ಭದ್ರತೆಯ ಕಾರಣ ಅಸಾಧ್ಯವಾದ ಭೇಟಿ: ನಿರಾಸೆಗೊಂಡ ಬಾಲಕನಿಗೆ ರಾಹುಲ್ ಮಾಡಿದ್ದೇನು ?

Update: 2019-04-19 17:46 GMT

ಹೊಸದಿಲ್ಲಿ, ಎ. 19: ಭದ್ರತಾ ಕಾರಣದಿಂದ ತನ್ನನ್ನು ಭೇಟಿಯಾಗಲು ಸಾಧ್ಯವಾಗದ 7 ವರ್ಷಗಳ ಬಾಲಕನೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಕಣ್ಣೂರಿನ ಬಾಲಕ ನಂದನ್ ಜೋಯ್ಸ್ ಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಬಗ್ಗೆ ರಾಹುಲ್ ಗಾಂಧಿ ಅವರ ನೂತನ ವಯನಾಡ್ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಅಪ್‌ಲೋಡ್ ಮಾಡಲಾಗಿದೆ.

ವಯನಾಡ್‌ನಲ್ಲಿ ಚುನಾವಣಾ ಅಭಿಯಾನದ ಒಂದು ಭಾಗವಾಗಿ ಪಕ್ಷದ ನಾಯಕರನ್ನು ಭೇಟಿಯಾಗಲು ರಾಹುಲ್ ಗಾಂಧಿ ಕಣ್ಣೂರಿಗೆ ಆಗಮಿಸಿದ್ದರು. ಈ ಸಂದರ್ಭ ರಾಹುಲ್ ಗಾಂಧಿ ಅವರನ್ನು ನೋಡಲು ಕಣ್ಣೂರಿನಲ್ಲಿರುವ ಅಡಿಟೋರಿಯಂನ ಮುಂದೆ ನಂದನ್ ತನ್ನ ಹೆತ್ತವರೊಂದಿಗೆ ಕಾದಿದ್ದ. ಆದರೆ, ಭದ್ರತಾ ಕಾರಣದಿಂದ ಆತನಿಗೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗದೆ ನಿರಾಸೆಗೊಂಡ ತನ್ನ ಪುತ್ರ ನಂದನ್‌ನ ಚಿತ್ರವನ್ನು ತಂದೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಶೇರ್ ಆಗಿತ್ತು. ಇದನ್ನು ಸ್ಥಳೀಯ ಸುದ್ದಿ ಮಾಧ್ಯಮವೊಂದು ಪ್ರಕಟಿಸಿತ್ತು.

ಈ ವಿಚಾರವನ್ನು ಕಾಂಗ್ರೆಸ್‌ನ ಸ್ಥಳೀಯ ನಾಯಕರೊಬ್ಬರು ರಾಹುಲ್ ಗಾಂಧಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ನಂದನ್‌ಗೆ ಕರೆ ಮಾಡಿ ಮಾತನಾಡಿದ್ದಾರೆ ಹಾಗೂ ಕಣ್ಣೂರಿಗೆ ಬಂದರೆ ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News