ವಿಜಯೋನ್ಮಾದದ ಮಿತಿಗಳು

Update: 2019-03-06 18:40 GMT

ಒಂದು ಯುದ್ಧೋನ್ಮಾದಿ ಮನೋಭಾವದಲ್ಲಿರುವ ರಾಷ್ಟ್ರವು ತನ್ನ ಘನತೆಯನ್ನು ಮರಳಿಪಡೆದುಕೊಳ್ಳಬೇಕೆಂದರೆ ಗಡಿಗಳಲ್ಲಿ ಸದಾ ಒತ್ತಡದ ವಾತಾವರಣವನ್ನು ಪುನರುತ್ಪಾದನೆ ಮಾಡಿಕೊಳ್ಳುವುದು ತಾರ್ಕಿಕವಾಗಿ ಅಗತ್ಯವಾಗುತ್ತದೆ. ಹೀಗಾಗಿ ಸೇಡು ತೀರಿಸಿಕೊಳ್ಳುವ ಹಪಹಪಿಕೆ ಗಡಿಯ ಎರಡೂ ಕಡೆಗಳಲ್ಲೂ ಜೀವಂತವಾಗಿರುತ್ತದೆ. ಈ ಯುದ್ಧೋನ್ಮಾದ ಮನಸ್ಸತ್ವವನ್ನು ಎಲ್ಲಿದ್ದರೂ ಅಥವಾ ಬೇರೆ ಎಲ್ಲೇ ತಲೆ ಎತ್ತಿದರೂ ಅದನ್ನು ತಣ್ಣಗಾಗಿಸುವ ಜವಾಬ್ದಾರಿ ಭಾರತ ಮತ್ತು ಪಾಕಿಸ್ತಾನದ ಎರಡೂ ಆಳುವ ವರ್ಗಗಳ ಮೇಲೂ ಇದೆ. ಈ ಬಗೆಯ ಮಾನಸಿಕತೆಯ ಸೈನ್ಯೀಕರಣವು ಮಾನವೀಯ ಮೌಲ್ಯಗಳನ್ನು ಹಿಮ್ಮೆಟ್ಟಿಸಿದೆಯೆಂಬುದು ಯುದ್ಧದ ಇತಿಹಾಸಗಳು ರುಜುವಾತು ಮಾಡಿದೆ.


ಕಾಶ್ಮೀರದ ಪುಲ್ವಾಮದಲ್ಲಿ ಜೈಶೆ ಮುಹಮ್ಮದ್ ಸಂಘಟನೆಯು ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯು ಪಡೆಯು ಕೈಗೊಂಡ ಮಿಲಿಟರಿ ಕ್ರಮಗಳು ಎರಡು ಬಗೆಯ ನಿರೀಕ್ಷಿತ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನೂ ಒಳಗೊಂಡಂತೆ ಬಹಳಷ್ಟು ಜನ ಭಾರತೀಯ ಸೇನಾಪಡೆಗಳನ್ನು ಅಭಿನಂದಿಸಿದ್ದಾರೆ. ಆಳುವವರ ಕಡೆಯಿಂದ ನೋಡುವುದಾದರೆ, ‘ಆಪರೇಷನ್ ಬಾಲಕೋಟ್’ ಎಂಬ ಅಧಿಕೃತ ಹೆಸರನ್ನು ಹೊಂದಿದ್ದ ಈ ಕಾರ್ಯಾಚರಣೆಯು ಸರಕಾರ ಮತ್ತು ಅದರ ಬೆಂಬಲಿಗರಲ್ಲಿ ವಿಜಯೋನ್ಮಾದವನ್ನು ಹುಟ್ಟುಹಾಕಿದೆ. ಪಾಕಿಸ್ತಾನದ ಮೇಲೆ ನಡೆದ ಈ ಮಿಲಿಟರಿ ಕಾರ್ಯಾಚರಣೆಯ ಮೂಲಕ ಪುಲ್ವಾಮದಲ್ಲಿ ನಡೆದ ಭಯೋತ್ಪಾದನೆಯ ಕೃತ್ಯಕ್ಕೆ ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಸಾರ್ವಜನಿಕ ಬೇಡಿಕೆಯನ್ನು ಪೂರೈಸಿದಂತಾಗಿದೆಯೆಂದು ಆಳುವ ಪಕ್ಷದ ವಕ್ತಾರರು ಕೂಡಲೇ ಪ್ರತಿಪಾದಿಸಲಾರಂಭಿಸಿದರು.

