ಮುಖ್ಯಮಂತ್ರಿ ಯಡಿಯೂರಪ್ಪರ ಒಂದು ದಿನದ ವೃತ್ತಾಂತ...
ಯಡಿಯೂರಪ್ಪ ಮುಖ್ಯಮಂತ್ರಿಯಾದುದೇ ಅವರ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ಅವರ ಆಪ್ತ ಕಾರ್ಯದರ್ಶಿ ಅಸಂತೋಷ್ ಪತ್ರಕರ್ತರಿಗೆ ಬಿಡುಗಡೆ ಮಾಡಿದರು. ಪತ್ರಕರ್ತ ಎಂಜಲು ಕಾಸಿ ಅವರಿಗೆ ದೊರಕಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ದಿನಚರಿ ಪ್ರಕಟನೆ ಕೆಳಗಿನಂತಿದೆ.
***
ಬೆಳಗ್ಗೆ 7 ಗಂಟೆ: ತೀರಾ ಆಪ್ತರೊಬ್ಬರ ಜೊತೆಗೆ ಗುಪ್ತಸಮಾಲೋಚನೆ. ಬಳಿಕ ಬಿಜೆಪಿಯೊಳಗೆ ಹೊಸದಾಗಿ ಯಾರು ಯಾರು ಅತೃಪ್ತರಿದ್ದಾರೆ ಎನ್ನುವುದರ ಕುರಿತಂತೆ ಗುಪ್ತಚರ ಇಲಾಖೆಯಿಂದ ದೊರಕಿದ ಮಾಹಿತಿ ಪರಿಶೀಲನೆ.
ಬೆಳಗ್ಗೆ 10 ಗಂಟೆ: ಎಲ್ಲ ಅತೃಪ್ತ ಶಾಸಕರು ಚುನಾವಣೆಗಾಗಿ ಮಾಡಿದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಲು ಸೂಚನೆ. ಈ ಕುರಿತಂತೆ ಸುದ್ದಿಗೋಷ್ಠಿ (ಪತ್ರಕರ್ತರಿಗೆ ವಿಶೇಷ ಉಡುಗೊರೆ-ಶೀರ ಉಪ್ಪಿಟ್ಟಿನ ಜೊತೆಗೆ)
ಬೆಳಗ್ಗೆ 10:30: ಅತೃಪ್ತ ಶಾಸಕರು ವಿವಿಧ ರೆಸಾರ್ಟ್‌ಗಳಲ್ಲಿ ಈಗಾಗಲೇ ಮಾಡಿರುವ ಎಲ್ಲ ಸಾಲಗಳ ಮನ್ನಾ (ವಿವಿಧ ರೆಸಾರ್ಟ್‌ಗಳಿಗೆ ಭೇಟಿ ನೀಡಿದ ಬಳಿಕ ಘೋಷಣೆ)
ಅಪರಾಹ್ನ 11: ನಾಡಿನ ಎಲ್ಲ ಪತ್ರಕರ್ತರು ವಿವಿಧ ಬಾರ್‌ಗಳಲ್ಲಿ, ವೈನ್‌ಶಾಪ್‌ಗಳಲ್ಲಿ ಮಾಡಿರುವ ಸಾಲಗಳ ಮನ್ನಾ. ಈ ಕುರಿತಂತೆ ಮತ್ತೊಂದು ವಿಶೇಷ ಪತ್ರಿಕಾಗೋಷ್ಠಿ. (ಪತ್ರಿಕಾಗೋಷ್ಠಿಯ ಬಳಿಕ ಪತ್ರಕರ್ತರಿಗೆ ವಿಶೇಷಗುಂಡುಗಳ ಹಂಚುವಿಕೆ. ಸಂಭ್ರಮಾಚರಣೆ).
ಮಧ್ಯಾಹ್ನ 12: ಅನರ್ಹ ಶಾಸಕರಿಗೆ ವಿಶೇಷ ಸ್ವಉದ್ಯೋಗ ಯೋಜನೆಗಳ ಘೋಷಣೆ. ಅವರ ಸ್ವಉದ್ಯೋಗಗಳಿಗಾಗಿ ತಲಾ 10 ಕೋಟಿ ರೂ. ಬಿಡುಗಡೆ ಮತ್ತು ಜೊತೆ ಜೊತೆಗೆ ಅವರಿಗೆ ನೀಡಲಾಗುವ ಸಾಲಗಳ ಮನ್ನಾ ಘೋಷಣೆ.
