1996 ಮತ್ತು 2019ರ ವಿಶ್ವಕಪ್ ಗಳ ಸೆಮಿಫೈನಲ್ ಸೋಲು: ಹೀಗೊಂದು ತುಲನೆ
ಈ ಬಾರಿಯ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾದ ಸೋಲಿನ ವಾಸನೆ ಆರಂಭದಲ್ಲೇ ಹೊಡೆಯಲಾರಂಭಿಸಿತ್ತು. ಆಗಲೇ ನಾನು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಾಕ್ಯ ಬರೆದೆ... "1996ರ ವಿಶ್ವಕಪ್ ಸೆಮಿಫೈನಲ್ ನೆನಪಾಗುತ್ತಿದೆ"
ಆಗ ನಾನಿನ್ನೂ ಶಾಲಾ ಹುಡುಗ. ಆ ಸೆಮಿಫೈನಲ್ ಹೈಲೈಟ್ ಏನೆಂದು ಯಾವನೇ ಕ್ರಿಕೆಟ್ ಪ್ರೇಮಿಯ ಬಳಿ ಕೇಳಿದರೆ "ವಿನೋದ್ ಕಾಂಬ್ಳಿ ಅತ್ತದ್ದು" ಎಂದು ತಟ್ಟನೇ ಹೇಳಿಬಿಡುತ್ತಾನೆ. ಈ ಬಾರಿಯ ಸೋಲು 1996ರ ಸೆಮಿಫೈನಲ್‌ನ ಸೋಲಿನಷ್ಟು ಹೀನಾಯವೇನಲ್ಲ.ಅಂದಿನ ಅಝರುದ್ದೀನ್ ಪಡೆ ಮತ್ತು ಇಂದಿನ ಕೊಹ್ಲಿ ಪಡೆ ಮಾಡಿದ ಸಮಾನ ತಪ್ಪು ಅತೀ ಆತ್ಮ ವಿಶ್ವಾಸ..
ಈ ಹಿನ್ನೆಲೆಯಲ್ಲಿ ಅಂದಿನ ಮತ್ತು ಇಂದಿನ ಸೆಮಿಫೈನಲ್ ಸೋಲನ್ನು ಎದುರೆದುರು ಇಟ್ಟು ವಿಶ್ಲೇಷಿಸುವ ಒಂದು ಪ್ರಯತ್ನ ಈ ಬರಹ.
96ರ ಸೆಮಿಫೈನಲ್
ಅಂದು ನಮ್ಮದೇ ಕಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಮ್ಯಾಚ್. ಆ ವಿಶ್ವಕಪ್ ವರೆಗೆ ಶ್ರೀಲಂಕಾವನ್ನು ಕ್ರಿಕೆಟ್ ಶಿಶುವೆಂದೇ ಕ್ರಿಕೆಟ್ ಜಗತ್ತು ಕರೆಯುತ್ತಿತ್ತು. ಆದರೆ ಆ ವಿಶ್ವಕಪ್ ನಲ್ಲಿ ಅರ್ಜುನ ರಣತುಂಗ ಪಡೆ "ನಾವು ಕ್ರಿಕೆಟ್ ದೈತ್ಯರು" ಎಂದು ಸಾಬೀತುಪಡಿಸಿತ್ತು. ಆ ಬಾರಿಯ ಸ್ಟಾರ್ ಆಟಗಾರರು ಸನತ್ ಜಯಸೂರ್ಯ ಮತ್ತು ಶ್ರೀಲಂಕಾದ ಗೋಡೆ ಅರವಿಂದ ಡಿಸಿಲ್ವಾ... ಅಂದು ಶ್ರೀಲಂಕಾದ ಬೌಲಿಂಗ್ ವಿಭಾಗವೂ ಅಷ್ಟೇ ಬಲಶಾಲಿಯಾಗಿತ್ತು. ಸ್ಪಿನ್ ಬೌಲಿಂಗ್ ನಲ್ಲಿ ಮುತ್ತಯ್ಯ ಮುರಳೀಧರನ್ ಪಾರಮ್ಯ ಮೆರೆದರೆ ಫಾಸ್ಟ್ ಬೌಲಿಂಗ್ ನಲ್ಲಿ ಚಮಿಂಡಾ ವಾಸ್ ಪಾರಮ್ಯ ಮೆರೆದಿದ್ದರು. ಈ ಮಧ್ಯೆ ಒಂದು ಆಸಕ್ತಿದಾಯಕ ವಿಚಾರ ನಿಮ್ಮ ಮುಂದಿಡುತ್ತೇನೆ. ಚಮಿಂಡಾ ವಾಸ್ ರ ಪೂರ್ಣ ನಾಮಧೇಯ ವಿಶ್ವದಾಖಲೆಯ ಪಟ್ಟಿಯಲ್ಲಿದೆ.ಅವರ ಪೂರ್ಣ ಹೆಸರು "ವರ್ಣಕುಲ ಸೂರ್ಯ ಪತಬದಿಗೆ ಜೋಸೆಫ್ ಉಶಾಂತ ಚಮಿಂಡಾ ವಾಸ್".
