ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್‌ರನ್ನು ಭೇಟಿಯಾದ ಟ್ರಂಪ್

Update: 2019-06-30 17:40 GMT

ಸೋಲ್,ಜೂ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಬ್ಬಿಣದ ಪರದೆಯ ರಾಷ್ಟ್ರವೆಂದೇ ಕರೆಯಿಸಿಕೊಳ್ಳುವ ಉತ್ತರ ಕೊರಿಯಕ್ಕೆ ಕಾಲಿಡುವ ಮೂಲಕ ಹೊಸ ಇತಿಹಾಸ ಸ್ಥಾಪಿಸಿದ್ದಾರೆ. ಉತ್ತರ ಕೊರಿಯದ ಸರ್ವೋಚ್ಛ ನಾಯಕ ಕಿಮ್ ಜೊಂಗ್ ಉನ್ ಅವರನ್ನು ಟ್ರಂಪ್ ಅವರು, ಉಭಯ ಕೊರಿಯ ದೇಶಗಳನ್ನು ಪ್ರತ್ಯೇಕಿಸುವ ಮಿಲಿಟರಿರಹಿತ ವಲಯದ ಗಡಿಪ್ರದೇಶದ ಗ್ರಾಮವಾದ ಪಾನ್‌ಮುಂಜೊಮ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಮೆರಿಕ ಅಧ್ಯಕ್ಷರೊಬ್ಬರು ಉತ್ತರ ಕೊರಿಯಕ್ಕೆ ಭೇಟಿ ನೀಡಿರುವುದು ಇದೇ ಮೊದಲ ಸಲವಾಗಿದೆ.

 ಕಿಮ್ ಜೊತೆ ಹಸ್ತಲಾಘವ ನಡೆಸಿದ ಟ್ರಂಪ್ ಅವರು ಉತ್ತರ ಕೊರಿಯದ ಪ್ರಾಂತದ ನೆಲದೊಳಗೆ ತುಸು ಹೊತ್ತು ನಡೆದಾಡಿದರು. ಆನಂತರ ಇಬ್ಬರೂ ನಾಯಕರು ದಕ್ಷಿಣ ಕೊರಿಯದ ಗಡಿಪ್ರದೇಶದೊಳಗಿನ ನೆಲದಲ್ಲಿ ತುಸು ಹೊತ್ತು ನಡೆದಾಡುತ್ತಲೇ ಸಂಭಾಷಣೆ ನಡೆಸಿದರು ಹಾಗೂ ಛಾಯಾಗ್ರಾಹಕರಿಗೆ ಜೊತೆಯಾಗಿ ಪೋಸ್ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ ಇನ್ ಕೂಡಾ ಜೊತೆಗಿದ್ದರು. ಆನಂತರ ಸುದ್ದಿಗಾರರ ಜೊತೆ ಮಾತನಾಡಿದ ಟ್ರಂಪ್ ‘ಜಗತ್ತಿನ ಪಾಲಿಗೆ ಇದೊಂದು ಮಹಾನ್ ದಿನವಾಗಿದೆ ಹಾಗೂ ಇಲ್ಲಿರುವುದು ನನಗೆ ದೊರೆತ ಗೌರವವಾಗಿದೆ’’ ಎಂದು ಟ್ರಂಪ್ ತಿಳಿಸಿದರು. ಇನ್ನು ಮುಂದೆ ಶ್ರೇಷ್ಠವಾದ ಸಂಗತಿಗಳು ನಡೆಯಲಿಕ್ಕಿವೆ ಎಂದವರು ತಿಳಿಸಿದರು. ಉತ್ತರ ಕೊರಿಯದ ಅಣ್ವಸ್ತ್ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಮೆರಿಕ ಹಾಗೂ ಉತ್ತರ ಕೊರಿಯ ನಡುವೆ ಬಿಗಡಾಯಿಸಿದ್ದ ಸಂಬಂಧಗಳನ್ನು ತಿಳಿಯಾಗಿಸುವ ನಿಟ್ಟಿನಲ್ಲಿ ಉಭಯದೇಶಗಳ ನಡುವೆ ಮಾತುಕತೆಗಳು ಪ್ರಗತಿ ಸಾಧಿಸಿರುವ ಸಂದರ್ಭದಲ್ಲೇ ಟ್ರಂಪ್ ಉತ್ತರ ಕೊರಿಯವನ್ನು ಪ್ರವೇಶಿಸಿದ್ದಾರೆ.

  ಕಳೆದ ವರ್ಷ ಸಿಂಗಾಪುರದಲ್ಲಿ ಟ್ರಂಪ್ ಹಾಗೂ ಕಿಮ್ ಜೊಂಗ್ ಉನ್ ನಡುವೆ ಅಣ್ವಸ್ತ್ರ ನಿಶಸ್ತ್ರೀಕರಣದ ಕುರಿತಾಗಿ ಮಾತುಕತೆಗಳು ನಡೆದಿದ್ದವು. ಆದಾಗ್ಯೂ ಉಭಯ ದೇಶಗಳು ಯಾವುದೇ ಒಪ್ಪಂದಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಮಾತುಕತೆಗಳು ವಿಫಲಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News