ಚುನಾವಣೆ ಗೆಲ್ಲಿ, ರಾಜಕೀಯ ಸತ್ತೆ ಪಡೆಯಿರಿ

Update: 2019-03-07 19:11 GMT

ಭಾಗ-2

ಈ ಮೂರು ವರ್ಷಗಳಲ್ಲಿ ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ನಾನು ಪ್ರತಿ ವರ್ಷ ಮೂರು ಲಕ್ಷ ರೂಪಾಯಿ ಗಳಿಸಿದ್ದೇನೆ. ಈಗ ಐದು ಲಕ್ಷ ರೂಪಾಯಿ ಸಿಗುತ್ತದೆ. 500 ವಿದ್ಯಾರ್ಥಿಗಳು ಇಂದು ಕಾಲೇಜು ಶಿಕ್ಷಣ ಪಡೆಯುತ್ತಿದ್ದು, ಮೂವತ್ತು ವಿದ್ಯಾರ್ಥಿಗಳು ಉಚ್ಚ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ. ತುಲನೆ ಮಾಡಿ ಮತ್ತು ಲಕ್ಷದಲ್ಲಿಡಿ, ಈ ಕಾರ್ಯವನ್ನು ಗಾಂಧಿಯಾಗಲಿ, ಕಾಂಗ್ರೆಸ್ಸಾಗಲಿ ಮಾಡಲಿಲ್ಲ. ಹರಿಜನ ಸೇವಕ ಸಂಘದ ಕಾರ್ಯದಿಂದ ನಮ್ಮ ಉದ್ಧಾರ ಹೇಗಾಗಬಹುದು ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ಮೂರು ನಾಲ್ಕು ರೂಪಾಯಿಗಳ ಶಿಷ್ಯವೃತ್ತಿ ಮತ್ತು ದೇವಾಲಯಗಳಲ್ಲಿ ಮುಕ್ತ ಪ್ರವೇಶದಂತಹ ಕ್ಷುಲ್ಲಕ ವಿಷಯದ ಬಗೆಗೆ ಅದೆಂಥ ಬೊಬ್ಬಾಟ! ದೇವಾಲಯವನ್ನು ತೆರೆದಿಡಲಾಗಿದೆ ಎಂದು ಅಸ್ಪಶ್ಯರಿಗೆ ತೋರಿಸಲಾಗುತ್ತದೆ/ಆದರೆ ಪರಿಣಾಮವೇನಾಯಿತು. ಸ್ವಾಭಿಮಾನಿಯಾದ ಅಸ್ಪಶ್ಯನಂತೂ ಈ ದೇಗುಲವೃತ್ತಿ ಇಣುಕಿಯೂ ನೋಡಲಾರ! ತ್ರಾವಣಕೋರ ಹೊರತುಪಡಿಸಿ ಉಳಿದ ಯಾವ ಮಂದಿರಗಳನ್ನು ತೆರೆದಿಟ್ಟಿದ್ದಾರೆ? ಎಲ್ಲಿ ‘ಕತ್ತೆ ಮತ್ತು ನಾಯಿಗಳು’ ಹೋಗುತ್ತವೆಯೋ ಅಂಥ ಮಂದಿರಗಳನ್ನು ತೆರೆದು ಇಟ್ಟಿರಾ? (ನಗೆ) ಯಾವ ಸಾಮಾಜಿಕ ಸುಧಾರಣೆಯ ಡಂಗುರವನ್ನು ಈ ಜನರು ಹೊಡೆಯುತ್ತಾರೋ ಅದರ ಗತಿ ಹೀಗಿದೆ. ಈಗ ರಾಜಕಾರಣವನ್ನು ನೋಡಿ.

