ಮತ್ತೆ ಹಿಂದಿ ಅವಾಂತರ

Update: 2019-06-08 18:31 GMT

ತ್ರಿಭಾಷಾ ಸೂತ್ರ ಜಾರಿಯನ್ನು ಕುರಿತ ಸರಕಾರದ ನಿರ್ಧಾರದಲ್ಲಿ ಏನೂ ಬದಲಾವಣೆಯಾಗಿಲ್ಲ. ತ್ರಿಭಾಷಾ ನೀತಿ ಜಾರಿ ಕುರಿತ ಶಿಫಾರಸು ಕರಡಿನಲ್ಲಿ ಮೊದಲಿನಂತೆಯೇ ಉಳಿದುಕೊಂಡಿದೆ. ಅಂದರೆ ಒಂದನೇ ತರಗತಿಯಿಂದಲೇ ಹಿಂದಿಯೇತರ ಮಕ್ಕಳು ಮೂರು ಭಾಷೆಗಳನ್ನು ಕಲಿಯಲೇ ಬೇಕು. ಒಂದು ಪ್ರಾದೇಶಿಕ ಭಾಷೆ, ಮತ್ತೊಂದು ಇಂಗ್ಲಿಷ್. ಇನ್ನು ಮೂರನೆಯ ಭಾಷೆ. ಪ್ರಾದೇಶಿಕ ಭಾಷೆಗಳು ಅವಕಾಶವಂಚಿತವಾಗಿ ಅಖಿಲ ಭಾರತ ಸ್ಪರ್ಧೆಗಳಲ್ಲಿ ಹಿಂದಿ ಅಗ್ರತಾಂಬೂಲ ಪಡೆದಿರುವ ಇಂದಿನ ಸಂದರ್ಭದಲ್ಲಿ ಹಿಂದಿಯಲ್ಲದೆ ಬೇರಾವ ಭಾಷೆ ಮೂರನೆಯದಾಗಲು ಸಾಧ್ಯ?


ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎನ್ನುವ ಗಾದೆ ಮಾತಿನಂತೆ ಕೆಲವೊಂದು ವಿಷಯಗಳು/ಸಮಸ್ಯೆಗಳು ಮತ್ತೆಮತ್ತೆ ತಲೆಎತ್ತಿ ಜನರನ್ನು ಕಂಗೆಡಿಸುತ್ತವೆ. ಅಂಥವುಗಳಲ್ಲಿ ಹಿಂದಿಯೂ ಒಂದು. ಭರ್ಜರಿ ವಿಜಯದ ಉತ್ಸಾಹದಲ್ಲಿರುವ ನರೇಂದ್ರ ಮೋದಿಯವರ ಸರಕಾರ ಕಳೆದ ವಾರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಪ್ರಕಟಿಸಿ ಮಲಗಿದ್ದ ಹಿಂದಿ ಹೇರಿಕೆ ವಿವಾದವನ್ನು ಮೈಮೇಲೆ ಎಳೆದುಕೊಂಡಿತು. ತ್ರಿಭಾಷಾ ಸೂತ್ರವನ್ನು ದೇಶದಾದ್ಯಂತ ಜಾರಿಗೆ ತರುವಂತೆ ಶಿಫಾರಸು ಮಾಡಿರುವ ಡಾ.ಕಸ್ತೂರಿ ರಂಗನ್ ಸಮಿತಿ, ಹಿಂದಿಯೇತರ ರಾಜ್ಯಗಳಲ್ಲಿ ಮಕ್ಕಳು ಪ್ರದೇಶ ಭಾಷೆ ಮತ್ತು ಇಂಗ್ಲಿಷ್ ಜೊತೆಯಲ್ಲಿ ಹಿಂದಿಯನ್ನು ಒಂದನೆ ತರಗತಿಯಿಂದಲೇ ಕಡ್ಡಾಯವಾಗಿ ಕಲಿಯಬೇಕೆಂದು ಸೂಚಿಸಿರುವುದೇ ಹಿಂದಿ ವಿರೋಧ ಮತ್ತೆ ಭುಗಿಲೇಳಲು ಕಾರಣ. ಈ ಭುಗಿಲನ್ನು ಶಮನಗೊಳಿಸಲು ಪ್ರಧಾನ ಮಂತ್ರಿಯವರು ‘‘ರಾಜ್ಯಗಳ ಮೇಲೆ ಯಾವುದೇ ಭಾಷೆಯನ್ನು ಹೇರುವ ಉದ್ದೇಶವಿಲ್ಲ’’ ಎಂದು ವಿದೇಶಾಂಗ ಸಚಿವ ಜೈಶಂಕರ್ ಅವರಿಂದ ಹೇಳಿಕೆ ಕೊಡಿಸುವ ಮೂಲಕ ಪ್ರಯತ್ನಿಸಿದರು. ಆದರೆ ‘‘...