ಪುಸ್ತಕ ಸಂಸ್ಕೃತಿಯ ನೆರಳು-ಬೆಳಕು

Update: 2019-05-25 18:31 GMT

ಪಠ್ಯಪುಸ್ತಕಗಳು ಮತ್ತು ಕಾನೂನು ಶಾಸ್ತ್ರ ಗ್ರಂಥಗಳು ಸೇರಿದಂತೆ ವೃತ್ತಿ ಸಂಬಂಧಿತ ಪುಸ್ತಕಗಳ ಪ್ರಕಟನೆ ಒಂದು ಲಾಭದಾಯಕ ಉದ್ಯಮವಾಗಿ ಬೆಳೆದಿದೆಯಾದರೂ ಇದೇ ಮಾತನ್ನು ಸಾಹಿತ್ಯ ಕೃತಿಗಳ ಪ್ರಕಟನೆ ಬಗ್ಗೆ ಹೇಳಲಾಗದು. ಹೆಸರಾಂತ ಸಾಹಿತಿಗಳ ಒಂದು ಸಾವಿರ ಪ್ರತಿ ಮಾರಾಟವಾಗಬೇಕಾದರೆ ಒಂದೆರಡು ವರ್ಷ ಕಾಯಬೇಕು ಹಾಗೂ ಗ್ರಂಥಾಲಯ ಇಲಾಖೆಯ ಕೃಪೆಯನ್ನು ಎದುರು ನೋಡುತ್ತಾ ಕೂರಬೇಕು ಎನ್ನುತ್ತಾರೆ ಪುಸ್ತಕ ಪ್ರಕಟನೆಯಲ್ಲಿ ಬಂಡವಾಳ ತೊಡಗಿಸಿದವರು.


ಪುಸ್ತಕೋದ್ಯಮ ಒಂದು ದೇಶದ ಪ್ರಗತಿಶೀಲತೆಯ ಪ್ರತೀಕ. ಆದರೆ ಭಾಷಾ ವೈವಿಧ್ಯತೆಯುಳ್ಳ ಭಾರತದಲ್ಲಿ ಪುಸ್ತಕ ಪ್ರಕಾಶನ ಒಂದು ಲಾಭದಾಯಕ ಉದ್ಯಮವಾಗಿ ಬೆಳೆದಿರುವುದು ಇನ್ನೂ ಸಂದೇಹಾಸ್ಪದ ವಿಚಾರವೇ. ಪಠ್ಯಪುಸ್ತಕಗಳು ಮತ್ತು ಕಾನೂನು ಶಾಸ್ತ್ರ ಗ್ರಂಥಗಳು ಸೇರಿದಂತೆ ವೃತ್ತಿ ಸಂಬಂಧಿತ ಪುಸ್ತಕಗಳ ಪ್ರಕಟನೆ ಒಂದು ಲಾಭದಾಯಕ ಉದ್ಯಮವಾಗಿ ಬೆಳೆದಿದೆಯಾದರೂ ಇದೇ ಮಾತನ್ನು ಸಾಹಿತ್ಯ ಕೃತಿಗಳ ಪ್ರಕಟನೆ ಬಗ್ಗೆ ಹೇಳಲಾಗದು. ಹೆಸರಾಂತ ಸಾಹಿತಿಗಳ ಒಂದು ಸಾವಿರ ಪ್ರತಿ ಮಾರಾಟವಾಗಬೇಕಾದರೆ ಒಂದೆರಡು ವರ್ಷ ಕಾಯಬೇಕು ಹಾಗೂ ಗ್ರಂಥಾಲಯ ಇಲಾಖೆಯ ಕೃಪೆಯನ್ನು ಎದುರು ನೋಡುತ್ತಾ ಕೂರಬೇಕು ಎನ್ನುತ್ತಾರೆ ಪುಸ್ತಕ ಪ್ರಕಟನೆಯಲ್ಲಿ ಬಂಡವಾಳ ತೊಡಗಿಸಿದವರು. ಅನಕೃ, ಭೈರಪ್ಪಒಂದು ಅಪವಾದವಷ್ಟೆ. ಸುಪ್ರಸಿದ್ಧ ಲೇಖಕರ ಪಾಡೇ ಹೀಗಾದರೆ ಇನ್ನು ಉದಯೋನ್ಮುಖ ಲೇಖಕರ ಗತಿ ಏನು? ಉದಯೋನ್ಮುಖ ಕವಿಗಳಿಗಂತೂ ಪ್ರಕಾಶಕರು ಸಿಗುವುದು ಇನ್ನೂ ಕಷ್ಟ. ಕಥೆ, ಕಾದಂಬರಿ ಓದುವ ಜನ ಇನ್ನೂ ಸ್ವಲ್ಪಮಟ್ಟಿಗೆ ಇದ್ದಾರೆ. ಕಾವ್ಯ ಯಾರು ಓದುತ್ತಾರೆ? ಪ್ರಕಟಿಸಿ ಗೊದಾಮಿನಲ್ಲಡಬೇಕಷ್ಟೆ ಎಂದು ಗೊಣಗುವ ಪ್ರಕಾಶಕರೇ ಹೆಚ್ಚು. ಇದು