ನಕಲಿ ಎನ್‌ಕೌಂಟರ್ ಸಂವಿಧಾನ ಬದ್ಧ!

Update: 2019-06-01 18:31 GMT

 ಅಮಿತ್ ಶಾ ದೇಶದ ಗೃಹ ಸಚಿವರಾಗಿರುವುದು ಗೊತ್ತಾದದ್ದೇ ಗುಜರಾತ್‌ನ ಸ್ಮಶಾನದಲ್ಲಿ ಹಬ್ಬದ ಸಂಭ್ರಮ. ಕೋಮುಗಲಭೆ, ಗೋಧ್ರಾ ದಹನ, ನಕಲಿ ಎನ್‌ಕೌಂಟರ್ ಇತ್ಯಾದಿ ಇತ್ಯಾದಿಗಳಲ್ಲಿ ಮೃತಪಟ್ಟವರೆಲ್ಲ ಪಟಾಕಿ ಹಚ್ಚಿ ಸಂಭ್ರಮಿಸಿದರು. ಸ್ಮಶಾನದಲ್ಲಿ ‘ಜೈ ಶ್ರೀರಾಂ’ ‘ಅಲ್ಲಾಹು ಅಕ್ಬರ್’ ‘ಭಾರತ್ ಮಾತಾ ಕಿ ಜೈ’ ಘೋಷಣೆ ಮುಗಿಲು ಮುಟ್ಟಿತು. ಸ್ಮಶಾನದಲ್ಲಿ ಜಾತಿ, ಧರ್ಮ ಕಲಹಗಳಿಲ್ಲವಾದುದರಿಂದ, ಕೋಮುಗಲಭೆಗಳಲ್ಲಿ ಮೃತಪಟ್ಟವರೆಲ್ಲ ಸೌಹಾರ್ದದಿಂದ ಜೀವಿಸುತ್ತಿದ್ದರು. ಪತ್ರಕರ್ತ ಎಂಜಲು ಕಾಸಿಯ ಸಂಭ್ರಮಕ್ಕಂತೂ ಪಾರವೇ ಇಲ್ಲ. ಗುಜರಾತ್‌ನಲ್ಲಿ ಗೃಹ ಸಚಿವರಾಗಿ ಅಲ್ಲಿನ ಕಾನೂನು ಸುವ್ಯವಸ್ಥೆಗೆ ಅಮೋಘ ಕೊಡುಗೆ ನೀಡಿರುವ ಅಮಿತ್ ಶಾ ಅವರು ದೇಶದ ಗೃಹ ಸಚಿವರಾಗಿರುವುದು ಅವರ ಸಾಧನೆಗೆ ದೊರಕಿರುವ ಮನ್ನಣೆ ಎಂದೇ ಭಾವಿಸಿದ. ನೇರವಾಗಿ ಅಮಿತ್ ಶಾ ನಿವಾಸಕ್ಕೆ ನುಗ್ಗಿ ‘ಇಂಟರ್ಯೂ’ ಗಾಗಿ ಎಂಜಲು ಸುರಿಸುತ್ತಾ ನಿಂತ.
‘‘ಆಯಿಯೇ, ಆಯಿಯೇ....ಬೈಟಿಯೇ’’ ಎಂದು ಅಮಿತ್ ಶಾ ಅವರು ಎಂಜಲು ಕಾಸಿಯನ್ನು ಸ್ವಾಗತಿಸಿ ಕುಳ್ಳಿರಿಸಿದರು.
‘‘ಸಾರ್...ಗೃಹ ಸಚಿವರಾಗಿ ಈ ದೇಶಕ್ಕೆ ಏನನ್ನು ಕೊಡಬೇಕು ಎಂದಿದ್ದೀರಿ?’’ ಕಾಸಿ ಕೇಳಿದ.
‘‘ನನ್ನದು ಗುಜರಾತ್ ಮಾದರಿಯ ಆಡಳಿತ. ಗೃಹ ಸಚಿವನಾಗಿ ಗುಜರಾತ್‌ಗೆ ಏನು ಮಾಡಿದ್ದೇನೆಯೋ ಅದನ್ನೇ ಭಾರತ ದೇಶಕ್ಕೂ ಮಾಡಲಿದ್ದೇನೆ...’’ ಅಮಿತ್ ಶಾ ತನ್ನ ಯೋಜನೆಯನ್ನು ವಿವರಿಸಿದರು.
‘‘ಅಂದರೆ ನಕಲಿ ಎನ್‌ಕೌಂಟರ್‌ಗಳ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆಯೆ?’’ ಕಾಸಿ ಪ್ರಶ್ನಿಸಿದ.
