‘ವಿಶ್ವಾಸ’ದ ಮಾತು

Update: 2019-06-01 18:30 GMT

ದಿಲ್ಲಿಯಲ್ಲಿದ್ದಾಗ, 2008ರಲ್ಲಿ ನಡೆದ ಬಾಟ್ಲಾಹೌಸ್ ಎನ್‌ಕೌಂಟರ್ ಘಟನೆ ಯುವಕ ಅಝೀಝ್‌ರನ್ನು ಕಂಗೆಡಿಸಿತ್ತು. ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ಅಲ್ಪಸಂಖ್ಯಾತರನ್ನು ಭೀತಿಗ್ರಸ್ತರನ್ನಾಗಿಸಿತ್ತು ಈ ಎನ್‌ಕೌಂಟರ್. ಆ ಸಂದರ್ಭದಲ್ಲಿ ದಿಲ್ಲಿ ಸುತ್ತಮುತ್ತ, ತನ್ನನ್ನ್ನೂ ಭಯೋತ್ಪಾದಕನನ್ನಾಗಿ ಬಿಂಬಿಸಬಹುದೆಂಬ ಭೀತಿ ಪ್ರತಿಯೊಬ್ಬ ಮುಸ್ಲಿಂ ಯುವಕನಲ್ಲೂ ಮನೆಮಾಡಿದ್ದು ಸುಳ್ಳಾಗಿರಲಿಲ್ಲ. ತಾವು ಗುಂಡೇಟಿನಿಂದ ಅಥವಾ ಪೊಲೀಸ್ ಎನ್‌ಕೌಂಟರ್‌ನಿಂದ ಸಾಯಬಹುದೆಂಬ ಭೀತಿಯೂ ಅವರಲ್ಲಿ ಮಡುಗಟ್ಟಿತ್ತು ಎಂದು ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿರುವ ಅಝೀಝ್ ನಂತರದ ದಿನಗಳಲ್ಲಿ ಗಾಯನ ಮತ್ತು ನಾಟಕಗಳ ಮೂಲಕ ಮುಸ್ಲಿಂ ಸಮುದಾಯದಲ್ಲಿನ ಈ ಭೀತಿಗೆ ದನಿಯಾಗುವ ಪ್ರಯತ್ನ ಮಾಡಿದರು.


ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿಯವರು ಎರಡನೆಯ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೂತನವಾಗಿ ಚುನಾಯಿತರಾದ ತಮ್ಮ ಪಕ್ಷದ ಹಾಗೂ ಎನ್‌ಡಿಎ ಸದಸ್ಯರ ಪ್ರಥಮ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಸಂಸತ್ ಭವನದಲ್ಲಿ ಸಂವಿಧಾನದ ಪ್ರತಿಯ ಮುಂದೆ ನಿಂತು ಕೈಮುಗಿದು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಕಳೆದ ಸಲವೂ ಇದೇ ರೀತಿ ನಾಟಕೀಯವಾಗಿ ಸಂಸತ್ ಭವನಕ್ಕೆ ನಮಸ್ಕರಿಸಿ ಸಂಸದೀಯ ಪ್ರಜಾಸತ್ತೆಯಲ್ಲಿನ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು. ಈ ಸಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘‘ಸಬ್‌ಕಾ ಸಾತ್ ಸಬ್‌ಕಾ ವಿಕಾಸ್’’ ಘೋಷಣೆಯ ಜೊತೆಗೆ ‘‘ಸಬ್‌ಕಾ ವಿಶ್ವಾಸ್’’ ಎಂಬ ಹೊಸ ಘೋಷಣೆಯನ್ನು ದೇಶಕ್ಕೆ ನೀಡಿದ್ದಾರೆ. ಅಲ್ಪಸಂಖ್ಯಾತರ ನಂಬಿಕೆ, ವಿಶ್ವಾಸ ಮತ್ತು ಬೆಂಬಲವನ್ನು ಗಳಿಸುವ ಇಂಗಿತ ಅವರ ಈ ಘೋಷಣೆಯಲ್ಲಿ ಅಡಗಿದೆ. ಇದು ತಮ್ಮ ಸರಕಾರದ ಹಾಗೂ ಸಂಸದರ ಪ್ರಮುಖ ಸವಾಲಾಗಿದೆ ಎಂಬುವುದರ ಇಂಗಿತವೂ ಹೌದು.

ಮೋದಿಯವರ ಈ ಮಾತುಗಳನ್ನು ಅವರ ಪಕ್ಷ ಹಾಗೂ ಮಿತ್ರ ಪಕ್ಷಗಳು ಗಂಭೀರವಾಗಿ ತೆಗೆದುಕೊಳ್ಳಲಿದ್ದಾರೆಯೇ ಎಂಬುದನ್ನು ಮುಂದಿನ ದಿನಗಳೇ ಹೇಳಬೇಕು. ಅದಿರಲಿ, ಅಲ್ಪಸಂಖ್ಯಾತರ ಮನಸ್ಸಿನಲ್ಲಾದರೂ ಈ ಮಾತುಗಳು ಹೊಸ ಭರವಸೆ ಮೂಡಿಸಿರಬಹುದೇ ಎಂದು ಕೇಳಿದರೆ ಆಶಾದಾಯಕ ಉತ್ತರ ಸಿಗುವುದು ಕಷ್ಟ. ಏಕೆಂದರೆ ಮೋದಿಯವರು ಇತ್ತ ಈ ‘ಸಬ್‌ಕಾ ವಿಶ್ವಾಸ್’ ಘೋಷಣೆ ಮಾಡುತ್ತಿದ್ದಂತೆ ಅತ್ತ ಹರ್ಯಾಣದ ಗುರುಗ್ರಾಮದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಬರುತ್ತಿದ್ದ ಮುಸ್ಲಿಂ ಸಮುದಾಯದ ಅಂಗಡಿಕಾರನೊಬ್ಬನ ಮೇಲೆ ಹಲ್ಲೆ ನಡೆದಿದೆ. ‘ಜೈ ಶ್ರೀ ರಾಮ್’ ಘೋಷಣೆ ಕೂಗಲು ಆಗ್ರಹಪಡಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಬಗ್ಗೆ ಮೋದಿಯವರಿಂದ ಪ್ರತಿಕ್ರಿಯೆ ಬಂದಂತಿಲ್ಲ. ಮೊದಮೊದಲು ನಗಣ್ಯ ಎನ್ನಲಾಗುತ್ತಿದ್ದ ಇಂಥ ಹಲ್ಲೆ ಪ್ರಕರಣಗಳು ಈಗ ಗಣನೀಯವಾಗುತ್ತಿವೆ. ಮೋದಿಯವರ ಎಲ್ಲರ ವಿಶ್ವಾಸಗಳಿಸುವ ಈ ಹೊಸ ಘೋಷಣೆ ಕೇಳಿದಾಗ ಮುಂಬೈಯಲ್ಲಿ ನೆಲೆಸಿರುವ ಬಿಹಾರ್ ಮೂಲದ ಪಾಪ್ ಗಾಯಕ ಅಮೀರ್ ಅಝೀಝ್‌ರ ಸಂದರ್ಶನ ಲೇಖನ ನೆನಪಾಗುತ್ತಿದೆ.

ಬಿಹಾರದ ಪಟನಾದಲ್ಲಿ ಜನಿಸಿದ ಅಝೀಝ್ ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಶಿಕ್ಷಣ ಪಡೆದವರು. ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಅವರು ಸ್ವಲ್ಪ ಲಾರ್ಸೆನ್ ಆ್ಯಂಡ್ ಟೂಬ್ರೊದಂಥ ಸಂಸ್ಥೆಗಳಲ್ಲಿ ಉದ್ಯೋಗ ಮಾಡಿದರು. ಅಭಿನಯ ಮತ್ತು ಹಾಡುಗಾರಿಕೆಯಲ್ಲಿ ಒಲವಿದ್ದ ಅವರು ಉದ್ಯೋಗಕ್ಕೆ ವಿದಾಯ ಹೇಳಿ ಮುಂಬೈ ಸೇರಿದರು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳನ್ನು ಅರಸುತ್ತಾ. ದಿಲ್ಲಿಯಲ್ಲಿದ್ದಾಗ, 2008ರಲ್ಲಿ ನಡೆದ ಬಾಟ್ಲಾಹೌಸ್ ಎನ್‌ಕೌಂಟರ್ ಘಟನೆ ಯುವಕ ಅಝೀಝ್‌ರನ್ನು ಕಂಗೆಡಿಸಿತ್ತು. ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳ ಅಲ್ಪಸಂಖ್ಯಾತರನ್ನು ಭೀತಿಗ್ರಸ್ತರನ್ನಾಗಿಸಿತ್ತು ಈ ಎನ್‌ಕೌಂಟರ್. ಆ ಸಂದರ್ಭದಲ್ಲಿ ದಿಲ್ಲಿ ಸುತ್ತಮುತ್ತ, ತನ್ನನ್ನ್ನೂ ಭಯೋತ್ಪಾದಕನನ್ನಾಗಿ ಬಿಂಬಿಸಬಹುದೆಂಬ ಭೀತಿ ಪ್ರತಿಯೊಬ್ಬ ಮುಸ್ಲಿಂ ಯುವಕನಲ್ಲೂ ಮನೆಮಾಡಿದ್ದು ಸುಳ್ಳಾಗಿರಲಿಲ್ಲ. ತಾವು ಗುಂಡೇಟಿನಿಂದ ಅಥವಾ ಪೊಲೀಸ್ ಎನ್‌ಕೌಂಟರ್‌ನಿಂದ ಸಾಯಬಹುದೆಂಬ ಭೀತಿಯೂ ಅವರಲ್ಲಿ ಮಡುಗಟ್ಟಿತ್ತು ಎಂದು ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿರುವ ಅಝೀಝ್ ನಂತರದ ದಿನಗಳಲ್ಲಿ ಗಾಯನ ಮತ್ತು ನಾಟಕಗಳ ಮೂಲಕ ಮುಸ್ಲಿಂ ಸಮುದಾಯದಲ್ಲಿನ ಈ ಭೀತಿಗೆ ದನಿಯಾಗುವ ಪ್ರಯತ್ನ ಮಾಡಿದರು. ‘ಅಚ್ಛೇದಿನ್ ಬ್ಲೂಸ್’ ಮುಸ್ಲಿಂ ಸಮುದಾಯದಲ್ಲಿ ಮಡುಗಟ್ಟಿದ ಭೀತಿಗ್ರಸ್ತ ಸಂವೇದನೆಗಳಿಗೆ ಸ್ಪಂಧಿಸಿರುವ ಈ ಗಾಯನ ಯೂಟ್ಯೂಬ್‌ನಲ್ಲಿ ಲಕ್ಷಗಟ್ಟಲೆ ಜನರ ಗಮನ ಸೆಳೆಯಿತು.ಅವರ ಮನದಲ್ಲಿ ಮಿಡಿತ ಉಂಟುಮಾಡಿ ಆಡಳಿತಾರೂಢ ಸರಕಾರದ ಬಗ್ಗೆ ಚರ್ಚೆಗೆ ಗ್ರಾಸ ಒದಗಿಸಿತು. ‘ದಿ ಬ್ಯಾಲಡ್ ಆಫ್ ಪೆಹ್ಲೂಖಾನ್’ ಅಮೀರ್ ಅಝೀಝ್‌ರ ಇತ್ತೀಚಿನ ಹಾಡು.

2017ರಲ್ಲಿ ಹರ್ಯಾಣದ ಪೆಹ್ಲೂಖಾನ್ ಎಂಬ ಹೈನು ಕೃಷಿಕಾರ ‘ಗೋರಕ್ಷಕರ’ ಹಲ್ಲೆಯಿಂದ ಕೊಲೆಯಾದ ಘಟನೆಯೇ ಇದಕ್ಕೆ ಸ್ಫೂರ್ತಿ. ಈ ಅಮಾನುಷ ಘಟನೆಯನ್ನು ಯಥಾವತ್ತಾಗಿ (ಯಾವುದೇ ಸಾಹಿತ್ಯಾಲಂಕಾರಗಳನ್ನು ಸೇರಿಸದೆ) ಅಝೀಝ್ ಹಾಡಿದ್ದು ಸಾಕ್ಷ್ಯ ಚಿತ್ರಗಳ ನಿರ್ಮಾಪಕ ರಾಹುಲ್ ರಾಯ್ ಅದರ ವೀಡಿಯೊ ತಯಾರಿಸಿದ್ದಾರೆ. ಈ ದುರಂತಕ್ಕೆ ಸಾಹಿತ್ಯದ ಲೇಪ ಬೇಕೆನ್ನುವುದಾದರೆ ‘‘ಭಾರತದಲ್ಲಿ ಹುಟ್ಟಿದ್ದು, ಅದೂ ಮುಸ್ಲಿಮನಾಗಿ ಹುಟ್ಟಿದ್ದು, ಅದೇ ಅವನ ತಪ್ಪು ಇದಕ್ಕಿಂತ ಮಿಗಿಲಾದ ಕರುಣಾಜನಕ ಸಾಹಿತ್ಯ ಬೇಕೇ?’’ ಎಂದು ಅಝೀಝ್ ಪ್ರಶ್ನ್ನಿಸುತ್ತಾರೆ. ‘‘ಪೆಹ್ಲೂಖಾನ್‌ರ ಹತ್ಯೆಗೆ ಕಂಬನಿ ಮಿಡಿಯುವುದು ಹಾಗೂ ಪ್ರತಿಯೊಂದು ಕೊಲೆಯೂ ಮತ್ತೊಂದು ಕೊಲೆಯ ಮೃತದೇಹದಡಿ ಸಮಾಧಿಯಾಗಿ ಹೋಗುತ್ತದೆ ಎಂದು ಹೇಳುವುದಷ್ಟೇ ನನ್ನ ಈ ಹಾಡಿನ ಉದ್ದೇಶ’’ ಎನ್ನುತ್ತಾರೆ ಅಝೀಝ್. 2010ರಿಂದ 2017ರ ನಡುವಣ ಅವಧಿಯಲ್ಲಿ ಭಾರತದಲ್ಲಿ ಗುಂಪು ಹಲ್ಲೆಯಿಂದ ಇಪ್ಪತ್ತೆಂಟು ಜನ ಸತ್ತಿದ್ದು ನೂರಿಪ್ಪತ್ನಾಲ್ಕು ಮಂದಿ ಗಾಯಗೊಂಡಿದ್ದಾರೆಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿಮಾಡಿದೆ. ಈ ವರ್ಷದ ಹೋಳಿ ಹಬ್ಬದಂದು ಹರ್ಯಾಣದ ಗುರುಗ್ರಾಮದಲ್ಲಿ ಮುಸ್ಲಿಂ ಕುಟುಂಬವೊಂದರ ಮೇಲೆ ನಡೆದ ಹಲ್ಲೆ ಸಾಮಾಜಿಕ ತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು ಭೀತಿಗ್ರಸ್ತ ಮನಗಳಲ್ಲಿ ಇನ್ನೂ ಹಸಿರಾಗಿದೆ. ಹೆಚ್ಚುತ್ತಿರುವ ದ್ವೇಷದ ಹತ್ಯೆಗಳು ಕಲಾವಿದ ಅಝೀಝ್‌ರನ್ನು ಹಗಲುರಾತ್ರಿ ಕಾಡುತ್ತಿದೆಯಂತೆ.

‘‘ಊಟನಿದ್ದೆಗಳಲ್ಲೂ ಈ ಕಗ್ಗೊಲೆಗಳು, ಗುಂಪು ಹಲ್ಲೆಗಳು ಮುಸ್ಲಿಂ ಸಮುದಾಯವನ್ನು ಎಷ್ಟರಮಟ್ಟಿಗೆ ಕಾಡುತ್ತಿದೆಯೆಂದರೆ ಈ ದೇಶದಲ್ಲಿ ರೈಲಿನಲ್ಲಿ ಪಯಣಿಸುವ ಮುಸ್ಲಿಂ ಪ್ರಾಯಾಣಿಕರು ಯಾರೂ ಈಗ ಮಾಂಸಾಹಾರದ ಬುತ್ತಿಯನ್ನು ಒಯ್ಯುವುದಿಲ್ಲ’’ ಎನ್ನುತ್ತಾರೆ ಅಝೀಝ್. ‘‘ಈ ಬರ್ಬರ ಆಡಳಿತದ ವಿರುದ್ಧ ಎಷ್ಟು ಮಂದಿ ಸಾಹಿತಿ-ಕಲಾವಿದರು ದನಿ ಎತ್ತಿದ್ದಾರೆ ಅಥವಾ ತಮ್ಮ ಕಲಾಕೃತಿಗಳಲ್ಲಿ ಅದನ್ನು ಬಿಂಬಿಸಿದ್ದಾರೆ?’’ ಎಂದು ಪ್ರಶ್ನಿಸುವ ಅಝೀಝ್, ‘‘ನಾನು ಯಾರಿಗೂ ಹೆದರುವುದಿಲ್ಲ ನನ್ನ ಗೀತ/ಸಂಗೀತ/ಗಾಯನಗಳ ಬಗ್ಗೆ ವಿಷಾದವಿಲ್ಲ. ಗಾಯನವನ್ನು ವೃತ್ತಿಯಾಗಿ ಆಯ್ಕೆಮಾಡಿಕೊಂಡಿಲ್ಲ. ಅದು ಅವರ ಅಂತರಂಗದ ಅಳಲು. ಎಲ್ಲ ಮಧ್ಯಮವರ್ಗದವರಂತೆ ಅಭದ್ರತೆಗಳಿಂದ ನರಳುತ್ತಿರುವ ನಾನು ನಟನಾಗಿ ಯಶಸ್ಸು ಕಾಣದಿದ್ದಲ್ಲಿ ಜಾಮಿಯಾ ಮಿಲಿಯಾ ಉಸ್ಲಾಮಿಯಾದ ಸಿವಿಲ್ ಇಂಜಿನಿಯರಿಂಗ್ ಡಿಗ್ರಿ ಇದ್ದೇ ಇದೆ ಉದರಂಭರಣಕ್ಕೆ’’ ಎನ್ನುವುದು ಅವರೊಳಗಣ ಹತಾಶೆಗೆ ಕನ್ನಡಿ. ಅಝೀಝ್ ಸದ್ಯ ಹೊಸ ಗೀತೆಯನ್ನು ಹೊರತರುವುದರಲ್ಲಿ ಮಗ್ನರಾಗಿದ್ದಾರೆ. ಈ ಗೀತೆಯ ವಸ್ತು- ವಿಷಯ ಏನು, ಅದು ಯಾವಾಗ ಹೊರಬರಲಿದೆ ಎಂಬುದರ ಬಗ್ಗೆ ಅವರು ಸಂದರ್ಶನದಲ್ಲಿ ಬಾಯಿಬಿಟ್ಟಿಲ್ಲ.

ಅಮೀರ್ ಅಝೀಝ್ ಅವರು ದನಿಯಾಗಿರುವ ಲಕ್ಷಾಂತರ ಮಂದಿ ಅಲ್ಪಸಂಖ್ಯಾತರ ಮನಗಳಲ್ಲಿ ಮನೆಮಾಡಿರುವ ಭೀತಿಯನ್ನು ಮೋದಿಯವರ ‘ಸಬ್‌ಕಾ ವಿಶ್ವಾಸ್’ ಭರವಸೆ ನಿವಾರಿಸಬಹುದೇ? ಮೋದಿಯವರ ‘ಸಬ್‌ಕಾ ವಿಶ್ವಾಸ್’ ಕಳಕಳಿ ಅವರ ಮನದಾಳದ ಪ್ರಾಮಾಣಿಕ ಕಾಳಜಿಯಾಗಿದ್ದಲ್ಲಿ ಬರಲಿರುವ ದಿನಗಳಲ್ಲಿ ಅವರು ಅದನ್ನು ಕಾರ್ಯತ: ಸಾಬೀತುಗೊಳಿಸಬೇಕಾಗಿದೆ. ಆದರೆ ಅವರ ಒಡೆದು ಆಳುವ ನೀತಿ ಈಗಾಗಲೇ ಜಗಜ್ಜಾಹೀರಾಗಿರುವ ಸತ್ಯ. ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಅಲ್ಪಸಂಖ್ಯಾತರ ಪಕ್ಷವೆಂದು ದೂಷಿಸುವ ರೀತಿಯಲ್ಲಿ ವಿಷಪೂರಿತ ಪ್ರಚಾರಮಾಡಿದ್ದು ಹಾಗೂ ತಮ್ಮನ್ನು ಹಿಂದೂಗಳ ಉದ್ದಾರಕನಂತೆ ಬಿಂಬಿಸಿಕೊಂಡಿದ್ದು ಜನಮನದಲ್ಲಿ ಇನ್ನೂ ಹಸಿರಾಗಿದೆ. ಈ ಪ್ರತಾಪವೇ ಅವರಿಗೆ ‘ಪ್ರಮುಖ ವಿಭಾಜಕ’ (ಡಿವೈಡರ್ ಇನ್ ಚೀಫ್)ಎಂಬ ಬಿರುದನ್ನೂ ‘ಟೈಂ’ ತಂದುಕೊಟ್ಟಿತು. ಅಲ್ಪಸಂಖ್ಯಾತರನ್ನು ಅವರಿರುವಂತೆ ಆಲಿಂಗಿಸಿಕೊಳ್ಳುವುದು ಹಾಗೂ ದೇಶದ ಬಹುತ್ವವನ್ನು ಒಪ್ಪಿಕೊಳ್ಳುವುದು ಆರೆಸ್ಸೆಸ್ ಮೂಲದ ಮೋದಿಯಂಥವರಿಗೆ ಬಾಯಲ್ಲಿ ಹೇಳುವಷ್ಟು ಸುಲಭವಲ್ಲ. ಅಲ್ಪಸಂಖ್ಯಾತರನ್ನು ಮತಬ್ಯಾಂಕುಗಳಾಗಿ ಬಳಸಿಕೊಂಡಿರುವುದು ಎಷ್ಟು ನಿಜವೂ ಅಷ್ಟೇ ನಿಜವಾದುದು ಬಿಜೆಪಿ ಮತ್ತು ಮೋದಿ ಸರಕಾರ ಅವರನ್ನು ಅನ್ಯರಂತೆ ಕಾಣುತ್ತಿರುವುದು.

