ಈಗ ರಘುನಂದನ್ ಸರದಿ
ನಮ್ಮ ನಡುವಣ ಸಂವೇದನಾಶೀಲ ಕವಿ, ನಾಟಕಕಾರ, ರಂಗ ನಿರ್ದೇಶಕ ರಘುನಂದನ್ ಕೇಂದ್ರ ಸಂಗೀತ ನಾಟಕ ಅಕಾಡಮಿ ತಮಗೆ ನೀಡಿರುವ 2018ನೇ ಸಾಲಿನ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿನ ಇಂದಿನ ಅಸಹಿಷ್ಣುತೆ ಮತ್ತು ದ್ವೇಷಮಯ ವಾತಾವರಣದಲ್ಲಿ ಪ್ರಶಸ್ತಿ ಸ್ವೀಕರಿಸಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲವೆಂದು ರಘುನಂದನ್ ಹೇಳಿದ್ದಾರೆ. ರಘುನಂದನ್ ಅವರ ಪಶ್ರಸ್ತಿ ನಿರಾಕರಣೆ 2015ರಲ್ಲಿ ಆರಂಭವಾದ ಪ್ರಶಸ್ತಿ ವಾಪಸಾತಿ ಅಹಿಂಸಾತ್ಮಕ ಆಂದೋಲನದ ಮುಂದುವರಿದ ಭಾಗವಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರವಾಗಿ ನಡೆದಿರುವ ದಾಳಿ ವಿರುದ್ಧ ಪ್ರತಿಭಟಿಸಿ 2015ರಲ್ಲಿ ಸಾಹಿತಿಗಳು, ಕಲಾವಿದರು ಸರಕಾರ ತಮಗೆ ನೀಡಿದ್ದ ಪ್ರಶಸ್ತಿ-ಪುರಸ್ಕಾರಗಳನ್ನು ವಾಪಸು ಮಾಡಲಾರಂಭಿಸಿದರು. ನಯನತಾರಾ ಸೆಹಗಲ್, ಬಂಗಾಳಿಯ ಮಂದಾಕ್ರಾಂತ ಸೇನ್, ಶಶಿ ದೇಶಪಾಂಡೆ, ಕ್ರಷ್ಣ ಸೋಬ್ತಿ ಮೊದಲಾದವರಿಂದ ಆರಂಭವಾದ ಪ್ರಶಸ್ತಿ ವಾಪಸಾತಿ ದೇಶದಾದ್ಯಂತ ವಿವಿಧ ಭಾಷೆಗಳಿಗೆ ವ್ಯಾಪಿಸಿ ಒಂದು ಆಂದೋಲನದ ಸ್ವರೂಪವನ್ನು ಪಡೆದುಕೊಂಡಿತು. ಕನ್ನಡದಲ್ಲೂ ಚಂದ್ರಶೇಖರ ಪಾಟೀಲ, ಕುಂ.ವೀರಭದ್ರಪ್ಪ, ರಹಮತ್ ತರೀಕೆರೆ, ಡಿ.ಉಮಾಪತಿ, ಅರವಿಂದ ಮಾಲಗತ್ತಿ ಹಾಗೂ ನಾನು ಮತ್ತು ಇನ್ನೂ ಹಲವಾರು ಮಂದಿ ಸಾಹಿತಿ, ಕಲಾವಿದರು ಕೇಂದ್ರ ಸಾಹಿತ್ಯ ಅಕಾಡಮಿ ಹಾಗೂ ರಾಜ್ಯ ಸರಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸುವ ಮೂಲಕ, ಸಾಹಿತಿ, ಕಲಾವಿದರು, ವಿಚಾರವಾದಿಗಳನ್ನು