ಅಷ್ಟರವರೆಗೆ ಕ್ರಿಕೆಟ್ ಜಗತ್ತಿನಲ್ಲಿ ಏನೇನೂ ಆಗಿರದ ಜಯಸೂರ್ಯ ಏಕಾಏಕಿ ಜಗತ್ತಿನ ದಿಗ್ಗಜ ಬೌಲರ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಜಯಸೂರ್ಯರಿಗೆ ಬೌಲಿಂಗ್ ಮಾಡುವುದೇ ಅಂದಿನ ಬೌಲರ್ ಗಳಿಗೆ ತಲೆನೋವಾಗಿತ್ತು. ಆದರೆ 96ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಓಪನರ್ ಜಯಸೂರ್ಯ ಒಂದೇ ರನ್ ಗೆ ಶ್ರೀನಾಥ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು.ರೊಮೇಶ್ ಕಲುವಿತರಣ ಶೂನ್ಯ ಮೊತ್ತಕ್ಕೆ ಶ್ರೀನಾಥ್ ಗೆ ವಿಕೆಟ್ ಒಪ್ಪಿಸಿದ್ದರು. ಒನ್ ಡೌನ್ ಬಂದ ಅಸಂಕ ಗುರುಸಿಂಘೆ ಹದಿನಾರು ಎಸೆತಗಳನ್ನೆದುರಿಸಿ ಒಂದೇ ರನ್ ಗಳಿಸಿ ಶ್ರೀನಾಥ್ ಗೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ವಾಪಸಾಗಿದ್ದರು. ಆ ಬಳಿಕ ಬಂದ ಅರವಿಂದ ಡಿಸಿಲ್ವಾ ಮತ್ತು ರೋಶನ್ ಮಹಾನಮ ಶತಕದ ಜೊತೆಯಾಟ ನೀಡಿ ತಂಡವನ್ನು ಆದರಿಸಿದ್ದರು.
ಅರವಿಂದ ಡಿಸಿಲ್ವಾ ರನ್ನು ಔಟ್ ಮಾಡುವುದೆಂದರೆ ಅಂದು ಸುಲಭದ ಕೆಲಸವಾಗಿರಲಿಲ್ಲ. ಆತ ಒಮ್ಮೆ ಕ್ರೀಸಿಗಿಳಿದರೆಂದರೆ ಬಂಡೆಯಂತೆ ನಿಂತು ಬಿಡುತ್ತಿದ್ದರು. ಆಗ ನಾವೆಲ್ಲಾ ಡಿಸಿಲ್ವಾನಿಗೆ ಔಟಾಗುವುದೆಂದರೇನೆಂದೇ ಗೊತ್ತಿಲ್ಲ ಎನ್ನುತ್ತಿದ್ದೆವು. ಆತ ಕ್ರೀಸ್ ನಲ್ಲಿ ಅಕ್ಷರಶಃ ಬಂಡೆಯೇ ಆಗಿ ಬಿಡುತ್ತಿದ್ದರು. ಆತ ಯಾವುದೇ ಸನ್ನಿವೇಶದಲ್ಲೂ ಧೃತಿಗೆಡುತ್ತಿರಲಿಲ್ಲ. ಆತನ ಬ್ಯಾಟಿಗೆ ತಾಗಿದ ಚೆಂಡು ಒಂದಡಿಯಂತರದಲ್ಲೇ ನೆಲಕ್ಕೆ ತಾಗಿ ಮುಂದೆ ಚಲಿಸುತ್ತಿತ್ತು. ಅಷ್ಟರ ಮಟ್ಟಿಗೆ ಆತ ನೆಲಕಚ್ಚಿ ಆಡುತ್ತಿದ್ದ.
