ಗ್ರಾಹಕರೇ... ನಿಮಗೂ ಹಕ್ಕು ಬಾಧ್ಯತೆಗಳಿವೆ!

Update: 2019-03-14 18:36 GMT

ಮಾರ್ಚ್ 15 ವಿಶ್ವಗ್ರಾಹಕರ ದಿನ. ಇದೊಂದು ನೆನಪೋಲೆ ಮಾತ್ರ. ಸಾಮಾನ್ಯ ನಾಗರಿಕರಾದ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ಜೀವನಾವಶ್ಯಕಗಳನ್ನು ಖರೀದಿಸದೆ, ಬಳಸದೆ, ಬದುಕಲು ಸಾಧ್ಯವಿಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದು 32 ವರ್ಷಗಳು ದಾಟಿ ಹೋಗಿದ್ದರೂ ಇನ್ನೂ ಜನಸಾಮಾನ್ಯರಿಗೆ ‘‘ತಾವು ಗ್ರಾಹಕರು, ತಮಗೂ ಹಕ್ಕು ಬಾಧ್ಯತೆಗಳಿವೆ’’ ಎಂಬುದೇ ತಿಳಿದಿಲ್ಲ. ತಿಳಿಸುವ ಪ್ರಯತ್ನವನ್ನು ನಮ್ಮ ರಾಜಕಾರಣಿಗಳು ಮಾಡುವುದಿಲ್ಲ. ಯಾಕೆಂದರೆ ಶೋಷಣೆ ಮಾಡುವವರು, ವಂಚನೆ ಮಾಡುವವರು, ಉದ್ಯಮಿಗಳು, ವ್ಯಾಪಾರಿಗಳು, ಎಲ್ಲರೂ ಶ್ರೀಮಂತರೇ. ರಾಜಕಾರಣಿಗಳ ಷೋಷಕರು ಕೂಡಾ ಅವರೇ. ಹಾಗಿರುವಾಗ, ಸಾಮಾನ್ಯ ಗ್ರಾಹಕರ ಪರವಾಗಿ ಅವರು ದನಿ ಎತ್ತುವುದಿಲ್ಲ. ಕಷ್ಟಪಟ್ಟು ದುಡಿದು ಪಡೆದ ಹಣಕ್ಕೆ ಸರಿಯಾದ ಪ್ರತಿಫಲ ಬರುವುದಿಲ್ಲ. ಕಳ್ಳಸಂತೆ, ವ್ಯಾಪಾರ, ದುಬಾರಿ ಬೆಲೆ, ಅಳತೆ ತೂಕದಲ್ಲಿ ಮೋಸ, ಕಲಬೆರಕೆ, ರಾಸಾಯನಿಕ ಬಳಸಿ ಗೃಹವಸ್ತುಗಳ ಮಾರಾಟ... ಹೀಗೆ ಗುರುತಿಸುತ್ತಾ ಹೋದರೆ ಬೆಳೆಯುತ್ತಲೇ ಇರುವ ವಂಚನಾ ಜಾಲಗಳು ಇಂದು ಸರ್ವಸಾಮಾನ್ಯವಾಗಿದೆ. ಭಾರತೀಯ ಗ್ರಾಹಕರು ದಿನನಿತ್ಯ ವಂಚನೆಗೆ ಗುರಿಯಾಗುತ್ತಲೇ ಇದ್ದಾರೆ.

 ಗ್ರಾಹಕ ವಂಚನೆ ಜಾಲ ಇಂದು ಆಸ್ಪತ್ರೆಗಳು, ವೈದ್ಯಕೀಯ ಸೇವೆ, ಶಾಲಾ- ಕಾಲೇಜುಗಳು, ಸಾರಿಗೆ ಸೇವೆ ಮತ್ತು ದಿನಬಳಕೆ ವಸ್ತುಗಳ ವ್ಯವಹಾರದಲ್ಲೂ ನಿರಂತರವಾಗಿ ನಡೆಯುತ್ತಿವೆ. ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಪ್ರಜ್ಞೆ ಇರುವುದಿಲ್ಲ. ಕೆಲವೊಮ್ಮೆ ಅಸಹಾಯಕ ಸ್ಥಿತಿಯಲ್ಲಿ ಸುಲಭವಾಗಿ ಶೋಷಣೆಗೆ ಬಲಿಯಾಗುತ್ತಾರೆ. ರೋಗಿಯೊಬ್ಬ ನೋವನ್ನು ಪರಿಹರಿಸಲು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ, ರೋಗಿಯ ನೋವನ್ನು ಶೋಷಣೆಗೆ ಮಾರ್ಗವಾಗಿ ಉಪಯೋಗಿಸುವ ವೈದ್ಯರಿದ್ದಾರೆ, ಆಸ್ಪತ್ರೆಗಳಿವೆ. ದುಬಾರಿ ವೆಚ್ಚದ ವೈದ್ಯಕೀಯ ಶಿಕ್ಷಣ ವೈದ್ಯರನ್ನು ಸೇವಾ ಮನೋಭಾವ ಬಿಟ್ಟು, ಕಳೆದುಕೊಂಡ ಸಂಪತ್ತಿನ ಕ್ರೋಡೀಕರಣದತ್ತ ಸೆಳೆಯುತ್ತದೆ. ದುಬಾರಿ ಯಂತ್ರಗಳ ಬಳಕೆ ಅನಗತ್ಯವಾದರೂ ಅಗತ್ಯವೆಂದು ನಂಬಿಸಿ, ವೆಚ್ಚವನ್ನು ಸರಿದೂಗಿಸುವ ಪ್ರಯತ್ನ ನಡೆಯುತ್ತಿದೆ. ಇಂದು ವೈದ್ಯಕೀಯ ರಂಗದಲ್ಲಿ ಸೇವಾ ಮನೋಭಾವವೇ ಮಾಯವಾಗುತ್ತಿದೆ.

ನೆಗಡಿ, ಶೀತ, ತಲೆನೋವು ಮುಂತಾದ ಸಾಮಾನ್ಯ ಕಾಯಿಲೆಗಳಿಗೂ ಜನರು ವೈದ್ಯರನ್ನು ಸಂಪರ್ಕಿಸಲು ಭಯಪಡುತ್ತಾರೆ. ಆಸ್ಪತ್ರೆಯಂತೂ ಒಂದು ‘ಶಿಕ್ಷಾಗೃಹ’ವೆಂಬಂತಾಗಿದೆ. ಕೋಣೆ ಬಾಡಿಗೆ, ವೈದ್ಯರ ಶುಲ್ಕ, ಲಾಬೋರೇಟರಿ ಶುಲ್ಕ, ದಾದಿಯರ ಶುಲ್ಕ, ಪರಿಶೀಲನಾ ಶುಲ್ಕ-ಹೀಗೆ ಹಲವಾರು ಶುಲ್ಕಗಳ ಬಿಲ್ಲು ನೋಡಿದಾಗ ರೋಗವಿಲ್ಲದವನಿಗೂ ರೋಗ ಕಾಡಬಹುದು. ಗ್ರಾಹಕರಾದ ರೋಗಿಯ ದುರವಸ್ಥೆಯ ಪರಿಹಾರಕ್ಕಾಗಿ ಯಾವ ಸರಕಾರವೂ ಕ್ರಮ ಕೈಗೊಂಡಿಲ್ಲ. ಕೇವಲ ಗ್ರಾಹಕ ಸಂರಕ್ಷಣಾ ಕಾಯ್ದೆಯಿಂದ ಈ ಸನ್ನಿವೇಶ ಸುಧಾರಣೆ ಆಗುವುದಿಲ್ಲ. ವೈದ್ಯಕೀಯ ಶಿಕ್ಷಣ ರಂಗದಲ್ಲೇ ಮೂಲಭೂತ ಬದಲಾವಣೆಯಾಗಬೇಕು. ಶಿಕ್ಷಣ ವೆಚ್ಚವನ್ನು ಕಡಿತಗೊಳಿಸುವ, ಸೇವಾಭಾವನೆ ಬೆಳಸುವ ವ್ಯವಸ್ಥೆ ಆಗಬೇಕು. ಶಿಕ್ಷಣ ರಂಗದಲ್ಲಿ ಇಂದು ಬಹಳಷ್ಟು ಶೋಷಣೆಗಳಾಗುತ್ತಿವೆ. ಕಾಲೇಜು ಸೇರ್ಪಡೆಯಾಗುವಾಗ ಅರ್ಹತಾ ಪರಿಶೀಲನೆಗಾಗಿ ಕೊಡುವ ಸರ್ಟಿಫಿಕೇಟುಗಳನ್ನು ಅಡವಿಟ್ಟು ಹಣ ವಸೂಲು ಮಾಡುವುದು ಸರ್ವೇಸಾಮಾನ್ಯವಾಗಿದೆ. ‘ಇದು ಮೋಸದ ವ್ಯಾಪಾರ, ಶಿಕ್ಷಾರ್ಹವಾಗಿದೆ’ ಎಂದು ಕೇಂದ್ರ ಮಂತ್ರಾಲಯ ಪ್ರಕಟನೆ ನೀಡಿದೆ. ರಾಜ್ಯ ಸರಕಾರಗಳೂ, ಯುನಿವರ್ಸಿಟಿಗಳೂ ತಿಳಿಸುತ್ತಿವೆೆ. ಹಾಗಿದ್ದರೂ ರಾಜ್ಯಾದ್ಯಂತ ಈ ದಂಧೆ ನಡೆಯುತ್ತಿದೆ. ದೂರು ನೀಡಿದರೂ ಸರಕಾರ ಕ್ರಮ ತೆಗೆದುಕೊಳ್ಳ್ಳುವುದಿಲ್ಲ. ವಿದ್ಯಾರ್ಥಿಗಳು ನಿರಂತರ ವಂಚನೆಗೊಳಗಾಗುತ್ತಾರೆ.