ಹತ್ಯೆ ಮಾಡುವಷ್ಟರ ಮಟ್ಟಿಗೆ ದೇಶದಲ್ಲಿ ಅಸಹಿಷ್ಣುತೆ ತಾರಕಕ್ಕೇರಿರುವುದರ ವಿರುದ್ಧ ದನಿ ಎತ್ತಿದ್ದೆವು. ಅಕಾಡಮಿಗಳು ಮತ್ತು ಸರಕಾರಗಳ ನಿಷ್ಕ್ರಿಯತೆ ವಿರುದ್ಧ ಪ್ರತಿಭಟಿಸಿದ್ದೆವು. ವಿಶ್ವ ಮಟ್ಟದಲ್ಲಿ ಸಾಹಿತಿಗಳ ಸಂಘಟನೆಯಾದ ಪೆನ್ ಇಂಟರ್‌ನ್ಯಾಷನಲ್ ನಮ್ಮ ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿತ್ತು. ಈಗ ನಮ್ಮ ನಡುವಣ ಸಂವೇದಾನಾಶೀಲ ಕವಿ, ನಾಟಕಕಾರ, ರಂಗ ನಿರ್ದೇಶಕ ರಘುನಂದನ್ ಕೇಂದ್ರ ಸಂಗೀತ ನಾಟಕ ಅಕಾಡಮಿ ತಮಗೆ ನೀಡಿರುವ 2018ನೇ ಸಾಲಿನ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿನ ಇಂದಿನ ಅಸಹಿಷ್ಣುತೆ ಮತ್ತು ದ್ವೇಷಮಯ ವಾತಾವರಣದಲ್ಲಿ ಪ್ರಶಸ್ತಿ ಸ್ವೀಕರಿಸಲು ತಮ್ಮ ಆತ್ಮಸಾಕ್ಷಿ ಒಪ್ಪುತ್ತಿಲ್ಲವೆಂದು ರಘುನಂದನ್ ಹೇಳಿದ್ದಾರೆ. ರಘುನಂದನ್ ಅವರ ಪಶ್ರಸ್ತಿ ನಿರಾಕರಣೆ 2015ರಲ್ಲಿ ಆರಂಭವಾದ ಪ್ರಶಸ್ತಿ ವಾಪಸಾತಿ ಅಹಿಂಸಾತ್ಮಕ ಆಂದೋಲನದ ಮುಂದುವರಿದ ಭಾಗವಾಗಿದೆ.
ಸರಕಾರ-ಸಾಹಿತಿ ಮತ್ತು ಪ್ರಶಸ್ತಿ ಇವು ಸಂಕೀರ್ಣವಾದ ತಾತ್ವಿಕತೆಯನ್ನೂ ನೀತಿ ಸೂಕ್ಷ್ಮತೆಯನ್ನೂ ಒಳಗೊಂಡಿರುವ ಕ್ಲಿಷ್ಟ ಸಾಮಾಜಿಕ ಸ್ಥಿತಿ. ಈ ಸ್ಥಿತಿಯ ಅವಲೋಕನಕ್ಕೆ ಮೊದಲು ನಾನು ರಘುನಂದನ್ ಅವರ ಬಗ್ಗೆ ಕೆಲವು ಮಾತುಗಳನ್ನು ದಾಖಲಿಸುವ ಅಗತ್ಯವಿದೆ. ನೋಡಲು ಇವತ್ತಿನ ಪ್ರತಿಭಟನಾಕಾರರ ಯಾವ ಚಹರೆಯೂ ಇಲ್ಲದ ಸೌಮ್ಯ ವ್ಯಕ್ತಿತ್ವ. ಮಟ್ಟಸದ ಆಳು. ಒಂದು ದಟ್ಟಿಪಂಚೆ, ಮೇಲೋಂದು ತುಂಡು ತೋಳಿನ ಅಂಗಿ. ಮಾತು ಎಷ್ಟು ಬೇಕೋ ಅಷ್ಟು. ಬಾಕಿಯಂತೆ ಕಾಯಕ. ತುಂಬಿದ ಕೊಡ.
