‘ಇವಿಎಂ ನಿಷೇಧಿಸಿ’ ಪ್ರಜಾಪ್ರಭುತ್ವ-ಸಂವಿಧಾನ ರಕ್ಷಿಸಿ: ವಾಮನ್ ಮೆಶ್ರಾಮ್

Update: 2019-05-29 16:47 GMT

ಬೆಂಗಳೂರು, ಮೇ 29: ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳ ವಿರುದ್ಧ 2014ರಲ್ಲಿ ನಾನು ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಇವಿಎಂಗಳಲ್ಲಿ ಅಕ್ರಮ ನಡೆಯುತ್ತಿರುವುದಾಗಿ ಆರೋಪಿಸಿದ್ದೆ. ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿದೆ ಎಂದು ಬಹುಜನ ಕ್ರಾಂತಿ ಮೋರ್ಚಾದ ರಾಷ್ಟ್ರೀಯ ಸಂಚಾಲಕ ವಾಮನ್ ಮೆಶ್ರಾಮ್ ಆರೋಪಿಸಿದ್ದಾರೆ.

‘ವಾರ್ತಾಭಾರತಿ’ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನವನ್ನು ರಕ್ಷಿಸಬೇಕಾದರೆ ಇವಿಎಂಗಳನ್ನು ನಿಷೇಧಿಸಬೇಕು. ಈ ಹಿನ್ನೆಲೆಯಲ್ಲಿ ಜೂ.20ರಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸುಮಾರು 6 ತಿಂಗಳುಗಳ ಕಾಲ ‘ಪರಿವರ್ತನಾ ಯಾತ್ರೆ’ಯನ್ನು ಹಮ್ಮಿಕೊಂಡಿದ್ದೇನೆ ಎಂದರು.

ದೇಶದ 500 ಲೋಕಸಭಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದಲ್ಲಿ ಹೋಗಿ ಜನರಿಗೆ ಇವಿಎಂ ಕುರಿತು ಜಾಗೃತಿ ಮೂಡಿಸುತ್ತೇವೆ. ನಮ್ಮ ಪ್ರತಿಯೊಬ್ಬ ಪ್ರಮುಖ ಕಾರ್ಯಕರ್ತನು ಆಯಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 180 ದಿನಗಳ ಕಾಲ ಪರಿವರ್ತನಾ ಯಾತ್ರೆಯನ್ನು ಮುಂದುವರೆಸಲಿದ್ದಾನೆ ಎಂದು ಅವರು ಹೇಳಿದರು.