ಇನ್ನು ರೈತ ಸಮುದಾಯವು ಅನ್ನದಾತರೆಂದು ಹೊಗಳಿಸಲ್ಪಟ್ಟರೂ ಕಳಪೆ ಗುಣಮಟ್ಟದ ಬೀಜ, ತೂಕ ಅಳತೆಯಲ್ಲಿ ವಂಚನೆ, ಮಾರುಕಟ್ಟೆಯಲ್ಲಿ ಕೃತಕ ಬೆಲೆಯೇರಿಕೆ, ಇತ್ಯಾದಿ ವಂಚನೆಗೆ ಗುರಿಯಾಗುತ್ತಲೇ ಇದ್ದಾರೆ. ತೆರೆದ ಮಾರುಕಟ್ಟೆಯಲ್ಲಿರುವ ತರಕಾರಿ, ಧಾನ್ಯ, ಹಣ್ಣುಗಳ ಬೆಲೆಯ ಅರ್ಧ ದಷ್ಟು ಕೂಡಾ ರೈತರಿಗೆ ಲಭ್ಯವಾಗುವುದಿಲ್ಲ. ಕಷ್ಟಪಟ್ಟು ಬೆವರು ಸುರಿಸಿ ದುಡಿದ ರೈತನಿಗೆ ಸಿಗುವ ಪ್ರತಿಫಲಕ್ಕಿಂತ ಮೂರುಪಟ್ಟು ಹೆಚ್ಚು ಲಾಭ ಮಧ್ಯವರ್ತಿಗಳು, ಏಜೆಂಟರು, ವ್ಯಾಪಾರಿಗಳು ಪಡೆಯುತ್ತಾರೆ. ರೈತರಿಗೆ ನೇರ ವ್ಯವಹಾರದ ಅವಕಾಶಗಳಿದ್ದಲ್ಲಿ ಸಾಲಮನ್ನಾದ ಆವಶ್ಯಕತೆಯೇ ಇರುವುದಿಲ್ಲವೆನ್ನುತ್ತಾರೆ ರೈತರು. ರೈತರು ತಮ್ಮದೇ ವ್ಯವಹಾರ ಮಂಡಲದ ಚಿಂತನೆಗೆ ಮುಂದಾಗಬೇಕು. ಜನರಿಗೆ ಮಧ್ಯವರ್ತಿಗಳು, ವ್ಯಾಪಾರಿಗಳಿಗಿಂತ ಕಡಿಮೆ ಬೆಲೆಗೆ ರೈತರು ತಮ್ಮ ಸರಕನ್ನು ಮಾರಿದರೂ ಸಮರ್ಪಕ ಪ್ರತಿಫಲ ಪಡೆಯಬಲ್ಲರು. ಇಂತಹ ಅವಕಾಶ ಸರಕಾರ ನೀಡುವುದಿಲ್ಲ. ರೈತರೂ ಗ್ರಾಹಕರೇ ಎಂಬುದನ್ನು ಮನಗಾಣಬೇಕು. ಗೃಹಿಣಿಯರ ಅಳಲು ಮತ್ತಷ್ಟು ಗಂಭೀರವಾಗಿದ್ದು, ತರಕಾರಿ ಅಂಗಡಿಗಳಿ ರಲಿ, ದಿನಸಿ ಅಂಗಡಿಗಳಿರಲಿ, ಇತ್ತೀಚೆಗೆ ತಲೆ ಎತ್ತಿರುವ ಮಾಲುಗಳೇ ಇರಲಿ ‘‘ಲಾಭಬಡುಕುತನ’’ವೆಂಬ ವಂಚನೆಗೆ ಗುರಿಯಾಗುವವರು ಗೃಹಣಿಯರೇ.