ಕವಿ, ನಾಟಕಕಾರ, ರಂಗ ನೀರ್ದೇಶಕ, ರಂಗವಿನ್ಯಾಸಕ, ನಟ ಹೀಗೆ ರಘುನಂದನ್ ಅವರ ಸೃಜನಶೀಲ ಪ್ರತಿಭೆಯ ವಿಸ್ತಾರ-ವಿಸ್ತರಣೆರಗಳು ಹಲವು ಆಯಾಮಗಳತ್ತ ಚಾಚಿಕೊಳ್ಳುತ್ತಾ ಬಂದಿರುವುದನ್ನು ಕನ್ನಡ ರಂಗಭೂಮಿ ಸರಿಸುಮಾರು ತೊಂಬತ್ತರ ದಶಕದಿಂದ ಗಮನಿಸುತ್ತಾ ಬಂದಿದೆ. 1991ರಲ್ಲಿ ಹೊಸದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ ಡಿಪ್ಲೊಮಾ ಪಡೆಯುವುದಕ್ಕೂ ಮೊದಲಿನಿಂದಲೇ, 1977-1989ರ ಅವಧಿಯಲ್ಲಿ ಸಮುದಾಯ ತಂಡದ ನಾಟಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. 1989-2001ರ ಅವಧಿಯಲ್ಲಿ ಮೈಸೂರಿನ ರಂಗಾಯಣದಲ್ಲಿ ಸ್ವಲ್ಪಕಾಲ ಬಿ.ವಿ. ಕಾರಂತರಿಗೆ ಹೊಯ್ಗೈ ಆಗಿ ದುಡಿದರು. ಶಿಕ್ಷಕರಾಗಿ ರಂಗಾಯಣದ ವಿದ್ಯಾರ್ಥಿಗಳಿಗೆ ಅಭಿನಯ ಕಲೆ, ನಿರ್ದೇಶನಗಳನ್ನು ಕಲಿಸಿದರು. ತಾವೇ ಕಲಿತ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿದ್ದರು. ಅಭಿನಯವೂ ಸೇರಿದಂತೆ ರಂಗಭೂಮಿಯ ವಿವಿಧ ಕಲೆಗಳನ್ನು ಅಧ್ಯಯನಮಾಡಿ ಅವುಗಳ ಮರ್ಮಜ್ಞರಾದ ರಘುನಂದನ್ ಅವರನ್ನು ‘ಬನ್ನಿ ನಮ್ಮ ಹುಡುಗರಿಗೆ ಒಂದಿಷ್ಟು ರಂಗಶಿಕ್ಷಣ ನೀಡಿ’ ಎಂದು ಆಹ್ವಾನಿಸಿದ ನಾಟಕ ಶಾಲೆಗಳು ಹಲವಾರು. ಮೈಸೂರಿನ ರಂಗಾಯಣ, ನೀನಾಸಮ್, ಹುಬ್ಬಳ್ಳಿಯ ಸಂಸ್ಕೃತಿ ಶಾಲೆ, ಧಾರವಾಡದ ರಂಗಾಯಣ ಇವುಗಳಲ್ಲದೆ, ಕೇರಳದ ತ್ರಿಶೂರು ನಾಟಕ ಶಾಲೆ, ಲಕ್ನೋದ ಭರತೇಂದು ನಾಟಕ ಅಕಾಡಮಿ, ಪುಣೆಯ ಫ್ಲೇಮ್ ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್ ಮೊದಲಾದೆಡೆಗಳಲ್ಲಿ, ಅಭಿನಯ, ನಿರ್ದೇಶನ ಮತ್ತು ರಂಗ ಕಲೆಗಳಲ್ಲಿ ನೂರಾರು ಕಲಾವಿದರನ್ನು ರೂಪಿಸಿದ ಕೀರ್ತಿ ಇವರದು. ಭಾರತೀಯ ಸಂಪ್ರದಾಯದಲ್ಲಿ ನಾಟಕವನ್ನು ಕಾವ್ಯವೆಂದೇ ಪರಿಗಣಿಸಲಾಗುತ್ತದೆ.
