ಸ್ವಾತಂತ್ರ್ಯ ದಿನದ ಮೋದಿ ಭಾಷಣಕ್ಕೆ ಸಲಹೆಗಳು!

Update: 2019-07-20 18:41 GMT

ಪ್ರಧಾನಿ ನರೇಂದ್ರ ಮೋದಿಯವರು ‘ಸ್ವಾತಂತ್ರ ದಿನದಂದು ಮಾಡುವ ಭಾಷಣ’ಕ್ಕೆ ಜನರಿಂದ ಸಲಹೆಯನ್ನು ನಮೋ ಆ್ಯಪ್‌ನಲ್ಲಿ ಕೇಳಿದ್ದೇ ತಡ, ಸಲಹೆಗಳ ಮಹಾ ಪೂರವೇ ಹರಿದು ಬಂತು. ಅವುಗಳಲ್ಲಿ ಆಯ್ದ ಸಲಹೆಗಳನ್ನು ಪತ್ರಕರ್ತ ಎಂಜಲು ಕಾಸಿ ಹೆಕ್ಕಿಕೊಂಡಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.

****

‘‘ಪ್ರಿಯ ಮೋದೀಜಿ-ನೀವು ಸ್ವಾತಂತ್ರೋತ್ಸವ ದಿನದಂದು ಭಾಷಣ ಮಾಡುವುದು ಕೇಳಿ ನಮಗೆ ತುಂಬಾ ಸಂತೋಷವಾಯಿತು. ಆದರೆ ಕೆಂಪುಕೋಟೆಯನ್ನು ಮೊಗಲರು ಕಟ್ಟಿರುವುದರಿಂದ ನೀವು ಅಲ್ಲಿ ನಿಂತು ಭಾಷಣ ಮಾಡುವುದು ಪರೋಕ್ಷವಾಗಿ ಮೊಗಲರ ಗುಲಾಮಗಿರಿಯನ್ನು ಒಪ್ಪಿಕೊಂಡಂತೆ. ಅದರ ಬದಲು ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯ ಗ್ಯಾಲರಿಯೊಳಗೆ ನಿಂತು ಭಾಷಣ ಮಾಡಿದರೆ ಈ ದೇಶದ ಏಕತೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ. ಮಳೆಗಾಲದಲ್ಲಿ ಪಟೇಲರ ಪ್ರತಿಮೆಯ ಗ್ಯಾಲರಿ ಸೋರುತ್ತಿದೆ ಎಂಬ ವದಂತಿಗಳಿವೆ. ಅದಕ್ಕೆ ಆದ್ಯತೆ ನೀಡಬೇಡಿ. ದೇಶದ ಏಕತೆಯೇ ಸೋರುತ್ತಿರುವಾಗ ಏಕತಾ ಪ್ರತಿಮೆಯ ಗ್ಯಾಲರಿಗೆ ನೀರು ನುಗ್ಗುವುದೇನು ಮಹಾ. ಆದುದರಿಂದ, ನಿಮ್ಮ ಭಾಷಣವನ್ನು ನಾನು ಪಟೇಲರ ಗ್ಯಾಲರಿಯಿಂದಲೇ ಕೇಳಲು ಇಚ್ಛಿಸುತ್ತೇನೆ.

- ಏಕತಾ ಕಪ್ ಊರ್, ಮೊಗಲ್‌ಲೇನ್, ದಿಲ್ಲಿ

****

ಪ್ರಿಯ ಮೋದೀಜಿ, ಈಗಾಗಲೇ ನಿಮ್ಮ ಭಾಷಣವನ್ನು ಕೇಳಿ ದೇಶಕ್ಕೆ ಬೋರ್ ಹೊಡೆದಿದೆ. ಮಂಕಿಬಾತ್‌ನ್ನು ಕೇಳಿ ಕೇಳಿ ಪ್ರತಿದಿನ ವಾಂಗೀಬಾತ್ ತಿಂದು ಜಡಗೊಂಡ ನಾಲಗೆಯಂತಾಗಿದೆ ಮನಸ್ಸು. ಆದುದರಿಂದ, ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ನೀವು ಅರ್ಧಗಂಟೆ ವೌನವಾಗಿ ನಿಂತರೆ ಅದನ್ನು ದೇಶದ ಜನರು ಗಂಭೀರವಾಗಿ ಸ್ವೀಕರಿಸುವ ಸಂದರ್ಭವಿರುತ್ತದೆ. ಸ್ವಾತಂತ್ರ ಸದ್ಯದ ದಿನಗಳಲ್ಲಿ ಅರ್ಥಕಳೆದುಕೊಂಡಿರುವುದರಿಂದ, ಈ ಅರ್ಧಗಂಟೆಯ ನಿಮ್ಮ ವೌನದ ಜೊತೆಗೆ ಇಡೀ ದೇಶವೂ ವೌನವನ್ನು ಆಚರಿಸಲು ತುದಿಗಾಲಲ್ಲಿ ನಿಂತಿದೆ. ನೀವು ಸ್ವಾತಂತ್ರ ದಿನ ಏನು ಭಾಷಣ ಮಾಡಲಿದ್ದೀರಿ ಎನ್ನುವುದು ಈಗಾಗಲೇ ಜನರಿಗೆ ಗೊತ್ತಿರುವುದರಿಂದ, ನಿಮ್ಮ ವೌನ ಅವರಿಗೆ ಅನಿರೀಕ್ಷಿತ ಆಘಾತವನ್ನು ನೀಡಬಹುದು. ಜನರ ಪಾಲಿಗೆ ನಿಮ್ಮ ವೌನ, ಸ್ವಾತಂತ್ರದಿನದ ಅಂಗವಾಗಿ ಬಹುದೊಡ್ಡ ಕೊಡುಗೆಯೇ ಸರಿ.

