ಸಾಹಿತಿಗಳ ಸರ್ವನಾಶಕ್ಕೆ ಮಹಾ ಹೋಮ!

Update: 2019-06-15 18:28 GMT

‘ಸಾಹಿತಿಗಳ ಸರ್ವ ನಾಶಕ್ಕೆ ಮಹಾಕಾಳಿ ಉಗ್ರನರಸಿಂಹ ಹೋಮ ಮಾಡಲಿದ್ದೇನೆ’’ ಪ್ರಣಯಾನಂದ ಸ್ವಾಮಿ ಎಂಬ ಮಲಯಾಳಿಗನ್ನಡ ಸ್ವಾಮೀಜಿ ಘೋಷಿಸಿದ್ದೇ, ಇಡೀ ನಾಡು ಒಕ್ಕೊರಲಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡ ತೊಡಗಿತು. ಪತ್ರಕರ್ತ ಕಾಸಿ ವಿವಿಧ ಗಣ್ಯರನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನು ತನ್ನ ಪತ್ರಿಕೆಯಲ್ಲಿ ದಾಖಲಿಸಿಯೇ ಬಿಟ್ಟ. ಈ ಸ್ವಾಮೀಜಿಯ ಹೇಳಿಕೆಗೆ ಗಣ್ಯರು ಕೆಳಗಿನಂತೆ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ: ಸಾಹಿತಿಗಳ ಸರ್ವನಾಶಕ್ಕೆ ಹೋಮ ಅಂತದ್ದೇನಿದೆಯೋ ಅದಕ್ಕೆ ಬೇಕಾದ ಕಟ್ಟಿಗೆ, ತುಪ್ಪ್ಪ, ಬೆಂಕಿ ಕಡ್ಡಿಯನ್ನು ನಾನು ಕೊಡಲಿದ್ದೇನೆ. ಆದರೆ ಸಾಹಿತಿಗಳ ಜೊತೆ ಜೊತೆಗೇ ಈ ಪತ್ರಕರ್ತರ ನಾಶಕ್ಕೂ ಅವರು ಹೋಮ ಮಾಡುವುದಾದರೆ ಮಾತ್ರ ನನ್ನ ಬೆಂಬಲ ಇದೆ. ಈಗಾಗಲೇ ವಿರೋಧ ಪಕ್ಷಗಳ ಹಲವು ನಾಯಕರ ವಿರುದ್ಧ ಈ ಹೋಮ ಅಂತದ್ದೇನಿದೆಯೋ ಅದು ಬಹಳಷ್ಟು ಕೆಲಸ ಮಾಡಿದೆ...ಆದರೂ ಅಲ್ಲಿಗೂ ಇಲ್ಲಿಗೂ ಸಲ್ಲುವ ಕೆಲವು ಸಾಹಿತಿಗಳನ್ನು ಈ ಹೋಮದಿಂದ ಹೊರಗಿಟ್ಟು ಅಭಿವ್ಯಕ್ತಿ ಸ್ವಾತಂತ್ರವನ್ನು ಎತ್ತಿ ಹಿಡಿಯಬೇಕು ಎನ್ನುವುದು ಸ್ವಾಮೀಜಿಯಲ್ಲಿ ನನ್ನ ಮನವಿ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ: 