ಎರಡನೆಯದಾಗಿ ಪಾಕಿಸ್ತಾನದಲ್ಲಿನ ಭಾರತೀಯ ವಾಯು ಪಡೆಯ ಕಾರ್ಯಾಚರಣೆಯು ದಾಳಿ ಮಾಡಿದವರಿಗೆ ಪಾಠ ಕಲಿಸಬೇಕೆಂಬ ಮತ್ತು ಆಗಿರುವ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕೆಂಬ ಬಯಕೆಯು ಸಾರ್ವಜನಿಕ ಮನಃಸ್ಥಿತಿ ಮತ್ತು ಸರಕಾರದ ಮನಃಸ್ಥಿತಿಯ ನಡುವೆ ರೂಪುಗೊಂಡಿರುವ ಏಕತೆಯ ದೃಢ ಸೂಚನೆಯೆಂದು ಹಲವರು ಪರಿಗಣಿಸುತ್ತಾರೆ. ‘‘ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದೇ ನನ್ನ ಮನಸ್ಸಿನಲ್ಲೂ ಇದೆ’’ಯೆಂದು ಪ್ರಧಾನಿ ಮೋದಿ ಹೇಳಿದ್ದರಲ್ಲಿ ಈ ಏಕ ಮನೋಭಾವವು ಇನ್ನೂ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಇದು ನಮ್ಮ ಸಾರ್ವಜನಿಕ ಮಾನಸಿಕತೆಯಲ್ಲಿ ಮನೆಮಾಡಿರುವ ಯುದ್ಧಕೋರ ಗುಣಲಕ್ಷಣಗಳನ್ನು ಗುರುತಿಸುವ ಮತ್ತು ಇದರಿಂದಾಗಿ ಸಮಾಜದ ಒಳಗೆ ಮತ್ತು ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಬಹುದಾದ ಪರಿಣಾಮಗಳನ್ನು ಗುರುತಿಸಬೇಕಾದ ಅಗತ್ಯವನ್ನು ಸೂಚಿಸುತ್ತಿದೆ. ಈ ಸಂದರ್ಭದಲ್ಲಿ ಒಂದೆರಡು ಪ್ರಶ್ನೆಗಳನ್ನು ಕೇಳಲೇ ಬೇಕಿದೆ. ಮೊದಲನೆಯದಾಗಿ ಸಾರ್ವಜನಿಕ ಮಾನಸಿಕತೆಯಲ್ಲಿರುವ ಈ ಯುದ್ಧಕೋರ ಗುಣಲಕ್ಷಣಗಳು ಹೊರಗಿನವರ ಮೇಲೆ ಮತ್ತು ಹೊರಗಿನಿಂದ ಆಗುವ ದಾಳಿಯ ವಿರುದ್ಧ ಮಾತ್ರ ವ್ಯಕ್ತವಾಗುತ್ತದೆಯೇ ವಿನಃ ದೇಶದೊಳಗಿನ ನಾಗರಿಕ ಸಮಾಜದ ಸಹ ಸದಸ್ಯರ ಮೇಲೆ ತಿರುಗುವುದಿಲ್ಲ ಎಂಬುದಕ್ಕೆ ಖಾತರಿಯೇನು? ಯುದ್ಧಕೋರ ಮನೋಭಾವದಿಂದ ನಾಗರಿಕರನ್ನು ಹೊರತರುವುದು ಯುದ್ಧರೀತಿಯ ವಾತಾವರಣದಲ್ಲಿ ಸಿಲುಕಿಕೊಂಡಿರುವ ದೇಶಗಳ ಸರಕಾರಗಳ ಪ್ರಜಾತಾಂತ್ರಿಕ ಕರ್ತವ್ಯವಲ್ಲವೇ?

