3ನೆ ಹಂತದ ಚುನಾವಣೆ: ಕ್ರಿಮಿನಲ್ ಹಿನ್ನೆಲೆಯ 570 ಅಭ್ಯರ್ಥಿಗಳು ಕಣದಲ್ಲಿ

Update: 2019-04-19 16:32 GMT

ಹೊಸದಿಲ್ಲಿ, ಎ.19: ಲೋಕಸಭೆಗೆ ನಡೆಯಲಿರುವ ಮೂರನೇ ಹಂತದ ಚುನಾವಣೆಯಲ್ಲಿ ಕಣದಲ್ಲಿರುವ ಒಟ್ಟು 1,612 ಅಭ್ಯರ್ಥಿಗಳಲ್ಲಿ 570 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ.

570 ಅಭ್ಯರ್ಥಿಗಳಲ್ಲಿ 13 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದರೆ, 29 ಅಭ್ಯರ್ಥಿಗಳ ವಿರುದ್ಧ ಅತ್ಯಾಚಾರ, ಮಹಿಳೆಯರಿಗೆ ಲೈಂಗಿಕ ಕಿರುಕುಳ, ಮಹಿಳೆಯ ಪತಿ ಅಥವಾ ಸಂಬಂಧಿಕನಿಗೆ ಹಲ್ಲೆ ಮುಂತಾದ ಪ್ರಕರಣ ದಾಖಲಾಗಿದೆ. 26 ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣ ಪ್ರಕರಣ ದಾಖಲಾಗಿದೆ. ಅಭ್ಯರ್ಥಿಗಳು ಸಲ್ಲಿಸಿದ ಸ್ವಯಂ ಪ್ರಮಾಣ ಪತ್ರವನ್ನು ಪರಿಶೀಲಿಸಿದ ಬಳಿಕ ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ಈ ಮಾಹಿತಿ ಪ್ರಕಟಿಸಿದೆ.

ಕಾಂಗ್ರೆಸ್‌ನ 90 ಅಭ್ಯರ್ಥಿಗಳಲ್ಲಿ 40, ಬಿಜೆಪಿಯ 97 ಅಭ್ಯರ್ಥಿಗಳಲ್ಲಿ 38 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಸಿಪಿಐ(ಎಂ) ಪಕ್ಷ ಕ್ರಿಮಿನಲ್ ಹಿನ್ನೆಲೆಯ ಅತೀ ಕಡಿಮೆ ಅಭ್ಯರ್ಥಿಗಳನ್ನು (14) ಕಣಕ್ಕಿಳಿಸಿದೆ. 115 ಕ್ಷೇತ್ರಗಳಲ್ಲಿ 63 ಕ್ಷೇತ್ರಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕಾರಣ ಇವನ್ನು ‘ರೆಡ್ ಅಲರ್ಟ್’ ವಿಭಾಗದಡಿ ಸೇರಿಸಲಾಗಿದೆ. 392 ಅಭ್ಯರ್ಥಿಗಳು ಕೋಟ್ಯಾಧೀಶರಾಗಿದ್ದಾರೆ. ಸಮಾಜವಾದಿ ಪಕ್ಷದ ಕುಮಾರ ದೇವೇಂದ್ರ ಸಿಂಗ್ ಯಾದವ್ ಬಳಿ 204 ಕೋಟಿ ರೂ. ಮೊತ್ತದ ಒಟ್ಟು ಆಸ್ತಿಯಿದ್ದರೆ, ಎನ್‌ಸಿಪಿಯ ಭೋಂಸ್ಲೆ ಶ್ರೀಮಂತ್ ಛತ್ರಪತಿ 199 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News