‘ಏಕ ಭಾರತ ಶ್ರೇಷ್ಠ ಭಾರತ’ ಪರಿಕಲ್ಪನೆಗೆ ಪ್ರಧಾನಿ ಚಾಲನೆ ಕೊಟ್ಟಿದ್ದಾರೆ’’ ಎನ್ನುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯಿಂದ ಹಿಂದಿಯನ್ನು ಹಿಂಬಾಗಿಲಿನಿಂದ ಹೇರುವ ಕೇಂದ್ರದ ಹುನ್ನಾರ ಸ್ಪಷ್ಟ. ತಮಿಳುನಾಡು ಮತ್ತು ದಕ್ಷಿಣದ ಇತರ ರಾಜ್ಯಗಳಲ್ಲಿ ಈ ಹುನ್ನಾರದ ವಿರುದ್ಧ ವ್ಯಕ್ತಗೊಂಡ ಆಕ್ರೋಶ ಆರದಿದ್ದಾಗ ಕೇಂದ್ರ ಸರಕಾರ ಕರಡು ವರದಿಯಲ್ಲಿನ ಎರಡನೇ ಭಾಷೆಯಾಗಿ ಹಿಂದಿ ಕಲಿಕೆ ಕಡ್ಡಾಯ ಎಂಬುದನ್ನು ಬರಖಾಸ್ತುಗೊಳಿಸಿತು.

ಹಿಂದಿ ಕಲಿಕೆ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟದ್ದು ಎಂದು ತಿದ್ದುಪಡಿ ಮಾಡಿತು. ತಕ್ಷಣ ತನ್ನ ನಿಲುವನ್ನು ಬದಲಾಯಿಸಿಕೊಂಡ ನರೇಂದ್ರ ಮೋದಿಯವರ ಸರಕಾರದ ಕ್ರಮ ಅರ್ಥವಾಗುವಂಥಾದ್ದೆ. ಈಗಷ್ಟೆ ಎರಡನೆಯ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಮೋದಿಯವರಿಗೆ ಈ ಹಂತದಲ್ಲಿ ಭಾಷಾ ವಿವಾದ ಅತಿಯಾದ ಮಹತ್ವಪಡೆದುಕೊಳ್ಳುವುದು ಅಪೇಕ್ಷಣೀಯವಾಗಿರಲಾರದು. ಅಲ್ಲದೆ, ಕರ್ನಾಟಕ ಹೊರತಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿ ಇನ್ನೂ ಅಸ್ಪಶ್ಯವಾಗಿರುವ ಇಂದಿನ ರಾಜಕೀಯ ಸಂದರ್ಭದಲ್ಲಿ ಪಕ್ಷ ದಕ್ಷಿಣದ ಜನತೆಯ, ವಿಶೇಷವಾಗಿ ತಮಿಳನಾಡಿನ ಜನತೆಯ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಅಪಖ್ಯಾತಿಗೆ ಗುರಿಯಾಗುವುದರಿಂದಲೂ ಅದು ಪಾರಾಗಬೇಕಿದೆ. ಕೇಂದ್ರದ ಹಿಂದಿ ಹೇರಿಕೆಯ ಒಂದು ಚಿಕ್ಕ ಸುಳಿವಿಗೂ ತೀವ್ರವಾಗಿ ಪ್ರತಿಕ್ರಿಯಿಸುವ ತಮಿಳುನಾಡಿನಲ್ಲಿ ಆಕ್ರೋಶ ಭುಗಿಲೆದ್ದದ್ದೇ ಸರಕಾರ ಈ ನಿಟ್ಟಿನಲ್ಲಿ ಮುಂದಿಟ್ಟದ್ದ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಂಡಿತು. ಶಿಕ್ಷಣ ನೀತಿ ಕುರಿತ ಕರಡು ಶಿಫಾರಸುಗಳಲಿದ್ದ ಭಾಷೆಗಳ ಕಲಿಕೆಯ ಕಡ್ಡಾಯವನ್ನು ತೆಗೆದುಹಾಕಿ ವಿದ್ಯಾರ್ಥಿಗಳಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿತು. ಆದರೆ ತ್ರಿಭಾಷಾ ಸೂತ್ರ ಜಾರಿಯನ್ನು ಕುರಿತ ಸರಕಾರದ ನಿರ್ಧಾರದಲ್ಲಿ ಏನೂ ಬದಲಾವಣೆಯಾಗಿಲ್ಲ.