ಮಧ್ಯಾಹ್ನ 1: ಬಿಜೆಪಿಯೊಳಗೆ ಯಾರೂ ಅತೃಪ್ತರಿಲ್ಲ. -ಯಡಿಯೂರಪ್ಪ (ಪತ್ರಿಕಾಗೋಷ್ಠಿ. ಪತ್ರಕರ್ತರಿಗಾಗಿ ವಿಶೇಷ ಊಟದ ವ್ಯವಸ್ಥೆ).
ಅಪರಾಹ್ನ 2: ನಮ್ಮ ಸರಕಾರದಲ್ಲಿ 10 ಉಪಮುಖ್ಯಮಂತ್ರಿಗಳ ನೇಮಕ. (ವಿಶೇಷ ಪತ್ರಿಕಾಗೋಷ್ಠಿಯಲ್ಲಿಹೇಳಿಕೆ)
ಅಪರಾಹ್ನ 2:30: ಉಪಮುಖ್ಯಮಂತ್ರಿ ಸ್ಥಾನಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ. ಅತೃಪ್ತರ ಶಮನಕ್ಕಾಗಿ ವಿಶೇಷ ಖಾತೆ ರಚನೆ-ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ)
ಅಪರಾಹ್ನ 3: ನಾನು ಮುಖ್ಯಮಂತ್ರಿಯಾಗದಂತೆ ತಡೆಯಲು ಜೆಡಿಎಸ್-ಕಾಂಗ್ರೆಸ್ ಸಂಚು. ಇದು ಅನೈತಿಕ-(ವಿಶೇಷ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ)
ಅಪರಾಹ್ನ 3:30: ತುರ್ತು ಶಾಸಕಾಂಗ ಸಭೆ. ಪಕ್ಷದ ವಿವಿಧ ನಾಯಕರ ಜೊತೆಗೆ ಸಮಾಲೋಚನೆ.
ಸಂಜೆ 4: ಬಿಜೆಪಿಯಿಂದ ಎರಡು ಮುಖ್ಯಮಂತ್ರಿ ಹತ್ತು ಹಿರಿಯ ಉಪಮುಖ್ಯಮಂತ್ರಿ ಮತ್ತು 20 ಉಪಮುಖ್ಯಮಂತ್ರಿಗಳು (ಅತಿ ವಿಶೇಷ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ)
ಸಂಜೆ 4.30: ಪಕ್ಷವಿರೋಧಿ ಕೃತ್ಯ ನಡೆಸಿದರೆ ಶಾಸಕರ ವಿರುದ್ಧ ಕಠಿಣ ಕ್ರಮ(ಮಾಧ್ಯಮಗಳ ಜೊತೆಗೆ ವಿಶೇಷ ಮಾತುಕತೆ).
ಸಂಜೆ 5: ನಾನು ವಿಶ್ವಾಸ ಮತ ಸಾಬೀತು ಪಡಿಸಿಯೇ ಸಿದ್ಧ (ಟಿ.ವಿ. ವಾಹಿನಿಗೆ ಫೋನ್ ಮೂಲಕ ಹೇಳಿಕೆ)
ಸಂಜೆ 5:30: ಪಕ್ಷದೊಳಗೆ ನನ್ನ ವಿರುದ್ಧ ಸಂಚು. ಆರೆಸ್ಸೆಸ್‌ನ ಸಂತೋಷ್ ಅವರು ನನ್ನನ್ನು ಕೆಲಸ ಮಾಡಲು ಬಿಡುತ್ತಿಲ್ಲ- ಗಂಭೀರ ಆರೋಪ.
ಸಂಜೆ 6: ಕೇಶವ ಕೃಪಾ ಬಾಗಿಲಲ್ಲಿ ಯಡಿಯೂರಪ್ಪ. ಕೇಶವ ಕೃಪಾ ಬಾಗಿಲಿಗೆ ಬೃಹತ್ ಬೀಗ. ನಿರಾಶೆಯಿಂದ ವಾಪಾಸ್.