ರಂಗಭೂಮಿಯಲ್ಲಿ ನಾಟಕಕಾರನನ್ನು ಕವಿ ಎಂದೇ ಕರೆಯಲಾಗುತ್ತದೆ. ಈ ಅರ್ಥದಲ್ಲಿ ರಘುನಂದನ್ ಕಾವ್ಯ, ರಂಗಭೂಮಿ ಎರಡರಲ್ಲೂ ಸಲ್ಲುವ ಕವಿ. ಇಬ್ಸನ್, ಚೆಕಾಫ್, ಬ್ರೆಕ್ಟ್, ಬೆಕೆಟ್ ಮೊದಲಾದ ಪಾಶ್ಚಾತ್ಯ ನಾಟಕಕಾರರ ಕೃತಿಗಳ ಕನ್ನಡದ ಅವತರಣಗಳನ್ನು ರೂಪಿಸಿ ನಿರ್ದೇಶಿಸಿದ್ದಾರೆ. ಭಾಸ, ಶೂದ್ರಕ, ಸಂಸ, ಮಾಸ್ತಿ, ಲಂಕೇಶ ಮೊದಲಾದವರ ನಾಟಕಗಳ ರಂಗಾವತರಣಗಳ ಪ್ರಯೋಗಗಳ ಮೂಲಕ ರಘುನಂದನ್ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಎತ್ತ ಹಾರಿದೆ ಹಂಸ, ಸತ್ತವರ ಕಥೆಯಲ್ಲ, ಶಿವಬಿಕ್ಕು ರಘುನಂದನ್ ಅವರ ಮೂರು ಸ್ವತಂತ್ರ ನಾಟಕಗಳು. ‘ಎತ್ತ ಹಾರಿದೆ ಹಂಸ’ ಪುತಿನ ಕಾವ್ಯ ನಾಟಕ ಪ್ರಶಸ್ತಿ(2002) ಪಾತ್ರವಾಗಿರುವ ನಾಟಕ.
ಇವಲ್ಲದೆ ರಘುನಂದನ್ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್, ಭಾರತ ಜನವಿಜ್ಞಾನ ಜಾಥಾ, ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ರಾಷ್ಟ್ರೀಯ ಸಾಕ್ಷರಥಾ ಸಂಸ್ಥೆಗಳಿಗೆ ಹಲವಾರು ಬೀದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ನೈತಿಕ ನಿಷ್ಠಾವಂತರಾದ ರಘುನಂದನ್ ಅರಸಿ ಬಂದ ಪ್ರಶಸ್ತಿಯನ್ನು ಒಲ್ಲೆ ಎನ್ನುತ್ತಿರುವುದು ಇದೇ ಮೊದಲ ಸಲವಲ್ಲ. ಈ ಮೊದಲು ಅವರು ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿಯನ್ನೂ ತಿಸ್ಕರಿಸಿರು ವುದುಂಟು. ಆಸ್ಥಾನದ ಹಂಗು-ಮುಲಾಜುಗಳು ‘ಬೇಡ’ ಎನ್ನುವ ಪೈಕಿ. ದೇಶದಲ್ಲಿ ಇಂದು ದೇವರು-ಧರ್ಮಗಳ ಹೆಸರಿನಲ್ಲಿ ಗುಂಪು ಥಳಿತ ಹತ್ಯೆ, ಹಿಂಸಾಚಾರಗಳು ನಡೆದಿವೆ. ಹತ್ಯೆ, ಹಿಂಸಾಚಾರಗಳಂಥ ಘೋರ ಕೃತ್ಯಗಳಿಗೆ ಅಧಿಕಾರದಲ್ಲಿರುವವರು ಪತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೊಣೆಗಾರರಾಗಿದ್ದಾರೆ. ‘‘...ದೇಶದ ಭವಿಷ್ಯ ರೂಪಿಸಬಹುದಾದ ಕನ್ಹಯ್ಯಾ ಕುಮಾರ್ ಅವರಂಥ ತರುಣರು, ಬುದ್ಧಿ ಜೀವಿಗಳು, ಸಾಮಾಜಿಕ ಕಾರ್ಯಕರ್ತರು ದೇಶದ್ರೋಹದ ಆಪಾದನೆ ಎದುರಿಸುತ್ತಾ ಇದ್ದಾರೆ, ಇವರಲ್ಲಿ ಕೆಲವರು ಜೈಲಿನಲ್ಲಿದ್ದಾರೆ.