 ಈ ‘ಅನ್ಯರ’ ಮನ ಗೆಲ್ಲುವುದು ಸುಲಭದಮಾತಲ್ಲ. ಏಕೆಂದರೆ ಅಧಿಕಾರದಲ್ಲ್ಲಿರುವವರ ಮಾತುಗಳು ವಿಶ್ವಾಸಾರ್ಹತೆ ಕಳೆದುಕೊಂಡು ಸವಕಲಾಗಿವೆ. ಅಲ್ಪಸಂಖ್ಯಾತರಿರಲಿ ಬೇರೆಯವರೂ ಅವರ ಪಕ್ಷದವರೂ ಮೋದಿಯವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲಾರರು. ಕಳೆದ ವರ್ಷ ಸಂಸತ್ ಭವನಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ ಮೋದಿಯವರು ಮುಂದಿನ ದಿನಗಳಲ್ಲಿ ಸಂಸತ್ತನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡರು, ಸಂಸತ್ ಕಲಾಪಗಳಲ್ಲಿ ಭಾಗವಹಿಸಿ ಎಷ್ಟು ಶ್ರದ್ಧೆಯಿಂದ ವಿರೋಧ ಪಕ್ಷಗಳ ಮಾತುಗಳನ್ನು ಆಲಿಸಿದರು ಎಂಬುದು ಸರ್ವವೇದ್ಯವಾದುದು. ಅವರ ಅಭಿಮಾನಿಗಳು ಹೇಳುವಂತೆ, ಈ ಕಾಲಘಟ್ಟದ ರಾಜಕಾರಣದಲ್ಲಿ ಬಿಜೆಪಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾದ ಅಗತ್ಯವನ್ನು ಮೋದಿಯವರು ಮನಗಂಡಿದ್ದು, ಅದು ಅವರ ಈಗಿನ ಪ್ರಾಮಾಣಿಕ ಅನಿಸಿಕೆಯಾಗಿರಲೂಬಹುದು. ಭಾರತದಲ್ಲಿ ಪ್ರಜಾಪ್ರಭುತ್ವ ಬಹುಸಂಖ್ಯಾತರ ಪರ ವಾಲುತ್ತಿರುವ ಈ ದಿನಗಳಲ್ಲಿ ಮೋದಿಯುವರ ‘ಸಬ್‌ಕಾ ವಿಶ್ವಾಸ್’ ಮಾತು ಆತಂಕಪೀಡಿತರಿಗೆ ಭರವಸೆಯ ಬೆಳಕಾಗಿಯೂ ಕಾಣಬಹುದು. ಬಿಜೆಪಿ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ವಿಶ್ವಾಸದ ಕೊರತೆಯನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ಮೋದಿಯವರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾತುಗಳು ಪ್ರಾಮಾಣಿಕವಾಗಿರಬಹುದಾದರೂ ಅದರ ಹಿಂದೆ ಸಾಕಷ್ಟು ಆತ್ಮಾವಲೋಕನ ನಡೆದಂತೆ ಕಾಣುತ್ತಿಲ್ಲ.

ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಭಾಷಾ ಅಲ್ಪಸಂಖ್ಯಾತರು ಬಿಜೆಪಿಯನ್ನು ಏಕೆ ನಂಬುತ್ತಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಮೋದಿಯವರು ಅಲ್ಪಸಂಖ್ಯಾತರಲ್ಲಿ ಕಾಲ್ಪನಿಕ ಭೀತಿಯನ್ನು ಸೃಷ್ಟಿಸಿದ್ದಾರೆ ಎಂದು ತಮ್ಮ ರಾಜಕೀಯ ವಿರೋಧಿಗಳ ಮೇಲೆ ಗೂಬೆಕೂರಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಲ್ಪಸಂಖ್ಯಾತರನ್ನು ದುಃಸ್ವಪ್ನದಂತೆ ಕಾಡುತ್ತಿರುವ 2002ರ ಮೋದಿಕಾಲದ ಗುಜರಾತ್ ಘಟನೆಗಳು, ಸಂಘಪರಿವಾರದವರು ನಡೆಸಿರುವ ಗುಂಪುಹಲ್ಲೆಗಳು, ಈ ಗುಂಪು ಹಲ್ಲೆಗಾರರು ಶಿಕ್ಷೆಯಿಂದ ಮುಕ್ತರಾಗಿರುವುದು, ಇಂಥ ಹಲ್ಲೆಗಳು ಕ್ಷಮಾರ್ಹ ಎನ್ನುವ ರೀತಿಯಲ್ಲಿ ನಾಯಕರು ದಿವ್ಯಮೌನ ವಹಿಸಿರುವುದು ಇವೆಲ್ಲವುಗಳಿಂದಾಗಿ ಅಲ್ಪಸಂಖ್ಯಾತರಲ್ಲಿ ಬೇರೆ ಯಾರೋ ಕಾಲ್ಪನಿಕ ಭೀತಿಯನ್ನು ಸೃಷ್ಟಿಸಿದ್ದಾರೆ ಎನ್ನುವುದು ಅವಾಸ್ತವಿಕವಾಗುತ್ತದೆ. ಆದ್ದರಿಂದ ‘ಸಬ್‌ಕಾ ವಿಶ್ವಾಸ್’ ಗಳಿಸುವ ಮಾತಿನ ಹಿಂದಿನ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತಾಗುತ್ತದೆ. ಮೋದಿಯವರಲ್ಲಿ ಮನಃಪರಿವರ್ತನೆಯಾಗಿದೆ, ‘ಸಬ್‌ಕಾ ವಿಶ್ವಾಸ್’ಅವರ ಪ್ರಾಮಾಣಿಕ ಕಾಳಜಿಯಾಗಿದೆ ಎಂದೇ ಇಟ್ಟುಕೊಳ್ಳೋಣ. ಅದು ಅವರ ಪ್ರಾಮಾಣಿಕ ಕಾಳಜಿಯಾಗಿದ್ದಲ್ಲಿ ಅದನ್ನು ಅವರು ಕಾರ್ಯತ: ಅನುಷ್ಠಾನಗೊಳಿಸಿ ಋಜುವಾತುಪಡಿಸುವ ಹೊಣೆಗಾರಿಕೆ ಅವರ ಮೇಲಿದೆ.ಆದರೆ, ಹಿಂದೂ-ಮುಸ್ಲಿಮರಿಬ್ಬರನ್ನೂ ಸಮಾನವಾಗಿ ನೋಡುವುದನ್ನು ಎಂದಿಗೂ ಒಪ್ಪದ, ಮುಸ್ಲಿಮರು ಈ ದೇಶದಲ್ಲಿ ಎರಡನೆಯ ದರ್ಜೆಯ ಪ್ರಜೆಗಳು ಎಂದು ನಂಬುವ ಆರೆಸ್ಸೆಸ್ ಧಣಿಗಳು ‘ಸಬ್‌ಕಾ ವಿಶ್ವಾಸ್’ ಅನುಷ್ಠಾನಕ್ಕೆ ಅಗತ್ಯವಾದ ಸ್ವಾತಂತ್ರ್ಯವನ್ನು ಮೋದಿಯವರಿಗೆ ಕೊಡುವರೆ?

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75