-ಕೆ. ಜಿರಿ ಜಿರಿ ವಾಲಾ, ಮಖ್ಯ ಮುಂತ್ರಿ ಗಲ್ಲಿ, ಹೊಸದಿಲ್ಲಿ

****

ಏಕೀ ಮಿನಿಟ್ ಮೋದೀಜಿ. ಇಂಡಿಪೆಂಡೆನ್ಸ್ ಡೇ ಮೇ ಯಡಿಯೂರಪ್ಪಾಜಿಕೋ ಕರ್ನಾಟಕ್ ಮೇ ಭಾಷಣ್ ಮಾಡೋದಕ್ಕೆ ಒಂದು ಅವಕಾಶ ಮಾಡಿ ಕೊಡಿ. ನಿಮಗೆ ಪೂರಾ ಭಾಷಣ್ ಹಿಂದಿ ಮೇ ನಾನೇ ಬರೆದುಕೊಡುತ್ತೇನೆ....ಪಾರ್ಲಿಮೆಂಟ್ ಮೇ ಮೈ ಬಹುತ್ ಭಾಷಣ್ ಕಿಯಾ...ಮಗರ್ ಸ್ಪೀಕರ್ ಮಾತನಾಡಲು ಅವಕಾಶ ನಹೀ ದಿಯಾ. ಯಡಿಯೂರಪ್ಪಾಜಿಕೋ ನಾನೇ ಎಲೆಕ್ಷನ್‌ಮೇ ಭಾಷಣ ಲಿಖ್‌ಕೇ ದಿಯಾ. ಕರ್ನಾಟಕ್ ಮೇ ಟೆರರಿಸ್ಟ್ ಭಾರೀ ಹೇ. ಮೈತ್ರಿ ಸರಕಾರ ಬಹುತ್ ಬಡಾ ಗೊಟಾಲಾ ಹೇ. ಏಕೀ...ಮಿನಿಟ್ ಮೋದೀಜಿ....

