ನಮ್ಮೆಲ್ಲ ಸಾಮಾಜಿಕ ವೇದನೆಗೆ ಉಚ್ಚಶಿಕ್ಷಣವೇ ಸಿದ್ಧೌಷಧ

Update: 2019-03-14 18:36 GMT

ಭಾಗ-1

ಪೀಪಲ್ಸ್ ಎಜುಕೇಶನ್ ಸೊಸೈಟಿಯು ನಡೆಸುತ್ತಿರುವ ಔರಂಗಾಬಾದ್‌ನಲ್ಲಿರುವ ಮಿಲಿಂದ ಮಹಾವಿದ್ಯಾನಿಲಯದ ಕಟ್ಟಡದ ಅಡಿಗಲ್ಲು ಸಮಾರಂಭವನ್ನು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಸೆಪ್ಟಂಬರ್ 1, 1951ರಂದು ನೆರವೇರಿಸಿದರು. ಆ ಸಂದರ್ಭದಲ್ಲಿ ಡಾ. ರಾಜೇಂದ್ರ ಪ್ರಸಾದರು ಡಾ.ಅಂಬೇಡ್ಕರರು ಅಸ್ಪಶ್ಯ ಮತ್ತು ಕಡು ಬಡವರಿಗಾಗಿ ಕೈಗೊಂಡ ಶೈಕ್ಷಣಿಕ ಪ್ರಸಾರ-ಪ್ರಚಾರವನ್ನು ಬಾಯಿತುಂಬ ಹೊಗಳಿ ಕೊಂಡಾಡಿದರು. ಪೀಪಲ್ಸ್ ಎಜುಕೇಶನ್ ಸೊಸೈಟಿಯ ಧ್ಯೇಯ ಉದ್ದೇಶವನ್ನು ಪ್ರಶಂಸೆ ಮಾಡಿದರು. ಈ ಅಡಿಗಲ್ಲು ಸಮಾರಂಭಕ್ಕಿಂತ ಮೊದಲು ಡಾ. ಅಂಬೇಡ್ಕರರು ಭಾಷಣ ಮಾಡಿದರು.

ಅಧ್ಯಕ್ಷ ಮಹಾರಾಜರೆ,
 ಯಾವ ಕಾಲೇಜಿನ ಅಡಿಗಲ್ಲು ಸ್ಥಾಪಿಸಲು ನಾನು ನಿಮಗೆ ವಿನಂತಿ ಮಾಡಿಕೊಳ್ಳುತ್ತಿದ್ದೇನೆಯೋ ಆ ಕಾಲೇಜು 19 ಜೂನ್ 1950ರಲ್ಲಿ ಅಸ್ತಿತ್ವಕ್ಕೆ ಬಂತು. ಈ ಕಾಲೇಜು ಆರಂಭ ಮಾಡಿ ಅದರ ಆಡಳಿತವನ್ನು ನಿರ್ವಹಿಸುವುದರ ಬಗ್ಗೆ ಮತ್ತು ಕಾಲೇಜು ಶುರು ಮಾಡಿದ ಕಾರಣದ ಬಗ್ಗೆ ಒಂದೆರಡು ಮಾತು ಈ ಸಂದರ್ಭದಲ್ಲಿ ಹೇಳಿದರೆ ಅಪ್ರಸ್ತುತವಾಗಲಾರದು ಎಂದುಕೊಂಡಿದ್ದೇನೆ. ಈ ಕಾಲೇಜನ್ನು ‘ಪೀಪಲ್ಸ್ ಎಜುಕೇಶನ್ ಸೊಸೈಟಿ’ ಮುಂಬೈ, ಎಂಬ ಸಂಸ್ಥೆಯು ನಡೆಸುತ್ತಿದ್ದು ಈ ಸಂಸ್ಥೆಗೆ ನಾನೇ ಅಧ್ಯಕ್ಷನಾಗಿದ್ದೇನೆ. ಈ ಸೊಸೈಟಿಯನ್ನು 1945ರಲ್ಲಿ ಸ್ಥಾಪಿಸಲಾಯಿತು. ಸಾಮಾನ್ಯವಾಗಿ ದೇಶದ ತುಂಬ ಮತ್ತು ಮುಖ್ಯವಾಗಿ ಹಿಂದುಳಿದ ವರ್ಗದವರಲ್ಲಿ ಉಚ್ಚ ಶಿಕ್ಷಣ ಪ್ರಸಾರ ಮಾಡುವುದು ಈ ಸಂಸ್ಥೆಯ ಧ್ಯೇಯೋದ್ದೇಶವಾಗಿದೆ. ಈ ಧ್ಯೇಯದಂತೆ ಮುಂಬೈಯಲ್ಲಿ 1946ರಲ್ಲಿ ‘ಸಿದ್ಧಾರ್ಥ’ ಎಂಬ ಹೆಸರಿನಲ್ಲಿ ಈ ಕಾಲೇಜು ತೆರೆಯಲಾಯಿತು. ಕೇವಲ ನಾಲ್ಕೇ ವರ್ಷಗಳ ಕಾಲಾವಧಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದೇಶ ವಿದೇಶಗಳ ಆಟ ಶೈಕ್ಷಣಿಕ ದರ್ಜೆ -ಈ ಎಲ್ಲ ವಿಷಯದಲ್ಲಿ ಸಿದ್ಧಾರ್ಥ ಕಾಲೇಜು ಮುಂಬೈ ರಾಜ್ಯದಲ್ಲೇ ಮಹತ್ವದ ಸ್ಥಾನ ಗಿಟ್ಟಿಸಿದೆ. ಈ ಕಾಲೇಜಿನಲ್ಲಿ 800 ವಿದ್ಯಾರ್ಥಿಗಳಿದ್ದಾರೆ. ಬೇರೆ ಕಡೆಗಳಲ್ಲಿ ಇಷ್ಟು ವಿದ್ಯಾರ್ಥಿಗಳ ಸಂಖ್ಯೆ ಸಿಗುವುದೇ ವಿರಳ. ಅಂತರ್ ಕಾಲೇಜಿನ ಕ್ರೀಡಾ ಸ್ಪರ್ಧೆಯಲ್ಲಿ ಪ್ರತಿಯೊಂದು ಕ್ರೀಡೆಗಳಲ್ಲಿ ವಿಜಯವನ್ನು ಸಂಪಾದಿಸಿದೆ. ಮುಂಬೈ ವಿಶ್ವವಿದ್ಯಾನಿಲಯದ ಶ್ರೇಷ್ಠಿ ಶಿಷ್ಯ ವೃತ್ತಿ ಮತ್ತು ಪ್ರಶಸ್ತಿಯನ್ನು ಎಂದೂ ಈ ಕಾಲೇಜು ಕಳೆದುಕೊಳ್ಳಲಿಲ್ಲ. ಸಿದ್ಧಾರ್ಥ ಕಾಲೇಜಿನ ಈ ಉಜ್ವಲ ಪರಂಪರೆಯ ಬಗ್ಗೆ ಸಹಜವಾಗಿಯೇ ಪೀಪಲ್ಸ್ ಎಜುಕೇಶನ್ ಸೊಸೈಟಿಗೆ ಅಭಿಮಾನವೆನಿಸುತ್ತದೆ.

