ಕಾಂಗ್ರೆಸ್ ಕಾಲದಲ್ಲಿ ನಿಮಗೆ ಬಿಸಿಲಿರಲಿಲ್ವ?
ಪತ್ರಕರ್ತ ಕಾಸಿ ‘‘ಸ್ವಲ್ಪ ‘ಟೈಮ್’ ಹೇಳ್ತೀರಾ?’’ ಎಂದು ಪಕ್ಕದ ದಡೂತಿ ವ್ಯಕ್ತಿಯ ಬಳಿ ಕೇಳಿದ. ಆತ ದುರುಗುಟ್ಟಿ ಕಾಸಿಯನ್ನೇ ನೋಡಿದ. ಕಾಸಿಗೋ ಆತಂಕ. ನಾನೇನು ಕೇಳಬಾರದ್ದು ಕೇಳಿದೆನಾ?
‘‘ಸಾರ್...ಟೈಮ್ ಎಷ್ಟು ಹೇಳ್ತೀರಾ?’’ ಕಾಸಿ ಮತ್ತೆ ವಿನಯದಿಂದ ಕೇಳಿದ.
‘‘ಯಾಕ್ರೀ...ಟೈಮ್ ಟೈಮ್ ಎಂದು ಬಡಕೊಳ್ತೀರಾ?’’ ಪಕ್ಕದಲ್ಲಿರುವಾತ ಜೋರಾಗಿ ಅರಚಿದ.
ಕಾಸಿ ಕಂಗಾಲಾದ ‘‘ಸಾರ್, ಟೈಮ್ ಕೇಳೋದು ತಪ್ಪೇ?’’
‘‘ನನಗೆ ಗೊತ್ತು, ನೀವು ಟೈಮ್ ಯಾಕೆ ಕೇಳೋದು ಅಂತಾ?’’ ದಡೂತಿ ಉತ್ತರಿಸಿದ.
‘‘ಟೈಮ್ ಎಲ್ಲರೂ ಯಾಕೆ ಕೇಳ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಅಲ್ಲವೇ?’’ ಕಾಸಿ ಮರು ಪ್ರಶ್ನಿಸಿದ.
‘‘ನಿಮಗೆ ಸಮಯ ಕೇಳಬೇಕಾದರೆ ಸಮಯ ಎಷ್ಟಾಯಿತು ಎಂದು ಕೇಳಬಹುದಿತ್ತಲ್ಲ? ಟೈಮ್ ಯಾಕೆ ಕೇಳಿದ್ರಿ?’’ ದಡೂತಿ ಕೇಳಿದ.
ಇವನು ಕನ್ನಡ ಪರ ಹೋರಾಟಗಾರ ಇರಬಹುದೇ?
‘‘ಸಾರ್, ನೀವು ಕನ್ನಡ ಪರ ಹೋರಾಟಗಾರರೇ?’’ ಕಾಸಿ ವಿಚಾರಿಸಿದ.
‘‘ಅಲ್ಲ, ನಾನು ಮೋದಿ ಭಕ್ತ’’
ಮೋದಿಗೂ ಟೈಮ್‌ಗೂ ಏನು ಸಂಬಂಧ? ಕಾಸಿ ತಲೆ ತುರಿಸಿದ.
‘‘ನೋಡ್ರೀ....ನಟನೆ ಮಾಡಬೇಡಿ....ಅಮೆರಿಕದ ಟೈಮ್ ಪತ್ರಿಕೆಯಲ್ಲಿ ಮೋದಿಯ ವಿರುದ್ಧ ಏನೇನೋ ಬರೆದಿದ್ದಾರೆ ಎಂಬ ಖುಷಿಯಲ್ಲಿ ತಾನೆ ನೀವು ಟೈಮ್ ಕೇಳುತ್ತಾ ಓಡಾಡುತ್ತಿರುವುದು?’’
ಓಹ್! ಇದಾ ವಿಷಯ. ‘‘ಸಾರ್ ಹಾಗಾದರೆ ಇನ್ನು ಟೈಮ್ ಕೇಳಬಾರದೇ?’’
‘‘ಕೇಳಬಾರದು. ಟೈಮ್ ವಿದೇಶಿ ಶಬ್ದ. ಟೈಮ್ ಪತ್ರಿಕೆ ಮಾತ್ರವಲ್ಲ, ಟೈಮ್ ಕೇಳುವವರೆಲ್ಲ ದೇಶದ್ರೋಹಿಗಳು....’’
‘‘ಸರಿ ಸಾರ್...ಇನ್ನು ಮುಂದೆ ಕೇಳಲ್ಲ...’’ ಕಾಸಿ ಸಮಾಧಾನಿಸಿದ. ದಡೂತಿ ಭಕ್ತ ಒಳಗೊಳಗೆ ಕುದಿಯುತ್ತಾ ವೌನವಾದ.
ಬಿಸಿಲೆಂದರೆ ಬಿಸಿಲು. ‘‘ಸಾರ್...ಈ ಬಾರಿ ಬಿಸಿಲು ತುಂಬಾ ಜಾಸ್ತಿ ಅಲ್ವಾ?’’ ಕಾಸಿ ಮಾತು ಬದಲಿಸಿದೆ.
