ಮೈತ್ರಿ ಸರಕಾರದ ಪಾಲಿಗೆ ಕಂಟಕವಾಗಲಿದ್ದಾರೆಯೇ ರಮೇಶ್ ಜಾರಕಿಹೊಳಿ ?

Update: 2019-04-23 13:40 GMT

ಬೆಂಗಳೂರು, ಎ.23: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಆರುತ್ತಿದ್ದಂತೆ, ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತ ಶಾಸಕರ ಗುಂಪು ರಾಜೀನಾಮೆ ನೀಡಲು ಮುಂದಾಗಿರುವುದು, ಮೈತ್ರಿ ಸರಕಾರದ ಪಾಲಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗುವಂತಾಗಿದೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ, ವಿರೋಧ ಪಕ್ಷ ಬಿಜೆಪಿಯಲ್ಲಿ ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಕೈ ಹಾಕಲು ಪ್ರೋತ್ಸಾಹ ನೀಡಿದೆ. ರಮೇಶ್ ಜಾರಕಿಹೊಳಿ ಜೊತೆಗೆ ಅತೃಪ್ತ ಶಾಸಕರಾಗಿ ಗುರುತಿಸಿಕೊಂಡಿರುವ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಜೊತೆ ಇನ್ನಿಬ್ಬರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರಕಾರ ಅಧಿಕಾರದಲ್ಲಿ ಇರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮಾಜಿ ಡಿಸಿಎಂ ಈಶ್ವರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್ ಸೇರಿದಂತೆ ಅನೇಕ ಮುಖಂಡರು ನೀಡುತ್ತಿದ್ದ ಹೇಳಿಕೆಗಳು, ಆಪರೇಷನ್ ಕಮಲದ ಮುನ್ಸೂಚನೆಗಳನ್ನು ನೀಡಿದ್ದವು.

ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ಅಮಾನತುಗೊಂಡು, ಶಾಸಕ ಸ್ಥಾನದಿಂದ ಅನರ್ಹತೆಗೊಳಗಾಗುವ ಭೀತಿಯಲ್ಲಿದ್ದ ಡಾ.ಉಮೇಶ್ ಜಾಧವ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿರುವುದು, ಅತೃಪ್ತ ಶಾಸಕರಲ್ಲಿ ಹುಮ್ಮಸ್ಸು ಮನೆ ಮಾಡುವಂತಾಗಿದೆ. ಅತೃಪ್ತ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಂತೆ, ಮೈತ್ರಿ ಸರಕಾರವನ್ನು ಅಲ್ಪಮತಕ್ಕೆ ಇಳಿಸಲು ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.

104 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಹೇಗಾದರೂ ಮಾಡಿ, ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೇಬೇಕೆಂದು ಸಂಕಲ್ಪ ಮಾಡಿದೆ. ಇದಕ್ಕಾಗಿ, ಅತೃಪ್ತ ಶಾಸಕರ ರಾಜೀನಾಮೆ ಜೊತೆಯಲ್ಲಿ, ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಿರುವ ಚಿಂಚೋಳಿ ಹಾಗೂ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು, ವಿಧಾನಸಭೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ರಣತಂತ್ರ ರೂಪಿಸಿದೆ.

ಇದಲ್ಲದೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಚಿವ ಕೃಷ್ಣಭೈರೇಗೌಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಜಯಶಾಲಿಯಾದಲ್ಲಿ, ಅವರು ಪ್ರತಿನಿಧಿಸುವ ಎರಡು ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಯಲಿದೆ. ಆಪರೇಷನ್ ಕಮಲಕ್ಕೆ ಎರಡು ಬಾರಿ ವಿಫಲ ಯತ್ನ ನಡೆಸಿರುವ ಬಿಜೆಪಿ, ಈ ಬಾರಿ ಯಾವುದೇ ತಪ್ಪುಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯ ನಡೆ ಅನುಸರಿಸಲು ಮುಂದಾಗಿದೆ.

ರಮೇಶ್ ಜಾರಕಿಹೊಳಿ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಪಕ್ಷ ಸೇರ್ಪಡೆ ಸಂಬಂಧ ಚರ್ಚೆ ನಡೆಸಿದ್ದು, ಲೋಕಸಭಾ ಚುನಾವಣೆವರೆಗೆ ಸುಮ್ಮನಿರಿ, ಆನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬನ್ನಿ, ನಿಮ್ಮ ಜೊತೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಕರೆ ತರಲು ಪ್ರಯತ್ನಿಸಿ ಎಂದು ಅಮಿತ್ ಶಾ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿ ಜೊತೆಗೆ ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಸೇರಿದಂತೆ ಇನ್ನಿಬ್ಬರು ಅಥವಾ ಮೂವರು ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ, ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ರಾಜೀನಾಮೆ ಖಚಿತ: ಕಾಂಗ್ರೆಸ್ ಪಕ್ಷಕ್ಕೆ ನಾನು ರಾಜೀನಾಮೆ ನೀಡುವುದು ಖಚಿತ. ಯಾವಾಗ ರಾಜೀನಾಮೆ ನೀಡಬೇಕು ಅನ್ನೋದು ಇನ್ನು ನಿರ್ಧರಿಸಿಲ್ಲ. ಶೀಘ್ರದಲ್ಲೆ ದಿನಾಂಕ ತಿಳಿಸುತ್ತೇನೆ. ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದೀನಿ. ನನ್ನ ಜವಾಬ್ದಾರಿ ಏನು ಅನ್ನೋದು ಗೊತ್ತಿದೆ. ನಾನು ಕತ್ತಲಲ್ಲಿ ಕುಳಿತು ಕಲ್ಲು ಎಸೆಯುವ ವ್ಯಕ್ತಿ ಅಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ನನ್ನ ವಿರುದ್ಧ ಹತಾಶೆಯಿಂದ ಹೇಳಿಕೆಗಳನ್ನು ನೀಡುತ್ತಿರುವ ಸತೀಶ್ ಜಾರಕಿಹೊಳಿಗೆ ತಲೆ ಸರಿಯಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಆರೋಪಗಳಿಗೆ ಉತ್ತರ ನೀಡುತ್ತೇನೆ. 1999ರಲ್ಲಿ ಎಸ್.ಎಂ.ಕೃಷ್ಣ ಮಾಡಿದ ತಪ್ಪಿನಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಜಗಳಗಳು ಪ್ರಾರಂಭವಾದವು. ಕಾಂಗ್ರೆಸ್ ಐತಿಹಾಸಿಕ ಪಕ್ಷ, ಅಲ್ಲಿ ಗುಂಪುಗಾರಿಕೆ, ಜಾತಿ ಎಂಬುದು ಇರಲಿಲ್ಲ ಎಂದು ಅವರು ಹೇಳಿದರು.