ಮುಂಬೈಯಲ್ಲಿ ನಾಲ್ಕು ವರ್ಷಗಳ ಕಾಲ ಈ ಕಾಲೇಜು ನಡೆಸಿದ ಅನುಭವದಿಂದ ಉಳಿದ ಕಡೆಗಳಲ್ಲೂ ಕಾಲೇಜು ಆರಂಭಿಸಬಹುದೆಂಬ ಧೈರ್ಯ ಪೀಪಲ್ಸ್ ಎಜುಕೇಶನ್ ಸಂಸ್ಥೆಯ ಗೌರ್ನಿಂಗ್ ಬಾಡಿಗೆ ಬಂದಿದೆ. ಈ ಕಾಲೇಜನ್ನು ತೆರೆಯಲು ಹೈದರಾಬಾದ್ ಸಂಸ್ಥಾನವನ್ನೇ ಏಕೆ ಆಯ್ಕೆ ಮಾಡಲಾಯಿತು ಎಂದು ಕೇಳಲಾಗುತ್ತದೆ. ಅದರ ಉತ್ತರ ಸುಲಭವಾಗಿದೆ.ಶಿಕ್ಷಣದ ವಿಷಯದಲ್ಲಿ ಹೈದರಾಬಾದ್ ಸಂಸ್ಥಾನ ತುಂಬಾ ಹಿಂದುಳಿದಿದೆ. ಉಚ್ಚಶಿಕ್ಷಣದಲ್ಲಂತೂ ತೀರಾ ಹಿಂದುಳಿದಿದೆ. ಹೈದರಾಬಾದ್ ಸಂಸ್ಥಾನದ ಕ್ಷೇತ್ರಫಲವು 84,000 ಚ.ಮೈಲಿನಷ್ಟಿದ್ದು ಒಂದು ಕೋಟಿ ಆರವತ್ತು ಲಕ್ಷ ಜನಸಂಖ್ಯೆಯಿದೆ. ಮಾರ್ಚ್ 1949ರಲ್ಲಿ ಸಂಸ್ಥಾನದಲ್ಲಿ ಒಟ್ಟು 17 ಕಾಲೇಜಿಗಳಿದ್ದವು. ಕಾಲೇಜು ಶಿಕ್ಷಣ ಪಡೆಯುವವರ ಸಂಖ್ಯೆಯೂ 7,315ರಷ್ಟಿತ್ತು. ಈ ಅಂಕೆಯನ್ನು ಮುಂಬೈ ರಾಜ್ಯದ ಸ್ಥಿತಿಯೊಂದಿಗೆ ಹೋಲಿಸಿ ನೋಡೋಣ. ಮುಂಬೈ ರಾಜ್ಯದ ವಿಸ್ತಾರವು 1,15,570 ಚ. ಮೈಲಿ ಇದೆ ಮತ್ತು ಜನಸಂಖ್ಯೆಯು 3.23 ಕೋಟಿ. 31ನೇ ಮಾರ್ಚ್ 1950 ರಂದು ಅಲ್ಲಿನ ಕಾಲೇಜಿನ ಸಂಖ್ಯೆಯು 90 ಮತ್ತು ವಿದ್ಯಾರ್ಥಿಗಳ ಸಂಖ್ಯೆ 50,356ರಷ್ಟಾಗಿತ್ತು.