ಸಂಜೆ 6:15: ನನ್ನ ಪರವಾಗಿ ಬಿಜೆಪಿಯಲ್ಲಿ 70 ಮಂದಿ ಶಾಸಕರಿದ್ದಾರೆ. ಅವಕಾಶ ಸಿಕ್ಕಿದರೆ ಕುಮಾರಸ್ವಾಮಿಯವರ ಜೊತೆಗೆ 20-20 ಆಡಲು ಸಿದ್ಧ-(ಪತ್ರಕರ್ತ ಎಂಜಲು ಕಾಸಿಯ ಜೊತೆಗೆ ಯಡಿಯೂರಪ್ಪ)
ಸಂಜೆ 6:20: ಕಾಂಗ್ರೆಸ್‌ನಿಂದ 10 ಅತೃಪ್ತರು ನನಗೆ ಬೆಂಬಲ ನೀಡಲಿದ್ದಾರೆ. ಬಹುಮತ ಸಾಬೀತು ಪಡಿಸಿಯೇ ಸಿದ್ಧ-(ಯಡಿಯೂರಪ್ಪ ಆಪತ್ಕಾಲದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ.)
ಸಂಜೆ 6:45: ಎಲ್ಲ ಮಠಗಳಿಗೆ ತಲಾ 10 ಕೋಟಿ ರೂಪಾಯಿ ಅನುದಾನ ಘೋಷಣೆ-(ನಿವಾಸದಲ್ಲಿ ಪತ್ರಕರ್ತರಿಗೆ ಮಾಹಿತಿ.)
ಸಂಜೆ 7: ವಿವಿಧ ಸ್ವಾಮೀಜಿಗಳ ಆಶೀರ್ವಾದ ನನ್ನ ಮೇಲಿದೆ. ಆದುದರಿಂದ ವಿಶ್ವಾಸ ಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗುತ್ತೇನೆ-ಯಡಿಯೂರಪ್ಪ ಭರವಸೆ.
ರಾತ್ರಿ 7:30: ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಭಾರೀ ಅನ್ಯಾಯವಾಗುತ್ತಿದೆ. ಲಿಂಗಾಯತರಿಗೆ ಆಗುವ ಅನ್ಯಾಯವನ್ನು ನಾನು ಸಹಿಸಲಾರೆ-(ತುರ್ತು ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ.)
ರಾತ್ರಿ 8: ಕೇಶವಕೃಪಾದ ಬಾಗಿಲು ತೆಗೆಯದೇ ಇದ್ದರೆ ಲಿಂಗಾಯತ ಸ್ವತಂತ್ರ ಧರ್ಮವಾಗುವುದರ ಬಗ್ಗೆ ನಾನು ಚಿಂತನೆ ನಡೆಸಲಿದ್ದೇನೆ-(ರೆಸಾರ್ಟ್ ಮಾತುಕತೆಯ ಬಳಿಕ ಯಡಿಯೂರಪ್ಪ.)
ರಾತ್ರಿ 8:30: ನನ್ನ ಕೆಜೆಪಿ ಇನ್ನೂ ಅಸ್ತಿತ್ವದಲ್ಲಿದೆ. ಅದರ ರಾಷ್ಟ್ರಾಧ್ಯಕ್ಷನಾಗಿ ನಾನು ಮುಂದುವರಿಯಲಿದ್ದೇನೆ.
ರಾತ್ರಿ 9: ಯಡಿಯೂರಪ್ಪರಿಂದ ರಾಜ್ಯಪಾಲರ ಭೇಟಿ.
ರಾತ್ರಿ 9:30: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ.
ರಾತ್ರಿ 10: ಸ್ವತಂತ್ರ ಲಿಂಗಾಯತ ಧರ್ಮ ಚಳವಳಿಗೆ ಪೂರ್ಣ ಬೆಂಬಲ. ನೇತೃತ್ವ ವಹಿಸಿಕೊಂಡ ಯಡಿಯೂರಪ್ಪ.