ನೋಡ್ರೀ....ಈ ಹೋಮ ಗೀಮದ ಹಿಂದೆ ದೇವೇಗೌಡ್ರ ಕೈವಾಡ ಇದೆ. ನಾನು ಅಧಿಕಾರ ಕಳೆದುಕೊಳ್ಳುವುದಕ್ಕೂ ಅವರು ಹೋಮ ಮಾಡಿದ್ದಾರೆ ಎನ್ನುವ ವದಂತಿಗಳಿವೆ. ಆದ್ರೇ...ಈ ವದಂತಿಗಳಿಗೆ ಕಿವಿಗೊಡುವವನು ನಾನಲ್ಲ. ಈ ಪ್ರಣಯಾನಂದ ಸ್ವಾಮೀಜಿ ಅಂದ್ರೆ ಯಾರು ಅನ್ನೋದು ನನಗೆ ಗೊತ್ತಿಲ್ಲ. ಯಾವುದೋ ಟಿವಿಯಲ್ಲಿ ಅದ್ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದ. ‘ಯಾವ ಭಾಷೆ ಎಂದು ಕೇಳಿದೆ’. ‘ಕನ್ನಡ ಸಾರ್’ ಅಂದ್ರು. ಮೊದಲು ಆ ಮಲಯಾಳ ಗನ್ನಡವನ್ನು ಕನ್ನಡಕ್ಕೆ ಅನುವಾದಿಸಿ ಕೇಳಿಸಿಕೊಳ್ಳುತ್ತೇನೆ. ಆ ಬಳಿಕ ಇದರ ಬಗ್ಗೆ ನಾನು ಮಾತನಾಡುತ್ತೇವೆ. ಸದ್ಯಕ್ಕೆ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಹಾಗೆಯೇ ಈ ಬಗ್ಗೆ ದೇವನೂರ ಮಹಾದೇವರ ಬಳಿ ಚರ್ಚೆ ನಡೆಸಲಿದ್ದೇನೆ. ಅವರು ಹೋಮ ಗೀಮ ನಂಬುವುದಿಲ್ಲವಾದ್ದರಿಂದ ಅವರಿಗೇನು ದೊಡ್ಡ ಅಪಾಯವಾಗಲಿಲ್ಲ. ಉಳಿದಂತೆ ಸಾಹಿತಿಗಳಿಗೆ ಆಗುವ ಅಪಾಯದ ನಾಶ ನಷ್ಟವನ್ನು ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ. ಅದಕ್ಕೆ ಮೊದಲು ವೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತಂದದ್ದೇ ಆದರೆ ಬಹಳಷ್ಟು ಸಾಹಿತಿಗಳ ಪ್ರಾಣ ಉಳಿಯಬಹುದು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ.

ಹಿರಿಯ ವಿಧ್ವಂಸ ಚಿದಾನಂದ ಮೂರ್ತಿ:
ಅವರು ಹೋಮ ಮಾಡುವುದರ ಬಗ್ಗೆ ಯಾವುದೇ ಅಡ್ಡಿಯಿಲ್ಲ. ಹಿಂದಿನ ಕಾಲದಲ್ಲಿ ಇಂತಹ ಹೋಮಗಳು ನಡೆದಿರುವುದು ಹಲವು ಶಾಸನಗಳಲ್ಲಿ ಕಂಡು ಬರುತ್ತದೆ. ಆದರೆ ಇದು ಹಿಂದೂ ಧರ್ಮವನ್ನು ಮುಖ್ಯವಾಗಿ ಸಂಘಪರಿವಾರವನ್ನು ಟೀಕಿಸುವ ಸಾಹಿತಿಗಳ ನಾಶ ಎನ್ನುವುದನ್ನು ಅವರು ಸ್ಪಷ್ಟವಾಗಿ ಹೋಮ ನಡೆಯುತ್ತಿರುವಾಗ ಘೋಷಿಸಬೇಕು. ಯಾಕೆಂದರೆ ಕಾಳಿ, ಉಗ್ರನರಸಿಂಹಾದಿಗಳು ‘ಸರ್ವ ಸಾಹಿತಿಗಳು’ ಎಂದು ತಪ್ಪು ತಿಳಿದು ನಮ್ಮ ಭೈರಪ್ಪರ ನಾಶಕ್ಕೂ ಕಾರಣವಾಗಬಾರದು. ಆದುದರಿಂದ ಓಂ ಹ್ರೀಂ ಭಗವಾನ್ ಸಾಹಿತಿ ನಾಶಾಯೇ...ಎಂದು ಅಂತಹ ಸಾಹಿತಿಗಳು ಗುರುತಿಸಿ ಅವರ ಹೆಸರುಗಳನ್ನು ಸ್ಪಷ್ಟವಾಗಿ ಹೇಳಬೇಕು. ನಾನು ಸಾಹಿತಿ ವರ್ಗದಲ್ಲಿ ಸೇರುವುದಿಲ್ಲವಾದ್ದರಿಂದ ಈ ಹೋಮಕ್ಕೆ ನನ್ನ ಆಕ್ಷೇಪ ಇಲ್ಲ. ಈ ಹೋಮದಲ್ಲಿ ವಿವಿಧ ಪುಸ್ತಕಗಳನ್ನು ಬೆಂಕಿಗೆ ಅರ್ಪಿಸಬಹುದು. ಉದಾಹರಣೆಗೆ ಹಿಂದೂಧರ್ಮಕ್ಕೆ ತುಂಬಾ ಹಾನಿ ಮಾಡಿರುವ ಪೋಲಂಕಿಯವರ ಸೀತಾಯಣ, ಅನಂತಮೂರ್ತಿಯವರ ಸಂಸ್ಕಾರ, ಯೋಗೇಶ್ ಮಾಸ್ಟರ್ ಅವರ ಢುಂಢಿ....ಯಜ್ಞಕ್ಕೆ ಕಟ್ಟಿಗೆ, ತುಪ್ಪ ಬಳಸುವ ಬದಲು ಪುಸ್ತಕ ಬಳಸಬಹುದು. ಇದರಿಂದ ಪುಸ್ತಕಗಳನ್ನೂ ಪರೋಕ್ಷವಾಗಿ ದಹಿಸಿದಂತಾಗುತ್ತದೆ.

