ಈತನನ್ನು ಹುಡುಕಿಕೊಟ್ಟರೆ 10 ಲಕ್ಷ ಡಾಲರ್ ಬಹುಮಾನ !
ವಾಷಿಂಗ್ಟನ್, ಮಾ. 1: ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಪುತ್ರ ಹಂಝ ಬಿನ್ ಲಾಡೆನ್ ಇರುವಿಕೆ ಬಗ್ಗೆ ಮಾಹಿತಿ ನೀಡಿದಲ್ಲಿ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ.
ಈತ ಭಯೋತ್ಪಾದನೆಯ ಉದಯೋನ್ಮುಖ ನೇತಾರ ಎಂಬ ಕಾರಣಕ್ಕೆ ಈ ಘೋಷಣೆ ಮಾಡಿದೆ.
ಹಂಝ ಬಿನ್ ಲಾಡೆನ್‌ನನ್ನು "ಕ್ರೌನ್ ಪ್ರಿನ್ಸ್ ಆಫ್ ಜಿಹಾದ್" ಎಂದು ಬಣ್ಣಿಸಲಾಗಿದ್ದು, ಈತ ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ ಹೀಗೆ ಈತನ ಇರುವಿಕೆ ಬಗ್ಗೆ ಹಲವು ವರ್ಷಗಳಿಂದ ಊಹಾಪೋಹಗಳಿವೆ. ಈತ ಇರಾನ್‌ನಲ್ಲಿ ಗೃಹಬಂಧನದಲ್ಲಿದ್ದಾನೆ ಎಂಬ ವದಂತಿಯೂ ಇದೆ.
"ಅಲ್‌ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಪತ್ರ ಹಂಝ ಬಿನ್ ಲಾಡೆನ್, ಎಕ್ಯೂ ಫ್ರಾಂಚೈಸ್‌ನ ಉದಯೋನ್ಮುಖ ನಾಯಕ" ಎಂದು ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಣೆ ಹೇಳಿದೆ. ಈತ ಯಾವ ದೇಶದ ಯಾವ ಪ್ರದೇಶದಲ್ಲಿದ್ದಾನೆ ಎಂಬ ಸುಳಿವು ನೀಡಿದಲ್ಲಿ 10 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.
ಹಂಝ ಸುಮಾರು 30 ವರ್ಷ ವಯಸ್ಸಿನವನಾಗಿದ್ದು, 2011ರಲ್ಲಿ ತನ್ನ ತಂದೆಯನ್ನು ಅಮೆರಿಕ ಹತ್ಯೆ ಮಾಡಿದ ಕಾರಣಕ್ಕೆ ಅಮೆರಿಕದ ಮೇಲೆ ಪ್ರತೀಕಾರದ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ. ಪಾಕಿಸ್ತಾನದ ದಂಡು ಪ್ರದೇಶವಾದ ಅಬೋಟಾಬಾದಲ್ಲಿ ಅಡಗಿರುವ ಸಾಧ್ಯತೆ ಇದೆ ಎಂದು ಅಮೆರಿಕದ ವಿಶೇಷ ಪಡೆಗಳು ಅಂದಾಜಿಸಿವೆ.
ಒಸಾಮಾ ಬಿನ್ ಲಾಡೆನ್ ಬಳಿಕ ಜಾಗತಿಕ ಜಿಹಾದಿ ಚಳವಳಿಯನ್ನು ನಡೆಸಿಕೊಂಡು ಹೋಗುವ ಹೊಣೆಯನ್ನು ಈತ ವಹಿಸಿಕೊಂಡಿದ್ದಾನೆ ಎಂದು ಅಮೆರಿಕದ ಗುಪ್ತಚರ ಮೂಲಗಳು ಹೇಳಿವೆ.
2015ರಲ್ಲಿ ಈತ ಸಿರಿಯಾದಲ್ಲಿರುವ ಉಗ್ರರು ಒಗ್ಗೂಡಬೇಕು ಎಂದು ಕರೆ ನೀಡುವ ಆಡಿಯೊ ಸಂದೇಶ ಬಿಡುಗಡೆ ಮಾಡಿದ್ದ. ಪ್ಯಾಲಸ್ತೀನ್ ವಿಮೋಚನೆಗೊಳಿಸುವವರೆಗೂ ಯುದ್ಧಪೀಡಿತ ದೇಶದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದ.
ಆ ಬಳಿಕ ಸೌದಿ ಅರೇಬಿಯಾದ ನಾಯಕತ್ವವನ್ನು ಕಿತ್ತೊಗೆಯುವಂತೆಯೂ ಸಂದೇಶ ರವಾನಿಸಿದ್ದ. ಒಸಾಮಾ ಬಿನ್ ಲಾಡೆನ್‌ನ ಉಳಿದ ಮೂವರು ಪತ್ನಿಯರು ಹಾಗೂ ಅವರ ಮಕ್ಕಳು ಸೌದಿ ಅರೇಬಿಯಾಗೆ ವಾಪಸ್ಸಾಗಲು ಅನುಮತಿ ನೀಡಲಾಗಿತ್ತು.