ತ್ರಿಭಾಷಾ ನೀತಿ ಜಾರಿ ಕುರಿತ ಶಿಫಾರಸು ಕರಡಿನಲ್ಲಿ ಮೊದಲಿನಂತೆಯೇ ಉಳಿದುಕೊಂಡಿದೆ. ಅಂದರೆ ಒಂದನೇ ತರಗತಿಯಿಂದಲೇ ಹಿಂದಿಯೇತರ ಮಕ್ಕಳು ಮೂರು ಭಾಷೆಗಳನ್ನು ಕಲಿಯಲೇ ಬೇಕು. ಒಂದು ಪ್ರಾದೇಶಿಕ ಭಾಷೆ, ಮತ್ತೊಂದು ಇಂಗ್ಲಿಷ್. ಇನ್ನು ಮೂರನೆಯ ಭಾಷೆ. ಪ್ರಾದೇಶಿಕ ಭಾಷೆಗಳು ಅವಕಾಶವಂಚಿತವಾಗಿ ಅಖಿಲ ಭಾರತ ಸ್ಪರ್ಧೆಗಳಲ್ಲಿ ಹಿಂದಿ ಅಗ್ರತಾಂಬೂಲ ಪಡೆದಿರುವ ಇಂದಿನ ಸಂದರ್ಭದಲ್ಲಿ ಹಿಂದಿಯಲ್ಲದೆ ಬೇರಾವ ಭಾಷೆ ಮೂರನೆಯದಾಗಲು ಸಾಧ್ಯ? ಈ ತ್ರಿಭಾಷಾ ಸೂತ್ರ ತಮಿಳಿನಾಡಿಗೆ ಅಪ್ರಿಯವಾದುದು. ಅಲ್ಲಿನ ಸರಕಾರ ಈಗ ಅನುಸರಿಸುತ್ತಿರುವ ದ್ವಿಭಾಷಾ ಸೂತ್ರವೇ ತಮಿಳುನಾಡಿನ ಜನತೆಗೆ ಪ್ರಿಯವಾದುದು. ಜನರ ಈ ಭಾವನೆಯನ್ನು ಅರಿತಿರುವ ಬಿಜೆಪಿಯ ಮಿತ್ರ ಪಕ್ಷವಾದ ಎಐಎಡಿಎಂಕೆ ಸರಕಾರವೂ ತಕ್ಷಣ ಹಿಂದಿ ಹೇರುವ ಕರಡು ನೀತಿಗೆ ವಿರೋಧ ವ್ಯಕ್ತಪಡಿಸಿತು. ಡಾ. ಕಸ್ತೂರಿ ರಂಗನ್ ಸಮಿತಿ ಶಿಫಾರಸು ಮಾಡಿರುವಂತೆ, ಹಿಂದಿ ಮಾತನಾಡುವ ರಾಜ್ಯಗಳ ಮಕ್ಕಳು ಹಿಂದಿಯ ಜೊತೆ ಇಂಗ್ಲಿಷ್ ಹಾಗೂ ಯಾವುದಾದರೂ ಒಂದು ಭಾರತೀಯ ಭಾಷೆಯನ್ನು ಕಲಿಯ ಬೇಕು ಹಾಗೂ ಹಿಂದಿಯೇತರ ರಾಜ್ಯಗಳ ಮಕ್ಕಳು ಪ್ರದೇಶ ಭಾಷೆ ಮತ್ತು ಇಂಗ್ಲಿಷ್ ಜೊತೆಗೆ ಒಂದನೆಯ ತರಗತಿಯಿಂದಲೇ ಹಿಂದಿಯನ್ನು ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಯಬೇಕೆಂಬುದರ ಬದಲು ಪ್ರದೇಶ ಭಾಷೆ ಜೊತೆಗೆ ತಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಮೇಲ್ನೋಟಕ್ಕೆ ಭಾಷೆ ಕಲಿಕೆ ವಿಷಯದಲ್ಲಿ ಸರಕಾರ ರಾಜೀ ಮನೋಭಾವ ತೋರಿ ವಿವಾದಕ್ಕೆ ಮಂಗಳ ಹಾಡಿದೆ ಎನ್ನುವ ಸಮಾಧಾನ ಉಂಟಾಗಬಹುದಾದರೂ ಇದು ಇಷ್ಟು ಸರಳವಾಗಿಲ್ಲ. ಭಾಷಾ ಕಲಿಕೆ ಹೆಚ್ಚು ಸಂಕೀರ್ಣವಾದುದು ಹಾಗೂ ಅದರ ವ್ಯಾಪ್ತಿಯೂ ವಿಸ್ತೃತವಾದುದು. ಹಿಂದಿ ಮತ್ತು ಇಂಗ್ಲಿಷ್ ಎರಡೂ ಹದಿನೈದು ವರ್ಷಗಳ ಕಾಲ ದೇಶದ ಅಧಿಕೃತ ಭಾಷೆಯಾಗಿರುವುದು ಎಂದು ಸಂವಿಧಾನ ಅಂಗೀಕರಿಸಿದ ದಿನದಿಂದ ಈ ಬಿಕ್ಕಟ್ಟು ಉದ್ಭವಿಸಿದೆ. ಇಂಗ್ಲಿಷ್ ಅನಿರ್ದಿಷ್ಟ ಕಾಲದವರೆಗೆ ದೇಶದ ಅಧಿಕೃತ ಭಾಷೆಯಾಗಿ ಮುಂದುವರಿಯಬೇಕು ಎಂಬದು ವಿವಾದದ ಒಂದು ಮುಖವಾದರೆ, ಆಡಳಿತದಲ್ಲಿ ಇಂಗ್ಲಿಷ್ ಭಾಷೆಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತಾ ಆಖೈರಾಗಿ ಅದನ್ನು ಕೈಬಿಟ್ಟು ಹಿಂದಿಯನ್ನು ಏಕೈಕ ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬುದು ಇನ್ನೊಂದು ಮುಖ. ಹಂತಹಂತವಾಗಿ ಇಂಗ್ಲಿಷನ್ನು ಓಡಿಸುವ ಈ ಉಪಾಯವನ್ನು ತಮಿಳಿಗರು ಹಿಂದಿಯನ್ನು ನುಸುಳಿಸುವ ಸೂಕ್ಷ್ಮ ತಂತ್ರ ಎಂದೇ ಅರ್ಥೈಸುತ್ತಾರೆ. ಶ್ರೇಷ್ಠ ಮುತ್ಸದ್ದಿಯೂ ಆಗಿದ್ದ ನೆಹರೂ ಈ ಬಿಕ್ಕಟ್ಟನ್ನು ಉಪಾಯದಿಂದ ನಿರ್ವಹಿಸಿದರು. ರಾಜ್ಯಗಳು ಬಯಸುವಷ್ಟು ಕಾಲ ಇಂಗ್ಲಿಷ್ ಸಹಭಾಷೆಯಾಗಿ ಮುಂದುವರಿಯುವುದೆಂದು 1959ರಲ್ಲಿ ನೆಹರೂ ರಾಜ್ಯಗಳಿಗೆ ಭರವಸೆ ಇತ್ತರು. ಈ ಭರವಸೆಯನುಸಾರ ಇಂಗ್ಲಿಷ್ ಅಧಿಕೃತ ಭಾಷೆಯಾಗಿ ಮುಂದುವರಿದಿದೆ. ಹಿಂದಿ ಹೇರಿಕೆಯ ಪ್ರಯತ್ನಗಳನ್ನು ವಿಫಲಗೊಳಿಸುತ್ತ ಮುಂದುವರಿದಿದೆ. ವಿವಿಧ ಭಾಷೆಗಳನ್ನು ಆಡುವ ಪ್ರದೇಶಗಳ ಪಕ್ಷಗಳನ್ನೊಳಗೊಂಡ ಈಚಿನ ಸಮ್ಮಿಶ್ರ ರಾಜಕೀಯ ವ್ಯವಸ್ಥೆಯಲ್ಲಿ ಭಾಷಾ ಸಾಮರಸ್ಯ ಸಾಧ್ಯವಾಗಬೇಕಿತ್ತು. ಆದರೆ ಹಾಗಾಗಿಲ್ಲ. ಹಿಂದಿ ಹೇರಿಕೆಯ ಭೀತಿ ತಪ್ಪಿಲ್ಲ.

ಹಿಂದಿ ಹೇರಿಕೆ ವಿರೋಧಿಸುವುದರಲ್ಲಿ ಮೊದಲಿನಿಂದಲೂ ತಮಿಳುನಾಡು ಮುಂಚೂಣಿಯಲ್ಲಿದೆ. ಪ್ರಾದೇಶಿಕ ಭಾಷೆಗಳ ಪರವಾಗಿ ದೃಢ ನಿಲುವು ತಾಳಿರುವ ತಮಿಳುನಾಡು ತನ್ನ ಶಿಕ್ಷಣ ಕ್ರಮದಲ್ಲಿ ಹಿಂದಿಗೆ ಒತ್ತಾಯದ ಸ್ಥಾನವನ್ನು ಕಲ್ಪಿಸಿಲ್ಲ; ದೂರದರ್ಶನದಲ್ಲಿ ಹಿಂದಿ ವಾರ್ತಾಪ್ರಸಾರಕ್ಕೆ ಅವಕಾಶ ಕೊಟ್ಟಿಲ್ಲ; ಕೇಂದ್ರ ಸರಕಾರದ ಅನುದಾನ ಪಡೆಯುವ ಸಂಸ್ಥೆಗಳು ತನ್ನೊಂದಿಗೆ ಹಿಂದಿಯಲ್ಲಿ ಪತ್ರ ವ್ಯವಹಾರ ನಡೆಸಬೇಕೆಂಬ ಕೇಂದ್ರದ ಆದೇಶ ಅನುಷ್ಠಾನಗೊಳ್ಳಲು ಬಿಡಲಿಲ್ಲ; ಆಲ್ ಇಂಡಿಯಾ ರೇಡಿಯೋ ಆಕಾಶವಾಣಿಯಾಗುವುದನ್ನು ಸಹಿಸಿಕೊಳ್ಳಲಿಲ್ಲ. ಇದು ತಮಿಳುನಾಡಿನ ಬಿಗಿ ಹಿಂದಿ ವಿರೋಧಿ ನೀತಿ. ಇದೇ ನೀತಿ ಈಗಲೂ ಮುಂದುವರಿದಿದ್ದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮತ್ತೆ ಹಿಂದಿ ಹೇರುವ ಸುಳಿವು ಸಿಕ್ಕ ಕೂಡಲೇ ಮೊದಲು ಪ್ರತಿಭಟಿಸಿದ್ದು ತಮಿಳುನಾಡೇ.