ರೋಶನ್ ಮಹಾನಮ ಗಾಯಾಳುವಾಗಿ ನಿವೃತ್ತಿಯಾದ ಬಳಿಕ ಬಂದ ಕಪ್ತಾನ ರಣತುಂಗ ಮತ್ತು ಹಶನ್ ತಿಲಕರತ್ನ ಕೂಡಾ ಚೆನ್ನಾಗಿ ಆಡಿದ್ದರು. ಕೊನೆಯಲ್ಲಿ ವೇಗಿ ಚಮಿಂಡಾ ವಾಸ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿ ತಂಡ 250ರ ಗಡಿ ದಾಟುವಂತೆ ಮಾಡಿ ಒಂದು ಸ್ಪರ್ಧಾತ್ಮಕ ಮೊತ್ತಕ್ಕೆ ತಲುಪಿಸಿದರು. ಒಂದು ಹಂತದಲ್ಲಿ ಶ್ರೀಲಂಕಾ ಎರಡಂಕಿ ದಾಟುವ ಮುನ್ನವೇ ಮೂರು ಅಮೂಲ್ಯ ವಿಕೆಟ್ ಗಳನ್ನು ಕಳಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅವರ ಆತ್ಮವಿಶ್ವಾಸ ಅವರನ್ನು ಚೆನ್ನಾಗಿ ಆಡಿಸಿತು.
ಟೀಂ ಇಂಡಿಯಾ ಕೂಡಾ ಕಡಿಮೆಯೇನಿರಲಿಲ್ಲ... ಸಚಿನ್ ತೆಂಡೂಲ್ಕರ್, ಮುಹಮ್ಮದ್ ಅಝರುದ್ದೀನ್, ಸಿಧುರಂತಹ ವಿಶ್ವಶ್ರೇಷ್ಟ ಬ್ಯಾಟ್ಸ್ ಮನ್ ಗಳು... ಕುಂಬ್ಳೆಯಂತಹ ಸ್ಟಾರ್ ಸ್ಪಿನ್ನರ್ ಟೀಂ ಇಂಡಿಯಾದಲ್ಲಿದ್ದರು. ಅಂದು ಶ್ರೀಲಂಕಾ ತಂಡಕ್ಕೆ ಆತ್ಮ ವಿಶ್ವಾಸವಿದ್ದರೆ, ಟೀಂ ಇಂಡಿಯಾಕ್ಕೆ ಅತೀ ಆತ್ಮ ವಿಶ್ವಾಸವಿತ್ತು. ಇಂಡಿಯಾದ ಅತೀ ಆತ್ಮವಿಶ್ವಾಸಕ್ಕೆ ಕಾರಣ ಈಡನ್ ಗಾರ್ಡನ್ ನಮ್ಮದೇ ಹೋಂ ಗ್ರೌಂಡ್ ಮತ್ತು ಈಡನ್ ಗಾರ್ಡನ್ ನಲ್ಲಿ ಭಾರತ ಸೋತಿದ್ದೇ ವಿರಳ. ಆದರೆ ಆ ವಿರಳತೆಯನ್ನು ಅಂದು ಬೇಧಿಸುವಲ್ಲಿ ರಣತುಂಗ ಪಡೆ ಯಶಸ್ವಿಯಾಗಿತ್ತು. ಗೆಲುವಿಗೆ
ಇನ್ನೂರ ಐವತ್ತೆರಡು ರನ್ ಗಳ ಗುರಿ ಪಡೆದಿದ್ದ ಅಝರುದ್ದೀನ್ ಪಡೆಯ ಅಗ್ರ ಕ್ರಮಾಂಕದ ವಿಕೆಟ್ ಗಳು ತರಗೆಲೆಗಳಂತೆ ಉದುರಿದವು. ಒಂದು ಕಡೆ ವಿಕೆಟ್ ಉರುಳುತ್ತಲೇ ಇದ್ದರೂ ವಿನೋದ್ ಕಾಂಬ್ಳಿ ಕ್ರೀಸಿಗಂಟಿ ನಿಂತು ಭಾರತದ ವಿಕೆಟ್ ಗಳು ಉರುಳುತ್ತಿದ್ದುದನ್ನು ನೋಡಿ ಅತ್ತಿದ್ದನ್ನು ಕ್ರಿಕೆಟ್ ಜಗತ್ತು ಎಂದೂ ಮರೆಯದು. ಕೊನೆಗೆ 120/8 ... ಹೀಗೆ ಭಾರತ ತನ್ನದೇ ನೆಲದ ಅದೂ ತನ್ನ ಫೇವರಿಟ್ ಮೈದಾನದಲ್ಲಿ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ಈ ಬಾರಿಯ ಸೆಮಿಫೈನಲ್