ಪುಲ್ವಾಮ ಘಟನೆಯ ನಂತರದಲ್ಲಿ ವ್ಯಕ್ತವಾಗುತ್ತಿರುವ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸಾರ್ವಜನಿಕರೇ ಮಿಲಿಟರಿ ಥಿಂಕ್ ಟ್ಯಾಂಕ್ ಪಾತ್ರವನ್ನು ವಹಿಸಿಕೊಂಡು ಯುದ್ಧ, ಆಕ್ರಮಣ, ಧೈರ್ಯ ಮತ್ತು ಭಯಭೀತಿ ಇಲ್ಲದೆ ಕಾರ್ಯಾಚರಣೆ ಮಾಡುವ ಕುರಿತು ಸಲಹೆಗಳನ್ನು ನೀಡುತ್ತಿರುವುದು ಕಣ್ಣಿಗೆ ರಾಚುತ್ತದೆೆ. ನಾಗರಿಕ ಸಮಾಜದ ಈ ಮಂದಿ ಸೈನಿಕ ಸಮವಸ್ತ್ರವನ್ನು ಧರಿಸಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಿರುಗುವುದಿಲ್ಲ ಎನ್ನುವುದನ್ನು ಹೊರತುಪಡಿಸಿದರೆ ಈಗಾಗಲೇ ಅವರು ತಮ್ಮ ಮನಸ್ಸತ್ವವನ್ನು ಮಿಲಿಟರಿ ಮನಸ್ಸತ್ವವಾಗಿ ಬದಲಾಯಿಸಿಕೊಂಡು ಬಿಟ್ಟಿದ್ದಾರೆ. ಆದರೆ ಅವರ ಬಳಿ ಕಾಶ್ಮೀರಿಗಳಲ್ಲಿ ಭಯವನ್ನು ಹುಟ್ಟಿಸಬಲ್ಲ ಅಥವಾ ಭಯೋತ್ಪಾದಕರಿರುವ ಭೂಭಾಗದೊಂದಿಗೆ ಸಹಜೀವನ ನಡೆಸುತ್ತಾರೆಂದು ಆರೋಪಿಸಲ್ಪಡುವ ಕಾಶ್ಮೀರಿಗಳ ಬಗ್ಗೆ ದ್ವೇಷ ಹುಟ್ಟಿಸಬಲ್ಲ ಅಥವಾ ಅವರ ಸಾಮಾಜಿಕ ಬಹಿಷ್ಕಾರಕ್ಕೂ ಆಗ್ರಹಿಸುವಂಥ ಇನ್ನಿತರ ಅಸ್ತ್ರಗಳಿವೆ. ಭಾರತದಲ್ಲಂತೂ ಗಣ್ಯಮಾನ್ಯರೇ ಕಾಶ್ಮೀರಿಗಳ ಬಹಿಷ್ಕಾರಕ್ಕೆ ಕರೆಕೊಡುವುದು ಅತ್ಯಂತ ಆಶ್ಚರ್ಯಕರವಾಗಿದೆ. ಹಾಗೆ ಹೇಳುತ್ತಿರುವ ನಾಯಕರ ಮೇಲೆ ದೇಶದ ಎಲ್ಲಾ ನಾಗರಿಕರು ಶಾಂತಿ ಮತ್ತು ಸೌಹಾರ್ದದಿಂದ ಬಾಳುವಂತೆ ನೋಡಿಕೊಳ್ಳುವ ಸಂವಿಧಾನಾತ್ಮಕ ಜವಾಬ್ದಾರಿಯೂ ಇದೆ.