1932ರಲ್ಲಿ ದುಂಡುಮೇಜಿನ ಕಾನ್ಫರೆನ್ಸ್‌ನಲ್ಲಿ ಮುಸಲ್ಮಾನ, ಕ್ರಿಶ್ಚಿಯನ್ ಮುಂತಾದ ಅಲ್ಪಸಂಖ್ಯಾತರಂತೆ, ಅಸ್ಪಶ್ಯರಿಗೂ ರಾಜಕೀಯಹಕ್ಕು ಸಿಗಲೇಬೇಕೆಂದು ನಾನು ತೀವ್ರವಾಗಿ ಹೋರಾಡಿದೆ. ಆದ್ದರಿಂದ ಕೆಲ ಮೂರ್ಖ ಮತ್ತು ಬದ್ಮಾಶ್ ಜನರು ಜನತೆಯಲ್ಲಿ ಎಂಥ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆಂದರೆ, ಈ ರಾಜಕೀಯ ಹಕ್ಕು ಗಾಂಧಿಯಿಂದ ಸಿಕ್ಕಿತು. ಆದರದು ಅಪ್ಪಟ ಸುಳ್ಳು. ಅಸ್ಪಶ್ಯರಿಗೆ ಸೂಜಿ ಮೊನೆಯಷ್ಟೂ ರಾಜಕೀಯ ಹಕ್ಕು ಸಿಗಬಾರದೆಂದು, ಮುಸಲ್ಮಾನರೊಂದಿಗೆ ಗುಪ್ತ ಸಂಧಾನ ಮಾಡುವ ಗಾಂಧಿ ಅದನ್ನು ದೊರಕಿಸಿ ಕೊಡದೆ, ನಾನು ದೊರಕಿಸಿ ಕೊಟ್ಟಿದ್ದೇನೆ. ಜಾತಿಯ ನಿರ್ಣಯದಿಂದ ನಮಗೆ ಸ್ವತಂತ್ರ ಮತಕ್ಷೇತ್ರ ಲಭಿಸಿತ್ತು. ಅದರಿಂದ ನಾವು ಯೋಗ್ಯ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಿದ್ದೆವು. ಅದರ ಹೊರತೂ ಲಭಿಸಿದ ಸಾರ್ವತ್ರಿಕ ಮತಾಧಿಕಾರವನ್ನು ಚಲಾಯಿಸುತ್ತಿದ್ದೆವು. ಆದರೆ ಗಾಂಧಿ ಪ್ರಾಯೋಪವೇಷನದ ಬೆದರಿಕೆಯನ್ನು ಹಾಕಿದರು. ಈ ಹಿಂದೆ, ‘ಅಂಬೇಡ್ಕರ್ ಯಾವ ಗಿಡದ ತಪ್ಪಲು’ ಎಂದು ಹೇಳುವ ಕಾಂಗ್ರೆಸಿಗರು ಹೆದರಿದರು. ‘ಅಂಬೇಡ್ಕರ್ ಕೃಪೆ ತೋರಿಸಿರಿ. ಗಾಂಧಿ ಸಾಯುತ್ತಿದ್ದಾರೆ. ಅವರನ್ನು ಉಳಿಸಿರಿ’ ಎಂದು ಗೋಗರೆದರು. ಆದರೆ ನನ್ನ ಎದುರಿಗೆ ಗಾಂಧಿಯ ಜೀವಕ್ಕಿಂತಲೂ, ಹತ್ತುಕೋಟಿ ಅಸ್ಪಶ್ಯರ ಕಲ್ಯಾಣದ ಶ್ರೇಷ್ಠ ಪ್ರಶ್ನೆಯಿತ್ತು. ಗಾಂಧಿ ಕಕ್ಕುಲತೆಯಿಂದ ಬಂದು ಹೇಳಿದರು. ‘‘ಅಂಬೇಡ್ಕರ್ ಈಗ ನನ್ನ ಜೀವ ನಿಮ್ಮ ಕೈಯಲ್ಲಿ.’’ ಅದಕ್ಕಾಗಿ ನಾನು ಮತ್ತೆ ಕರಾರು ಮಾಡಿದೆ. ಆದರೆ ಗಾಂಧಿ ಮಾಡಿದ್ದೇನು. ನಿಮ್ಮ ರಾಜಕೀಯ ಹಕ್ಕಿಗೆ ವಿರೋಧ ಮಾಡುವುದಿಲ್ಲ ಎಂಬ ವಚನಕ್ಕೆ ಮಸಿ ಬಳಿದು, ಕಾಂಗ್ರೆಸ್ ನಮ್ಮ ಅಭ್ಯರ್ಥಿಯನ್ನು ವಿರೋಧಕನೆಂದು, ಸ್ವಾರ್ಥ ಮತ್ತು ನಾಲಾಯಕ್ ಜನರನ್ನು ನಿಲ್ಲಿಸಿದರು. ಯೋಚಿಸಿ, ಇದೇನಾಯಿತು. ನಾನು ಇದನ್ನೆಲ್ಲ ಮಾಡಿದ್ದೇಕೆ?

ಪ್ರತಿಯೊಂದು ಊರಲ್ಲಿ ನಮ್ಮ ಮೇಲೆ ಅತ್ಯಾಚಾರ ನಡೆಯದ ಒಂದೂ ದಿನ ಇರಲಿಕ್ಕಿಲ್ಲ! ಇಲ್ಲೇ ಸಮೀಪದ ಒಂದೂರಲ್ಲಿ ನಡೆದ ಘಟನೆ ಕೇಳಿ ನೀವು ಕನಲಿ ಕೆಂಡವಾಗುತ್ತೀರಿ. ಅಲ್ಲಿಯ ಅಸ್ಪಶ್ಯ ಜನರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು. ಸತತ ಇಪ್ಪತ್ತೊಂದು ದಿನ ಅವರಿಗೆ ನಾನಾ ಬಗೆಯಲ್ಲಿ ಹಿಂಸೆ ನೀಡಿ, ‘ಸತ್ತ ದನಕರುಗಳನ್ನು ಎಳೆದೊಯ್ದು ಹಾಕಲೇಬೇಕು’ ಎಂದು ಸ್ಪಶ್ಯ ಹಿಂದೂಗಳು ಅವರಿಗೆ ಬೆದರಿಕೆ ಹಾಕಿದರು. ಇಲ್ಲದಿದ್ದರೆ 50 ರೂಪಾಯಿ ದಂಡ ತರಬೇಕು. ಕೂಲಿ ಪಡೆಯದೆ ರಸ್ತೆಯನ್ನು ದುರಸ್ತಿ ಮಾಡಿ. ಇಲ್ಲದಿದ್ದರೆ ನಿಮಗಿಲ್ಲಿ ಬದುಕಲು ಅವಕಾಶವನ್ನೇ ಕೊಡಲಾರೆವು. ಎರಡನೆಯದು ಕವಿಠಾ ಎಂಬೂರಿನ ಉದಾಹರಣೆ. ಅವರ ಗುಡಿಸಲುಗಳನ್ನು ನೆಲಸಮಗೊಳಿಸಿದರು. ನೀರಿಗೆ ಸೀಮೆಎಣ್ಣೆ ಸುರಿದರು. ಈ ರೀತಿ ಅಲ್ಲಿಯ ಅಸ್ಪಶ್ಯರಿಗೆ ಹಲವು ಬಗೆಗಳಲ್ಲಿ ಕಿರುಕುಳ ನೀಡಿದರು. ಅಲ್ಲಿಯ ಜನರು ಗಾಂಧಿಯ ಬಳಿಗೆ ಹೋಗಿ ಗೋಗರೆದರು. ಆದರೆ ಗಾಂಧಿ ಮಾಡಿದ್ದೇನು?. ಅವರಿಗೆ ಊರು ತೊರೆದು ಹೋಗಲು ಸಲಹೆ ನೀಡಿದರು.