ವೀರಪ್ಪ ಮೊಯ್ಲಿ: 
(ಗುಟ್ಟಾಗಿ) ಕಾಸಿಯವ್ರೇ...ಇದನ್ನು ಪ್ರಕಟಿಸಬೇಡಿ....ಆದರೆ ಈ ಹೋಮದಿಂದ ನನಗೇನು ಸಮಸ್ಯೆಯಿಲ್ಲ. ನನಗೆ ಕಾದಂಬರಿ ಬರೆದುಕೊಡುವವರಿಗೆ ಒಂದಿಷ್ಟು ಸಮಸ್ಯೆಯಾಗಬಹುದು. ಸದ್ಯಕ್ಕೆ ಹೋಮದ ಸಂದರ್ಭದಲ್ಲಿ ನನ್ನ ಹೆಸರು ಅವರು ಹೇಳಿದರೂ ಸಾಹಿತಿಗಳಿಗೆ ಮಾತ್ರ ಅನ್ವಯವಾಗುವುದರಿಂದ ಪರಿಣಾಮ ಬೀರುವುದಿಲ್ಲ. ಹಾಗೊಂದು ವೇಳೆ ಬೀರಿದರೂ ನನಗೆ ಪೇಜಾವರ ಸ್ವಾಮೀಜಿಗಳ ಅಭಯ ಇದೆ. ಗೋದಾಮಿಯಲ್ಲಿ ಒಂದಿಷ್ಟು ಮಹಾಕಾವ್ಯ ಕೃತಿಗಳು ಸ್ಟಾಕಿವೆ. ಬೆಂಕಿಗೆ ಹಾಕಲು ಪುಸ್ತಕ ಕೇಳಿದರೆ ನಾನು ಕೊಟ್ಟು ಪ್ರಣಯಾನಂದ ಸ್ವಾಮೀಜಿಗಳಿಗೆ ಸಹಕರಿಸಬಲ್ಲೆ.

ಪುಸ್ತಕ ಪ್ರಾಧಿಕಾರ
: ಹೋಮ ಮಾಡಲು ಅವರು ಪುಸ್ತಕಗಳನ್ನೇ ಅಗ್ನಿಗೆ ಹಾಕುತ್ತಾರೆ ಎಂಬ ವಿಷಯ ತಿಳಿಯಿತು. ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಮಾರಾಟವಾಗದೇ ಉಳಿದಿರುವ ಪುಸ್ತಕಗಳು ತ್ಯಾಜ್ಯಗಳಂತೆ ದೊಡ್ಡ ರಾಶಿಯಾಗಿ ಬೆಳೆಯುತ್ತಿವೆ. ಅವುಗಳನ್ನು ಸ್ವಾಮೀಜಿಗಳು ಸ್ವೀಕರಿಸಿದರೆ ಪುಸ್ತಕ ಪ್ರಾಧಿಕಾರಕ್ಕೆ ಭಾರೀ ದೊಡ್ಡ ಉಪಕಾರವಾಗುತ್ತದೆ. ದಿವಂಗತ ಕವಿ ಮುದ್ದಣ: ಇಂತಿರ್ಪ ಸ್ವಾಮೀಜಿಗಳ್ ಸಾಹಿತಿಗಳಂ ನಾಶ ಮಾಡಲ್ ಹೋಮಮೇಕೆ ಮಾಲ್ಪುದು? ಸಾಹಿತಿಗಳ ಮಂತ್ರಂ ‘ಭವತಿ ಭಿಕ್ಷಾಂ ದೇಹಿ’. ಬಡತನದೊಳ್ ಕೊಳೆಯುತಿರ್ಪ ಸಾಹಿತಿಗಳ್ ನಾಶವಾಗಳ್ ಇನ್ನೇನು ಉಳಿದಿದೆ? ಮಾರಾಟವಾಗದ ಪುಸ್ತಕಂಗಳ್, ಗೋದಾಮಿನೊಳ್ ಕೊಳೆಯುತಿರ್ಪ ಕಾವ್ಯಂಗಳ್ ಸಾಹಿತಿ ಮೇಣ್ ಸಾಯುತ್ತಿ ಎಂಬುದನ್ ಘೋಷಿಸಿರ್ಪುದು....