2013ರಲ್ಲಿ ಡಾ.ಸುಬ್ರಹ್ಮಣ್ಯಂ ಸ್ವಾಮಿ ಇವಿಎಂಗಳಲ್ಲಿ ಲೋಪಗಳಿರುವ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬ್ಯಾಲೆಟ್ ಪೇಪರ್‌ನಲ್ಲಿ ನಾವು ಯಾರಿಗೆ ಮತ ಹಾಕಿದ್ದೇವೆ ಅನ್ನೋದು ಗೊತ್ತಾಗುತ್ತದೆ. ಇವಿಎಂನಲ್ಲಿ ನಮ್ಮ ಮತ ಯಾರಿಗೆ ಹೋಗಿದೆ ಅನ್ನೋದು ಗೊತ್ತಾಗುವುದಿಲ್ಲ. ಭೌತಿಕವಾದ ಯಾವ ಸಾಕ್ಷಿಯೂ ಇರಲ್ಲವೆಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದರು ಎಂದು ವಾಮನ್ ಮೆಶ್ರಾಮ್ ತಿಳಿಸಿದರು. ಈ ಸಂಬಂಧ ಸುಪ್ರೀಂಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತ್ತು. ಆದರೆ, ಚುನಾವಣಾ ಆಯೋಗ ಈ ನೋಟಿಸ್‌ಗೆ ಯಾವುದೇ ಉತ್ತರ ನೀಡಿಲ್ಲ. ಈ ಬಗ್ಗೆ ಯಾವ ಮಾಧ್ಯಮಗಳೂ ಸುದ್ದಿ ಮಾಡಿಲ್ಲ. ಇವಿಎಂನಲ್ಲಿರುವ ಲೋಪಗಳನ್ನು ತೋರಿಸಿದಕ್ಕಾಗಿ ಹರಿಪ್ರಸಾದ್ ಎಂಬ ವ್ಯಕ್ತಿಯನ್ನು, ಇವಿಎಂ ಕಳುವು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜೈಲಿಗೆ ಅಟ್ಟಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷಗಳಿಗೆ ಇವಿಎಂ ಲೋಪಗಳನ್ನು ಸಾಬೀತುಪಡಿಸಲು ಸವಾಲು ಹಾಕುವ ಚುನಾವಣಾ ಆಯೋಗ, ಪ್ರಾಮಾಣಿಕವಾಗಿದ್ದರೆ ಜಾಗತಿಕವಾಗಿ ಯಾರು ಬೇಕಾದರೂ ಬಂದು ಈ ಪಂಥಾಹ್ವಾನ ಸ್ವೀಕರಿಸುವಂತೆ ಸವಾಲು ಹಾಕಬೇಕಿತ್ತು ಎಂದು ಅವರು ಹೇಳಿದರು.

ಫ್ರಾನ್ಸ್‌ನಲ್ಲಿರುವ ಪೇಟೆಂಟ್ ಸಂಸ್ಥೆಗೆ ಭಾರತ ಸರಕಾರವು ಅರ್ಜಿ ಸಲ್ಲಿಸಿ, ಇವಿಎಂ ತಿರುಚಲು ಸಾಧ್ಯವಿಲ್ಲವೆಂದು ಪೇಟೆಂಟ್ ನೀಡುವಂತೆ ಕೋರಿತ್ತು. ಆ ಸಂಸ್ಥೆಯು ಇವಿಎಂ ಯಂತ್ರವನ್ನು ತೆರೆಯಬೇಕು, ತಜ್ಞರು ಪರಿಶೀಲಿಸಿ ಯಾವ ಉದ್ದೇಶಕ್ಕಾಗಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದೆಯೋ, ಅದಕ್ಕೆ ಪೂರಕವಾಗಿ ಈ ಯಂತ್ರವಿದೆ ಎಂದು ವರದಿ ನೀಡಿದ ಬಳಿಕವಷ್ಟೇ ನಾವು ಪೇಟೆಂಟ್ ನೀಡಲು ಸಾಧ್ಯ ಎಂದು ಉತ್ತರಿಸಿತ್ತು. ಆದರೆ, ಭಾರತ ಸರಕಾರ ಆ ಅರ್ಜಿಯನ್ನು ಹಿಂಪಡೆದುಕೊಂಡಿತು ಎಂದು ಅವರು ಆರೋಪಿಸಿದರು.

ಪೇಟೆಂಟ್ ಸಂಸ್ಥೆಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡವರು, ತಾಂತ್ರಿಕ ತಜ್ಞರಿಲ್ಲದ ರಾಜಕೀಯ ಪಕ್ಷಗಳಿಗೆ ಸವಾಲು ಹಾಕುವುದರಲ್ಲಿ ಯಾವುದೇ ಅರ್ಥವಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ವಿವಿಪ್ಯಾಟ್ ಯಂತ್ರಗಳನ್ನು ಸಿದ್ಧಪಡಿಸಿ, ಅದರ ಪರೀಕ್ಷೆ ನಡೆಸಲಾಯಿತು. ಭದ್ರತೆ ಖಾತ್ರಿಯಾದ ನಂತರವಷ್ಟೇ ಅವುಗಳ ಬಳಕೆಗೆ ಅವಕಾಶ ಕಲ್ಪಿಸಲಾಯಿತು ಎಂದು ವಾಮನ್ ಮೆಶ್ರಾಮ್ ತಿಳಿಸಿದರು.