ನಮ್ಮ ಸಾರ್ವಜನಿಕ ಜೀವನದಲ್ಲಿ ಅನವಶ್ಯಕವಾಗಿ ಹಿಂದಿಯನ್ನು ಹೇರಲಾಗುತ್ತಿದೆ. ಬ್ಯಾಂಕುಗಳ ವಿಷಯದಲ್ಲಿ ಸರಕಾರದ ಧೋರಣೆ ಇದನ್ನು ಸ್ಪಷ್ಟಪಡಿಸುತ್ತದೆ. ಕರ್ನಾಟಕದಲ್ಲಿನ ಬ್ಯಾಂಕುಗಳ ಕೆಲಸ ಕನ್ನಡ ನಾಡಿನಲ್ಲಿ, ಕನ್ನಡಿಗರಿಗಾಗಿ. ಇಲ್ಲಿ ಹಿಂದಿಯ ಅಗತ್ಯವೇನಿದೆ? ಕೇಂದ್ರದೊಡನೆ ಅಥವಾ ಇತರ ರಾಜ್ಯಗಳೊಡನೆ ಸಂಪರ್ಕ ಸಂವಹನಗಳಿಗಾಗಿ ಯಾವುದೇ ಭಾಷೆಯನ್ನು ಬಳಸಿಕೊಳ್ಳಲಿ. ಆದರೆ ಕರ್ನಾಟಕದಲ್ಲಿ ಕನ್ನಡಿಗರೊಡನೆ ದೈನಂದಿನ ವ್ಯವಹಾರಗಳಿಗಾಗಿ ಕನ್ನಡವನ್ನು ಬಳಸಬೇಡವೇ? ಹೇರಿಕೆಯ ಅಂಶ ಇಲ್ಲೇ ಇರುವುದು. ಹಿಂದಿ ಹೇರಲು ಯಾವ ಮಾರ್ಗವಾದರೂ ಸರಿ ಎಂದು ಕೇಂದ್ರ ಸರಕಾರ ಭಾವಿಸಿದಂತಿದೆ. ಹಿಂದಿ ಪ್ರಾಮುಖ್ಯದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಜನಮನದಲ್ಲಿ ಬಿತ್ತುವ ಕೆಲಸ ಮೊದಲಿನಿಂದಲೂ ನಡೆದಿದೆ. ಹಿಂದಿ ರಾಷ್ಟ್ರ ಭಾಷೆ ಎಂಬುದು ಇಂಥದೊಂದು ತಪ್ಪುಕಲ್ಪನೆ. ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಅದಕ್ಕೆ ಅಧಿಕೃತ ಭಾಷೆಯ ಸ್ಥಾನಮಾನ ಮಾತ್ರ ನೀಡಲಾಗಿದೆ. ಹಿಂದಿ ರಾಷ್ಟ್ರ ಭಾಷೆ ಎನ್ನುವುದಾರೆ ಉಳಿದ ಪ್ರದೇಶ ಭಾಷೆಗಳ ಸ್ಥಾನಮಾನ ಏನು? ಭಾಷಾವಾರು ರಾಜ್ಯಗಳ ಪುನರ್ವಿಂಗಡಣೆಗೆ ಅರ್ಥವಾದರೂ ಏನು? ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ಆದ್ದರಿಂದ ಅದು ರಾಷ್ಟ್ರ ಭಾಷೆ ಎಂಬ ವಾದವೂ ಇದೆ. ಹಿಂದಿ ಹೆಚ್ಚು ಜನರು ಆಡುವ ಭಾಷೆ ಎಂದು ಬಿಂಬಿಸಲು 2011ರ ಜನಗಣತಿಯಲ್ಲಿನ ಭಾಷೆ ಕುರಿತ ಅಂಕಿಸಂಖ್ಯೆಗಳನ್ನು ತಿರುಚುವ ಯತ್ನವೂ ನಡೆದಿದೆ. ಕಳೆದ ವರ್ಷ ಪ್ರಕಟವಾದ 2011ರ ಜನಗಣತಿಯಲ್ಲಿನ ಭಾಷೆ ಕುರಿತ ಅಂಕಿಸಂಖ್ಯೆಗಳ ವರದಿಯಲ್ಲಿ ಹಿಂದಿಯನ್ನು ದೇಶದ ಐವತ್ತು ಕೋಟಿ ಜನರ ಮಾತೃಭಾಷೆ ಎಂದು ನಮೂದಿಸಿರುವುದಾಗಿ ವರದಿಯಾಗಿದೆ. ಇದು ಅಪ್ಪಟ ಸುಳ್ಳು.