ದಿವಂಗತ ಬಸವಲಿಂಗಯ್ಯ:

ಸಾಹಿತಿಗಳ ನಾಶಕ್ಕಾಗಿ ಅವರು ಹೋಮ ಮಾಡುವುದು ನಿಜವೇ ಆಗಿದ್ದರೆ ಕರ್ನಾಟಕದ ಸಾಹಿತಿಗಳಿಗೆ ಯಾವ ಹಾನಿಯೂ ಆಗುವುದಿಲ್ಲ. ಯಾಕೆಂದರೆ ಈಗ ಇರುವ ಸಾಹಿತ್ಯ ಯಾವುದೂ ಸಾಹಿತ್ಯವಲ್ಲ. ಬರೇ ಬೂಸಾ....ಆದುದರಿಂದ ಸಾಹಿತಿಗಳಾಗಿ ಗುರುತಿಸಿಕೊಂಡವರು ಯಾರೂ ಹೆದರ ಬೇಕಾಗಿಲ್ಲ.

ಎಸ್. ಎಲ್. ಭೈರಪ್ಪ: 
ನಾನು ಪೂರ್ತಿಯಾಗಿ ಸಾಹಿತಿಯೂ ಅಲ್ಲ ರಾಜಕಾರಣಿಯೂ ಅಲ್ಲ ಆಗಿರುವುದರಿಂದ ನನ್ನನ್ನು ಆ ಹೋಮಕ್ಕೆ ವಿಶೇಷವಾಗಿ ಪ್ರಣಯಾನಂದರು ಆರಿಸಿಕೊಂಡಿದ್ದಾರೆ ಮತ್ತು ಯಾವ ಯಾವ ಸಾಹಿತಿಗಳ ಹೆಸರುಗಳನ್ನು ಆ ಸಂದರ್ಭದಲ್ಲಿ ಉಲ್ಲೇಖಿಸಬೇಕು ಎನ್ನುವುದರ ಪಟ್ಟಿಯನ್ನು ಕೊಡುವ ಹೊಣೆಗಾರಿಕೆ ನಾನೇ ಹೊತ್ತಿದ್ದೇನೆ. ಇದೇ ಸಂದರ್ಭದಲ್ಲಿ ಹಿಂದೂ ಧರ್ಮದ ವಿರುದ್ಧ ಈಗಾಗಲೇ ಬರೆದು ದಿವಂಗತರಾಗಿರುವ ಕೆಲವರ ಹೆಸರುಗಳನ್ನೂ ಅವರಿಗೆ ಕೊಡಲಿದ್ದೇನೆ. ಯಾವುದೋ ಕಾರಣದಿಂದ ಅವರು ಸ್ವರ್ಗವಾಸಿಯಾಗಿದ್ದರೆ, ಈ ಹೋಮದ ಆನಂತರ ಅವರನ್ನು ಸ್ವರ್ಗದಿಂದ ನರಕಕ್ಕೆ ಎತ್ತಿಕೊಳ್ಳಲಾಗುತ್ತದೆ. ದಿವಂಗತ ಗೌರಿ ಲಂಕೇಶ್: ಏ....ಬಿಡಪ್ಪ. ಆ ಪ್ರಣಯಾನಂದ ಸ್ವಾಮಿಯ ಹೋಮದಿಂದ ಸಾಹಿತಿಗಳಿಗೆ ಏನೂ ಆಗಲ್ಲ. ಮೋದಿ ಆಡಳಿತ ಬಂದ ಬಳಿಕ ಹಲವರು ಈಗಾಗಲೇ ಸತ್ತಿದ್ದಾರೆ. ಉಳಿದವರು ಜೈಲಿನಲ್ಲಿದ್ದಾರೆ ಮತ್ತು ಅಳಿದುಳಿದ ಸಾಹಿತಿಗಳು ಮೋದಿಗೆ ಬಕೆಟ್ ಹಿಡಿಯುತ್ತಾ ಜೀವಂತ ಇದ್ದೂ ಸತ್ತಿದ್ದಾರೆ. ಇನ್ನು ಸಾಹಿತಿಗಳು ಸರ್ವನಾಶ ಆಗುವುದಕ್ಕೆ ಏನು ಉಳಿದಿದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News