ದೌರ್ಜನ್ಯ ಮಾಡಿದವರನ್ನು ಶಿಕ್ಷಿಸಿ ಇಲ್ಲವೇ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಿ ಎಂಬ ಸಲಹೆಯನ್ನು ಗಾಂಧಿ ನೀಡಲಿಲ್ಲ. ಇದು ಗಾಂಧಿಯ ನೀತಿ. ನಮ್ಮ ಮೇಲಾಗುವ ದೌರ್ಜನ್ಯ ಅಳಿಯಲೆಂಬ ಕಾರಣಕ್ಕೆ ನಮ್ಮ ಅಭ್ಯರ್ಥಿಯನ್ನು ಕಾಯ್ದೆ ಮಂಡಳಿಗೆ ಕಳಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿ ಅಲ್ಲಿಗೆ ಹೋಗಿ ನಮ್ಮ ಬೇಡಿಕೆಯನ್ನು ಮಂಡಿಸುತ್ತಾರೆ. ನಮ್ಮ ಮೇಲಾಗುವ ದೌರ್ಜನ್ಯಕ್ಕೆ ಪರಿಹಾರ ಬೇಡುತ್ತಾರೆ. ನಮ್ಮ ಹಿತಕ್ಕಾಗಿ ಸತತ ಹೋರಾಡುತ್ತಾರೆ. ಕಾಯ್ದೆ ಮಂಡಳ ಚುನಾವಣೆಯನ್ನು ಗೆಲ್ಲುವುದೇ ನಮ್ಮ ಅಂತಿಮ ಗುರಿ. ಕಾಂಗ್ರೆಸ್ ಟಿಕೆಟ್ ಮೇಲೆ ಚುನಾಯಿತರಾದ ಹರಿಜನ ಅಭ್ಯರ್ಥಿಯನ್ನು ಕೇಳಿ. ಎರಡು ವರ್ಷ ಏಳು ತಿಂಗಳ ನಿಮ್ಮ ಆಡಳಿತದಲ್ಲಿ ಅಸ್ಪಶ್ಯರಿಗಾಗಿ ನೀವು ಮಾಡಿದ್ದೇನು? ಅವರು ಒಂದಾದರೂ ಪ್ರಶ್ನೆ ಕೇಳಿದ್ದಾರೆಯೇ? ನಿಮ್ಮ ಹಿತದ ಒಂದಾದರೂ ಗೊತ್ತುವಳಿಯನ್ನು ಸ್ವೀಕರಿಸಿದ್ದಾರೆಯೇ? ಹಾಗಾದರೆ ಅವರು ಅಲ್ಲಿಗೇಕೆ ಹೋದರು? ವೈಸರಾಯ್‌ನ ಹೊಸ ಘೋಷಣೆಯಂತೆ ನಡುಗಾಲ ಸರಕಾರವು ಅಸ್ಪಶ್ಯರ ಪ್ರತಿನಿಧಿಯನ್ನು ಸೇರಿಕೊಳ್ಳುವುದಾಗಿ ಪ್ರಕಟಪಡಿಸಿದೆ. ಆದರೆ ಗಾಂಧಿ ನಿಮ್ಮ ವಿರುದ್ಧ ತಕರಾರು ಮಾಡಿದರು. ನಿಮ್ಮ ಪ್ರತಿನಿಧಿಯನ್ನು ಅಂದರೆ ನನ್ನನ್ನು ಅಲ್ಲಿಂದ ಕಿತ್ತೊಗೆಯುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನ ಇಂದಿಗೂ ಮುಂದುವರಿದಿದೆ. ಕಾಂಗ್ರೆಸಿನ ಬೆನ್ನು ಹತ್ತಿದ ಹರಿಜನರು ತಂಟೆ ಬಗೆಹರಿಸಲು ಗಾಂಧಿಯ ಬಳಿಗೆ ಹೋದರು.

ಗಾಂಧಿಯವರು ನಿಮಗೇನೂ ಸಿಗಲಾರದು ಎಂದವರಿಗೆ ಹೇಳಿಕಳಿಸಿದರು. ಈ ಎಲ್ಲ ಸ್ಥಿತಿಗತಿಯ ಬಗೆಗೆ ಶಾಂತಚಿತ್ತದಿಂದ ಯೋಚಿಸಿ. ಇದು ಆಪತ್ಕಾಲವಾಗಿದೆ. ಸಾವಿರಾರು ವರ್ಷಗಳಿಂದ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಇಂದಿಗೂ ನಾವು ಆ ಗುಲಾಮಗಿರಿಯ ಪ್ರಹಾರವನ್ನು ಸಹಿಸುತ್ತಿದ್ದೇವೆ. ಇನ್ನು ಮುಂದೆ ಈ ಗುಲಾಮಗಿರಿಯನ್ನು ಬೇರು ಸಹಿತ ಕಿತ್ತೊಗೆಯಲು ಸನ್ನದ್ಧರಾಗಿ. ಅದಕ್ಕಾಗಿ ನಾವು ರಾಜಕೀಯ ಸಾಮರ್ಥ್ಯ (ಸತ್ತೆ) ಗಳಿಸಬೇಕಾಗಿದೆ. ಗಾಂಧಿಯ ಬೂಟಾಟಿಕೆಯ ನಡತೆಯ ಮೇಲೆ ನಂಬಿಕೆಯಿಡಬೇಡಿ. ಈ ಬಳಿಕ ಮತ್ತೆ ಎರಡು ಸಾವಿರ ವರ್ಷಕಳೆದರೂ ಪರಿವರ್ತನೆಯಾಗಲಾರದು. ಪರರ ಮೇಲೆ ಅವಲಂಬಿಸದಿರಿ. ನಮ್ಮ ಉದ್ಧಾರ ನಾವೇ ಮಾಡಬೇಕು. ರಾಜಕೀಯ ಸತ್ತೆ ಸಿಗದೆ ನಮ್ಮ ಉದ್ಧಾರವಾಗಲಾರದು. ಈ ಮಾತು ಗಮನದಲ್ಲಿರಲಿ. (ಚಪ್ಪಾಳೆ). ಈ ದೃಷ್ಟಿಯಿಂದ ಮುಂಬರುವ ಚುನಾವಣೆಯು ಅತ್ಯಂತ ಮಹತ್ವದ್ದು, ನಮ್ಮ ಹೋರಾಟ ಕೌರವ ಪಾಂಡವರ ಸಂಗ್ರಾಮದಂತಿದೆ. ಹಿಂದೂ ಮತ್ತು ಅಸ್ಪಶ್ಯರ ನಡುವಣ ಈ ಸಂಗ್ರಾಮವು ಕೊನೆಯದು. ಅಲ್ಲಿ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಸಂಬಂಧದ ನಿರ್ಣಯವಾಗಲಿದೆ.

