75 ವರ್ಷಗಳಿಂದ ಭಾರತದಲ್ಲಿರುವವರು ನಮ್ಮ ಪೌರರಲ್ಲ: ಎನ್ಆರ್ ಸಿ ಬಗ್ಗೆ ಬಾಂಗ್ಲಾದೇಶ

Update: 2019-07-18 17:45 GMT

ಢಾಕಾ (ಬಾಂಗ್ಲಾದೇಶ), ಜು. 18: ಅಕ್ರಮ ವಲಸಿಗರನ್ನು ಗುರುತಿಸುವ ಉದ್ದೇಶದ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಪ್ರಕ್ರಿಯೆಯ ಪರಿಣಾಮಗಳ ಬಗ್ಗೆ ಬಾಂಗ್ಲಾದೇಶ ಸರಕಾರ ಕಳವಳ ವ್ಯಕ್ತಪಡಿಸಿದೆ.

‘‘ನಾವು ಚಿಂತೆ ಮಾಡುವ ಅಗತ್ಯವಿಲ್ಲವಾದರೂ, ಮಾಧ್ಯಮ ವರದಿಗಳನ್ನು ಓದಿದ ಬಳಿಕ ಕಳವಳ ಉಂಟಾಗುತ್ತಿದೆ’’ ಎಂದು ಬಾಂಗ್ಲಾದೇಶದ ವಿದೇಶ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಇತ್ತೀಚೆಗೆ ಸ್ಥಳೀಯ ಸುದ್ದಿ ಚಾನೆಲ್ ಒಂದರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

‘‘ನಾವು ಈಗಾಗಲೇ 11 ಲಕ್ಷ ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಿದ್ದು, ಸಂಕಷ್ಟದಲ್ಲಿದ್ದೇವೆ. ನಾವು ಇನ್ನೂ ಹೆಚ್ಚು ಮಂದಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬಾಂಗ್ಲಾದೇಶವು ಭೂಮಿಯಲ್ಲೇ ಅತ್ಯಂತ ಹೆಚ್ಚು ಜನಸಾಂದ್ರತೆಯ ದೇಶವಾಗಿದೆ’’ ಎಂದರು.

ಎನ್‌ಆರ್‌ಸಿ ಪ್ರಕ್ರಿಯೆಯಡಿ ಗುರುತಿಸಲಾದ ಜನರು ಬಾಂಗ್ಲಾದೇಶಿ ವಲಸಿಗರು ಎನ್ನುವುದನ್ನು ಮೊಮೆನ್ ನಿರಾಕರಿಸಿದರು. ‘‘75 ವರ್ಷಗಳಿಂದ ಅಲ್ಲಿರುವ ಜನರು, ಅವರ ಪೌರರು, ನಮ್ಮದಲ್ಲ’’ ಎಂದರು.

ಅಸ್ಸಾಮ್‌ನ ಎನ್‌ಆರ್‌ಸಿ ಪ್ರಕ್ರಿಯೆ ಬಗ್ಗೆ ಬಾಂಗ್ಲಾದೇಶ ಸರಕಾರ ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿರುವುದು ಇದೇ ಮೊದಲ ಬಾರಿಯಾಗಿದೆ. 2018ರಲ್ಲಿ, 40 ಲಕ್ಷ ಅಕ್ರಮ ವಲಸಿಗರ ಕರಡು ಪಟ್ಟಿಯನ್ನು ಎನ್‌ಆರ್‌ಸಿ ಪ್ರಕಟಿಸಿದಾಗ, ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ಬಾಂಗ್ಲಾದೇಶ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News