ನೋಬೆಲ್ ಶಾಂತಿ ಪುರಸ್ಕಾರಕ್ಕೆ 16 ವರ್ಷದ ಬಾಲಕಿ ಗ್ರೇಟಾ ತಂಬರ್ಗ್ ಹೆಸರು ಶಿಫಾರಸು

Update: 2019-03-15 06:55 GMT

ಕೋಪೆನ್ ಹೇಗನ್ : ಸ್ವೀಡನ್ ದೇಶದ 16 ವರ್ಷದ  ಪರಿಸರ ಹೋರಾಟಗಾರ್ತಿ, ಹವಾಮಾನ ಬದಲಾವಣೆಯ  ಸಮಸ್ಯೆಗಳ ವಿರುದ್ಧ ದೊಡ್ಡ ಅಭಿಯಾನವನ್ನೇ ಆರಂಭಿಸಿರುವ ಗ್ರೇಟಾ ತಂಬರ್ಗ್ ಹೆಸರು ಈ ವರ್ಷದ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಶಿಫಾರಸುಗೊಂಡಿದೆ. ನಾರ್ವೇ ದೇಶದ ಸಂಸದರು ಆಕೆಯ ಉತ್ತಮ ಕಾರ್ಯವನ್ನು ಶ್ಲಾಘಿಸಿ ಆಕೆಯ ಹೆಸರನ್ನು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಶಿಫಾರಸು ಮಾಡಿದ್ದಾರೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ತನ್ನ ಏಕಾಂಗಿ ಹೋರಾಟವನ್ನು ತಂಬರ್ಗ್ ಆರಂಭಿಸಿದ್ದರೆ ಅಂದಿನಿಂದ ಜಗತ್ತಿನಾದ್ಯಂಥ ಆಕೆಯ ಹೋರಾಟ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಕಳೆದ ವರ್ಷ ಸ್ವೀಡನ್ ಸಂಸತ್ ಕಟ್ಟಡದೆದುರು `ಸ್ಕೂಲ್ ಸ್ಟ್ರೈಕ್' ನಡೆಸಿ ಆಕೆ ಸುದ್ದಿಯಾಗಿದ್ದರು. ಪ್ರತಿ ಶುಕ್ರವಾರ ಶಾಲೆಗೆ ಹೋಗುವ ಬದಲು ಆಕೆ ಸ್ವೀಡನ್ ಸಂಸತ್ತಿನೆದುರು ಪ್ರತಿಭಟನೆ ನಡೆಸಿ ಹವಾಮಾನ ಬದಲಾವಣೆ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಆಗ್ರಹಿಸಿದ್ದರು. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಿರ್ಲಕ್ಷ್ಯಿಸದಂತೆ ಆಕೆ ವಿಶ್ವ ನಾಯಕರನ್ನು ಕೋರಿದ್ದರಲ್ಲದೆ ಆಕೆ ಡಿಜಿಟಲ್ ವೀಡಿಯೋ ಪಬ್ಲಿಶರ್ ಬ್ರಟ್ ಇಂಡಿಯಾಗೆ ನೀಡಿದ ಸಂದೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನೂ ಉಲ್ಲೇಖಿಸಿದ್ದರು.

ಕಳೆದ ವರ್ಷ ನಡೆದ ವಿಶ್ವ ಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಹಾಗೂ ಈ ವರ್ಷದ ಜನವರಿಯಲ್ಲಿ ದಾವೋಸ್ ನಲ್ಲಿನ ಸಭೆಯಲ್ಲಿ ಆಕೆ ಈಗಾಗಲೇ ವಿಶ್ವ ನಾಯಕರಿಗೆ ಸವಾಲೆಸೆದಿದ್ದಾರಲ್ಲದೆ “ಅವರಿಗಿಷ್ಟವಿದ್ದರೂ ಇಲ್ಲದೇ ಇದ್ದರೂ ಹವಾಮಾನ ಬದಲಾವಣೆ ಬರುತ್ತದೆ,'' ಎಂದು ಹೇಳಿದ್ದರು.

ಪೋಲೆಂಡ್ ಹಾಗೂ ನಂತರ ದಾವೋಸ್ ನಲ್ಲಿ ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿನ ಆಕೆಯ ಭಾಷಣಗಳ ನಂತರ ಆಕೆ ಜಗತ್ತಿನಾದ್ಯಂತ ಯುವಜನತೆಗೆ ಮಾದರಿಯಾಗಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News