ಶಾಂತಿ ಕಾಪಾಡುವ ಹೊಣೆ ಪಾಕಿಸ್ತಾನದ ಮೇಲೆ: ಅಮೆರಿಕ
ವಾಶಿಂಗ್ಟನ್, ಜೂ. 8: ದಕ್ಷಿಣ ಏಶ್ಯದಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರುವ ಹೊಣೆ ಪಾಕಿಸ್ತಾನದ ಮೇಲಿದೆ ಹಾಗೂ ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳನ್ನು ದೂರವಿಟ್ಟು ಇದನ್ನು ಸಾಧಿಸಬೇಕು ಎಂದು ಅಮೆರಿಕವು ಪಾಕಿಸ್ತಾನಕ್ಕೆ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಮರುಆಯ್ಕೆಯಾದ ಬಳಿಕ, ಶಾಂತಿ ಪ್ರಕ್ರಿಯೆಯನ್ನು ಆರಂಭಿಸುವ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮೋದಿಗೆ ಪತ್ರ ಬರೆದಿರುವ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಕಾಶ್ಮೀರ ವಿವಾದ ಸೇರಿದಂತೆ ಎಲ್ಲ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥಪಡಿಸಲು ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಬಯಸುತ್ತದೆ ಎಂಬುದಾಗಿ ಮೋದಿ ಮರುಆಯ್ಕೆಯಾದ ಬಳಿಕ ಇಮ್ರಾನ್ ಎರಡನೇ ಪತ್ರವನ್ನು ಬರೆದಿರುವುದನ್ನು ಸ್ಮರಿಸಬಹುದಾಗಿದೆ.
‘‘ಪಾಕಿಸ್ತಾನವು ಭಯೋತ್ಪಾದಕರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಬೇಕು, ಅವರು ಮುಕ್ತವಾಗಿ ಓಡಾಡಲು, ಭಾರತದ ಗಡಿ ದಾಟಲು ಹಾಗೂ ಅಲ್ಲಿ ದಾಳಿಗಳನ್ನು ನಡೆಸಲು ಬಿಡಬಾರದು ಎಂಬುದಾಗಿ ಅಮೆರಿಕ ಬಯಸುತ್ತದೆ’’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.