ಮೋದಿ ಭಕ್ತ ಮತ್ತೆ ಉಗ್ರನಾದ ‘‘ಕಾಂಗ್ರೆಸ್ ಕಾಲದಲ್ಲಿ ನಿಮಗೆ ಬಿಸಿಲಿರಲಿಲ್ವ? ಆಗ ಯಾಕೆ ಮಾತನಾಡಲಿಲ್ಲ. ನೆಹರೂ, ರಾಜೀವ್ ಗಾಂಧಿ ಕಾಲದಲ್ಲಿ ನೀವೆಲ್ಲ ಯಾಕೆ ಬಾಯಿ ಮುಚ್ಚಿಕೊಂಡಿದ್ದಿರಿ....?’’
ಕಾಸಿ ಬೆದರಿ ಗುಬ್ಬಚ್ಚಿಯಂತಾದ ‘‘ಸಾರಿ ಸಾರ್....ಈ ಬಾರಿ ಬಿಸಿಲು ಕಮ್ಮಿ....ಬಿಸಿಲಿದ್ರೂ ಬೆವರಲ್ಲ....ಒಂದು ರೀತಿಯಲ್ಲಿ ಬಿಸಿಲು ತಂಪಾಗಿದೆ. ಯಾವತ್ತೂ ಇಂತಹ ಬಿಸಿಲಿದ್ದರೇ ಚೆನ್ನ. ನಿಜಕ್ಕೂ ಮೋದಿಯವರ ಕಾಲದ ಬಿಸಿಲು ತುಂಬಾ ಹಿತವಾಗಿದೆ....’’ ಕಾಸಿ ತನ್ನ ಮಾತನ್ನು ಸರಿಪಡಿಸಿದ. ದಡೂತಿ ಭಕ್ತ ಮತ್ತೆ ಸಮಾಧಾನಗೊಂಡ.
ಎಷ್ಟೆಂದು ಕಾಯುವುದು. ಬಸ್ಸು ಬರುತ್ತಿಲ್ಲ...‘‘ಬಸ್ಸು ಬರುವುದು ಕಾಣ್ತನೇ ಇಲ್ಲ....ಎಷ್ಟೆಂತ ಕಾಯುವುದು?’’ ಕಾಸಿ ತನಗೆ ತಾನೆ ಹೇಳಿಕೊಂಡ.
‘‘ನೆಹರೂ ಕಾಲದಲ್ಲಿ ನಮ್ಮ ಊರಿಗೆ ಬಸ್ಸೇ ಇರಲಿಲ್ಲ? ಆಗ ಯಾಕೆ ಬಾಯಿ ಮುಚ್ಚಿಕೊಂಡಿರಿ? ಕಾಂಗ್ರೆಸ್ ಆಡಳಿತ ಕಾಲದಲ್ಲಿ ಬಸ್ ಸರಿಯಾದ ಸಮಯಕ್ಕೆ ಬರ್ತಿತ್ತಾ? ಆಗ ಮಾತನಾಡದವರು ಈಗ ಯಾಕೆ ಪ್ರಶ್ನೆ ಮಾಡುತ್ತಿದ್ದೀರಿ? ಕಾಂಗ್ರೆಸ್ ಗುಲಾಮರು....’’
ಕಾಸಿ ಮತ್ತೆ ಕಂಗಾಲಾದ ‘‘ಇಲ್ಲ ....ಬಸ್ ತಡವಾಗಿ ಬಂದರೂ ಏನೂ ಸಮಸ್ಯೆ ಇಲ್ಲ....ಈಗ ಮೊದಲಿನ ಹಾಗೆ ಪತ್ರಿಕಾಗೋಷ್ಠಿಯೇನೂ ಇಲ್ಲ....ನಿಧಾನಕ್ಕೆ ಹೋದರೆ ನಡೆಯುತ್ತದೆ....’’ ಮತ್ತೆ ಸಮಾಧಾನಿಸಿದ.
ಆದರೆ ಭಕ್ತ ಇನ್ನೂ ಆಕ್ರೋಶಗೊಂಡ, ‘‘ನನಗೆ ಗೊತ್ತು....ಮೋದಿಯವರು ಪತ್ರಿಕಾಗೋಷ್ಠಿ ಕರೆದಿಲ್ಲ ಎಂದು ವ್ಯಂಗ್ಯ ಮಾಡುತ್ತಿದ್ದೀರಿ. ನೀವೆಲ್ಲ ಕಾಂಗ್ರೆಸ್‌ನ ಗುಲಾಮರು. ನಿಮ್ಮ ಜೊತೆಗೆ ಮೋದಿಯವರು ಮಾತನಾಡಲ್ಲ....ಅಕ್ಷಯ್ ಕುಮಾರ್‌ರಂತಹ ಸೂಪರ್ ಸ್ಟಾರ್‌ಗಳಿಗೆ ಮಾತ್ರ ಅವರು ಸಂದರ್ಶನ ನೀಡುವುದು. ಇನ್ನು ರಜನಿಕಾಂತ್ ಅವರು ಮೋದಿಯವರನ್ನು ಸಂದರ್ಶನ ಮಾಡ್ತಾರೆ. ಆದರೆ ಪತ್ರಿಕಾಗೋಷ್ಠಿ ಕರೆಯುವುದೇ ಇಲ್ಲ. ಏನ್ಮಾಡ್ತೀರಿ ಈಗ?’’ ಅರಚಿ ಕೇಳಿದ.