ತೂಕ, ಅಳತೆಯಲ್ಲಿ ಮಾತ್ರವಲ್ಲ ಕಳಪೆ ಸಾಧನಗಳನ್ನು ಬಣ್ಣ ಕೊಟ್ಟು ವರ್ಣಿಸಿ, ಬೆಲೆ ಕಡಿತಗೊಳಿಸಿ ಮಾರುವ ಮಾಲುಗಳೇ ಜಾಸ್ತಿ. ಅವಧಿ ಮೀರಿದ ಸಾಧನವೊಂದನ್ನು ಮಾರಾಟ ಮಾಡಿ, ಮನೆಯಲ್ಲಿ ಹೋಗಿ ನೋಡಿದಾಗ ಗುಣಮಟ್ಟ ಕಳೆದಿರುವುದು ಗೊತ್ತಾದಾಗ ಹಿಂದಿರುಗಿಸಲು ಹೋದ ಮಹಿಳೆಗೆ ವ್ಯಾಪಾರಿ ಛೀಮಾರಿ ಹಾಕುವುದು ಸಾಮಾನ್ಯವಾಗಿದೆ. ಹಾಲಿನ ಪೊಟ್ಟಣಗಳು, ತಂಪು ಪಾನೀಯಗಳು ಅವಧಿ ಮೀರಿಯೇ ಮಾರಾಟವಾಗುತ್ತಿದ್ದರೂ, ಆರೋಗ್ಯ ಇಲಾಖೆಯಾಗಲೀ ಗುಣಮಟ್ಟ ಮಾಪನ ಇಲಾಖೆಯಾಗಲೀ ಗಮನಿಸದಿರುವುದು ಕಂಡು ಬರುತ್ತದೆ. ಜಿಲ್ಲಾಡಳಿತ ಮತ್ತು ಕಾರ್ಪೊರೇಟರ್ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಸಾರಿಗೆ ಗ್ರಾಹಕರಿಗೆ ಇತ್ತೀಚೆಗೆ ಬಹಳಷ್ಟು ಸುಧಾರಣೆಗಳಾಗಿವೆ.

ಆದರೆ ಸಿಟಿಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ, ಸ್ತ್ರೀಯರಿಗೆ ಪ್ರತ್ಯೇಕ ಸೀಟುಗಳ ವ್ಯವಸ್ಥೆಯಿದ್ದರೂ ನಿರ್ವಾಹಕರು ಅದರತ್ತ ಗಮನ ಹರಿಸುವುದೇ ಇಲ್ಲ. ಹಿರಿಯ ನಾಗರಿಕರ ಸೀಟಿನಲ್ಲಿ ಹುಡುಗರು, ಹುಡುಗಿಯರಿರುತ್ತಾರೆ. ಮಹಿಳಾ ಸೀಟು ಖಾಲಿ ಇದ್ದರೂ ಪುರುಷರ ಸೀಟಿನಲ್ಲಿ ಮಹಿಳೆಯರು, ಮಹಿಳೆಯರ ಸೀಟಿನಲ್ಲಿ ಪುರುಷರು, ಇವೆೆಲ್ಲಾ ನಿರ್ವಾಹಕರ ಅಶಿಸ್ತಿನ ಪರಿಣಾಮವೇ ಆಗಿದೆ. ಇಲಾಖೆ ಸುವ್ಯವಸ್ಥಿತ ಪ್ರಯಾಣಕ್ಕೆ ಅನುವುಮಾಡಲು ನಿರ್ವಾಹಕರಿಗೆ ತರಬೇತಿ ನೀಡಬೇಕು. ಮಹಾನಗರ ಮಂಗಳೂರಿನಲ್ಲಿ ಫುಟ್‌ಪಾತ್‌ಗಳೇ ಇಲ್ಲ. ವಾಹನ ಇದ್ದವರಿಗೆ ಮಾತ್ರ ನಗರ ಎನ್ನುವಂತಿದೆ. ಇದ್ದ ಫುಟ್‌ಪಾತ್‌ಗಳನ್ನು ವಾಹನ ನಿಲುಗಡೆಗಾಗಿ ಬಳಸಲಾಗುತ್ತಿದೆ. ಅಗಲೀಕರಣಗೊಂಡ ರಸ್ತೆಗಳು ಕೂಡ ವಾಹನ ಸಂಚಾರಕ್ಕಾಗಿ ಅಲ್ಲ, ವಾಹನ ನಿಲುಗಡೆಗಾಗಿ ಬಳಕೆಯಾಗುತ್ತಿವೆ. ಮಾರ್ಚ್ ವಿಶ್ವ ಗ್ರಾಹಕರ ದಿನದಂದಾದರೂ ಆಡಳಿತ ಮತ್ತು ಗ್ರಾಹಕ ಮಹಾಜನರು ಎಚ್ಚರಗೊಳ್ಳುವರೇ? ಗ್ರಾಹಕರೇ, ನಿಮಗೆ ಹಕ್ಕುಗಳಿವೆ ಎಚ್ಚರಗೊಳ್ಳಿ.

Writer - ಪ್ರೊ. ಬಿ.ಎಂ. ಇಚ್ಲಂಗೋಡು

contributor

Editor - ಪ್ರೊ. ಬಿ.ಎಂ. ಇಚ್ಲಂಗೋಡು

contributor

Similar News