ಧರ್ಮ ಮಾರ್ಗಿಗಳಿಗೆ ಧರ್ಮದ ಹೆಸರಿನಲ್ಲಿ ಇಂತಹ ಅನ್ಯಾಯವಾಗುತ್ತಿರುವಾಗ ಕವಿ, ನಾಟಕಕಾರನಾಗಿ, ರಂಗಭೂಮಿ ಕಲಾವಿದನಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲಾರೆ. ಅದಕ್ಕೆ ನನ್ನ ಆತ್ಮಸಾಕ್ಷಿ, ನನ್ನ ಅಂತರ್ಯಾಮಿ ಒಪ್ಪುವುದಿಲ್ಲ. ಇದು ಪ್ರತಿಭಟನೆಯಲ್ಲ, ಇದು ಹತಾಶೆ, ಹತಾಶನಾಗಿ, ಅಸಹಾಯಕನಾಗಿ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ’’ ಎಂದು ಸಮಜಾಯಿಷಿ ನೀಡಿದ್ದಾರೆ ರಘುನಂದನ್. ಇದು ರಘುನಂದನ್ ಒಬ್ಬರ ಭಾವನೆಯಲ್ಲ. 2015ರಲ್ಲಿ ಸಾಹಿತಿ, ಕಲಾವಿದರು ದೇಶದಲ್ಲಿನ ಅಸಹಿಷ್ಣುತೆ ಮತ್ತು ಹಿಂಸಾಚಾರಗಳ ವಿರುದ್ಧ ಸಿಡಿದು ನಿಂತಾಗಲೂ ಇಂಥದ್ದೇ ಭಾವನೆ ನಮ್ಮಲ್ಲಿ ಅನೇಕರಲ್ಲಿ ಮೂಡಿತ್ತು. ನಾವೂ ಹತಾಶೆ, ಅಸಹಾಯಕತೆಗಳಿಂದಲೇ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದೆವು. ಈಗ ಶ್ರೀರಾಮನ ಹೆಸರಿನಲ್ಲಿ ನಡೆದಿರುವ ಅಲ್ಪಸಂಖ್ಯಾತರ ಮೇಲಿನ ಹಲ್ಲೆ, ಗುಂಪು ಥಳಿತ ಹತ್ಯೆ ಮತ್ತಿತರ ಹಿಂಸಾಚಾರಗಳನ್ನು ನಿಲ್ಲಿಸುವಂತೆ, ‘ಜೈ ಶ್ರೀ ರಾಮ್’ನ್ನು ಯುದ್ಧಘೋಷದಂತೆ ಬಳಸುತ್ತಿರುವುದನ್ನು ತಡೆಗಟ್ಟುವಂತೆ ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ನಲವತ್ತೊಂಬತ್ತು ಮಂದಿ ಸಾಹಿತಿ, ಕಲಾವಿದರು ಹೇಳುತ್ತಿರುವುದೂ ಇದನ್ನೇ. ಅವರ ಭಾವನೆಯೂ ಇದೇ ಆಗಿದೆ. ಐದು ವರ್ಷಗಳ ಹಿಂದೆ ಪ್ರತಿಭಟನೆಯಾಗಿ ಶುರುವಾದದ್ದು ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಈಗ ಹತಾಶಸ್ಥಿತಿಯನ್ನು ಮುಟ್ಟಿದೆ. ಈ ಐದು ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದೆ. ಗುಂಪು ಥಳಿತ ಕೊಲೆಗಳು, ದ್ವೇಷಪ್ರಚೋದಿತ ಹಿಂಸಾಚಾರಗಳು, ದ್ವೇಷಪೂರಿತ ಹೇಳಿಕೆಗಳು, ಪ್ರಚಾರಗಳೂ ಹೆಚ್ಚುತ್ತಿವೆ. ಇವುಗಳನ್ನು ಖಂಡಿಸುವುದಿರಲಿ, ಪ್ರೋತ್ಸಾಹಿಸುವ, ಪ್ರಶಂಸಿಸುವ ಮಾತುಗಳು ಕೇಳಿಬರುತ್ತಿವೆ.