ಜನತಾ ದಳ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಬಂದವರಿಂದಲೇ ಪಕ್ಷದಲ್ಲಿ ಗೊಂದಲ ಆರಂಭವಾಗಿದೆ. ನನ್ನ ಕಿರಿಯ ಸಹೋದರ ಲಖನ್ ಜಾರಕಿಹೊಳಿ, ಶಾಸಕನಾದರೆ ನನ್ನಷ್ಟು ಸಂತೋಷ ಪಡುವವರು ಬೇರೆ ಯಾರೂ ಇಲ್ಲ. ಆತನಿಗಾಗಿ ಯಾವ ತ್ಯಾಗಕ್ಕೂ ಸಿದ್ದ. ಆತ ಗೋಕಾಕ್‌ನಲ್ಲಿ ಸ್ಪರ್ಧಿಸುವುದಾದರೆ, ನನಗೆ ಬೇರೆ ಕ್ಷೇತ್ರಗಳಿವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಇನ್ನು ಏನು ಕೊಡಬೇಕಿತ್ತು?: ಕಾಂಗ್ರೆಸ್ ಪಕ್ಷ ರಮೇಶ್ ಜಾರಕಿಹೊಳಿಯನ್ನು ಕರೆದು ಸಚಿವ ಸ್ಥಾನ ನೀಡಿತ್ತು. ಅದಕ್ಕಿಂತ ಹೆಚ್ಚಾಗಿ ಇನ್ನೇನು ಕೊಡಲು ಸಾಧ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಗೋಕಾಕ್ ತಾಲೂಕಿನ ಇತಿಹಾಸ ನೋಡಿದರೆ, ಯಾರು ಯಾರನ್ನು ಹಾಳು ಮಾಡಿದ್ದಾರೆ ಅನ್ನೋದು ಗೊತ್ತಿದೆ. ಸಚಿವರಾಗಿದ್ದುಕೊಂಡೆ ರಮೇಶ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿ, ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕತ್ತಲಲ್ಲಿ ಕೂತು ಕಲ್ಲು ಎಸೆಯೋ ಬುದ್ಧಿಯಿದು. ಅವರು ಬಹಿರಂಗವಾಗಿ ಬಿಜೆಪಿ ಸೇರಿದರೆ, ಗೋಕಾಕ್‌ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಸ್ವಾಗತ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಕಾಂಗ್ರೆಸ್ ಬಿಡಲ್ಲ: ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನಮ್ಮ ಗುರಿ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ಬೇರೆ ಕಡೆ ಹೋಗಿ ಹಾಳಾಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತೇನೆ. ನಮ್ಮ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪರ ನಿರ್ಧಾರ ಕೈಗೊಂಡರಷ್ಟೇ ಅವರಿಗೆ ನಮ್ಮ ಬೆಂಬಲ ಎಂದು ಅವರ ಸಹೋದರ ಲಖನ್ ಜಾರಕಿಹೊಳಿ ತಿಳಿಸಿದ್ದಾರೆ.

ಚಿಕಿತ್ಸೆ ಮೊಟಕುಗೊಳಿಸಿದ ಸಿಎಂ

ರಮೇಶ್ ಜಾರಕಿಹೊಳಿ ರಾಜೀನಾಮೆ ನಿರ್ಧಾರ ಹೊರ ಬೀಳುತ್ತಿದ್ದಂತೆ, ಉಡುಪಿ ಜಿಲ್ಲೆಯ ಕಾಪು ಬಳಿ ಪಂಚಕರ್ಮ ಚಿಕಿತ್ಸೆ ಪಡೆಯುವ ಮೂಲಕ ವಿಶ್ರಾಂತಿ ಮೊರೆ ಹೋಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಸರಕಾರದ ಅಸ್ತಿತ್ವ ಉಳಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗಗಳ ಕುರಿತು ಚರ್ಚಿಸಲು, ತಮ್ಮ ಚಿಕಿತ್ಸೆಯನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಹಿಂದಿರುಗಿದ್ದಾರೆ.

ಕತ್ತಿ ಸಹೋದರರಿಗೆ ಕಾಂಗ್ರೆಸ್ ಗಾಳ

ಬಿಜೆಪಿಯ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಿದ್ದಂತೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿರುವುದರಿಂದ, ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹಾಗೂ ಅವರ ಸಹೋದರ ಮಾಜಿ ಸಂಸದ ರಮೇಶ್ ಕತ್ತಿಯನ್ನು ಕಾಂಗ್ರೆಸ್‌ಗೆ ಕರೆ ತರುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News