ವಾಸ್ತವವಾಗಿ ತಾವು ದಾಳಿ ಮಾಡುತ್ತಿರುವ ಗುಂಪುಗಳು ಇತರರೊಂದಿಗೆ ಸಹಜವಾಗಿ ವಾಸಮಾಡಲಾಗದೆ ಹೆದರಿಕೆಯಿಂದ ಆ ಜಾಗವನ್ನು ತೊರೆದು ದಾಳಿಗೊಳಗಾಗುವ ಗುಂಪೆಲ್ಲ ಒಟ್ಟಾಗಿ ಒಂದೇ ಕಡೆ ವಾಸಿಸುವಂತೆ ಮಾಡುವ (ಗೆಟ್ಟೋಐಸೇಷನ್) ಮೂಲಕ ಅವರನ್ನು ತಮ್ಮ ಹಿಂಸಾಚಾರಗಳಿಗೆ ಸುಲಭದ ತುತ್ತನ್ನಾಗಿಸಿಕೊಳ್ಳುವುದು ಈ ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಕರೆಕೊಡುವವರಿಗೆ ಬೇಕಾಗಿದೆ. ಅಂತಹ ಸಲಹೆಗಳು ನಾಗರಿಕ ಮತ್ತು ಸೈನಿಕರ ನಡುವಿನ ಅಂತರವನ್ನೇ ಇಲ್ಲದಂತೆ ಮಾಡುತ್ತದೆ. ಸೈನ್ಯೀಕರಣವು ಒಂದು ಪ್ರಕ್ರಿಯೆಯಾಗಿದ್ದು ನಾಗರಿಕ ಸಮಾಜವು ಆ ಮೂಲಕ ಹಿಂಸೆಗೆ ಅಗತ್ಯವಾಗಿರುವ ಪರಿಸ್ಥಿತಿಯನ್ನು ಅಥವಾ ಅದರ ವಾಸ್ತವಿಕ ಅಭಿವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ಆದರೆ ಒಂದು ನಾಗರಿಕ ಸಮಾಜವು ಅಹಿಂಸೆಯನ್ನು, ಪರಸ್ಪರ ಸಹಿಷ್ಣುತೆಯ ಪ್ರಜಾತಾಂತ್ರಿಕ ನೀತಿ ನಿಯಮಗಳನ್ನು ಹಾಗೂ ಮತ್ತೊಬ್ಬರ ಬಗ್ಗೆ ಸಹಜ ಮನೋಧರ್ಮದಿಂದ ನಡೆದುಕೊಳ್ಳುವುದನ್ನು ಪ್ರೇರೇಪಿಸಬೇಕು. ಹೊರಗಿನ ದಾಳಿಯನ್ನು ಪ್ರತಿಘಟಿಸುವುದರ ಬಗ್ಗೆ ಬೇಕಾದ ವ್ಯೆಹತಂತ್ರ, ಯೋಜನೆ ಮತ್ತು ರಾಜತಾಂತ್ರಿಕ ಕ್ರಮಗಳ ಬಗ್ಗೆ ರಕ್ಷಣಾ ಪಡೆಗಳಿಗೆ ತಮ್ಮದೇ ಆದ ಲೆಕ್ಕಾಚಾರಗಳಿರುತ್ತವೆ ಎಂಬುದನ್ನು ನಾಗರಿಕ ಸಮಾಜದ ಸದಸ್ಯರು ಅರ್ಥಮಾಡಿಕೊಳ್ಳಬೇಕು.

ರಕ್ಷಣಾ ಪಡೆಗಳ ಈ ಪಾತ್ರವನ್ನು ನಾಗರಿಕ ಸಮಾಜವು ವಹಿಸಿಕೊಳ್ಳಲಾಗದು. ಆದರೆ ನಾಗರಿಕ ಸಮಾಜದ ಸದಸ್ಯರು ಆ ಗೆರೆಗಳನ್ನು ದಾಟಿ ಯುದ್ಧವೇ ಏಕೈಕ ದಾರಿಯೆಂದು ರಕ್ಷಣಾ ಪಡೆಗಳಿಗೆ ಮಾರ್ಗದರ್ಶನ ಮಾಡಲು ಹೊರಟಿದ್ದಾರೆ. ಅದನ್ನು ಅಲ್ಲಿಗೆ ಮಾತ್ರ ನಿಲ್ಲಿಸದೆ ತಮ್ಮ ಈ ರಾಷ್ಟ್ರೀಯ ಆಕ್ರೋಶವನ್ನು ಸಮಾಜದೊಳಗಿನ ಇತರ ಸಹ ಸದಸ್ಯರ ಮೇಲೆ ಹರಿಬಿಡುವುದಕ್ಕೂ ಕಾರಣಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ವಿಜಯೋನ್ಮಾದವು ಹರಡಿಕೊಳ್ಳಲು ದುರಂತದ ಒಂದು ಪೂರ್ವಭಾವಿ ಚಿತ್ರಣವು ಅತ್ಯಗತ್ಯ. ಒಂದು ಶಾಂತಿಪ್ರೇಮಿ ಪ್ರಜಾತಾಂತ್ರಿಕ ದೇಶದಲ್ಲಿ ವಿಜಯೋನ್ಮಾದಗಳಿಗೆ ಮಿತಿಯಿರುತ್ತದೆ. ಅಂತಹ ದೇಶಗಳಲ್ಲಿನ ಸರಕಾರಗಳ ಮೇಲೆ ತಮ್ಮ ನಾಗರಿಕರು ಈ ಬಗೆಯ ವಿಜಯೋನ್ಮಾದದ ಭಾವನೆಗಳನ್ನು ಮೈಗೂಡಿಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿಯಿರುತ್ತದೆ.