ರಾಜಸ್ಥಾನ, ಬಿಹಾರ, ಹರ್ಯಾಣ, ಛತ್ತೀಸಗಡ, ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಜನರು ಮಾತನಾಡುವ ಭೋಜ್‌ಪುರಿಯಂಥ ಸ್ಥಳೀಯ ಉಪ ಭಾಷೆಗಳನ್ನು ಹಿಂದಿಯೊಳಗೆ ಅಂತರ್ಗತಗೊಳಿಸಿ, ದೇಶದಲ್ಲಿ ಹೆಚ್ಚು ಮಂದಿಯ ಮಾತೃಭಾಷೆ ಹಿಂದಿ ಎನ್ನುವುದು ಎಂಥ ನ್ಯಾಯ? ರಾಷ್ಟ್ರೀಯ ಶಿಕ್ಷಣ ನೀತಿಯ ಕರಡಿನಲ್ಲಿ ತ್ರಿಭಾಷಾ ಸೂತ್ರ ಜಾರಿಗೆ ತರಬೇಕೆಂಬ ಶಿಫಾರಸ್‌ನಲ್ಲಿ ಏನೂ ಬದಲಾವಣೆಯಾಗಿಲ್ಲ. ತ್ರಿಭಾಷಾ ಸೂತ್ರಕ್ಕೆ ರಾಷ್ಟ್ರಾದ್ಯಂತ ಒಪ್ಪಿಗೆ ದೊರೆತಿದೆಯೆಂದು ಕೇಂದ್ರ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಅದು ದಿಟವಲ್ಲ. ಕನಿಷ್ಠ ಒಂದಾದರೂ ರಾಜ್ಯ(ತಮಿಳು ನಾಡು) ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ, ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತಿದೆ. ಈಗಲೂ ತ್ರಿಭಾಷಾ ಸೂತ್ರ ಎನ್ನುವುದೂ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಒಂದು ಕುಟಿಲೋಪಾಯವೇ. ಹಿಂದಿ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರಕ್ಕೆ ಏನಾದರೂ ಅರ್ಥವಿದೆಯೇ? ಅಲ್ಲಿ ಅದು ಜಾರಿಯಲ್ಲಿದೆಯೇ? ಇದ್ದರೆ ಹಿಂದಿ ರಾಜ್ಯಗಳಲ್ಲಿ ಕಲಿಯುತ್ತಿರುವ ಮೂರು ಭಾಷೆಗಳು ಯಾವುದು? ಹಿಂದಿ ರಾಜ್ಯಗಳ ಮಕ್ಕಳು ಹಿಂದಿ ಮತ್ತು ಇಂಗ್ಲಿಷ್ ಕಲಿಯುತ್ತವೆ, ಮತ್ತೊಂದು ಭಾರತೀಯ ಭಾಷೆ ಕಲಿಯುವುದರಲ್ಲಿ ಮಕ್ಕಳು, ಪೋಷಕರು, ರಾಜ್ಯ ಸರಕಾರಗಳು ಯಾರಿಗೂ ಆಸಕ್ತಿ ಇಲ್ಲ.ಉತ್ತರ ಭಾರತದವರು ದಕ್ಷಿಣದ ಭಾಷೆಗಳನ್ನು ಯಾಕೆ ಕಲಿಯ ಬೇಕು ಎನ್ನುವ ವಾದದಲ್ಲಿ ಈಗ ಹುರುಳಿಲ್ಲ. ಉದ್ಯೋಗಕ್ಕೆ ಭಾಷೆ ಬಲು ಮುಖ್ಯ ಸಾಧನ. ಒಂದು ಉದಾಹರಣೆ ನೋಡೋಣ. ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ದೊಡ್ಡದಾಗಿ ಬೆಳೆದು ಕಟ್ಟಡಗಳ ನಿರ್ಮಾಣ ದಿನೇದಿನೇ ಹೆಚ್ಚುತ್ತಿದೆ.

