಯರೆ,
ಅಧ್ಯಕ್ಷರು ನನಗೆ ಗುಜರಾತಿಯಲ್ಲಿ ಮಾತಾಡಲು ವಿನಂತಿ ಮಾಡಿದ್ದಾರೆ. ಹಿಂದಿಯಲ್ಲಿ ನಾನು ಚೆನ್ನಾಗಿ ಮಾತಾಡುವುದು ಸಾಧ್ಯವಿತ್ತು. ನಾನು ಗುಜರಾತಿಯಲ್ಲಿ ಮಾತಾಡಬಲ್ಲೆ. ಆದರೆ ಈಗೀಗ ಸ್ವಲ್ಪ ಮರೆತಿದ್ದೇನೆ. ಆದರೂ ನಾನು ಗುಜರಾತಿಯಲ್ಲಿ ಮಾತಾಡಲು ಪ್ರಯತ್ನಿಸುತ್ತೇನೆ, ಇಂದಿನ ಈ ವಿಶಾಲ ಜನಸಮುದಾಯವನ್ನು ಕಂಡು ನನಗೆ 1926ರ ನೆನಪಾಗುತ್ತದೆ. ನಾನಾಗ ಅಸ್ಪಶ್ಯ ವಿದ್ಯಾರ್ಥಿಗಳ ಬೋರ್ಡಿಂಗ್ ಕೆಲಸದ ನಿಮಿತ್ತ ಈ ನಗರಕ್ಕೆ ಬಂದಿದ್ದೆ. ನನ್ನ ಪರಿಚಯದ ಕೆಲವು ಸದ್ಗಹಸ್ಥರು ನನ್ನನ್ನು ಭೇಟಿಯಾಗಿ ‘ಇಲ್ಲೊಮ್ಮೆ ಸಭೆಯನ್ನು ಏರ್ಪಡಿಸಿ’ ಎಂದು ವಿನಂತಿ ಮಾಡಿದ್ದರು. ನಾನಾಗ ಅವರಿಗೆ ಹೇಳಿದ್ದೇನೆಂದರೆ-‘ಈ ನಗರವಂತೂ ಕಾಂಗ್ರೆಸಿನ ತವರು ಮನೆಯಾಗಿದೆ. ಇಲ್ಲಿಯ ಜನರೆಲ್ಲ ಕಾಂಗ್ರೆಸ್‌ವಾದಿಗಳು. ನಾನೋ ಕಾಂಗ್ರೆಸ್ ವಿರೋಧಿ ಎಂದು ಜನಪ್ರಿಯ! ಆದರೂ ಮಂಡಳಿಯ ಬಲವಂತವನ್ನು ಕಂಡು ನಾನು ಸಭೆಗೆ ಬಂದು ಮಾತಾಡುವ ಒಪ್ಪಿಗೆ ನೀಡಿದೆ.

ಆ ಸಭೆಯನ್ನು ಇಲ್ಲಿಯ ಒಂದು ಪ್ರಶಸ್ತ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು. ನಮ್ಮಲ್ಲಿಯ ಹಳೆಯ ಒಬ್ಬ ಕಾರ್ಯಕರ್ತನನ್ನೇ ಅಧ್ಯಕ್ಷನನ್ನಾಗಿ ಮಾಡಲಾಗಿತ್ತು. ಆ ಸಭೆಯಲ್ಲಿ ನನ್ನ ಅನುಭವಕ್ಕೆ ತಕ್ಕಂತೆ ನಾನು ಮಾತಾಡಿದೆ. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಏನು ಹೇಳಿದರು ಎಂದರೆ ‘ನಾವೆಲ್ಲ ಗಾಂಧಿಯ ಪ್ರಜಾಜನರು, ನಾವು ಗಾಂಧಿಯನ್ನು ತೊರೆಯುವುದು ಸಾಧ್ಯವಿಲ್ಲ. ನಾವು ಹಾಗೇನಾದರೂ ಮಾಡಿದರೆ, ಅದರ ಕೆಟ್ಟಪರಿಣಾಮವಾಗುತ್ತಿದೆ.’ ಈ ಮಾತು ನನಗೆ ಚೆನ್ನಾಗಿ ನೆನಪಿದೆ. ಆ ಸಭೆಗೆ ಹಾಜರಿದ್ದ ಯಾವುದೇ ಸದ್ಗಹಸ್ಥನು ಈ ಮಾತು ಸತ್ಯವಾಗಿರುವುದನ್ನು ಹೇಳಬಹುದು. ಇದು ಇಪತ್ತು ವರ್ಷಗಳ ಹಿಂದಿನ ಅನುಭವ. ಈಗ ಇಲ್ಲಿ ಸೇರಿದ ವಿಶಾಲ ಜನಸಮುದಾಯ ಕಂಡು ನನಗನಿಸುವುದೇನೆಂದರೆ, ‘ಸತ್ಯ ಎಂದಿಗೂ ಅಳಿಯುವುದಿಲ್ಲ. ಅದು ಎಂದಾದರೂ ವ್ಯಕ್ತವಾಗುತ್ತದೆ’. ಇಂದು 1945ರಲ್ಲಿ ಕಾಂಗ್ರೆಸ್‌ನ ಕೇಂದ್ರವಾಗಿದ್ದ ಅಹಮದಾಬಾದ್‌ನಲ್ಲಿ ಅಸ್ಪಶ್ಯರು ಕಾಂಗ್ರೆಸ್ ವಿರೋಧವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಅದೇ ಈ ಸತ್ಯ (ಚಪ್ಪಾಳೆ). ನಾನಿಂದು ಮುಂಬರುವ ಚುನಾವಣೆಯ ಬಗ್ಗೆ ಮಾತಾಡಲಿದ್ದೇನೆ. ಯಾರನ್ನೂ ಟೀಕಿಸುವ ಉದ್ದೇಶ ನನ್ನದಲ್ಲ. ಆದರೆ ಗತ್ಯಂತರವಿಲ್ಲ. ಅವರ ಹೊರತು ನನ್ನ ಮಾತಿನ ಮತಿತಾರ್ಥ ನಿಮ್ಮ ಗಮನಕ್ಕೆ ಬರಲಾರದು. ಆದ್ದರಿಂದ ನಾನು ಹೇಳಬೇಕೆಂದಿರುವ ವಿಷಯ ಕಹಿಯಾಗಿದ್ದರೂ, ಅದು ಕಟುಸತ್ಯವಾಗಿದೆ ಎನ್ನುವುದು ತಮ್ಮ ಗಮನಕ್ಕೆ ಬರುತ್ತದೆ.

 ಗಾಂಧಿ ಅಸ್ಪಶ್ಯರ ಉದ್ಧಾರಕ ಎಂದೆಲ್ಲ ಹೇಳಲಾಗುತ್ತದೆ. ನಾನು ಕಳೆದ ಇಪ್ಪತ್ತು ವರ್ಷಗಳಿಂದ ಇದನ್ನೇ ಯೋಚಿಸುತ್ತಿದ್ದೇನೆ. ಗಾಂಧಿ ಅಸ್ಪಶ್ಯರ ಉದ್ಧಾರ ಹೇಗೆ ಮಾಡುತ್ತಾರೆ? ನಿಜವಾಗಿಯೂ ಅವರಿಗೆ ಅಂಥ ಇಚ್ಛೆಯಿದೆಯೇ? ಎಂಬ ಬಗೆಗೆ ನಾವು ಯೋಚಿಸಬೇಕಾಗಿದೆ. ದುಂಡುಮೇಜಿನ ಪರಿಷತ್‌ಗೆ ನಾವು ಹೋದೆವು. ಆಗ ಗಾಂಧಿಯವರು ‘ಅಸ್ಪಶೋದ್ಧಾರ ರಾಜಕೀಯ ಪ್ರಗತಿಯಿಂದಲ್ಲ, ಸಾಮಾಜಿಕ ಉದ್ಧಾರದಿಂದ ಮಾತ್ರ ಸಾಧ್ಯ’ ಎಂದರು. ಗಾಂಧಿಯ ದೃಷ್ಟಿಯಿಂದ ಅದೆಷ್ಟು ಸತ್ಯವೋ ಅದು ಅವರೇ ಬಲ್ಲರು. ಆದರೆ ರಾಜಕೀಯ ಹಕ್ಕಿಲ್ಲದೆ ಉನ್ನತಿ ಸಾಧ್ಯವಿಲ್ಲವೆಂದು ನನ್ನ ಅಭಿಪ್ರಾಯ(ಚಪ್ಪಾಳೆ). ಗಾಂಧಿ 1919ರಲ್ಲಿ ಕಾಂಗ್ರೆಸ್ ಪ್ರವೇಶ ಮಾಡಿದರು. 1920ರಲ್ಲಿ ಅಸಹಕಾರ ಚಳವಳಿ ಮಾಡಿದರು. ಬಾರ್ಡೇಲಿಯ ಸತ್ಯಾಗ್ರಹದಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ಆಂಗ್ಲರನ್ನು ಈ ದೇಶದಿಂದ ಹೊಡೆದೋಡಿಸುವ ಘೋಷಣೆ ಮಾಡಿದರು. ಆಗವರು ಹಿಂದೂ-ಮುಸ್ಲಿಂ ಐಕ್ಯದ ಹೊರತು ಮತ್ತು ಅಸ್ಪಶ್ಯತೆ, ಜಾತಿಭೇದ ನಾಶವಾಗದ ಹೊರತು ಸ್ವರಾಜ್ಯ ಸಿಗಲಾರದು ಎಂದು ಹೇಳಿದರು. ಆದರೆ ಜಾತಿಭೇದ ಮತ್ತು ಅಸ್ಪಶ್ಯತೆ ಹೋಗಲಾಡಿಸಲು ಅವರು ಮಾಡಿದ್ದೇನು? ಅಸ್ಪಶ್ಯತೆ ನಿವಾರಣೆಗಾಗಿ ಒಂದು ಮಾಮೂಲಿ ಸಮಿತಿಯನ್ನು ನೇಮಿಸಿ ಅಸ್ಪಶ್ಯ ಉದ್ಧಾರ ಮಾಡುವುದನ್ನು ಗಾಂಧಿ ಮತ್ತು ಕಾಂಗ್ರೆಸು ನಿರ್ಧರಿಸಿತು.

ಆದರೆ ಸಮಿತಿಯು ಏನನ್ನೂ ಮಾಡದೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟಿತು. ಅದನ್ನು ಹಿಂದೂಸಭೆಗೆ ಅರ್ಪಿಸಿತು. ಉಳಿದ ಕೆಲಸಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿದರೆ, ಅಸ್ಪಶ್ಯರಿಗಾಗಿ ಕೇವಲ ರೂ. 30,000 ಮಾತ್ರ ಖರ್ಚುಮಾಡಿತು. ಅವರ ದೃಷ್ಟಿಯಲ್ಲಿ ಇದಿಷ್ಟೇ ಮಹತ್ವದ ಕಾರ್ಯ! ನಾನು ಈಗಷ್ಟೇ ಪ್ರಕಟಿಸಿದ ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೆಸ್ ಹ್ಯಾವ್ ಡನ್ ಟುದಿ ಅನ್‌ಟಚೆಬಲ್ಸ್’ ಎಂಬ ಪುಸ್ತಕದಲ್ಲಿ ಇದನ್ನೆೆಲ್ಲ ವಿವರಿಸಿದ್ದೇನೆ. 1920-32ವರೆಗೆ ಅವರು ಅಸ್ಪಶ್ಯತೆಯ ನಿವಾರಣೆಯ ಘೋಷಣೆ ಹಾಕುವುದರ ಹೊರತು ಬೇರೇನೂ ಮಾಡಲೇ ಇಲ್ಲ, 1932ರಲ್ಲಿ ಮತ್ತೆ ಕರಾರು ಆಯಿತು. ಆಗ ಅಸ್ಪಶ್ಯರ ಸ್ವತಂತ್ರ ರಾಜಕೀಯ ಹಕ್ಕಿನ ವಿರುದ್ಧ ಗಾಂಧಿ ಮತ್ತು ಕಾಂಗ್ರೆಸ್ ನಮ್ಮೆಂದಿಗೆ ಜಗಳವಾಡಿದರು. ಅಸ್ಪಶ್ಯರು ಹಿಂದೂಗಳಿಂದ ಬೇರ್ಪಟ್ಟರೆ, ಹಿಂದೂಗಳು ದುರ್ಬಲವಾಗಬಾರದೆಂದು ಗಾಂಧಿಯವರು ಯರವಡಾ ಜೈಲಿನಲ್ಲಿ ಆಮರಣ ಉಪವಾಸ ಕೈಗೊಂಡರು. ಆ ಪ್ರಸಂಗದಿಂದ ನಿರ್ಮಾಣಗೊಂಡ ಕರಾರಿನಿಂದಲೇ ಹರಿಜನ ಸೇವಕ ಸಂಘ ಹುಟ್ಟಿತು. ಅಂದಿನಿಂದ ಇಂದಿನವರೆಗಿನ ಈ ಹದಿಮೂರು ವರ್ಷಗಳಲ್ಲಿ ಈ ಸಂಘ ಅಸ್ಪಶ್ಯರಿಗಾಗಿ ಏನು ಮಾಡಿದೆ? ಇದು ನನ್ನ ಬಹಿರಂಗ ಸವಾಲು. ನಿಮ್ಮ ಶಿಕ್ಷಣಕ್ಕಾಗಿ ಅವರು ಯಾವ ದೊಡ್ಡ ಕಾಯಕ ಮಾಡಿದರು! ನಮ್ಮ ಕೈಗೆ ಸತ್ತೆ ಬಂದರೆ ನಾವೇನು ಮಾಡಬಲ್ಲೆವು ಎನ್ನುವುದಕ್ಕೆ ಉದಾಹರಣೆಯಾಗಿ ಕಳೆದ ಮೂರು ವರ್ಷಗಳಲ್ಲಿ ನಾನು ಮಾಡಿದ ಕೆಲಸ ನಿಮ್ಮ ಎದುರಿಗೆ ಇದೆ!


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75