ನ್ಯೂಝಿಲ್ಯಾಂಡ್ ಹಿಂದಿನಿಂದಲೂ ಸರಾಸರಿ ಗುಣಮಟ್ಟದ ತಂಡವೆಂದೇ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಲ್ಪಟ್ಟಿತ್ತು. ಆದರೆ ಈ ಬಾರಿಯ ವಿಶ್ವಕಪ್ ಗಿಂತ ಮುಂಚೆಯೇ ಕ್ರಿಕೆಟ್ ಪ್ರಿಯರಿಗೆ ನ್ಯೂಝಿಲ್ಯಾಂಡ್ ಈ ಬಾರಿಯ ಫೇವರಿಟ್ ತಂಡಗಳಲ್ಲೊಂದು ಎಂಬುವುದು ಮನವರಿಕೆಯಾಗಿತ್ತು. ನ್ಯೂಝಿಲ್ಯಾಂಡ್ ಅತ್ಯುತ್ಸಾಹೀ ಯುವ ಆಟಗಾರರನ್ನೊಳಗೊಂಡ ತಂಡ. ಅದಾಗ್ಯೂ ಟೀಂ ಇಂಡಿಯಾದ ಮುಂದೆ ನ್ಯೂಝಿಲೆಂಡ್ ಅಂತಹ ಶ್ರೇಷ್ಠ ತಂಡ ಎನ್ನುವಂತಿರಲಿಲ್ಲ. ಯಾಕೆಂದರೆ ಟೀಂ ಇಂಡಿಯಾ ಸದ್ಯದ ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಗಳನ್ನು ಹೊಂದಿದ್ದ ತಂಡ. ವೇಗಿ ಜಸ್ಪ್ರೀತ್ ಬುಮ್ರಾ ಪ್ರಸ್ತುತ ಜಗತ್ತಿನ ನಂಬರ್ ವನ್ ವೇಗಿಯೆಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು.
ಭುವನೇಶ್ವರ್ ಮತ್ತು ಶಮಿ ಕೂಡಾ ಉತ್ತಮ ವೇಗಿಗಳು ಕೂಡಾ. ಸರಣಿಯ ಪ್ರಾರಂಭದಲ್ಲಿ ಶಮಿಯನ್ನು ತಂಡಕ್ಕೆ ಸೇರ್ಪಡೆ ಮಾಡಿರಲಿಲ್ಲ. ಭುವನೇಶ್ವರ್ ಗಾಯಾಳುವಾದುದರಿಂದ ಶಮಿಗೆ ಅವಕಾಶ ನೀಡಲಾಯಿತು. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿದ ಶಮಿ ಈ ವಿಶ್ವಕಪ್ ನಲ್ಲಿ ಬುಮ್ರಾಗಿಂತಲೂ ಒಳ್ಳೆಯ ನಿರ್ವಹಣೆ ತೋರಿದ್ದರು. ಒಂದು ವೇಳೆ ಶಮಿಗೆ ಅವಕಾಶ ನೀಡಿ ಟೀಂ ಇಂಡಿಯಾ ಗೆದ್ದಿದ್ದರೆ, ಶಮಿ ಈ ವಿಶ್ವಕಪ್ ನ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ದಾಖಲೆ ಮಾಡುವ ಸಾಧ್ಯತೆಯಿತ್ತು. ಆಡಿದ ನಾಲ್ಕು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಹೊರತುಪಡಿಸಿ ಶಮಿಯ ಬೌಲಿಂಗ್ ಅತ್ಯುತ್ತಮವಾಗಿತ್ತು. ಕೇವಲ ಒಂದೇ ಒಂದು ಪಂದ್ಯದ ಕಳಪೆ ಪ್ರದರ್ಶನಕ್ಕೆ ಶಮಿಯನ್ನು ಮತ್ತೆ ಹೊರಗಿಡಲಾಯಿತು. ಇದಕ್ಕೆ ಹಲವರು ರಾಜಕೀಯ ಕಾರಣಗಳನ್ನು ನೀಡುತ್ತಾರಾದರೂ ಅದನ್ನು ಸಂಪೂರ್ಣ ಸರಿ ಎನ್ನಲಾಗದು. ಆದರೆ ಶಮಿಯನ್ನು ಹೊರಗಿಟ್ಟ ಕ್ರಮವಂತೂ ಜನ ಆರೋಪಿಸುತ್ತಿದ್ದ ರಾಜಕೀಯ ಕಾರಣಗಳನ್ನು ಸಮರ್ಥಿಸುವಂತಿತ್ತು. ಮಾತ್ರವಲ್ಲದೇ ಅದು ಸೀಮರ್ ಗಳಿಗೆ ಅತ್ಯಂತ ಅನುಕೂಲಕರ ಪಿಚ್ ಆಗಿತ್ತು.