ಈ ಅಂಕಿ ಅಂಶಗಳ ಮೇಲಿಂದ ಹೈದರಾಬಾದ್ ಸಂಸ್ಥಾನ ಎಷ್ಟು ಹಿಂದುಳಿದಿದೆ ಎನ್ನುವುದು ತಿಳಿದುಬರುತ್ತದೆ. ಹೀಗೇಕೆ? ನಾನು ತೀರ ಆಳಕ್ಕಿಳಿಯುವುದಿಲ್ಲ. ನನಗೆ ಅಗತ್ಯ ಎನಿಸಿದರೆ ಹೈದರಾಬಾದ್ ಸರಕಾರಕ್ಕೆ ನಾನೊಂದು ಸ್ವತಂತ್ರ ಮಸೂದೆಯನ್ನು ಚರ್ಚೆಗಾಗಿ ಕಳಿಸುತ್ತೇನೆ. ಸದ್ಯದ ಸ್ಥಿತಿಯಲ್ಲಿ ನಮ್ಮ ಕಾರ್ಯದ ವಿಸ್ತಾರಕ್ಕಾಗಿ ಹೈದರಾಬಾದ್ ಸಂಸ್ಥಾನವೇ ಯೋಗ್ಯವೆಂದೆನಿಸಿತು. ಆಳವಾಗಿ ಗಮನಿಸಿದರೆ ಶೈಕ್ಷಣಿಕ ಹಿಂದುಳಿಯುವಿಕೆಯ ಜೊತೆಗೆ ಮತ್ತು ಒಂದು ಖೇದದಾಯಕ ಅಂಶ ಕಂಡುಬರುತ್ತದೆ. ಅದೆಂದರೆ ಶೈಕ್ಷಣಿಕ ಸವಲತ್ತಿನ ಅಸಮಾಧಾನಕಾರಕ ಮತ್ತು ಅಸಮರ್ಥನೀಯ ವಿಭಜನೆ. ಹೈದರಾಬಾದ್ ಸಂಸ್ಥಾನದಲ್ಲಿರುವ ಉಚ್ಚ ಶಿಕ್ಷಣವು ಕೇವಲ ಹೈದರಾಬಾದ್ ನಗರದಲ್ಲೇ ಇದೆ. ಒಟ್ಟು 17 ಕಾಲೇಜುಗಳಲ್ಲಿ ಇಂಟರ್‌ವರೆಗೆ ಶಿಕ್ಷಣ ನೀಡುವ ಮೂರು ಕಾಲೇಜುಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಾಲೇಜುಗಳೆಲ್ಲ ರಾಜಧಾನಿಯಾದ ಹೈದರಾಬಾದಿನಲ್ಲೇ ಇವೆ. ಆ ಮೂರು ಕಾಲೇಜಿಗಳಲ್ಲಿ 80 ಲಕ್ಷ ಜನಸಂಖ್ಯೆ ಇರುವ ತೆಲಂಗಾಣದ ವಾರಂಗಲ್ ಎಂಬಲ್ಲಿ ಬಂದಿದೆ. 45 ಲಕ್ಷ ಜನ ಸಂಖ್ಯೆ ಇರುವ ಮರಾಠಿ ಪ್ರದೇಶಕ್ಕಾಗಿ ಔರಂಗಾಬಾದಿನಲ್ಲಿ ಎರಡನೆಯದು ಮತ್ತು 35 ಲಕ್ಷ ಜನ ಸಂಖ್ಯೆ ಇರುವ ಕರ್ನಾಟಕ ಪ್ರದೇಶದಲ್ಲಿ ಮೂರನೆಯದಿದೆ.

ಈ ಕೊರತೆಯನ್ನು ನೀಗಿಸಲು ಸಂಸ್ಥೆಯು ಹೈದರಾಬಾದ್ ಸಂಸ್ಥಾನವನ್ನು ಆಯ್ಕೆ ಮಾಡಿತು. ಔರಂಗಾಬಾದಿನ ಬದಲಿಗೆ ತೆಲಂಗಾಣ ಅಥವಾ ಕರ್ನಾಟಕದಲ್ಲಿ ಸಂಸ್ಥೆಯು ಕಾಲೇಜನ್ನು ಆರಂಭಿಸಬಹುದಾಗಿತ್ತಲ್ಲ ಎಂದೂ ಕೇಳಬಹುದಾಗಿದೆ. ಜಾತಿ ಅಥವಾ ಭಾಷಿಕವಾಗಿ ಈ ಸಂಸ್ಥೆಗೆ ಯಾವ ಸಂಬಂಧವೂ ಇಲ್ಲ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಶೈಕ್ಷಣಿಕ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಸಂಸ್ಥೆಯದು. ಮುಂಬೈ ಸಿದ್ಧಾರ್ಥ ಕಾಲೇಜು ನಡೆಸುವಲ್ಲಿ ಹೇಗೆ ಯಶಸ್ಸು ಲಭಿಸಿತೋ ಅದೇ ಬಗೆಯ ಯಶಸ್ಸು ಈ ಹೊಸ ಪ್ರಯತ್ನದಲ್ಲೂ ಪಡೆಯುವ ಇಚ್ಛೆ ಮೊದಲಿನಿಂದಲೂ ಸಂಸ್ಥೆಗಿತ್ತು. ಮುಂಬೈನ ನಿಷ್ಣಾತ ಅಧ್ಯಾಪಕರಲ್ಲಿ ಕೆಲವರನ್ನು ಇಲ್ಲಿಗೆ ಕರೆತರುವ ಪ್ರಯತ್ನ ಸೊಸೈಟಿಯದ್ದಾಗಿತ್ತು. ಈ ಕಾರಣಕ್ಕಾಗಿಯೇ ಸಂಸ್ಥೆಯು ಔರಂಗಾಬಾದನ್ನು ಆಯ್ಕೆ ಮಾಡಿದ್ದು ಯೋಗ್ಯವಾಗಿದೆ ಎಂದೆನ್ನಲು ಅಡ್ಡಿಯಿಲ್ಲ. ಕಾಲೇಜಿನ ಪ್ರಗತಿಯ ಬಗ್ಗೆ ಹೇಳುವ ಮೊದಲು ಸಂಸ್ಥೆಯ ಆಡಳಿತ ಮಂಡಳಿಯ ಧೋರಣೆಯನ್ನು ಅರಿಯಲು ಕಾಲೇಜಿನ ಕೆಲವು ವಿಶಿಷ್ಟ ಸಂಗತಿಗಳನ್ನು ಹೇಳಬೇಕೆಂದೆನಿಸುತ್ತದೆ.

ಈ ಕಾಲೇಜಿನಲ್ಲಿ ಹುಡುಗರ ಜೊತೆಗೆ ಹುಡುಗಿಯರೂ ಶಿಕ್ಷಣವನ್ನು ಪಡೆಯಬಹುದಾಗಿದೆ ಸಾಮಾಜಿಕವಾಗಿ ಹಿಂದುಳಿಯುವಿಕೆ ಮತ್ತು ಸಹಶಿಕ್ಷಣದ ಕೊರತೆ ಇರುವ ಈ ಪ್ರದೇಶದಲ್ಲಿ ಹುಡುಗರ ಜೊತೆಗೆ ಹುಡುಗಿಯರೂ ಶಿಕ್ಷಣ ಪಡೆಯುವ ಹೊಸ ಬುನಾದಿಯನ್ನೇ ಕಾಲೇಜು ಹಾಕಿದೆ. ಈ ಕಾಲೇಜಿನಲ್ಲಿ ಎಲ್ಲ ಜಾತಿಧರ್ಮದವರು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹುಡುಗಿಯರು ಕಾಲೇಜಿಗೆ ಬರಲಿ ಎಂಬ ಕಾರಣಕ್ಕೆ ಕಾಲೇಜು ಬಸ್ಸಿನ ವ್ಯವಸ್ಥೆಯನ್ನು ಮಾಡಿದೆ. ಎಲ್ಲ ಧರ್ಮದವರಿಗೆ ಈ ಕಾಲೇಜಿನಲ್ಲಿ ಮುಕ್ತ ಪ್ರವೇಶವಿದೆ. ಇಲ್ಲಿ ಯಾವುದೇ ಬಗೆಯ ಜಾತೀಯತೆಯಿಲ್ಲ. ಪ್ರಾಧ್ಯಾಪಕರಲ್ಲೂ ಎಲ್ಲ ಜಾತಿಯವರಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿದ್ಯೆ, ವಿನಯ ಮತ್ತು ಶೀಲವನ್ನು ರೂಪಿಸುವುದೇ ಈ ಕಾಲೇಜಿನ ಧ್ಯೇಯವಾಗಿದೆ.