ನಮ್ಮ ಯೋಗ್ಯ ಮತ್ತು ಅರ್ಹ ಅಭ್ಯರ್ಥಿ ಆಯ್ಕೆಯಾಗಬೇಕು. ಅದಕ್ಕಾಗಿ ಶತಪ್ರಯತ್ನ ಮಾಡಬೇಕು. ಕಾಯ್ದೆ ಮಂಡಳದಲ್ಲಿಯ ಎಲ್ಲ ಸ್ಥಾನವನ್ನು ನಾವು ಗೆಲ್ಲಬೇಕು. ಹೊಸ ರಾಜಕೀಯ ಸಂವಿಧಾನ ಬರಲಿದೆ. ಆಗ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾ ಸಮ್ಮತಿಯ ಕರಾರು ಮಾಡಬಹುದು. ಈ ಹಿಂದೂಗಳು ಸಾವಿರ ವರ್ಷದ ಹಿಂದಿನ ಪರಿಸ್ಥಿತಿಯನ್ನು ಮರಳಿ ತರಬಹುದು ಎನ್ನುವುದು ನೆನಪಿರಲಿ. ಕಾಂಗ್ರೆಸ್ ಜನರು ಸ್ವರಾಜ್ಯಕ್ಕಾಗಿ ಬೊಬ್ಬೆ ಹೊಡೆಯುತ್ತಾರೆ. ಆದರೆ ನಾನವರಿಗೆ ಪ್ರಶ್ನೆ ಕೇಳಬಯಸುತ್ತೇನೆ. ನಮ್ಮನ್ನು ಆಳುವವರು ಯಾರು? ಗೌಡಕಿ ಮಾಡುವ ಧನಿಕರೇ, ಶ್ರೀಮಂತ ಬಂಡವಾಳದಾರರೇ ಅಥವಾ ವರಿಷ್ಠ ಹಿಂದೂಗಳ ರಾಜ್ಯವೇ? ಕಳೆದ ಇಪ್ಪತ್ತು ವರ್ಷಗಳಿಂದ ನಾನು ಇದನ್ನೇ ಕೇಳುತ್ತಿದ್ದೇನೆ. ಉಳಿದವರೆಲ್ಲರಿಗಿಂತ ಸ್ವರಾಜ್ಯದ ಅಗತ್ಯ ನಮಗೇ ಹೆಚ್ಚಿದೆ. ನಮಗೆ ನಮ್ಮ ರಾಜ್ಯ ಬೇಕು. ಅದೇ ನಮ್ಮ ನಿಜವಾದ ಸ್ವರಾಜ್ಯ. ಹಿಂದೆ ಯುದ್ಧ ಆರಂಭವಾದಾಗ ಕಾಂಗ್ರೆಸ್, ಸರಕಾರದ ವಿರುದ್ಧ ಅಸಹಕಾರದ ಕರೆಕೊಟ್ಟಿತ್ತು.

ಯುದ್ಧ ಮುಗಿದ ಬಳಿಕ ಸ್ವರಾಜ್ಯದ ವಚನ ನೀಡಿದರೆ ಮಾತ್ರ ತಾವು ಸಹಾಯ ಮಾಡುವುದಾಗಿ ಕಾಂಗ್ರೆಸ್ ಸರಕಾರಕ್ಕೆ ಹೇಳಿತು. ಕಾಂಗ್ರೆಸ್ ಸರಕಾರಕ್ಕೆ ಯಾವ ಪ್ರಶ್ನೆ ಹಾಕಿತೋ. ನಾನು ಕಾಂಗ್ರೆಸಿಗೆ ಅದೇ ಪ್ರಶ್ನೆ ಹಾಕುತ್ತಿದ್ದೇನೆ. ನ್ಯಾಯ, ನೀತಿ, ಪ್ರಾಮಾಣಿಕತೆಯಿದ್ದರೆ ಅವರು ಸ್ವರಾಜ್ಯ ದಲ್ಲಿ ಅಸ್ಪಶ್ಯರಿಗೆ ಯೋಗ್ಯ ಪ್ರತಿನಿಧಿತ್ವ ನೀಡಿ, ಶಿಕ್ಷಣ, ನೌಕರಿ ಮತ್ತು ಸಾಮಾಜಿಕ ಪ್ರಗತಿಯ ವಿಷಯದಲ್ಲಿ ಸ್ವರಾಜ್ಯದಲ್ಲಿ ಅಸ್ಪಶ್ಯರಿಗೆ ಯೋಗ್ಯ ಸವಲತ್ತು ಮತ್ತು ಸಂರಕ್ಷಣೆ ನೀಡುವುದಾಗಿ ಭರವಸೆಯನ್ನು ನೀಡಬೇಕು. ಆದರೆ ಅವರು ಹಾಗೆಲ್ಲ ಆಶ್ವಾಸನೆ ನೀಡುವುದಿಲ್ಲ. ಈ ವಿಷಯದ ಬಗೆಗೆ ಅವರೇನೂ ಹೇಳುವುದಿಲ್ಲ. ಮಾತನಾಡದವನ ಮನದೊಳಗೆ ಏನೋ ಮಸಲತ್ತು ನಡೆದಿರುತ್ತದೆ. ವಿಷವಿರುತ್ತದೆ ಎನ್ನುವುದು ಲಕ್ಷದಲ್ಲಿರಲಿ. ನನ್ನ ಗುಜರಾತಿ ಬಂಧುಗಳೆ! ನನಗೆ ಮಹಾರಾಷ್ಟದ ಬಗೆಗೆ ಯಾವ ಚಿಂತೆಯೂ ಇಲ್ಲ. ಏಕೆಂದರೆ ಅವರು ಸಂಘಟಿತರಾಗಿದ್ದಾರೆ. ಅವರು ಯಾರಿಗೂ ಮೋಸಹೋಗುವುದಿಲ್ಲ. ಸಂಘಟನೆಯ ಅದ್ಭುತ ಸಾಮರ್ಥ್ಯದಿಂದ ಅವರು ವಿರೋಧಿಗಳ ಧೂಳೀಪಟ ಮಾಡಬಲ್ಲರು. ಮಹಾರಾಷ್ಟ್ರದಂತೆ ಗುಜರಾತ್‌ನಲ್ಲೂ ಅಸ್ಪಶ್ಯರಿಗಾಗಿ ನಾಲ್ಕು ಸ್ಥಾನಗಳಿವೆ. ಈ ನಾಲ್ಕೂ ಸ್ಥಾನಗಳಿಗಾಗಿ ಫೆಡರೇಶನ್ ಹೋರಾಡುತ್ತದೆ. ಹೋರಾಡದೆ ನಾವು ಹಿಂದೆ ಸರಿಯುವುದಿಲ್ಲ. ನಮ್ಮ ವಿರೋಧಕರ ಹತ್ತಿರ ಪ್ರಚಾರ- ಹಣ- ಜನಬಲ ವಿಫುಲವಾಗಿದೆ. ಇದು ನಮಗೂ ಗೊತ್ತು. ಆದರೆ ಅದರ ಬಲದಿಂದ ಗೆಲ್ಲುವುದು ನಿಜವಾದ ಗೆಲುವು ಅಲ್ಲ. ನಾವು ಕೊಂದು ಸಾಯುತ್ತೇವೆ ವಿನಃ ರಣರಂಗ ಬಿಟ್ಟು ಪಲಾಯನ ಮಾಡುವುದಿಲ್ಲ. ಇದೇ ನಮ್ಮ ನಿರ್ಧಾರ.

ಅದು ಸಫಲವಾಗುವುದು ನಿಮ್ಮ ಕೈಯಲ್ಲಿದೆ. ಕಾಂಗ್ರೆಸ್‌ನ ಹುಸಿ ಪ್ರಚಾರವನ್ನು, ಲಂಚರುಶುವತ್ತನ್ನು ಒದ್ದುಬಿಡಿ. ಪಾದಯಾತ್ರೆಯಿಂದ ತೀರ್ಥಯಾತ್ರೆಯ ಪುಣ್ಯ ಸಿಗುತ್ತದೆ ಎನ್ನುತ್ತಾರೆ. ಅದೇ ರೀತಿ ನೀವು ಮುಂಬರುವ ಚುನಾವಣೆಯಲ್ಲಿ ನಮ್ಮ ಸಮಾಜದ ಉದ್ಧಾರದ ಪುಣ್ಯ ಸಂಪಾದನೆಗಾಗಿ ಸ್ವಂತ ಕಾಲಿಂದ ಹೋಗಿ, ಫೆಡರೇಶನ್‌ನ ಅಭ್ಯರ್ಥಿಗೆ ಮತ ನೀಡಿ ಗೆಲ್ಲುವಂತೆ ಮಾಡಿ. ಅಖಿಲ ಭಾರತೀಯ ದಲಿತ ಫೆಡರೇಶನ್ ನಮ್ಮ ಏಕಮೇವ ರಾಜಕೀಯ ಸಂಸ್ಥೆಯಾಗಿರುವುದರಿಂದ ಅದರ ಮೇಲೆ ನಂಬಿಕೆಯಿರಿಸಿ ಒಗ್ಗಟ್ಟಾಗಿ. ಕೊನೆಗೆ ನಿಮಗೊಂದೇ ಮಾತು ಹೇಳಬಯಸುತ್ತೇನೆ. ಈ ಅಹಮದಾಬಾದ್ ನಗರದಲ್ಲಿ ಗಿರಣಿ ಕಾರ್ಮಿಕರ ಸಂಖ್ಯೆಯು ಅಪಾರವಾಗಿದೆ. ಬಹುಸಂಖ್ಯಾತ ಕಾರ್ಮಿಕರು ಅಸ್ಪಶ್ಯರಾಗಿದ್ದಾರೆ. ಈ ನಗರದ ಕಾರ್ಮಿಕರ ಪ್ರತಿನಿಧಿಗಾಗಿ ಕಾಯ್ದೆ ಮಂಡಳದಲ್ಲಿ ಎರಡು ಸ್ಥಾನಗಳಿವೆ. ಕಳೆದ ಬಾರಿ ಇಲ್ಲಿಯ ಕಾರ್ಮಿಕ ಮಹಾಜನ ಎಂಬ ಕಾಂಗ್ರೆಸ್‌ವಾದಿ ಸಂಸ್ಥೆಯು ಅಸ್ಪಶ್ಯ ಕಾರ್ಮಿಕರ ಮತಗಳ ಸಹಾಯದಿಂದ ಗುಲ್ಜಾರಿಲಾಲ್ ನಂದಾ ಮತ್ತು ಖಂಡೂಭಾಯಿ ದೇಸಾಯಿ ಇವರನ್ನು ಆಯ್ಕೆ ಮಾಡಿ ಕಾಯ್ದೆ ಮಂಡಳಿಗೆ ಕಳಿಸಿತು. ಅವರು ನಮ್ಮ ಪ್ರತಿನಿಧಿಗಳಾಗುವುದು ಸಾಧ್ಯವೇ? ಈ ಬಾರಿ ನಾವು ಈ ಎರಡೂ ಸ್ಥಾನಗಳಿಗಾಗಿ ಹೋರಾಡಿ ನಮ್ಮದೇ ಅಭ್ಯರ್ಥಿಯನ್ನು ಗೆಲ್ಲಿಸಿ ತರೋಣ. ಬಂಡವಾಳದಾರ ಮತ್ತು ಕಾಂಗ್ರೆಸ್ ಇವರ ತಂತ್ರದಿಂದ ನಡೆಯುವ ಕಾರ್ಮಿಕ ಮಹಾಜನ ಸಂಸ್ಥೆಯ ಮೇಲೆ ನಂಬಿಕೆಯಿಡಬೇಡಿ. ಕೊನೆಗೆ ನಾನು ನಿಮಗೆ ನೀಡುವ ಸಂಕೇತವೇನೆಂದರೆ, ಭವಿಷ್ಯವನ್ನು ಗುರುತಿಸಿ, ನಮ್ಮ ಗುಲಾಮಗಿರಿಯನ್ನು ತೊಡೆದು ಹಾಕಲು ಮುಂಬರುವ ಚುನಾವಣೆಯನ್ನು ಗೆಲ್ಲಿ ಮತ್ತು ಜಯವನ್ನು ಸಂಪಾದಿಸಿ.(ಭಯಂಕರ ಚಪ್ಪಾಳೆ, ಮತ್ತು ಜಯಘೋಷ)

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ) *

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75