ನಾಗರಿಕರಲ್ಲಿ ಯುದ್ಧೋನ್ಮಾದವನ್ನು ಅಥವಾ ಪ್ರತೀಕಾರ ಮನೋಭಾವವನ್ನು ಬಿತ್ತಿ ಅದರ ಮೂಲಕ ತನ್ನ ಅಸ್ತಿತ್ವವನ್ನು ಖಾತರಿಪಡಿಸಿಕೊಳ್ಳಲೆಂದೇ ರೂಪಿಸಿರುವ ತಂತ್ರೋಪಾಯಗಳನ್ನು ಕೈಬಿಡುವ ದೊಡ್ಡ ಸವಾಲು ಭಾರತದ ಹಾಲಿ ಸರಕಾರದ ಮುಂದಿದೆ. ಯುದ್ಧೋನ್ಮಾದಿ ರಾಷ್ಟ್ರೀಯತೆಯು ರಾಷ್ಟ್ರೀಯ ಅಪಮಾನದ ನಂಜಿನ ಸಂಕಥನದ ಪುನರುತ್ಪಾದನೆಗೆ ದಾರಿಮಾಡಿಕೊಡುತ್ತದೆ. ಒಂದು ಯುದ್ಧೋನ್ಮಾದಿ ಮನೋಭಾವದಲ್ಲಿರುವ ರಾಷ್ಟ್ರವು ತನ್ನ ಘನತೆಯನ್ನು ಮರಳಿಪಡೆದುಕೊಳ್ಳಬೇಕೆಂದರೆ ಗಡಿಗಳಲ್ಲಿ ಸದಾ ಒತ್ತಡದ ವಾತಾವರಣವನ್ನು ಪುನರುತ್ಪಾದನೆ ಮಾಡಿಕೊಳ್ಳುವುದು ತಾರ್ಕಿಕವಾಗಿ ಅಗತ್ಯವಾಗುತ್ತದೆ. ಹೀಗಾಗಿ ಸೇಡು ತೀರಿಸಿಕೊಳ್ಳುವ ಹಪಹಪಿಕೆ ಗಡಿಯ ಎರಡೂ ಕಡೆಗಳಲ್ಲೂ ಜೀವಂತವಾಗಿರುತ್ತದೆ. ಈ ಯುದ್ಧೋನ್ಮಾದಿ ಮನಸ್ಸತ್ವವನ್ನು ಎಲ್ಲಿದ್ದರೂ ಅಥವಾ ಬೇರೆ ಎಲ್ಲೇ ತಲೆ ಎತ್ತಿದರೂ ಅದನ್ನು ತಣ್ಣಗಾಗಿಸುವ ಜವಾಬ್ದಾರಿ ಭಾರತ ಮತ್ತು ಪಾಕಿಸ್ತಾನದ ಎರಡೂ ಆಳುವ ವರ್ಗಗಳ ಮೇಲೂ ಇದೆ. ಈ ಬಗೆಯ ಮಾನಸಿಕತೆಯ ಸೈನ್ಯೀಕರಣವು ಮಾನವೀಯ ಮೌಲ್ಯಗಳನ್ನು ಹಿಮ್ಮೆಟ್ಟಿಸಿದೆಯೆಂಬುದು ಯುದ್ಧದ ಇತಿಹಾಸಗಳು ರುಜುವಾತು ಮಾಡಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News