ಈ ಕಾಲೇಜು ಅಸ್ಪಶ್ಯ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಕಡೆಗೆ ವಿಶೇಷ ಗಮನ ಹರಿಸುತ್ತದೆ. ಮೇಲ್ವರ್ಗ ಮತ್ತು ಕೆಳವರ್ಗದ ಸಂಭಾವ್ಯ ಸಂಘರ್ಷ ತಪ್ಪಿಸಲು ಕಾಲೇಜು ಇದನ್ನೇ ಮಾಡಬೇಕು. ಅಸ್ಪಶ್ಯ ವಿದ್ಯಾರ್ಥಿಗಳ ಸಂಖ್ಯೆ ಬೆಳೆದಿದೆ. ಸದ್ಯ 26 ಅಸ್ಪಶ್ಯ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ವಿದ್ಯಾರ್ಥಿನಿಯರೂ ಇದ್ದಾರೆ.

ಒಂದು ವರ್ಷದ ಕಾಲೇಜಿನ ಪ್ರಗತಿಯನ್ನು ಗಮನಿಸಿದಿರಿ ಎಂದರೆ ಈ ಪ್ರದೇಶದ ಕಾಲೇಜಿನ ಕೊರತೆಯನ್ನು ಹೋಗಲಾಡಿಸಿದ್ದು ಅರಿವಾಗುತ್ತದೆ. ಜೂನ್ 19, 1950ರಲ್ಲಿ ಕಾಲೇಜು ಆರಂಭವಾದಾಗ ವಿದ್ಯಾರ್ಥಿಗಳ ಸಂಖ್ಯೆಯು ಕೇವಲ 140. ಇಂದು ವಿದ್ಯಾರ್ಥಿಗಳ ಸಂಖ್ಯೆ 332 ರಷ್ಟಿದ್ದು ಜಾಗದ ಕೊರತೆಯಿಂದಾಗಿ ಮೊದಲ ವರ್ಷದ ಪ್ರವೇಶವನ್ನು ನಿಲ್ಲಿಸಬೇಕಾಯಿತು. ಈ ಕಾಲೇಜು ಎಲ್ಲ ಸಾಧನ ಸಲಕರಣೆಯಿಂದ ಕೂಡಿರಬೇಕೆಂಬ ಕಾರಣದಿಂದ ಸಿಕ್ಕ ಒಂದೂ ಅವಕಾಶವನ್ನು ಸಂಸ್ಥೆ ಉಪಯೋಗಿಸದೆ ಬಿಡಲಿಲ್ಲ. 1 ಲಕ್ಷ 26 ಸಾವಿರ ರೂಪಾಯಿ ಖರ್ಚು ಮಾಡಿ ಲ್ಯಾಬೊರೆಟರಿ, ಎಲ್ಲ ಬಗೆಯ ಉಪಕರಣಗಳನ್ನು ತರಿಸಿ ಸುಸಜ್ಜಿತಗೊಳಿಸಿದೆ. ತಜ್ಞ ಮಾರ್ಗದರ್ಶಕರ ಸಹಾಯದಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ವೈಜ್ಞಾನಿಕ ಪ್ರಯೋಗ ಮಾಡುವ ಅವಕಾಶವಿದೆ.

ಕೇವಲ ಒಂದೇ ವರ್ಷವಾದರೂ ಕಾಲೇಜಿನಲ್ಲಿ ಸುಂದರ ಲೈಬ್ರರಿಯಿದೆ. ಅಲ್ಲಿ ಎಲ್ಲ ಬಗೆಯ ಗ್ರಂಥಗಳಿವೆ. ಸಂಸ್ಥೆಯು 40,000 ರೂಪಾಯಿ ನೀಡಿ ನಾಲ್ಕುಸಾವಿರ ಗ್ರಂಥಗಳನ್ನು ಸಂಗ್ರಹಿಸಿದೆ. ಕಲೆ, ಸಾಹಿತ್ಯ ಮತ್ತು 64 ವಿಷಯಗಳಿಗೆ ಸಂಬಂಧಿಸಿದ ಮಾಸಪತ್ರಿಕೆಗಳನ್ನು ತರಿಸಲಾಗುತ್ತದೆ. ಕಾಲೇಜು ವಿದ್ಯಾರ್ಥಿ, ಸಂಶೋಧಕ ವಿದ್ಯಾರ್ಥಿ ಇಬ್ಬರಿಗೂ ಅನುಕೂಲವಾಗುವ ಗ್ರಂಥಾಲಯವಿರಬೇಕೆನ್ನುವುದು ಸಂಸ್ಥೆಯ ಇಚ್ಛೆಯಾಗಿದೆ.

