ಪಾಕ್ ಮೇಲೆ ಸತತ ನಿಗಾ: ಅಮೆರಿಕ

Update: 2019-03-01 17:05 GMT

ವಾಶಿಂಗ್ಟನ್, ಮಾ. 1: ಶರತ್ತುಗಳ ಹೊರತಾಗಿಯೂ, ಭಾರತದ ವಿರುದ್ಧದ ವಾಯು ದಾಳಿಯಲ್ಲಿ ಅಮೆರಿಕ ನಿರ್ಮಿತ ಯುದ್ಧೋಪಕರಣಗಳನ್ನು ಪಾಕಿಸ್ತಾನ ಬಳಸಿರುವುದನ್ನು ಅಮೆರಿಕ ‘‘ನಿಕಟವಾಗಿ ಗಮನಿಸುತ್ತಿದೆ’’ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಉದ್ವಿಗ್ನತೆಯನ್ನು ಹೆಚ್ಚಿಸುವ ಸೇನಾ ಚಟುವಟಿಕೆಗಳಿಗೆ ಅಮೆರಿಕದ ಉಪಕರಣಗಳನ್ನು ಬಳಸಬಾರದು ಹಾಗೂ ಇದು ಭವಿಷ್ಯದ ಶಸ್ತ್ರಾಸ್ತ್ರ ಖರೀದಿಯ ಮೇಲೆ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನು ಅಮೆರಿಕ ಪಾಕಿಸ್ತಾನಕ್ಕೆ ನೀಡಿತ್ತು.

 ಬುಧವಾರ ಭಾರತದ ಮೇಲೆ ನಡೆಸಿದ ದಾಳಿಯ ವೇಳೆ ಪಾಕಿಸ್ತಾನವು ಅಮೆರಿಕ ನಿರ್ಮಿತ ಎಫ್-16 ಯುದ್ಧವಿಮಾನಗಳು ಮತ್ತು ಸುಧಾರಿತ ಮಧ್ಯಮ ವ್ಯಾಪ್ತಿಯ ಆಕಾಶದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ (ಎಎಂಆರ್‌ಎಎಎಂ)ಗಳನ್ನು ಬಳಿಸಿದೆ ಎಂಬುದಾಗಿ ಭಾರತದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ, ಪಾಕಿಸ್ತಾನವು ದಾಳಿಯಲ್ಲಿ ಬಳಸಿದ ಎಎಂಆರ್‌ಎಎಎಂ ಕ್ಷಿಪಣಿಯ ಭಾಗಗಳನ್ನು ಭಾರತ ಪ್ರದರ್ಶಿಸಿದೆ. ಪಾಕಿಸ್ತಾನದ ಬಾಲಕೋಟ್‌ನಲ್ಲಿರುವ ಜೈಶೆ ಮುಹಮ್ಮದ್‌ ಭಯೋತ್ಪಾದನೆ ತರಬೇತಿ ಶಿಬಿರದ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ದಾಳಿ ನಡೆಸಬಾರದು ಎಂಬ ಅಮೆರಿಕದ ಮನವಿ ಹಾಗೂ ರಿಯಾಯಿತಿ ದರದಲ್ಲಿ ಯುದ್ಧೋಪಕರಣಗಳನ್ನು ಪೂರೈಸಿದ ಪೂರೈಕೆದಾರ ಸಂಸ್ಥೆಯೊಂದಿಗಿನ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಭಾರತ ಹೇಳಿದೆ.

‘‘ನಾವು ಈ ಸಂಬಂಧದ ವರದಿಗಳನ್ನು ಗಮನಿಸಿದ್ದೇವೆ ಹಾಗೂ ಘಟನಾವಳಿಗಳನ್ನು ನಿಕಟವಾಗಿ ಗಮನಿಸುತ್ತಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ‘ಹಿಂದೂಸ್ತಾನ್ ಟೈಮ್ಸ್’ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News