2013ರ ಅಕ್ಟೋಬರ್ 8ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಇವಿಎಂ ಯಂತ್ರಗಳ ಜೊತೆಯಲ್ಲಿ ವಿವಿಪ್ಯಾಟ್ ಯಂತ್ರವನ್ನು ಅಳವಡಿಸುವಂತೆ ಆದೇಶ ನೀಡಿತ್ತು. 2014ರ ಲೋಕಸಭಾ ಚುನಾವಣೆಗೆ ಮುನ್ನವೇ ಈ ಆದೇಶ ಬಂದಿದ್ದರೂ, ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಆದೇಶದ ಪಾಲನೆ ಮಾಡಿಲ್ಲ ಎಂದು ಅವರು ಆರೋಪಿಸಿದರು.

ಮಾಧ್ಯಮಗಳು ಜನರಿಂದ ಮುಚ್ಚಿಡುವ ಸಂಗತಿಗಳನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. 130 ಕೋಟಿ ಜನರನ್ನು ಮೂರ್ಖರನ್ನಾಗಿಸುವ ಈ ಸುದ್ದಿಯನ್ನು ಯಾವ ಮಾಧ್ಯಮಗಳೂ ಪ್ರಕಟ ಮಾಡಿಲ್ಲ. ಮಾಧ್ಯಮಗಳು ಈ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಿವೆ ಎಂದು ವಾಮನ್ ಮೆಶ್ರಾಮ್ ಆಕ್ರೋಶ ವ್ಯಕ್ತಪಡಿಸಿದರು.

ಆನಂತರ ನಾನು ಸುಪ್ರೀಂಕೋರ್ಟ್ ಮೊರೆ ಹೋದೆ. 2017ರ ಎಪ್ರಿಲ್ 24ರಂದು ಸುಪ್ರೀಂಕೋರ್ಟ್ ನನ್ನ ಪರವಾಗಿ ತೀರ್ಪು ನೀಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ವಿವಿಪ್ಯಾಟ್ ಬಳಸುವಂತೆ ಆದೇಶಿಸಿತು. 21 ರಾಜಕೀಯ ಪಕ್ಷಗಳು ಇವಿಎಂ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ನಾನು ನೀಡಿದ್ದ ದಾಖಲೆಗಳ ಆಧಾರದಲ್ಲಿಯೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್ ಆದೇಶವನ್ನು ಚುನಾವಣಾ ಆಯೋಗ ಜಾರಿಗೆ ತರದಿದ್ದರೆ, ಸುಪ್ರೀಂಕೋರ್ಟ್‌ನ ಗೌರವ ಏನಾಗಬೇಕು ? ಸುಪ್ರೀಂಕೋರ್ಟ್‌ಗೆ ಗೌರವ ಸಿಗದಿದ್ದರೆ, ಈ ದೇಶದ ಸಂವಿಧಾನದ ಸ್ಥಿತಿ ಏನಾಗಬೇಕು? ಈ ಸಂಬಂಧ ನಾನು ಮೇ 10ರಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದೆ. ವಿಚಾರಣೆಯು ಜೂ.4ಕ್ಕೆ ಮುಂದೂಡಲಾಗಿದೆ ಎಂದು ವಾಮನ್ ಮೆಶ್ರಾಮ್ ತಿಳಿಸಿದರು.

ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಹೊರ ಬರುವವರೆಗೆ ಎಲ್ಲ ವಿವಿಪ್ಯಾಟ್ ಹಾಗೂ ಇವಿಎಂಗಳನ್ನು ಸೀಲ್ ಮಾಡಬೇಕು. ಶೇ.100ರಷ್ಟು ಇವಿಎಂ ಹಾಗೂ ವಿವಿಪ್ಯಾಟ್‌ಗಳಲ್ಲಿನ ಮತಗಳ ಭೌತಿಕ ಎಣಿಕೆಯಾಗಬೇಕು ಎಂಬುದು ನಮ್ಮ ಒತ್ತಾಯ. ಒಂದು ವೇಳೆ ಇದಕ್ಕೆ ಸುಪ್ರೀಂಕೋರ್ಟ್ ಒಪ್ಪಿದರೆ, ಶೇ.200ರಷ್ಟು ಈ ಚುನಾವಣೆಯಲ್ಲಿ ಅಕ್ರಮವಾಗಿರುವುದು ಬಹಿರಂಗವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಯಾರ ಸುಪರ್ದಿಯಲ್ಲಿ ಇವಿಎಂಗಳಿವೆಯೋ, ಅವರು ಯಂತ್ರಗಳನ್ನು ಬದಲಾಯಿಸುವುದಿಲ್ಲ ಎಂದು ನಂಬುವುದಾದರೂ ಹೇಗೆ? ಮತದಾನದ ವೇಳೆ ಇದ್ದ ಯಂತ್ರ, ಮತ ಎಣಿಕೆ ವೇಳೆ ಬದಲಾಗಿರುವ ಉದಾಹರಣೆಗಳು ಇವೆ. ಈ ಸಂಬಂಧ ನಾಗ್ಪುರ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಹಲವೆಡೆ ಚಲಾವಣೆಯಾಗಿರುವ ಮತಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತಗಳು ದಾಖಲಾಗಿವೆ ಎಂದು ವಾಮನ್ ಮೆಶ್ರಾಮ್ ಹೇಳಿದರು.

ಆಂಧ್ರಪ್ರದೇಶದಲ್ಲಿ ಒಬ್ಬ ಅಭ್ಯರ್ಥಿಗೆ ಇವಿಎಂನಲ್ಲಿ ಒಂದು ಮತ ಬಿದ್ದಿತ್ತು. ವಿವಿಪ್ಯಾಟ್ ಎಣಿಕೆ ಮಾಡಿದಾಗ 194 ಮತಗಳು ಚಲಾವಣೆಯಾಗಿರುವುದು ಕಂಡು ಬಂದಿದೆ. ಇವಿಎಂಗಳ ಮೂಲಕ ಚಲಾವಣೆಯಾಗುತ್ತಿರುವ ಮತಗಳು ಬೇರೆಯವರ ಖಾತೆಗಳಿಗೆ ಜಮೆಯಾಗುತ್ತಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಚುನಾವಣೆಗೆ ಮುಂಚೆ ಬಿಜೆಪಿಯವರು ಹೇಳಿದಂತೆ 300 ಸ್ಥಾನಗಳನ್ನು ದಾಟಿದ್ದಾರೆ ಎಂದು ಅವರು ತಿಳಿಸಿದರು.

ಜನತೆಯ ಪರವಾಗಿ ಹೋರಾಡಲು ವಿರೋಧ ಪಕ್ಷಗಳು ಯಾಕೆ ಬೀದಿಗೆ ಇಳಿಯುತ್ತಿಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲ ರಾಜಕೀಯ ನಾಯಕರನ್ನು ಜೈಲಿಗೆ ಅಟ್ಟಲಾಗಿತ್ತು. ಇದು ಅದಕ್ಕಿಂತ ದೊಡ್ಡ ವಿಷಯವಾಗಿದೆ. ಇವತ್ತು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಲೋಕತಂತ್ರದ ಹತ್ಯೆಯಾಗುತ್ತಿದೆ.

-ವಾಮನ್ ಮೆಶ್ರಾಮ್, ರಾಷ್ಟ್ರೀಯ ಸಂಚಾಲಕ, ಬಹುಜನ ಕ್ರಾಂತಿ ಮೋರ್ಚಾ

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News