ವಿದ್ಯಾರ್ಥಿಗಳ ದೈಹಿಕ ವಿಕಾಸಕ್ಕಾಗಿ ಕ್ರೀಡೆ, ವ್ಯಾಯಾಮ ಎರಡಕ್ಕೂ ಮಹತ್ವ ನೀಡಲಾಗಿದೆ. ಮಕ್ಕಳ ವೈಜ್ಞಾನಿಕ ಮತ್ತು ಬೌದ್ಧಿಕ ಅಭಿವೃದ್ಧಿಯ ಕಡೆಗೂ ಲಕ್ಷ ನೀಡಲಾಗುತ್ತದೆ. ಶಾಸ್ತ್ರೀಯ ವಿಷಯದ ಬಗೆಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಲು ತಾಂತ್ರಿಕ, ಔದ್ಯೋಗಿಕ ಮತ್ತು ಸಂಶೋಧನ ತಾಣಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ವಾದ-ವಿವಾದ-ಸಾಹಿತ್ಯ ಮತ್ತು ವಿಜ್ಞಾನ ಸಂಘವನ್ನು ಸ್ಥಾಪಿಸಲಾಗಿದೆ. ಹಲವು ವಿದ್ಯಾರ್ಥಿಗಳು ಅದರ ಲಾಭ ಪಡೆಯುತ್ತಿದ್ದಾರೆ. ಸರ್ವಸಾಮಾನ್ಯ ಜನರಿಗೂ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಕಾಲೇಜು ಮಾಡಿದೆ. ಯುನೆಸ್ಕೋ ಸೂಚಿಸಿದ ‘ಆಹಾರಧಾನ್ಯ ಮತ್ತು ಜನತೆ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಇದು ತುಂಬ ಜನಪ್ರಿಯಗೊಂಡು ಪತ್ರಿಕೆಯವರೂ ಅದನ್ನು ಸ್ವಾಗತಿಸಿದರು. ಕಾಲೇಜು ಮತ್ತು ಸಮಾಜದ ನಡುವಣ ಪರಸ್ಪರ ಸಂಬಂಧವನ್ನು ಹೀಗೆಯೇ ಮುಂದುವರಿಸುವ ಪ್ರಯತ್ನ ಕಾಲೇಜಿನದು.