‘‘ಗುಜರಾತ್ ಇಂದು ವಿಶ್ವದಲ್ಲೇ ಗುರುತಿಸುವಂತೆ ಮಾಡಿದ್ದೇನೆ. ಇಂದು ಮೋದಿಯವರು ಪ್ರಧಾನಿಯಾಗಿ ದೇಶವನ್ನು ಆಳುತ್ತಿದ್ದರೆ, ಗುಜರಾತ್ ಗೃಹ ಸಚಿವನಾಗಿ ಕೊಟ್ಟ ಕೊಡುಗೆಯೇ ಕಾರಣ. ಮುಂದಿನ ದಿನಗಳಲ್ಲಿ ಈ ದೇಶದ ಗೃಹ ಸಚಿವನಾಗಿ ನಾನು ನಡೆಸುವ ಕಾರ್ಯಗಳಿಂದ ಮೋದಿಯವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಮಾಡಲಿದ್ದೇನೆ....’’
‘‘ಅಂದರೆ ಭವಿಷ್ಯದಲ್ಲಿ ನೀವು ಅಮೆರಿಕದ ಗೃಹ ಸಚಿವರಾಗಲಿದ್ದೀರಿ ಎಂದಾಯಿತು....’’ ಕಾಸಿ ವಿಸ್ಮಿತನಾಗಿ ಕೇಳಿದ.
‘‘ಈಗಾಗಲೇ ಅಮೆರಿಕದ ಜನರು ನಮಗೆ ಮೋದಿಯೇ ಅಧ್ಯಕ್ಷರಾಗಬೇಕು, ಅಮಿತ್ ಶಾ ಗೃಹ ಸಚಿವರಾಗಬೇಕು...ಎಂದು ಬೀದಿಗಿಳಿದಿದ್ದಾರೆ....’’ ಅಮಿತ್ ಶಾ ಸಾಧ್ಯತೆಯನ್ನು ವಿವರಿಸಿದರು.
 ‘‘ಸಾರ್...ಅಮೆರಿಕದಲ್ಲಿ ಮೋದಿಯವರು ಅಧ್ಯಕ್ಷರಾಗುವುದು ಸಾಧ್ಯವಿರುವ ಮಾತೇ?’’ ಕಾಸಿ ಅನುಮಾನ ವ್ಯಕ್ತಪಡಿಸಿದ.
‘‘ಮೊತ್ತ ಮೊದಲಾಗಿ ಅಮೆರಿಕದಲ್ಲಿ ನಾವು ಭಾರತದ ಇವಿಎಂ ಯಂತ್ರಗಳನ್ನು ರಫ್ತು ಮಾಡುತ್ತೇವೆ. ಬಳಿಕ ಅಲ್ಲಿ ಚುನಾವಣೆಗೆ ನಿಲ್ಲುತ್ತೇವೆ....’’ ಎನ್ನುತ್ತಾ ಅಮಿತ್ ಶಾ ಗಡ್ಡ ಸವರಿದರು.
‘‘ಗೃಹ ಸಚಿವರಾಗಿ ನೀವು ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡಲಿದ್ದೀರಿ?’’ ಕಾಸಿ ಕೇಳಿದ.
‘‘ಗೃಹ ಸಚಿವರಾಗಿ ನಾನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಈ ದೇಶದ ಕಾನೂನೇ ದೊಡ್ಡ ತಡೆಯಾಗಿದೆ. ಆದುದರಿಂದ, ನಕಲಿ ಎನ್‌ಕೌಂಟರ್ ಮೂಲಕ ಕಾನೂನು ವ್ಯವಸ್ಥೆಯನ್ನು ಮಟ್ಟ ಹಾಕುವ ಮೂಲಕ ನನ್ನ ಕಾರ್ಯ ಆರಂಭಿಸುತ್ತೇನೆ...’’ ಅಮಿತ್ ಶಾ ತಮ್ಮ ಕಾರ್ಯಯೋಜನೆಯನ್ನು ಮುಂದಿಟ್ಟರು.
‘‘ಕಾನೂನು ವ್ಯವಸ್ಥೆಯನ್ನು ಮಟ್ಟ ಹಾಕಿದ ಬಳಿಕ....?’’ ಕಾಸಿ ಆತಂಕದಿಂದ ಕೇಳಿದ.
‘‘ದೇಶಾದ್ಯಂತ ನಕಲಿ ಎನ್‌ಕೌಂಟರ್‌ಗಳನ್ನು ಸಂವಿಧಾನಬದ್ಧ ಮಾಡಲಾಗುತ್ತದೆ. ಹಾಗೆಯೇ ಪೊಲೀಸ್ ಇಲಾಖೆಗಳಿಗೆ ಪರ್ಯಾಯವಾಗಿ ಗೋರಕ್ಷಕರ ತಂಡ, ಸಂಸ್ಕೃತಿ ರಕ್ಷಕರ ತಂಡಗಳನ್ನು ರಚಿಸಲಾಗುತ್ತದೆ. ಪೊಲೀಸ್ ಇಲಾಖೆಗಳು ಈ ತಂಡಗಳ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈಗಾಗಲೇ ಪೊಲೀಸರು ಈ ತಂಡಗಳ ಅಡಿಯಲ್ಲಿ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದಾರೆ. ಅದನ್ನೇ ಅಧಿಕೃತವಾಗಿ ನಾವು ಘೋಷಿಸಲಿದ್ದೇವೆ. ಹಾಗೆಯೇ ಗೃಹ ಇಲಾಖೆಯ ವತಿಯಿಂದ ಗೋರಕ್ಷಕರಿಗೆ ವಿವಿಧ ಶೌರ್ಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ....’’ ಅಮಿತ್ ವಿವರಿಸಿದರು.