‘‘ಸಾರ್, ಗಲಾಟೆ ಮಾಡಬೇಡಿ ಪ್ಲೀಸ್ ಸರ್’’ ಕಾಸಿ ಸಮಾಧಾನಿಸಿದ.
‘‘ನಮ್ಮದು ಗಲಾಟೆ. ನಿಮಗೆ ಪಾಕಿಸ್ತಾನಿಯರು ಗಡಿಯಲ್ಲಿ ಗಲಾಟೆ ಮಾಡುವುದು ಯಾಕೆ ಕಾಣುವುದಿಲ್ಲ? ನೀವು ಅದನ್ನು ಯಾಕೆ ಪ್ರಶ್ನಿಸುವುದಿಲ್ಲ?’’ ಭಕ್ತ ಮತ್ತೆ ಪ್ರಶ್ನಿಸಿದ.
‘‘ಹೌದು ಸಾರ್...ಪಾಕಿಸ್ತಾನದ ಗಲಾಟೆ ಜಾಸ್ತಿಯಾಗುತ್ತಿದೆ... ನಿಮ್ಮದು ಗಲಾಟೆ ಅಲ್ಲ ಸಾರ್...’’ ಕಾಸಿ ಮತ್ತೆ ತನ್ನ ಹೇಳಿಕೆಯನ್ನು ಸರಿಪಡಿಸಿದ.
‘‘ಓಹೋ...ಮೋದಿ ಬಂದ ಮೇಲೆ ಪಾಕಿಸ್ತಾನ ಗಲಾಟೆ ಜಾಸ್ತಿಯಾಗುತ್ತಿದೆ ಎಂದು ನಿಮ್ಮ ಅಭಿಪ್ರಾಯವೋ....ಕಾಂಗ್ರೆಸ್ ಸರಕಾರವಿರುವಾಗ ಪಾಕಿಸ್ತಾನ ಗಲಾಟೆ ಮಾಡುತ್ತಿರಲಿಲ್ಲವೇ? ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ ಬಳಿಕ ಗಲಾಟೆ ನಿಂತಿದೆ...’’ ಭಕ್ತ ಮತ್ತೆ ವಾದಕ್ಕಿಳಿದ.
‘‘ಸರಿ ಸಾರ್....ಸಾರಿ ಸಾರ್’’ ಎಂದ ಕಾಸಿ ಬಾಯಿ ಮುಚ್ಚಿ ಕೂತ. ಅಷ್ಟರಲ್ಲಿ ಬಸ್ ಬಂತು. ಬೇಗ ಹೋಗಿ ಕಾಸಿ ಮೂಲೆಯ ಸೀಟೊಂದನ್ನು ಹಿಡಿದ.
ಕಂಡಕ್ಟರ್ ಬಂದು ಟಿಕೆಟ್ ಎಂದ. ಕಾಸಿ ದುಡ್ಡು ಕೊಟ್ಟ ‘‘ಚಿಲ್ಲರೆ ಚಿಲ್ಲರೆ ಕೊಡಿ....’’ ಕಂಡಕ್ಟರ್ ಜೋರಾಗಿ ಹೇಳಿದ.
‘‘ನನ್ನಲ್ಲಿಯೂ ಚಿಲ್ಲರೆ ಇಲ್ಲ ಸಾರ್...’’ ಕಾಸಿ ಮನವಿ ಮಾಡಿದ.
ಅಷ್ಟರಲ್ಲಿ ದೂರದಲ್ಲಿ ಕೂತಿದ್ದ ದಡೂತಿ ಭಕ್ತ ಅಬ್ಬರಿಸಿದ ‘‘ಮೋದಿ ಕಾಲದಲ್ಲಿ ಮಾತ್ರ ಚಿಲ್ಲರೆ ಇರಲಿಲ್ಲವೋ...ಕಾಂಗ್ರೆಸ್ ಕಾಲದಲ್ಲಿ ನೀವೇಕೆ ಚಿಲ್ಲರೆ ಸಮಸ್ಯೆಯ ಕುರಿತಂತೆ ಮಾತನಾಡಲಿಲ್ಲ....’’
ಅಷ್ಟು ಕೇಳಿದ್ದೇ ಪತ್ರಕರ್ತ ಕಾಸಿ ಬಸ್ಸಿನಿಂದ ಇಳಿದವನೇ ಮನೆಯ ಕಡೆಗೆ ಓಡತೊಡಗಿದ.
‘‘ದೇಶದ್ರೋಹಿಗಳು...ದೇಶದ್ರೋಹಿಗಳು’’ ಭಕ್ತನ ಚೀರಾಟ ಕಾಸಿಯನ್ನು ಹಿಂಬಾಲಿಸ ತೊಡಗಿದ್ದವು.