ಪ್ರಾಥಮಿಕ ಹಂತದಲ್ಲಿದ್ದ ಈ ಕಾಲೇಜು ಯಾವುದರಲ್ಲೂ ಹಿಂದೆಬಿದ್ದಿಲ್ಲ. ಕಾಲೇಜಿನ ಪ್ರತಿಯೊಂದು ವಿಷಯದಲ್ಲಿ ಜೀವಂತಿಕೆಯಿದ್ದು ವೇಗದಿಂದ ಅಭಿವೃದ್ಧಿ ಹೊಂದುತ್ತಿದೆ. ಜನರ ಕಣ್ಣುಕುಕ್ಕುವ ರೀತಿಯಲ್ಲಿ ಕಾಲೇಜು ಮಾಡಿದ ಸಾಧನೆ, ಪಡೆದ ಶ್ರೇಯಸ್ಸು ಕೇವಲ ಕಾಲೇಜಿಗೆ ಮಾತ್ರ ಸೇರಬೇಕೆಂದು ನಾನು ಹೇಳಲಾರೆ. ಉಳಿದ ಪಾಲುಗಾರರು ಇದ್ದಾರೆ. ಸಂಸ್ಥೆ ಅವರಿಗೆಲ್ಲಾ ಋಣಿಯಾಗಿದೆ. ಈ ಯಶಸ್ಸಿನ ಪಾಲುದಾರರಲ್ಲಿ ಹೈದರಾಬಾದಿನ ಮಾಜಿ ಶಿಕ್ಷಣ ಮಂತ್ರಿ ರಾಜಾ ದೊಂಡಿ ರಾಜಾ ಬಹದ್ದೂರ್ ಸಹ ಇದ್ದಾರೆ. ಅವರ ಸಹಾಯವಿರದಿದ್ದರೆ ಕಾಲೇಜು ಆರಂಭಿಸುವುದೇ ಸಾಧ್ಯವಾಗುತ್ತಿರಲಿಲ್ಲ ತದನಂತರ ಸದ್ಯದ ಮುಖ್ಯಪ್ರಧಾನರಾದ ಎಂ.ಕೆ. ವೆಲೋದಿ, ಅರ್ಥಮಂತ್ರಿ ಸಿ.ವಿ.ಎಸ್ ರಾವ್, ಕಂದಾಯ ಸಚಿವರಾದ ಶೇಷಾದ್ರಿ, ಶಿಕ್ಷಣ ಸಚಿವರಾದ ರಾಮಕೃಷ್ಣರಾವ್, ಹಾಗೆಯೇ ನನ್ನ ಸಹಕಾರಿ ಗೆಳೆಯ ಗೋಪಾಲ ಸ್ವಾಮಿ ಅಯ್ಯಂಗಾರ್ ಮಿನಿಸ್ಟರ್ ಫಾರ್ ಸ್ಟೇಟ್ ಉಸ್ಮಾನಿಯಾ ಯುನಿವರ್ಸಿಟಿಯ ವೈಸ್ ಚಾನ್ಸ್‌ಲರ್ ನವಾಬ ಅಲ್ಲಿಯಾರ್ ಜಂಗಬಹದ್ದೂರ್ ಹೈದರಾಬಾದ್ ಶೆಡ್ಯೂಲ್ಡ್ ಕಾಸ್ಟ್ ಟ್ರಸ್ಟ್ ಫಂಡ್ ಸೆಕ್ರಟರಿ ಆಬಾಕೆ, ಔರಂಗಾಬಾದಿನ ಆ ಕಾಲದ ಕಲೆಕ್ಟರ್ ರಾಜಾವಡೆ, ಲ್ಯಾಂಡ್ ಎಕ್ವಿಸಿಷನ್ ಆಫೀಸರ್ ಅಷ್ಯಪುತ್ರೆ ಹೈದರಾಬಾದ್ ಸ್ಟೇಟ್ ಕಾಂಗ್ರೆಸ್‌ನ ಅಧ್ಯಕ್ಷರಾದ ಬಿಂದು, ಪಿಡಬ್ಲೂಡಿ ಮಂತ್ರಿ ನವಾಬ ಜಂಗ್‌ಯಾರ್ ಜಂಗ್, ಪಿಡಬ್ಲೂಡಿಯ ಆರ್ಕಿಟೆಕ್ಟ್ ದವೇ ಇವರಿಗೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಹಾಗೆಯೇ ಕಾಲೇಜಿನ ಪ್ರಾಚಾರ್ಯ ಮತ್ತು ಅವರ ಸಹಕಾರಿಗಳನ್ನು ಮರೆಯುವಂತಿಲ್ಲ. ಯಾಕೆಂದರೆ ಅವರು ತಮ್ಮ ಮನೆಮಾರನ್ನು ಮುಂಬೈನಲ್ಲೇ ಬಿಟ್ಟು ಔರಂಗಾಬಾದಿಗೆ ಬಂದು ಅಪೂರ್ವ ತ್ಯಾಗ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