‘‘ಸಾರ್...ಗುಂಪು ಹಲ್ಲೆಗಳಿಗೆ ಯಾವ ಕ್ರಮ ಕೈಗೊಳ್ಳ್ಳುತ್ತೀರಿ?’’ ಕಾಸಿ ಪ್ರಶ್ನಿಸಿದ.
‘‘ಈ ದೇಶದಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ತಡೆಯಲು ಗುಂಪು ಹಲ್ಲೆಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಆದುದರಿಂದ ಗುಂಪು ಹಲ್ಲೆಗಳನ್ನು ಸಂವಿಧಾನ ಬದ್ಧ ಮಾಡಿ...ಯಾರು ಯಾರನ್ನೂ ಸಾರ್ವಜನಿಕವಾಗಿ ಯಾವುದೇ ಆತಂಕವಿಲ್ಲದೆ ಥಳಿಸಬಹುದು ಎನ್ನುವ ಕಾನೂನು ಜಾರಿಗೆ ತರಲಿದ್ದೇನೆ....’’
‘‘ಸಾರ್...ಈಗಾಗಲೇ ಕೋಮುಗಲಭೆಗಳ ಪ್ರಕರಣಗಳಲ್ಲಿ ಜೈಲಿನಲ್ಲಿರುವವರ ಗತಿ ಏನು?’’
‘‘ಕೋಮುಗಲಭೆಗಳಲ್ಲಿ ಜೈಲು ಸೇರಿದವರಿಗೆ ಕ್ಲೀನ್ ಚಿಟ್ ನೀಡಲು ಗೃಹ ಇಲಾಖೆಯೊಳಗೆ ಒಂದು ಕಚೇರಿ ಆರಂಭಿಸಲಿದ್ದೇವೆ. ಅವರನ್ನೆಲ್ಲ ಬಿಡುಗಡೆಗೊಳಿಸಿ ಅವರಿಗೆ ಸ್ವಾತಂತ್ರ ಯೋಧರಿಗೆ ಸರಿಸಮಾನವಾದ ಪಿಂಚಣಿಯನ್ನು ನೀಡಲಿದ್ದೇವೆ...’’
‘‘ದೇಶದಲ್ಲಿರುವ ಕ್ರಿಮಿನಲ್‌ಗಳು...ಕಳ್ಳರು....’’ ಕಾಸಿ ಮಾತು ಮುಗಿಸುವ ಮೊದಲೇ ಅಮಿತ್ ಶಾ ತಡೆದರು ‘‘ಭಾರತ್ ಮಾತಾಕಿ ಜೈ, ಜೈ ಶ್ರೀರಾಮ್ ಎಂದು ಘೋಷಿಸಿ ಮಾಡುವ ಯಾವುದೇ ಕೆಲಸಗಳು ಕ್ರಿಮಿನಲ್ ವ್ಯಾಪ್ತಿಯಲ್ಲಿ ಬರುವುದಿಲ್ಲ....ಹಾಗೊಂದು ಕಾನೂನು ಜಾರಿಗೆ ತರಲಿದ್ದೇವೆ...’’
‘‘ಸಾರ್...ನಿಮ್ಮ ಆಡಳಿತದಲ್ಲಿ ಪತ್ರಕರ್ತರ ಗತಿ...?’’ ಕಾಸಿ ಆತಂಕದಿಂದ ಕೇಳಿದ
‘‘ಅವರಿಗೆ ಸರ್ವ ರಕ್ಷಣೆಯನ್ನು ನೀಡುವ ಹೊಣೆಯನ್ನು ನಾವು ವಿವಿಧ ಗೋರಕ್ಷಕ ತಂಡಗಳಿಗೆ ನೀಡಲಿದ್ದೇವೆ... ನೀವು ಯಾವುದೇ ಆತಂಕವಿಲ್ಲದೆ ಮೋದಿಯ ಪರವಾಗಿ ಯಾವುದೇ ಲೇಖನವನ್ನು ಬರೆಯಬಹುದು....’’
‘‘ಇದು ನಿಜಕ್ಕೂ ಪತ್ರಿಕಾ ಸ್ವಾತಂತ್ರಕ್ಕೆ ನೀಡುವ ನೀಡುವ ಬಹುದೊಡ್ಡ ಕೊಡುಗೆ ಸಾರ್...ಥ್ಯಾಂಕ್ಯೂ ಸಾರ್...’’ ಎಂದವನೇ ಕಾಸಿ ಅಲ್ಲಿಂದ ಜಾಗ ಖಾಲಿ ಮಾಡಿದ.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News