ಕನ್ನಡಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲ ಭಾರತೀಯ ಭಾಷೆಗಳಲ್ಲೂ ಮೊದಲಿನಿಂದ ಇರುವ ಸಮಸ್ಯೆ. ಉದಯೋನ್ಮುಖ ಕವಿಗಳ ಪ್ರಥಮ ಕವನ ಸಂಕಲನ ಪ್ರಕಟಿಸುವ ಘನ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದದ್ದು ಕೋಲ್ಕತಾದ ರೈಟರ್ಸ್ ವರ್ಕ್‌ಶಾಪ್.

ಈ ಪ್ರಕಾಶನ ಸಂಸ್ಥೆಗೆ ಈಗ ಷಷ್ಟ್ಯಬ್ದಿಯ ಸಂಭ್ರಮ. ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸುವುದೇ ಮುಖ್ಯ ಧ್ಯೇಯವಾಗುಳ್ಳ ರೈಟರ್ಸ್ ವರ್ಕ್‌ಶಾಪ್‌ನ ಸಂಸ್ಥಾಪಕರು ಪ್ರೊ. ಪುರುಷೋತ್ತಮ ಲಾಲ್. ಕೋಲ್ಕತಾದ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆೆಸರ್ ಆಗಿದ್ದ ಪುರುಷೋತ್ತಮ ಲಾಲರು ತಮ್ಮ ಎಂಟು ಮಂದಿ ಸಾಹಿತ್ಯ ಪ್ರೇಮಿ ಮಿತ್ರರೊಡಗೂಡಿ 1958ರಲ್ಲಿ ರೈಟರ್ಸ್ ವರ್ಕ್ ಶಾಪ್ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದರು. ಕೋಲ್ಕತಾ ಮಹಾನಗರದ ಲೇಕ್ ಗಾರ್ಡನ್ಸ್‌ನಲ್ಲಿರುವ ಪಿ.ಲಾಲರ ನಿವಾಸವೇ ಈ ಪ್ರಕಾಶನ ಸಂಸ್ಥೆಯ ಕಚೇರಿಯಾಯಿತು. ಇಲ್ಲಿಯ ವರೆಗೂ ಮೂರು ಸಾವಿರದ ಐದುನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಈ ಪ್ರಕಾಶನ ಸಂಸ್ಥೆಯ ಹೆಚ್ಚು ಪ್ರಕಟನೆಗಳು ಇಂಗ್ಲಿಷ್ ಭಾಷೆಯಲ್ಲಿವೆಯಾದರೂ ಆಧುನಿಕ ಭಾರತೀಯ ಭಾಷೆಗಳ ಕೃತಿಗಳನ್ನು ಪ್ರಕಟಿಸುವುದರಲ್ಲಿ ಅದು ಹಿಂದೆ ಬಿದ್ದಿಲ್ಲ. ಈ ಅರವತ್ತು ವರ್ಷಗಳಲ್ಲಿ ನಿಸಿಮ್ ಎಜಿಕೆಲ್, ಎ.ಕೆ.ರಾಮಾನುಜನ್, ರಸ್ಕಿನ್ ಬಾಂಡ್, ಅರುಣ್ ಕೊಲಾಟ್ಕರ್, ಅರವಿಂದ ಕೃಷ್ಣ ಮೆಹ್ರೀತ್ರ, ಜಯಂತ ಮಹೋಪಾತ್ರ, ಕಮಲಾದಾಸ್, ಮೀನ ಅಲೆಕ್ಸಾಂಡರ್, ಜಿ. ವಿ. ಪಟೇಲ್, ವಿಕ್ರಂ ಸೇಟ್ -ಹೀಗೆ ಇಂದು ವಿಶ್ವವಿಖ್ಯಾತರಾಗಿರುವ ಅನೇಕ ಕವಿ/ಸಾಹಿತಿಗಳ ಪ್ರಥಮ ಕೃತಿಯನ್ನು ಪ್ರಕಟಿಸಿದ ಕೀರ್ತಿ ಈ ಪ್ರಕಾಶನ ಸಂಸ್ಥೆಯದು.

 ಪುರುಷೋತ್ತಮ ಲಾಲ್ ಸ್ವತ: ಲೇಖಕರು, ಸಂಸ್ಕೃತ ವಿದ್ವಾಂಸರು. ಅವರ ಮೂವತ್ತು ವರ್ಷಗಳ ಪರಿಶ್ರಮದ ಫಲ ಇಂಗ್ಲಿಷ್ ಭಾಷೆಯಲ್ಲಿ ರಚಿಸಲಾಗಿರುವ ಭಾರತೀಯ ಮಹಾಕಾವ್ಯ ‘ಮಹಾಭಾರತ’. ಲಾಲ್ ಅವರು ರಚಿಸಿರುವ ಈ ‘ಮಹಾಭಾರತ’ವನ್ನು ರೈಟಸ್ ವರ್ಕ್ ಶಾಪ್ ಹದಿನೆಂಟು ಸಂಪುಟಗಳಲ್ಲಿ ಪ್ರಕಟಿಸಿದೆ. ಲಾಲ್ ಅವರು 2010ರಲ್ಲಿ ನಿಧನರಾಗುವ ಸಮಯಕ್ಕೆ ಹದಿನಾರು ಸಂಪುಟಗಳು ಪ್ರಕಟವಾಗಿದ್ದವು. ಕೊನೆಯ ಎರಡು ಸಂಪುಟಗಳ ಸಂಪಾದನಾ ಕಾರ್ಯವನ್ನು ಅವರ ಮಿತ್ರರಾದ ಪ್ರದೀಪ್ ಭಟ್ಟಾಚಾರ್ಯ ಪೂರ್ಣಗೊಳಿಸಿದ್ದಾರೆ.

 ಪುರುಷೋತ್ತಮ ಲಾಲರು ರೈಟರ್ಸ್ ವರ್ಕ್‌ಶಾಪ್ ಪ್ರಕಟನಾಲಯವನ್ನು ಮಿತ್ರರ ಸಹಕಾರದಿಂದ ಸ್ಥಾಪಿಸಿದರೂ ಹಸ್ತಪ್ರತಿ ಆಯ್ಕೆ, ಕರಡು ತಿದ್ದುವುದು, ಮುದ್ರಣ ವ್ಯವಸ್ಥೆ, ಮಾರಾಟ ಈ ಎಲ್ಲ ದುಡಿಮೆಯೂ ಅವರೊಬ್ಬರದೇ ಆಗಿತ್ತು. ಹೀಗಾಗಿ ಇದೊಂದು ಏಕವ್ಯಕ್ತಿ ಕುಟುಂಬ ಸಾಹಸ. ಲಾಲ್ ಅವರ ನಿಧನಾನಂತರ ಅವರ ಪುತ್ರ ಆನಂದ ರೈಟರ್ಸ್ ವರ್ಕ್ ಶಾಪ್‌ನ ಹೊಣೆ ಹೊತ್ತಿದ್ದಾರೆ. ಆನಂದ ಜಾಧವಪುರ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿದ್ದ ದಿನಗಳಲ್ಲೇ ಕರಡು ತಿದ್ದುವಿಕೆಯಂಥ ಕೆಲಸಗಳಲ್ಲಿ ತಂದೆಗೆ ನೆರವಾಗುತ್ತಿದ್ದರು. ಈಗ ರೈಟರ್ಸ್ ವರ್ಕ್ ಶಾಪ್‌ನ ಪ್ರಕಾಶನ ಕಾರ್ಯವನ್ನು ಪೂರ್ತಿಯಾಗಿ ವಹಿಸಿಕೊಂಡಿದ್ದಾರೆ. ಪ್ರಕಟನೆ ಕೋರಿ ಬರುವ ಹಸ್ತಪ್ರತಿಗಳ ಪರಾಮರ್ಶೆ, ಪರಿಷ್ಕರಣ, ಕರಡು ತಿದ್ದುವುದು, ಮುದ್ರಣ ವಿನ್ಯಾಸ, ಮಾರಾಟ ಈ ಎಲ್ಲ ಕೆಲಸಗಳನ್ನು ತಂದೆಯಂತೆ ಅವರೊಬ್ಬರೇ ನಿರ್ವಹಿಸುತ್ತಿದ್ದಾರೆ. ಯುವ ಕವಿಗಳ ಪ್ರಥಮ ಕವನ ಸಂಕಲನಗಳನ್ನು ಪ್ರಕಟಿಸುವುದರಲ್ಲಿ ಮುಂಚೂಣಿಯಲ್ಲಿರುವ ರೈಟರ್ಸ್ ವರ್ಕ್‌ಶಾಪ್ ಗುಣದಲ್ಲಿ ಎಂದೂ ರಾಜಿಮಾಡಿಕೊಂಡಿದ್ದಿಲ್ಲ. ‘‘ಹಸ್ತಪ್ರತಿಗಳ ಆಯ್ಕೆಯಲ್ಲಿ ಕಾವ್ಯ ಗುಣಕ್ಕೆ, ಕವಿಯ ಸೃಜನಶೀಲ ಪ್ರತಿಭೆಗಷ್ಟೇ ಆದ್ಯತೆ. ಬೇರೆ ಪ್ರಭಾವಗಳನ್ನು ನಾವು ಲಕ್ಷಿಸುವುದಿಲ್ಲ’’ ಎನ್ನುತ್ತಾರೆ ಆನಂದ್.

ಕಾವ್ಯ ಕೃತಿ ಅಂತರಂಗ ಬಹಿರಂಗ ಎರಡರಲ್ಲೂ ಸುಂದರವಾಗಿರಬೇಕು, ಶ್ರೀಮಂತವಾಗಿರಬೇಕು ಎಂಬುದು ರೈಟರ್ಸ್ ವರ್ಕ್‌ಶಾಪ್‌ನ ಧ್ಯೇಯ. ಅಂತೆಯೇ ಅದರ ಪ್ರಕಟನೆೆಗಳು ರಕ್ಷಾಪತ್ರದ ಆಕರ್ಷಣೀಯ ಚಿತ್ರ ಮತ್ತು ವಿನ್ಯಾಸಗಳಿಂದ ಕಾವ್ಯರಸಿಕರ ಮೆಚ್ಚುಗೆಗೆ ಪಾತ್ರವಾಗಿವೆ. ಪ್ರಾರಂಭದಿಂದಲೂ ಈ ಪ್ರಕಾಶನದ ಮುಖಪುಟಗಳನ್ನು ರೂಪಿಸುತ್ತಿರುವವರು ಕಲಾವಿದ ಮೊಹಿಯುದ್ದೀನ್ ಖಾನ್.ಮುಖ ಪುಟಕ್ಕೆ ಈತ ಬಳಸುವುದು ನಾರಿಯರು ಉಡುವ ಸೀರೆಯನ್ನು. ರಟ್ಟಿನ ಮೇಲುಹೊದಿಕೆಯಾಗಿ ವಿವಿಧ ವಿನ್ಯಾಸಗಳ ಸೀರೆಯನ್ನು ಬಳಸಿ ಸೌಂದರ್ಯ ಮತ್ತು ಬಾಳಿಕೆ ಎರಡರಲ್ಲೂ ಮುಖಪುಟದ ಸೌಷ್ಠವವನ್ನು ಹೆಚ್ಚಿಸುವುದು ಮೊಹಿಯುದ್ದೀನ್ ಖಾನರ ವೈಶಿಷ್ಟ್ಯ. ವಿಲಿಯಂ ಹಲ್ ಅವರ ‘ವಿಷನ್ಸ್ ಆಫ್ ಹ್ಯಾಂಡಿ ಹಾಪರ್’ ಗ್ರಂಥಕ್ಕೆ ರೂಪಿಸಿರುವ ಸೀರೆವಸ್ತ್ರ ಮುಖ ಪುಟಕ್ಕಾಗಿ ಈ ಕಲಾವಿದನಿಗೆ ರಾಷ್ಟ್ರಪ್ರಶಸ್ತಿ ಲಭಿಸಿದೆ. ಲಾಲರ ಕುಟುಂಬ ರೈಟರ್ಸ್ ವರ್ಕ್ ಶಾಪ್ ಮುಂದುವರಿಸಿಕೊಂಡು ಹೋಗುತ್ತಿರುವಂತೆ ಮೊಹಿಯುದ್ದೀನ್ ಖಾನರ ಮೊಮ್ಮಕ್ಕಳು ಸೀರೆ ಬಟ್ಟೆಯಲ್ಲಿ ಪುಸ್ತಕಗಳ ಮುಖಪುಟ ರಚಿಸುವ ತಾತನ ಕಲೆಯನ್ನು ಮುಂದುವರಿಸಿದ್ದಾರೆ.

 ಕಾವ್ಯಪ್ರೀತಿಯನ್ನು, ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದರಲ್ಲಿ ರೈಟರ್ಸ್ ವರ್ಕ್‌ಶಾಪ್‌ನಂಥ ಪ್ರಕಾಶನ ಸಂಸ್ಥೆಯ ಪಾತ್ರ ಮಹತ್ವಪೂರ್ಣವಾದುದು. ನಮ್ಮ ದೇಶದಲ್ಲಿ 19,000 ಪ್ರಕಾಶನ ಸಂಸ್ಥೆಗಳಿದ್ದು ವರ್ಷಕ್ಕೆ 80,000 ಪುಸ್ತಕಗಳು ಪ್ರಕಟವಾಗುತ್ತವೆಯಂತೆ. ಕನ್ನಡದಲ್ಲಿ ಪ್ರತಿ ವರ್ಷ 6ರಿಂದ 7 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆಯಂತೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಮತ್ತು ಸತ್ವಶಾಲಿ ಸಾಹಿತ್ಯ ಪ್ರಕಟನೆಯಲ್ಲಿ ಖ್ಯಾತವಾಗಿರುವ ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ದಂಪತಿಗೆ ‘ಪುಸ್ತಕ ಸಂಸ್ಕೃತಿ’ ಪ್ರಶಸ್ತಿ ಪ್ರದಾನ ಮಾಡುತ್ತಾ ಬರಗೂರು ರಾಮಚಂದ್ರಪ್ಪನವರು ಈ ಅಂಕಿಅಂಶಗಳನ್ನು ತಿಳಿಸಿದ್ದಾರೆ. ಕನ್ನಡದಲ್ಲಿ ಒಳ್ಳೆಯ ಪುಸ್ತಕಗಳನ್ನು ಪ್ರಕಟಸುತ್ತಿರುವ ನೂರಾರು ಪ್ರಕಾಶನ ಸಂಸ್ಥೆಗಳಿವೆ ಎಂಬುದಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳು ಪ್ರಕಟವಾಗುತ್ತಿರುವುದೇ ಸಾಕ್ಷಿ. ಆದರೂ ಉದಯೋನ್ಮುಖ ಲೇಖಕರಿಗೆ ಚೊಚ್ಚಲ ಕೃತಿಗಳ ಪ್ರಕಟನೆ ಸುಲಭದ ಮಾತಲ್ಲ. ಹಸ್ತಪ್ರತಿಯನ್ನು ಹಿಡಿದುಕೊಂಡು ಪ್ರಕಾಶನ ಸಂಸ್ಥೆಗಳಿಗೆ ಎಡೆತಾಕಿ ನಿರಾಶರಾಗುವಂಥ ಸ್ಥಿತಿ ಇಂದಿಗೂ ತಪ್ಪಿಲ್ಲ.

‘ಪದ್ಯಂಹೃದ್ಯಂ’ ಆದರೂ ಕವನ ಸಂಗ್ರಹದ ಪ್ರಕಟನೆ ಇನ್ನೂ ಕಷ್ಟ. ನಾಟಕಗಳ ಪಾಡೂ ಇದೇನೆ. ಕಾವ್ಯ, ನಾಟಕಗಳಿಗೆ ಕಥೆ ಕಾದಂಬರಿಗಳಷ್ಟು ದೊಡ್ಡ ಪ್ರಮಾಣದಲ್ಲಿ ಓದುವ ಬಳಗವಿಲ್ಲ ಎಂಬುದು, ಕಾವ್ಯ-ನಾಟಕಗಳ ಪ್ರಕಟನೆಯಲ್ಲಿ ಪ್ರಕಾಶಕರು ಉತ್ಸಾಹ ತೋರುವುದಿಲ್ಲ ಎಂಬುದು ಈ ಪರಿಸ್ಥಿತಿಗೆ ಒಂದು ಕಾರಣ. ಉದಯೋನ್ಮುಖ ಕವಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೆಲವೊಂದು ಸಂಘ ಸಂಸ್ಥೆಗಳು ಕವನಗಳ ಹಸ್ತಪ್ರತಿಗಳ ಪರಾಮರ್ಶೆಯನಂತರ ಪ್ರಕಟನೆಗೆ ಅನುಕೂಲವಾಗುವಂತೆ ಬಹುಮಾನ ನೀಡುತ್ತಿವೆ. ಖ್ಯಾತ ಕವಿ ಎಚ್.ಎಸ್. ವೆಂಕಟೇಶ ಮೂರ್ತಿಯವರು ಉದಯೋನ್ಮುಖರನ್ನು ಪ್ರೋತ್ಸಾಹಿಸುವ ಸಲುವಾಗಿ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಯುವಪೀಳಿಗೆಯ ಪ್ರತಿಭಾನ್ವಿತರ ಚೊಚ್ಚಲು ಕೃತಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚೆಗೆ ಕತೆಗಾರ ವಸುಧೇಂದ್ರ ಅವರೂ ಸಣ್ಣ ಕಥೆಗಳ ಪ್ರಕಾರದಲ್ಲಿ ಇಂಥ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಇಂಥ ಸಾಹಸಗಳನ್ನು ಏಕಾಂಗಿಯಾಗಿ ಮುಂದುವರಿಸಿಕೊಂಡು ಹೋಗುವುದು ಯಾರಿಗಾದರೂ ಕಷ್ಟವೇ.

ನಂದೂರರ ‘ಅಕ್ಕನಾಗಮ್ಮ’.... 
ಇತ್ತೀಚೆಗೆ ಹುಬ್ಬಳ್ಳಿಯ ಕವಿ ಮಹಾಂತಪ್ಪ ನಂದೂರ ಅವರ ಪರಿಚಯವಾಯಿತು. ನಂದೂರ ಅವರು ತಮ್ಮ ‘ಅಕ್ಕನಾಗಮ್ಮ-ಜೀವನ ಕಾವ್ಯ’ ಕೃತಿಯ ಹಸ್ತಪ್ರತಿಯನ್ನು ಹಿಡಿದುಕೊಂಡು ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರ ಜೊತೆಗೆ ಮುದ್ರಣಾಲಯದತ್ತ ಹೊರಟಿದ್ದರು. ಕವಿ ಮಹಾಂತಪ್ಪ ನಂದೂರ ಅವರ ಪ್ರಥಮ ಕವನ ಸಂಕಲನವನ್ನು ಕೆಲವು ವರ್ಷಗಳ ಹಿಂದೆ ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಕಟಿಸಿ ಉದಯೋನ್ಮುಖ ಕವಿಗೆ ಭವ್ಯ ಭವಿಷ್ಯದ ಆಶೀರ್ವಾದ ಮಾಡಿದ್ದರು ಎಚ್ಚೆಸ್ಚಿ. ಈ ಆಶೀರ್ವಾದ ಹುಸಿಹೋಗಲಿಲ್ಲ. ನಂದೂರ ಮತ್ತೆ ಎರಡು ಕವನ ಸಂಕಲನಗಳನ್ನು ಹೊರರತಂದರು. ‘ಅರಿವೇ ಪ್ರಮಾಣು’ ಬಸವಣ್ಣನವರ ಸಹೋದರಿ ‘ಅಕ್ಕ ನಾಗಲಾಂಬಿಕೆ’ ಬದುಕು ತತ್ತ್ವಗಳನ್ನು ಶೋಧಿಸುವ ಮಹತ್ವದ ಕಾವ್ಯ ಕೃತಿ.

ಹನ್ನೆರಡನೆಯ ಶತಮಾನದ ಬದುಕಿನ ತಲ್ಲಣಗಳನ್ನು ಮುಖಾಮುಖಿಯಾಗಿಸುವ ಈ ಕೃತಿಯನ್ನು ನಂದೂರ ಅವರು ಸುನೀತ (ಸಾನೆಟ್) ಪ್ರಕಾರದಲ್ಲಿ ಬರೆದಿದ್ದಾರೆ. ಸಂಶೋಧನೆ ಮತ್ತು ಸೃಜನಶೀಲತೆ ಎರಡೂ ಹಾಸುಹೊಕ್ಕಾಗಿ ಮೂಡಿಬಂದಿರುವ ಈ ಕೃತಿಯ ಪ್ರಕಟನೆಯಲ್ಲಿ ನಾಡಿನ ಪ್ರಕಾಶಕರು ಯಾರೂ ಉತ್ಸಾಹ ತೋರಿರಲಾರರು. ಎಂದೇ ಮಹಾಂತಪ್ಪನಂದೂರ ಅವರೇ ‘ಅರಿವೇ ಪ್ರಮಾಣು’-ಅಕ್ಕ ನಾಗಮ್ಮ ಜೀವನ ಕಾವ್ಯವನ್ನು ತಾವೇ ಪ್ರಕಟಿಸಿದ್ದಾರೆ. ಇನ್ನೂರಕ್ಕೂ ಹೆಚ್ಚು ಪುಟಗಳ ಈ ಗ್ರಂಥದಲ್ಲಿ ನಂದೂರ ಅವರು ಮುನ್ನೂರ ಎಪ್ಪತ್ತೈದು ಸುನೀತಗಳಲ್ಲಿ ಅಕ್ಕ ನಾಗಮ್ಮನ ಜೀವನ ಕಾವ್ಯವನ್ನು ‘ವಚನದ ಸಹಜ ನುಡಿಗಳಲ್ಲಿ’ ಕಟ್ಟಿದ್ದಾರೆ.

ಎಚ್. ಎಸ್. ವೆಂಕಟೇಶ ಮೂರ್ತಿಯವರು ಹೇಳಿರುವಂತೆ, ‘‘ಮಹಾಂತಪ್ಪನಂದೂರ ಅವರ ಪ್ರಯೋಗಶೀಲತೆಯ ಫಲವಾದ ಈ ಸುದೀರ್ಘ ಕಾವ್ಯ ಹದಿನಾಲ್ಕು ಸಾಲುಗಳ ಸುನೀತ ಬಂಧದಲ್ಲಿ ಶರಣ ಲೋಕವನ್ನೂ ಅದರ ಮಣ್ಣು ಬಣ್ಣಗಳೊಂದಿಗೆ ನಮ್ಮ ಹತ್ತಿರಕ್ಕೆ ತಂದಿದೆ.’’ ಕಾವ್ಯ ರಚನೆ ಮತ್ತು ಪ್ರಕಟನೆಗಳೆರಡರಲ್ಲೂ ನಂದೂರ ಅವರ ಸೃಜನಶೀಲತೆ ಮತ್ತು ಪರಿಶ್ರಮಗಳು ಎದ್ದು ಕಾಣುತ್ತವೆ. ಕವಿಗಳಿಗೆ ಪುಸ್ತಕ ಪ್ರಕಟನೆ ಇವತ್ತಿಗೂ ಸುಲಭವಲ್ಲ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75