ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ ಹರಿವು: ‘ನಾಸಾ’ದ ಚಂದ್ರ ಶೋಧಕ ನೌಕೆ ಪತ್ತೆ
ವಾಶಿಂಗ್ಟನ್, ಮಾ. 9: ಚಂದ್ರನ ಹಗಲಿನ ಭಾಗದಲ್ಲಿ ನೀರಿನ ಕಣಗಳು ಹರಿದಾಡುತ್ತಿರುವುದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಚಂದ್ರ ಶೋಧಕ ನೌಕೆ ‘ಲೂನಾರ್ ರೆಕನೈಸನ್ಸ್ ಆರ್ಬಿಟರ್’ (ಎಲ್‌ಆರ್‌ಒ) ಪತ್ತೆಹಚ್ಚಿದೆ.
ಚಂದ್ರನ ಮೇಲೆ ಇಳಿಯಲು ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಚಿಂತಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಂಶೋಧನೆ ಅದಕ್ಕೆ ಪ್ರಯೋಜನಕಾರಿಯಾಗಬಹುದು ಎನ್ನಲಾಗಿದೆ.
ಚಂದ್ರನ ಮೇಲ್ಮೈಯಲ್ಲಿ ನೀರಿನ ಕಣಗಳ ತೆಳು ಪದರವು ತಾತ್ಕಾಲಿಕವಾಗಿ ಅಂಟಿಕೊಂಡಿರುವುದನ್ನು ಶೋಧಕ ನೌಕೆಯಲ್ಲಿದ್ದ ‘ಲೈಮನ್ ಆಲ್ಫಾ ಮ್ಯಾಪಿಂಗ್ ಪ್ರಾಜೆಕ್ಟ್ (ಲ್ಯಾಂಪ್)’ ಪತ್ತೆಹಚ್ಚಿದೆ ಎಂದು ‘ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್’ನಲ್ಲಿ ಪ್ರಕಟವಾದ ಪ್ರಬಂಧವೊಂದು ತಿಳಿಸಿದೆ.
‘‘ಚಂದ್ರನ ಮೇಲ್ಮೈ ಮೇಲಿನ ನೀರಿಗೆ ಸಂಬಂಧಿಸಿದ ಸಿದ್ದಾಂತವನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಅಧ್ಯಯನವು ಮಹತ್ವದ ಹೆಜ್ಜೆಯಾಗಿದೆ. ಎಲ್‌ಆರ್‌ಒ ಕಾರ್ಯಾಚರಣೆಯಿಂದ ವರ್ಷಗಟ್ಟಳೆ ಅವಧಿಯಲ್ಲಿ ಪಡೆದ ದತ್ತಾಂಶಗಳನ್ನು ಒಟ್ಟುಗೂಡಿಸಿ ಈ ಫಲಿತಾಂಶ ಪಡೆಯಲಾಗಿದೆ’’ ಎಂದು ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿರುವ ‘ನಾಸಾ’ದ ಗೊಡಾರ್ಡ್ ಬಾಹ್ಯಾಕಾಶ ಹಾರಾಟ ಕೇಂದ್ರದ ಎಲ್‌ಆರ್‌ಒ ಉಪ ಯೋಜನಾ ವಿಜ್ಞಾನಿ ಜಾನ್ ಕೆಲ್ಲರ್ ಹೇಳಿದರು.