ಇಂತಹ ಅಮಾನುಷ ಕೃತ್ಯಗಳನ್ನು ಎಸಗಿದವರನ್ನು ಬಹುಮಾನಿಸಿರುವುದು, ಗೌರವಿಸಿರುವುದು ವರದಿಯಾಗುತ್ತಿದೆ. ಸರಕಾರದ ಅನೇಕ ನೀತಿ-ನಿರ್ಧಾರಗಳಿಂದಾಗಿ ಅಲ್ಪಸಂಖ್ಯಾತರಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗುತ್ತಿದೆ. ಸರಕಾರದ ಕೆಲವು ಕ್ರಮಗಳು ನಾಗರಿಕ ಕ್ರಿಯಾವಾದಿಗಳು ಮತ್ತು ಬುದ್ಧಿಜೀವಿಗಳ ಬಾಯಿಮುಚ್ಚಿಸುವ ರೀತಿಯಲ್ಲಿವೆ. ಇದನ್ನೇ ರಘುನಂದನ್ ಅವರು ಇವತ್ತಿನ ದ್ವೇಷ, ಹಿಂಸಾಚಾರ ಪರಿಸ್ಥ್ಥಿತಿಗೆ ಅಧಿಕಾರದಲ್ಲಿರುವವರು ಹೊಣೆಗಾರರು ಎಂದು ಬೊಟ್ಟುಮಾಡಿ ತೋರಿಸಿರುವುದು. ಇಂಥ ಪರಿಸ್ಥಿತಿಯಲ್ಲಿ ಸರಕಾರದ ಅನುದಾನದಿಂದ ನಡೆಯುವ ಅಕಾಡಮಿಯ ಪ್ರಶಸ್ತಿಯನ್ನು ಒಪ್ಪಿಕೊಳ್ಳುವುದೆಂದರೆ, ದ್ವೇಷಪೂರಿತ ಹಿಂಸಾಚಾರಕ್ಕೆ ಪತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕುಮ್ಮಕ್ಕು ನೀಡುತ್ತಿರುವ ಸರಕಾರದ ನೀತಿನಿಲುವುಗಳಲ್ಲಿ ತಾನೂ ಭಾಗಿಯಾದಂತೆ ಎಂದು ಸಂವೇದನಾಶೀಲ ಸಾಹಿತಿ-ಕಲಾವಿದರಿಗೆ ಅನ್ನಿಸಿದರೆ ಅದು ಸಹಜವಾದದ್ದೇ. ಎಂದೇ ಇದಕ್ಕೆ ತಮ್ಮ ಆತ್ಮಸಾಕ್ಷಿ ಒಪ್ಪದು ಎಂದು ರಘುನಂದನ್ ಪ್ರಶಸ್ತಿ ತಿರಸ್ಕರಿಸಿದ್ದಾರೆ.
ರಘುನಂದನ್ ಪ್ರಶಸ್ತಿಯನ್ನು ತಿರಸ್ಕರಿಸಿರುವುದರ ಪರ ಹಾಗೂ ವಿರುದ್ಧ ಹಲವಾರು ಅಭಿಪ್ರಾಯಗಳು ಬಂದಿವೆ. ತುಟಿಮೀರಿದ ಟೀಕೆಗಳು ಟ್ವಿಟರ್‌ಗಳಲ್ಲಿ ಹರಿದಾಡಿವೆ. ಐದು ವರ್ಷಗಳ ಹಿಂದೆಯೇ ಬಲಪಂಥೀಯರು ಪ್ರಶಸ್ತಿ ವಾಪಸುಮಾಡಿದ ಸಾಹಿತಿ, ಕಲಾವಿದರ ಅಹಿಂಸಾತ್ಮಕ ಪ್ರತಿಭಟನೆಯನ್ನು ಕಾಂಗ್ರೆಸ್ ಪ್ರಾಯೋಜಿತ ಇತ್ಯಾದಿ ಆರೋಪಗಳಿಂದ ಹಿಗ್ಗಾಮುಗ್ಗಾ ಎಳೆದಾಡಿದ್ದುಂಟು. ಅಕಾಡಮಿಗಳು ಸ್ವಾಯತ್ತ ಸಂಸ್ಥೆಗಳು, ಅದರಲ್ಲಿ ಸರಕಾರದ ಪಾತ್ರವಿಲ್ಲ. ಆದ್ದರಿಂದ ಸಾಹಿತಿ, ಕಲಾವಿದರು ಪ್ರಶಸ್ತಿ ತಿರಸ್ಕರಿಸ ಬೇಕಾಗಿಲ್ಲ ಎಂಬುದು ಒಂದು ವಾದ. ಅಕಾಡಮಿ/ಸರಕಾರ ಕೊಡುವ ಪ್ರಶಸ್ತಿ/ಪುರಸ್ಕಾರಗಳು ನಮ್ಮದೇ ಆದ ತೆರಿಗೆ ಹಣ ಮೂಲದ್ದಾಗಿದ್ದು ಸಾಹಿತಿ, ಕಲಾವಿದರು ಮುಜುಗರ ಪಡದೆ ಪ್ರಶಸ್ತಿ ಸ್ವೀಕರಿಸಿ ತಮ್ಮ ಕೃತಿಗಳಲ್ಲಿ ಸರಕಾರವನ್ನು ಟೀಕಿಸುವ ಸ್ವಾತಂತ್ರ್ಯ ಉಳಿಸಿಕೊಳ್ಳಬಹುದೆಂಬುದು ಇನ್ನೊಂದು ವಾದ. ವಾದದ ಮಟ್ಟಿಗೆ ಇವೆರಡೂ ಸರಿ ಎನ್ನಿಸಬಹುದು. ಆದರೆ ಇಲ್ಲಿ ಮುಖ್ಯವಾದ ಪ್ರಶ್ನೆಯೆಂದರೆ, ನೈತಿಕತೆಯದು.
ಸರಕಾರದ ಹಂಗು ಋಣಗಳಲ್ಲಿದ್ದುಕೊಂಡೂ ಅದರ ವಿರುದ್ಧ ದನಿ ಎತ್ತುವ ನೈತಿಕ ಜವಾಬ್ದಾರಿಯ ಪ್ರಶ್ನೆ ಇದು. ಪ್ರಶಸ್ತಿ, ಮಾಸಾಶನ, ಶಾಸಕನ ಸ್ಥಾನಮಾನ ಇಂತಹ ಸರಕಾರಿ ಕೃಪೆಗೊಳಗಾದವರು ಹಂಗು-ಋಣಗಳ ಬಾಧೆಗಳಿಂದ ಮುಕ್ತರಾಗಿ ಅದರ ವಿರುದ್ಧ ದನಿ ಎತ್ತಿದವರು ಬಹಳ ಅಪರೂಪ. ಇದು ರಾಜಶಾಹಿಯಿಂದ ಇಂದಿನ ಪ್ರಜಾಸತ್ತೆಯವರೆಗಿನ ಕಟು ಸತ್ಯ. ಹಂಗು-ಋಣಗಳಿಂದಾಗಿಯೇ ರಾಜಶಾಹಿಯ ಆಸ್ಥಾನ ಕವಿಗಳು ರಾಜಪ್ರಶಂಸೆಯಲ್ಲೇ ಪುನೀತರಾದ ಉದಾಹರಣೆಗಳು ನಮ್ಮ ಮುಂದಿವೆ. ಹನ್ನೆರಡನೆಯ ಶತಮಾನದ ವಚನ ಚಳವಳಿ ಮತ್ತು ದಾಸ ಸಾಹಿತ್ಯ ಮಾತ್ರ ಇದಕ್ಕೊಂದು ಅಪವಾದ. ಇವತ್ತು, ಸರಕಾರದ ಹಂಗು-ಋಣಗಳಿಂದಾಗಿ ಅದರ ಅಕ್ಷಮ್ಯ ನೀತಿ, ಕಾರ್ಯಕ್ರಮಗಳ ಬಗ್ಗೆ ಚಕಾರವೆತ್ತದೆ ಮೂಕರಾಗಿರುವ ಸಾಹಿತಿ, ಕಲಾವಿದರ ನಿದರ್ಶನ ನಮ್ಮ ಮುಂದಿದೆ. ಎಂದೇ ಸಾಹಿತಿ, ಕಲಾವಿದರು ತಮ್ಮ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳ ಹಿತದೃಷ್ಟಿಯಿಂದಾಗಿ ಸರಕಾರದ ಹಂಗು ಮತ್ತು ಋಣಗಳಿಂದ ಮುಕ್ತರಾಗಬೇಕಿದೆ.