ಕಟ್ಟಡಗಳ ನಿಮಾಣಕ್ಕೆ ಅಗತ್ಯವಾದ ಗಾರೆ ಕೆಲಸಗಾರರು, ಟೈಲ್ಸ್ ಹಾಕುವವರು, ಬಡಗಿಗಳು ಇವರೆಲ್ಲ ಬಿಹಾರ ಮತ್ತು ಉತ್ತರ ಪ್ರದೇಶಗಳಿಂದ ಆಮದಾಗುತ್ತಿದ್ದಾರೆ. ಇವರಿಗೆ ಕನ್ನಡ ಬರುವುದಿಲ್ಲ. ಕನ್ನಡ ಬರದೆ ಅವರು ಪರದಾಡಿದರೆ ನಮಗೆ ಅವರೊಂದಿಗೆ ಹಿಂದಿಯಲ್ಲಿ ವ್ಯವಹರಿಸುವುದು ಅನಿವಾರ್ಯವಾಗಿದೆ. ದಕ್ಷಿಣದವರಿರಲಿ ಉತ್ತರದವರಿರಲಿ ಜೀವನೋಪಾಯಕ್ಕಾಗಿ ಅನ್ಯ ರಾಜ್ಯಗಳಿಗೆ ಹೋದಾಗ ಸ್ಥಳೀಯ ಭಾಷೆಯನ್ನು ಕಲಿಯಬೇಕಾದುದು ಜೀವನಧರ್ಮ. ನಮಗೆ ಅನ್ನ, ನೀರು, ಗಾಳಿ ಆ ರಾಜ್ಯಗಳದ್ದು ಬೇಕು, ಆದರೆ ಆ ರಾಜ್ಯದ ಭಾಷೆ ಬೇಡ ಎಂದರೆ ಹೇಗೆ?

ತ್ರಿಭಾಷಾ ಸೂತ್ರವನ್ನು ಜಾರಿಗೆ ಕೊಡುವ ನೆಪದಲ್ಲಿ ಹಿಂದಿಯನ್ನು ಹೇರುವ ಪ್ರಯತ್ನ ಪದೇಪದೇ ನಡೆಯುತ್ತಿರುವುದು ದುರದೃಷ್ಟಕರ. ಕರ್ನಾಟಕದಲ್ಲಂತೂ ಆರು ದಶಕಗಳಷ್ಟು ಹಿಂದಿನಿಂದಲೇ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ. ಸರಕಾರಿ ಶಾಲೆಗಳಲ್ಲಿ ಆರನೆಯ ತರಗತಿಯಿಂದ ಹಿಂದಿಯನ್ನು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಹಿಂದಿಯನ್ನು ಕಲಿಸಲಾಗುತ್ತಿದೆಯಂತೆ. ವಸ್ತುಸ್ಥಿತಿ ಹೀಗಿರುವಾಗ ಒಂದನೆಯ ತರಗತಿಯಿಂದಲೇ ಹಿಂದಿಯನ್ನು ಕಲಿಸಬೇಕೆನ್ನುವ ರಾಷ್ಟ್ರೀಯ ಶಿಕ್ಷಣ ನೀತಿ ಏನಕೇನಪ್ರಕಾರೇಣ ಹಿಂದಿಯೇತರ ಭಾಷೆಗಳ ಅಸ್ಮಿತೆಯನ್ನು ಅಲಕ್ಷಿಸುವ ‘ಏಕ್ ಭಾರತ್ ಶ್ರೇಷ್ಠ ಭಾರತ್’ ದುರಹಂಕಾರವಿದು ಎನ್ನದೇ ವಿಧಿಯಿಲ್ಲ. ಹೇಳಿಕೇಳಿ ಭಾಷೆ ಎಂಬುದು ಮೂಲಭೂತ ವಾದ ಒಂದು ಜೀವನೋಪಯೋಗಿ ಸಾಧನ. ಹೆಚ್ಚುಹೆಚ್ಚು ಭಾಷೆಗಳನ್ನು ಕಲಿಯುವುದು ಜೀವನೋಪಾಯದ ದೃಷ್ಟಿಯಿಂದ ಲಾಭದಾಯಕವಾಗಬಹುದು. ಆದರೆ ಮಾತೃ ಭಾಷೆ ಕಲಿಕೆ ಕಡ್ಡಾಯವಾಗಬೇಕು. ಅಂತೆಯೇ ಸಂಪರ್ಕ ಭಾಷೆಯಾಗಿ ವಿಶ್ವ ಭಾಷೆಯಾದ ಇಂಗ್ಲಿಷ್ ಕಲಿಕೆಯೂ ಕಡ್ಡಾಯವಾಗಬೇಕಾದ್ದು ಅಗತ್ಯ. ಉಳಿದ ಭಾಷೆಗಳ ಕಲಿಕೆಯನ್ನು ಅವರವರ ಆಯ್ಕೆಗೆ ಬಿಡುವುದು ಒಳಿತು.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75