ಇಥಿಯೋಪಿಯನ್, ಮಲೇಷ್ಯಾ ವಿಮಾನಗಳ ಪತನದ ಕಾರಣಗಳಲ್ಲಿದೆ ಸಾಮ್ಯತೆ

Update: 2019-03-18 11:00 GMT

ಅಡ್ಡಿಸ್ ಅಬಬಾ, ಮಾ.18: ಕಳೆದ ವಾರ ಪತನಗೊಂಡ ಇಥಿಯೋಪಿಯನ್ ಏರ್ ಲೈನ್ಸ್ ವಿಮಾನದ ಫ್ಲೈಟ್ ಡಾಟಾ ರೆಕಾರ್ಡರ್ ನಲ್ಲಿನ ಮಾಹಿತಿಗಳಿಗೂ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪತನಗೊಂಡಿದ್ದ ಇಂಡೋನೇಷ್ಯಾದ ಲಯನ್ ಏರ್ ವಿಮಾನದ ರೆಕಾರ್ಡರ್ ನಲ್ಲಿನ ಮಾಹಿತಿಗಳಿಗೂ ಸ್ಪಷ್ಟ ಸಾಮ್ಯತೆಗಳಿವೆ ಎಂದು ಇಥಿಯೋಪಿಯಾದ ಸಾರಿಗೆ ಸಚಿವ ಡಗ್ಮಾವಿಟ್ ಮೋಗಿಸ್ ಹೇಳಿದ್ದಾರೆ. ಎರಡೂ ವಿಮಾನಗಳು ಬೋಯಿಂಗ್ 737 ಮ್ಯಾಕ್ಸ್ 8 ಆಗಿದ್ದು ಉಲ್ಲೇಖನೀಯ.

ಇಥಿಯೋಪಿಯನ್ ಏರ್ ಲೈನ್ಸ್ ವಿಮಾನದ ಬ್ಲ್ಯಾಕ್ ಬಾಕ್ಸ್, ಡಾಟಾ ಮತ್ತು ವಾಯ್ಸ್ ರೆಕಾರ್ಡ್ ಗಳ ಸ್ಥಿತಿ ಉತ್ತಮವಾಗಿದ್ದು, ಸಚಿವಾಲಯದ ಅಪಘಾತ ತನಿಖಾ ಬ್ಯುರೋ ಪ್ರಾಥಮಿಕ ತನಿಖೆಯ ನಂತರ ವಿಮಾನ ಹೇಗೆ ಪತನಗೊಂಡಿತು ಎಂಬ ಬಗ್ಗೆ ಪ್ರಾಥಮಿಕ ವರದಿಯನ್ನು 30 ದಿನಗಳೊಳಗಾಗಿ ನೀಡಲಿದೆ ಎಂದು ಅವರು ಹೇಳಿದ್ದಾರೆ.

ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ಪತನಗೊಳ್ಳುವ ಆರು ನಿಮಿಷಗಳ ಮೊದಲು ವಿಮಾನ ಓರೆಕೋರೆಯಾಗಿ ಚಲಿಸಿತ್ತು ಎಂದು  ವಿಮಾನದ ದಾಖಲೆಗಳು ಹಾಗೂ ಉಪಗ್ರಹ ಮಾಹಿತಿ ತಿಳಿಸುತ್ತವೆ. ಮಾರ್ಚ್ 10ರಂದು ರಾಜಧಾನಿ ಅಡ್ಡಿಸ್ ಅಬಬಾದ ಹೊರವಲಯದಲ್ಲಿನ ಗದ್ದೆಯಲ್ಲಿ ಈ ವಿಮಾನ ಪತನಗೊಂಡು ಎಲ್ಲಾ 157 ಪ್ರಯಾಣಿಕರು ಮೃತಪಟ್ಟಿದ್ದರು.

ವಿಮಾನದ ಎಲ್ಲಾ ರೆಕಾರ್ಡರ್ ಗಳನ್ನು ತೆಗೆದುಕೊಂಡು ಇಥಿಯೋಪಿಯನ್ ತನಿಖಾಕಾರರು ಫ್ರಾನ್ಸ್ ಗೆ ತೆರಳಿದ್ದು ಅಲ್ಲಿ  ಬ್ಯುರೋ ಆಫ್ ಇಂಕ್ವೈರಿ ಹಾಗೂ ಅನಾಲಿಸಿಸ್ ಫಾರ್ ಸಿವಿಲ್ ಏವ್ಯೇಷನ್ ಸೇಫ್ಟಿಯಲ್ಲಿ ಅವುಗಳನ್ನು ಪರಾಮರ್ಶಿಸಲಾಗುವುದು.

ಇಂಡೋನೇಷ್ಯಾದ ಲಯನ್ ಏರ್ ವಿಮಾನದ ಪತನದ ನಂತರ ಸಂಗ್ರಹಿಸಿದ ಮಾಹಿತಿಯು ವಿಮಾನದ ಸೆನ್ಸರ್ ನಲ್ಲಿನ ತಪ್ಪಾದ ಡಾಟಾದತ್ತ ಬೊಟ್ಟು ಮಾಡಿತ್ತಲ್ಲದೆ ಇದರಿಂದಾಗಿ ವಿಮಾನದ ಹೊಸ ಸ್ವಯಂಚಾಲಿತ ಸ್ಟೆಬಿಲೈಝರ್ ವ್ಯವಸ್ಥೆಯು ವಿಮಾನ ಕೆಳಕ್ಕೆ ಹೋಗುವಂತೆ ಮಾಡಿತ್ತೆನ್ನಲಾಗಿದ್ದು, ಪೈಲಟ್ ಮತ್ತೆ ಮೇಲೆ ಸಾಗಲು ಯತ್ನಿಸಿದ್ದರೂ ಅದು ಜಾವಾ ಸಮುದ್ರದಲ್ಲಿ ಪತನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News