ಅಫ್ಘಾನಿಸ್ತಾನ: ತಪಾಸಣಾ ಠಾಣೆಗಳ ಮೇಲೆ ದಾಳಿ; 9 ಪೊಲೀಸರ ಹತ್ಯೆ
Update: 2019-03-30 17:56 GMT
ಘಝ್ನಿ (ಅಫ್ಘಾನಿಸ್ತಾನ), ಮಾ. 30: ಅಫ್ಘಾನಿಸ್ತಾನದ ಪೂರ್ವದ ನಗರ ಘಝ್ನಿಯಲ್ಲಿ ತಾಲಿಬಾನ್ ಉಗ್ರರು ಭದ್ರತಾ ತಪಾಸಣಾ ಠಾಣೆಗಳ ಮೇಲೆ ನಡೆಸಿದ ದಾಳಿಯಲ್ಲಿ ಒಂಬತ್ತು ಪೊಲೀಸರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಎರಡು ಅಕ್ಕಪಕ್ಕದ ಠಾಣೆಗಳ ಮೇಲೆ ಶುಕ್ರವಾರ ಬೆಳಗ್ಗೆ ಉಗ್ರರು ದಾಳಿ ನಡೆಸಿದರು ಎಂದು ಘಝ್ನಿ ಪೊಲೀಸ್ ವಕ್ತಾರ ಅಹ್ಮದ್ ಖಾನ್ ಸೀರತ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಬಳಿಕ, ಅಲ್ಲಿಗೆ ಧಾವಿಸುತ್ತಿದ್ದ ಹೆಚ್ಚುವರಿ ಪೊಲೀಸ್ ಪಡೆಗಳ ಮೇಲೆ ತಾಲಿಬಾನ್ ಹೊಂಚು ದಾಳಿ ನಡೆಸಿತು. ಈ ದಾಳಿಯಲಿ ಸ್ಥಳೀಯ ಪೊಲೀಸ್ ಮುಖ್ಯಸ್ಥ ಮೃತಪಟ್ಟರು.
ಒಟ್ಟು ಒಂಬತ್ತು ಪೊಲೀಸರು ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದರು.