ನಮ್ದೂಕೆ ಈಗ ಬೀಫ್ ‘ಮಾತಾ’ ಆಗ್ಬಿಟ್ಟಿದೆ....!

Update: 2019-05-25 19:05 GMT

ರೇಷನ್ ಬ್ಯಾಗ್ ಅವರು ಚೀಲ ಹಿಡಿದು ಹೊರಟಿದ್ದೇ ಬೇಗಂ ಕೂಗಿ ಹೇಳಿದರು ‘‘ಬರುವಾಗ ಶಿವಾಜಿನಗರದಿಂದ ಒಳ್ಳೆಯ ಬೀಫ್ ಇದ್ರೆ ತನ್ನಿ’’

‘‘ಇಲ್ಲ ಇಲ್ಲ....ನಾನೀಗ ಬೀಫ್ ತಿನ್ನೋದನ್ನು ಬಿಟ್ಟಿದ್ದೇನೆ’’ ರೇಷನ್ ಬ್ಯಾಗ್ ಬಾಂಬ್ ಸ್ಫೋಟಿಸಿದರು. ಬೇಗಂ ಬೆಚ್ಚಿ ಬಿದ್ದು ‘‘ನೋಡಿ...ಹೀಗೆ ಹಾಡ ಹಗಲೇ ಬಾಂಬ್ ಸಿಡಿಸಿದರೆ ನಿಮ್ದೂಕೆ ಉಗ್ರಗಾಮಿ ಅಂತ ಹಿಡಿದು ಒಳಗೆ ತಳ್ಳಬಹುದು....’’

‘‘ನಮ್ದೂಕೆ ಈಗ ಬೀಫ್ ಮಾತಾ ಆಗ್ಬಿಟ್ಟಿದೆ....ನಮ್ಮ ಏರಿಯಾದ ಹುಡುಗರನ್ನೆಲ್ಲ ಸೇರಿಸಿ ಗೋರಕ್ಷಕರ ದಳ ಕಟ್ಟುವುದಕ್ಕೆ ಹೊರಟಿದ್ದೇನೆ....’’ ರೇಷನ್ ಬ್ಯಾಗ್ ತಮ್ಮ ಚೀಲದಿಂದ ಇನ್ನೊಂದು ಬಾಂಬ್ ಸಿಡಿಸಿದಾಗ ಬೇಗಂ ತಲೆ ಗಿರ್ರನೆ ಸುತ್ತು ಹೊಡೆಯಿತು.

‘‘ತೌಬಾ ತೌಬಾ...ಏನಿದು...ಹೀಗೆಲ್ಲ ಮಾತನಾಡ್ತಾ ಇದ್ದೀರಿ...ರಾತ್ರಿ ಮಾತ್ರೆ ತೆಗೊಂಡಿದ್ದೀರಿ ತಾನೆ?’’ ಬೇಗಂ ಆತಂಕದಿಂದ ಕೇಳಿದರು.

 ‘‘ಒಂದಲ್ಲ ಎರಡು ತಗೊಂಡಿದೀನಿ. ಆ ಕಾಂಗ್ರೆಸ್ ರೇಷನ್ ತಿಂದು ತಿಂದು ಸಾಕಾಯಿತು. ಏನೂ ಚೆನ್ನಾಗಿಲ್ಲ. ಅದಕ್ಕೆ ನಾನೀಗ ಬಿಜೆಪಿಯ ನ್ಯಾಯ ಬೆಲೆ ಅಂಗಡಿಯಿಂದ ನಮ್ಮ ಮೊಮ್ಮಕ್ಕಳಿಗೆ ರೇಷನ್‌ನಲ್ಲಿ ‘ನ್ಯಾಯ’ ತೆಗೊಂಡು ಬರಲು ಹೊರಟಿದ್ದೇನೆ....’’

‘‘ಚುನಾವಣೆಯ ಹಬ್ಬಕ್ಕೆ ಆಯಿತು ಅಂತ ನೀವು ಸಾಕಿದ ಅಲ್ಪಸಂಖ್ಯಾತ ಕುರಿಗಳನ್ನೆಲ್ಲ ಏನು ಮಾಡ್ತೀರಿ?’’ ಬೇಗಂ ಅರ್ಥವಾಗದೆ ಕೇಳಿದರು.

‘‘ನೋಡು...ನಮ್ಮಲ್ಲಿರುವುದು ಬಡಕಲು ಮುದಿ ಕುರಿಗಳು. ಹೊಸ ಕುರಿಗಳೆಲ್ಲ ನನ್ನ ಹಿಂದೆ ಬರುತ್ತಿಲ್ಲ. ಈ ಬಡಕಲು ಕುರಿಯನ್ನು ಇಟ್ಟುಕೊಂಡು ಹಬ್ಬ ಮಾಡಕ್ಕಾಗಲ್ಲ. ಹೇಗೂ ಬಿಜೆಪಿಯೊಳಗೆ ಅಲ್ಪಸಂಖ್ಯಾತ ತಳಿಯ ಕುರಿಗಳ ಕೊರತೆಯಿದೆ. ಅಲ್ಲಿ ಈ ಬಡಕಲು ಕುರಿಗಳಿಗೆ ಒಳ್ಳೆಯ ನ್ಯಾಯ ಸಿಗಬಹುದು ಎಂದು ಭಾವಿಸಿದ್ದೇನೆ....’’ ರೇಷನ್ ಬ್ಯಾಗ್ ವಿವರಿಸಿದರು. ‘‘ಆದರೆ ಈವರೆಗೆ ಕಾಂಗ್ರೆಸ್‌ನಿಂದ ಚೆನ್ನಾಗಿಯೇ ರೇಷನ್ ಪಡೆದು ಕುಟುಂಬ ಸಾಕಿದ್ರಿ...ಈಗ ಬಿಜೆಪಿ ರೇಷನ್ ಹಿಂದೆ ಹೋದರೆ ನಾನು ಬೀಫ್ ತಿನ್ನೋದು ಹೇಗೆ?’’ ಬೇಗಂ ಬೀಫ್ ಇಲ್ಲದ ಬದುಕನ್ನು ಕಲ್ಪಿಸಿಕೊಂಡು ಕಂಗಾಲಾದರು.

‘‘ನೋಡು....ಬಿಜೆಪಿ ಸರಕಾರದಲ್ಲಿದ್ದರೆ ಬೀಫ್‌ನ್ನು ಸೇಫಾಗಿ ತಿನ್ನಬಹುದು. ಪಕ್ಷದ ಬಾವುಟ ಹಾಕಿಕೊಂಡು ಕಾರ್‌ನಲ್ಲಿ ಬಿಂದಾಸಾಗಿ ಮನೆಗೆ ತರಬಹುದು. ಬಿಜೆಪಿ ಸರಕಾರದ ಅವಧಿಯಲ್ಲಿ ಅತ್ಯಧಿಕ ಬೀಫ್ ಸೌದಿಗೆ ರಫ್ತಾಯಿತು. ಇದು ಕಾಂಗ್ರೆಸ್‌ನೋರಿಗೆ ಯಾಕೆ ಸಾಧ್ಯ ಆಗಲಿಲ್ಲ? ಅಂದರೆ ನಮ್ಮ ಕೊಲ್ಲಿ ರಾಷ್ಟ್ರಗಳಿಗೆ ಹೆಚ್ಚು ಹೆಚ್ಚು ಬೀಫ್ ಪೂರೈಸಿ ಆ ಮೂಲಕ ಬಿಜೆಪಿ ಮುಸ್ಲಿಮರ ಪರ ಎನ್ನುವುದನ್ನು ಸಾಬೀತು ಮಾಡುತ್ತಿದೆ. ಅದಕ್ಕಾಗಿ ನಾನು ಬಿಜೆಪಿ ಸೇರಬೇಕು ಎಂದಿದ್ದೇನೆ....’’ ರೇಷನ್ ತನ್ನ ಬ್ಯಾಗ್‌ನ್ನು ಸಂಪೂರ್ಣ ಬಿಚ್ಚಿ ತೋರಿಸಿದರು. ಬೇಗಂಗೆ ತುಸು ಖುಷಿಯಾಯಿತು.

‘‘ಆದರೆ ನಮ್ದೂಕೆ ಸಮುದಾಯಕ್ಕೆ ಬೇಜಾರು ಆಗುವುದಿಲ್ಲವೇ?’’ ಬೇಗಂ ಅನುಮಾನದಿಂದ ಕೇಳಿದರು. ‘‘ನಮ್ಮ ಕುಟುಂಬ ನಮ್ದೂಕೆ ಸಮುದಾಯ. ಇಲ್ಲ ಎಂದರೆ ನನ್ನ ಮೊಮ್ಮಕ್ಕಳು, ಮೊಮ್ಮಕ್ಕಳ ಮಕ್ಕಳೆಲ್ಲ ಶಿವಾಜಿ ನಗರದಲ್ಲಿ ಮಟನ್ ಕತ್ತರಿಸುತ್ತಾ ಇರಬೇಕಾಗುತ್ತದೆ. ಇದ್ದ ಬಿದ್ದ ಎಲ್ಲ ಅಲ್ಪಸಂಖ್ಯಾತ ಬಡ ಕುರಿಗಳನ್ನು ಮಾರಿ ನಮ್ಮ ಸಮುದಾಯಕ್ಕೆ ನ್ಯಾಯ ಪಡೆಯಬೇಕು ಎಂದು ಬಿಜೆಪಿ ಅಂಗಡಿಗೆ ಹೊರಟಿದ್ದೇನೆ...’’

‘‘ನಿಮ್ಮನ್ನು ಅವರು ಅಂಗಡಿಯೊಳಗೆ ಬಿಟ್ಟುಕೊಳ್ಳಬಹುದಾ?’’ ಬೇಗಂಗೆ ಅನುಮಾನ.

‘‘ಮೊದಲು ನಾನು ಕೆಲವು ಅಲ್ಪಸಂಖ್ಯಾತ ಕುರಿಗಳನ್ನು ಕಟ್ಟಿಕೊಂಡು ಶಿವಾಜಿ ನಗರ ಗೋರಕ್ಷಕ ದಳ ರಚಿಸಲಿದ್ದೇನೆ. ಬಳಿಕ, ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ಆಗಲೇಬೇಕು ಎಂದು ಕರೆ ಕೊಡ್ತೇನೆ....’’ ರೇಷನ್ ಬ್ಯಾಗ್ ತನ್ನ ಯೋಜನೆಯನ್ನು ವಿವರಿಸಿದರು.

‘‘ಶಿವಾಜಿ ನಗರದ ಬಡ ಜನರಿಗೆ ಏನಾದರೂ ಪ್ರಯೋಜನವಾದೀತೇ?’’

‘‘ನಮ್ಮ ಕುಟುಂಬಕ್ಕೆ ಪ್ರಯೋಜನವಾಯಿತೆಂದರೆ ಇಡೀ ಸಮುದಾಯಕ್ಕೆ ಪ್ರಯೋಜನವಾಯಿತು ಅಂತ ಅರ್ಥ. ನೋಡು...ನಾನು ಆಯ್ಕೆಯಾಗಿದ್ದ ಕ್ಷೇತ್ರದಲ್ಲಿ ಇನ್ನೂ ಬಡತನ, ಅನಕ್ಷರತೆ ಉಳಿದಿದೆ. ಇದು ನನ್ನ ಸಮುದಾಯಕ್ಕೆ ನಾನು ಕೊಟ್ಟ ಕೊಡುಗೆ. ಅನಕ್ಷರತೆ, ಬಡತನ ನಮ್ಮ ಸಮುದಾಯದ ಆಸ್ತಿ. ಆ ಆಸ್ತಿಯನ್ನು ವಂಶಪಾರಂಪರ್ಯವಾಗಿ ರಕ್ಷಿಸಿಕೊಂಡು ಬಂದಿದ್ದೇನೆ. ಒಂದು ವೇಳೆ ಈ ಆಸ್ತಿ ಬೇರೆಯವರ ಪಾಲಾದರೆ ಶಿವಾಜಿನಗರಕ್ಕೂ, ನಮ್ಮ ಕುಟುಂಬಕ್ಕೂ ಬಹುದೊಡ್ಡ ನಷ್ಟ. ಆದುದರಿಂದ, ಈ ಆಸ್ತಿಯನ್ನು ರಕ್ಷಿಸಲು ನಾನು ಪಣ ತೊಟ್ಟು ಬಿಜೆಪಿ ಸೇರಲಿದ್ದೇನೆ....’’