ಹೌದು... ನ್ಯೂಝಿಲ್ಯಾಂಡ್ ಕಲೆ ಹಾಕಿದ ಮೊತ್ತ ಭಾರತದ ಉತ್ತಮ ದರ್ಜೆಯ ಬ್ಯಾಟಿಂಗ್ ಪಡೆಯ ಮುಂದೆ ದೊಡ್ಡ ಮೊತ್ತವೇನಲ್ಲ. ಒಂದು ವೇಳೆ ಶಮಿಗೆ ಅವಕಾಶ ನೀಡಿದ್ದರೆ ನ್ಯೂಝಿಲ್ಯಾಂಡನ್ನು 220ರೊಳಗೆ ಕಟ್ಟಿ ಹಾಕುವ ಸಾಧ್ಯತೆಯಿತ್ತು. ಹಾಗೇನಾದರೂ ಆಗಿದ್ದರೆ ಅಗ್ರ ಸರದಿಯ ಬ್ಯಾಟ್ಸ್ ಮ್ಯಾನ್ ಗಳು ಪೆವಿಲಿಯನ್ ಗೆ ಸಾಗಿದ ಬಳಿಕವೂ ಮಧ್ಯಮ ಸರದಿಯ ಬ್ಯಾಟ್ಸ್‌ಮನ್ ಗಳಿಗೆ ಒತ್ತಡ ರಹಿತವಾಗಿ ಆಡಲು ಸಾಧ್ಯವಾಗುತ್ತಿತ್ತು.
ಮೊದಲ ವಿಕೆಟ್ ನಾಲ್ಕು ರನ್ ಆಗುವಷ್ಟರ ಹೊತ್ತಿಗೆ ಬಿದ್ದಿದ್ದರಿಂದ ನಾಯಕ ಕೊಹ್ಲಿ ಆದಷ್ಟು ಜಾಗರೂಕತೆಯಿಂದ ಆಡಬೇಕಿತ್ತು. ಕೊಹ್ಲಿ ನಿರ್ಗಮನದ ಬಳಿಕವೂ ಬ್ಯಾಟ್ಸ್‌ಮನ್ ಗಳು ಅತೀ ಆತ್ಮವಿಶ್ವಾಸವನ್ನು ಬಿಟ್ಟು ಜಾಗರೂಕತೆಯಿಂದ ಆಡಬೇಕಿತ್ತು. ಇಪ್ಪತ್ತನಾಲ್ಕು ರನ್ ಆಗುವಷ್ಟರ ಹೊತ್ತಿಗೆ ನಾಲ್ಕು ವಿಕೆಟ್ ಕಳಕೊಂಡಾಗಲೇ ಟೀಂ ಇಂಡಿಯಾದ ಹಣೆಬರಹ ತೀರ್ಮಾನವಾಗಿತ್ತು.
ನಮ್ಮದು ಅತ್ಯಂತ ಶ್ರೇಷ್ಠ ಬ್ಯಾಟಿಂಗ್ ಸರದಿ ಎಂಬ ಅತಿಯಾದ ಆತ್ಮವಿಶ್ವಾಸವೇ ಟೀಂ ಇಂಡಿಯಾಕ್ಕೆ ಮುಳುವಾಯಿತು...
1996ರ ಸೆಮಿಫೈನಲ್ ನಲ್ಲಿ ಭಾರತಕ್ಕೆ ಹೇಗೆ ಅದರ ಅತೀ ಆತ್ಮ ವಿಶ್ವಾಸ ಮುಳುವಾಯಿತೋ ಈ ಬಾರಿಯೂ ಅದೇ ಪುನರಾವರ್ತನೆಯಾಯಿತು.
ಭಾರತದ ಸೋಲನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿಮರ್ಶಿಸುವ ಪರಿ ನೋಡಿದರೆ ಭಾರತ ಯುದ್ಧ ಸೋತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಈಗ ಟೀಂ ಇಂಡಿಯಾ ಸೋತದ್ದರಿಂದ ಸೋಲಿಗೆ ಕ್ರಿಕೆಟ್ ತಂಡವೇ ಹೊಣೆ... ಒಂದು ವೇಳೆ ಗೆದ್ದಿದ್ದರೆ ಅದರ ಕೀರ್ತಿ ಮೋದಿ ಮತ್ತು ಶಾ ಜೋಡಿಗೆ ಸಲ್ಲಬೇಕು ಎಂದು ನಮ್ಮ ಲಜ್ಜೆಗೆಟ್ಟ ಮಾಧ್ಯಮಗಳು ಟಾಂಟಾಂ ಮಾಡುತ್ತಿತ್ತು,...