-ಕೆ.ರ.ಹಿಂದಿಲಾಜೆ, ಪುತ್ತೂರು

****

 ಮೋದಿಯವರೆ, ಈ ಬಾರಿ ಭಾಷಣ ಮಾಡುವಾಗ ನೀವು ಚೌಕಿದಾರ್ ಧರಿಸುವ ಬಟ್ಟೆಯೊಂದಿಗೆ ಬಂದರೆ, ಈ ದೇಶದ ಭಕ್ತರೆಲ್ಲ ಚೌಕಿದಾರ್ ಪದವನ್ನು ತಮ್ಮ ಹೆಸರಿಗೆ ಜೋಡಿಸಿದ್ದಕ್ಕೆ ಸಾರ್ಥಕವಾಗುತ್ತದೆ. ಹಾಗೆಯೇ ತಮ್ಮ ಭಾಷಣದಲ್ಲಿ 25 ಬಾರಿ ಭಯೋತ್ಪಾದನೆ ಸಹಿಸುವುದಿಲ್ಲ ಎಂದು ಘೋಷಿಸಿ. ಹತ್ತು ಬಾರಿ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿ. ಅಚ್ಛೇದಿನ್ ಪದವನ್ನು ತಪ್ಪಿಯೂ ಭಾಷಣದಲ್ಲಿ ಬಳಸಬೇಡಿ. ನೆಹರೂ ಅವರ ಹೆಸರುಗಳನ್ನು ಬೇಕಾದ ಸಂದರ್ಭದಲ್ಲಿ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಿ. ಅಕ್ಕ ಪಕ್ಕದಲ್ಲಿ ಅಮಿತ್ ಶಾ ಮತ್ತು ಆದಿತ್ಯನಾಥ್‌ರನ್ನು ನಿಲ್ಲಿಸಿಕೊಂಡರೆ ನಿಮ್ಮ ಭಂಗಿಯನ್ನು ನೋಡಲು ಇನ್ನಷ್ಟು ಆಕರ್ಷಣೀಯ. ಯಾವುದೇ ಕಾರಣಕ್ಕೂ ಛಾಯಾಗ್ರಾಹಕರ ಕಡೆಯಿಂದ ಮುಖವನ್ನು ಕದಲಿಸಬೇಡಿ. ಅಭಿವೃದ್ಧಿ, ಸಂವಿಧಾನ, ಪ್ರಜಾಪ್ರಭುತ್ವ ಇವುಗಳ ತಂಟೆಗೆ ಹೋಗಬೇಡಿ. ಅಭಿವ್ಯಕ್ತಿ ಸ್ವಾತಂತ್ರವನ್ನು ದುರುಪಯೋಗಗೊಳಿಸದಂತೆ ಪತ್ರಕರ್ತರಿಗೆ ಉಪದೇಶ ಮಾಡಿ. ನೋಟುಗಳನ್ನು ಬಳಸದೆ ಡಿಜಿಟಲೀಕರಣವನ್ನು ಬಳಸುವ ಸ್ವಾತಂತ್ರದ ಬಗ್ಗೆ ಮಾತನಾಡಿ. ಶಾಲೆಗಳ ಬಗ್ಗೆ ಮಾತನಾಡದೆ ಗೋಶಾಲೆಗಳ ಬಗ್ಗೆ ಮಾತನಾಡಿ. ಜನಸಾಮಾನ್ಯರ ಸ್ವಾತಂತ್ರದ ಬದಲು, ಗೋ ಸ್ವಾತಂತ್ರದ ಬಗ್ಗೆ ಹೇಳಿ. ಗೋವಿನ ಬದುಕುವ ಹಕ್ಕಿನ ಬಗ್ಗೆ ಮಾತನಾಡಿ. ಗೋ ಹಕ್ಕು ಸಂಘಟನಾ ಸಂಸ್ಥೆಯೊಂದನ್ನು ಘೋಷಿಸಿ. ಪುರಾತನ ಮಂತ್ರಗಳ ಮೂಲಕ ಆರೋಗ್ಯವನ್ನು ಹೆಚ್ಚಿಸಲು ಕರೆ ನೀಡಿ. ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಪತಂಜಲಿ ಆಯುರ್ವೇದ ಜೀನ್ಸ್‌ಪ್ಯಾಂಟ್ ಗೋದಾಮುಗಳನ್ನಾಗಿ ಮಾಡುವ ಕರೆಯನ್ನು ನೀಡಿ. ಎಲ್ಲರಿಗೂ ಕಡ್ಡಾಯ ಯೋಗವನ್ನು ಮಾಡಲು ಕರೆ ನೀಡಿ. ಯೋಗಗಳಿಗೆ ಜಿಎಸ್‌ಟಿ ತೆರಿಗೆ ಹೇರುವ ಮೂಲಕ, ಯೋಗಗಳ ಮಹತ್ವವನ್ನು ಜನರಿಗೆ ತಲುಪಿಸುವ ಬಗ್ಗೆ ಭರವಸೆ ನೀಡಿ.

- ರಮ್ ದೇವ್, ಫೇಕಾಂಜಲಿ ತಾಲೂಕು.

****

ಮೋದೀಜಿಯವರೇ ಸ್ವಾತಂತ್ರ ದಿನದಂದು ಭಾಷಣ ಮಾಡಲು ಸಲಹೆ ಕೇಳಿದ್ದೀರಿ. ಸಂತೋಷ. ಇಲ್ಲಿ ಪಾಕಿಸ್ತಾನದಲ್ಲಿ ಜನರು ಜಾಗೃತರಾಗುತ್ತಿರುವುದರಿಂದ ರಾಜಕೀಯ ಮಾಡುವುದು ಕಷ್ಟವಾಗಿದೆ. ಸಾಧ್ಯವಾದರೆ ಭಾಷಣದಲ್ಲಿ ಒಂದು ಸರ್ಜಿಕಲ್ ಸ್ಟ್ರೈಕ್ ಘೋಷಣೆ ಮಾಡಿ. ನಾನು ಅದಕ್ಕೆ ಬದಲು ನನ್ನ ಭಾಷಣದಲ್ಲಿ ಇನ್ನೊಂದು ಪುಲ್ವಾಮ ಯೋಜನೆಯನ್ನು ನಿಮಗೆ ಕೊಡುಗೆಯಾಗಿ ನೀಡುತ್ತೇನೆ. ಜೊತೆಗೆ ಇನ್ನೊಂದಿಷ್ಟು ಭಯೋತ್ಪಾದಕರನ್ನು ನಿಮ್ಮ ಗಡಿಗೆ ಸುಂಕರಹಿತವಾಗಿ ರಫ್ತು ಮಾಡುತ್ತೇನೆ. ಭಾಷಣದಲ್ಲಿ ಮುಂಬೈ ದಾಳಿಯನ್ನು ಅವಶ್ಯವಾಗಿ ನೆನೆಯಿರಿ. ಸ್ವಾತಂತ್ರ ದಿನದ ಭಾಷಣದಲ್ಲಿ ಎಂದಿನಂತೆಯೇ ಪರಸ್ಪರ ಕೊಡುಕೊಳ್ಳುವಿಕೆಯನ್ನು ಮುಂದುವರಿಸೋಣ.

- ಹೆಸರಿಲ್ಲ, ಊರಿಲ್ಲ. (ಇತೀ ನಿಮ್ಮ ಗುಪ್ತ ಸ್ನೇಹಿತ)

Writer - * ಚೇಳಯ್ಯchelayya@gmail.com

contributor

Editor - * ಚೇಳಯ್ಯchelayya@gmail.com

contributor

Similar News