‘‘ಅದೆಲ್ಲ ಇರಲಿ...ಇನ್ನು ಮುಂದೆ ಬೀಫ್ ಗತಿಯೇನು? ಬಿರಿಯಾನಿ ಮಾಡೋದು ಹೆಂಗೆ...?’’

‘‘ಸದ್ಯಕ್ಕೆ ನಾನು ಸಾಕಿರುವ ಬಡಕಲು ಅಲ್ಪಸಂಖ್ಯಾತ ಕುರಿಗಳನ್ನೇ ಬಿರಿಯಾನಿ ಮಾಡಲು ಬಳಸಿಕೊಳ್ಳೋಣ. ಒಮ್ಮೆ ಬಿಜೆಪಿಯಲ್ಲಿ ನನಗೊಂದು ಸಚಿವ ಸ್ಥಾನ ಸಿಗಲಿ. ಬಳಿಕ ಶಿವಾಜಿನಗರ ಗೋರಕ್ಷಕ ದಳದ ನಾಯಕರೇ ಬೀಫ್‌ನ್ನು ಮನೆಗೇ ಪೂರೈಸುತ್ತಾರೆ....’’

‘‘ಒಂದು ವೇಳೆ ಬಿಜೆಪಿಯೋರು ಸೇರಿಸದೇ ಇದ್ದರೆ...’’ ಬೇಗಂ ಮತ್ತೆ ಅನುಮಾನದಿಂದ ಕೇಳಿದರು.

‘‘ಸೇರಿಸದೆ ಇದ್ದರೆ ಏನಾಯಿತು? ಕಾಂಗ್ರೆಸ್ ವೃದ್ಧಾಶ್ರಮದಲ್ಲಿ ಹಾಯಾಗಿರೋಣ. ಹೇಗೂ ಕಾಂಗ್ರೆಸ್‌ನಿಂದ ಹಳೆ ಪಿಂಚಣಿ ಸರಿಯಾದ ಸಮಯಕ್ಕೆ ಬರ್ತಾ ಇದೆ...’’ ರೇಷನ್ ಬ್ಯಾಗ್ ತನ್ನ ಬ್ಯಾಗ್ ಕೊಡವಿಕೊಂಡು ಮನೆಯಿಂದ ಹೊರಟರು.

‘‘ಸಂಜೆಗೆ ತಿಂಡಿ ಏನು ಮಾಡಲಿ....’’ ಅಂಗಳ ದಾಟುತ್ತಿದ್ದ ಬ್ಯಾಗ್‌ರನ್ನು ಬೇಗಂ ಕೇಳಿದರು.

‘‘ಕೇಸರಿ ಬಾತ್ ಮಾಡು’’ ಎಂದು ಕೂಗಿ ಹೇಳಿದರು.

ಈ ಕೇಸರಿ ಬಾತ್‌ನ್ನು ಯಾವುದರಿಂದ ಮಾಡುವುದು? ಚಿಕನ್‌ನಿಂದಲೋ, ಮಟನ್‌ನಿಂದಲೋ ಎಂದು ಯೋಚಿಸುತ್ತಾ ಬೇಗಂ ಅಡುಗೆ ಮನೆ ಹೊಕ್ಕರು.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News