ಸಮಾಜ ಯಾವತ್ತಿನಿಂದಲೂ ಮಾರ್ಗದರ್ಶನಕ್ಕಾಗಿ ಜ್ಞಾನ, ಬುದ್ಧಿ, ವಿವೇಕಗಳತ್ತ ನೋಡುತ್ತಲೇ ಬಂದಿದೆ. ಎಂದೇ ಆದರ್ಶಗಳನ್ನು, ಮೌಲ್ಯಗಳನ್ನು ಬಿತ್ತುವ, ಬೋಧಿಸುವ ನೈತಿಕ ಹೋಣೆಗಾರಿಕೆಯ ಸ್ಥಾನದಲ್ಲಿ ಪ್ರಾಜ್ಞರಿದ್ದಾರೆ. ಋಷಿಮುನಿಗಳ ಕಾಲದಿಂದ ನಡೆದು ಬಂದಿರುವ ಪರಂಪರೆ ಇದು. ಎಂದೇ ಕವಿಗಳು, ಸಾಹಿತಿಗಳು, ಕಲಾವಿದರು ಹಿಂಸಾಚಾರ, ಅನಾಚಾರಗಳಿಂದ ಮುಕ್ತವಾದ, ಪ್ರಜಾಸತ್ತಾತ್ಮಕ ವ್ಯವಸ್ಥೆಯತ್ತ ಸಮಾಜವನ್ನು ಮುನ್ನಡೆಸಬೇಕಾಗಿದೆ. ಮಾನವ ಘನತೆ, ಸಮಾನತೆ ಮತ್ತು ‘ವಸುಧೈವ ಕುಟುಂಬಕಂ’ನಂತಹ ಆದರ್ಶಪ್ರಾಯವಾದ ಮೌಲ್ಯಗಳನ್ನು ಜನಮನದಲ್ಲಿ ಬಿತ್ತಬೇಕಾಗಿದೆ. ಭಾರತೀಯತೆಯ ವೈಶಿಷ್ಟ್ಯವಾದ ಬಹುತ್ವ, ಸಾಂಸ್ಕೃತಿಕ ವೈವಿಧ್ಯ ಮತ್ತು ಸಂವಿಧಾನ ಪ್ರಣೀತವಾದ ಸಮಾನತೆ ಹಾಗೂ ಜಾತ್ಯತೀತತೆಯಂತಹ ವಿಷಯಗಳಲ್ಲಿ ಜನತೆಯ ಸಂವೇದನಾಶೀಲತೆಯನ್ನು ಉದ್ದೀಪನಗೊಳಿಸಬೇಕಾಗಿದೆ. ಹೀಗೆ ಒಂದು ಸಮಾಜದ ಮತ್ತು ಅದರ ಸಂಸ್ಕೃತಿಯ ಆರೋಗ್ಯಕರ ಬೆಳವಣಿಗೆಯಲ್ಲಿ ಮುಂಚೂಣಿಯ ಪಾತ್ರವಹಿಸಿರುವ ಕವಿಗಳು, ಸಾಹಿತಿಗಳು ಕಲಾವಿದರು ಸಮಾಜದಲ್ಲಿನ ವಸ್ತುಸ್ಥಿತಿಯನ್ನು, ಅದರ ಆಸೆ-ಕನಸುಗಳನ್ನು, ಸಮಾಜ ಗರ್ಭದಲ್ಲಿ ಹುಟ್ಟುತ್ತಿರುವ ಚಳವಳಿ-ಆಂದೋಲನಗಳನ್ನು ತಮ್ಮ ಕೃತಿಗಳಲ್ಲಿ ಬಿಂಬಿಸುತ್ತಲೇ ಬಂದಿದ್ದಾರೆ. ಈಗಲೂ ಅವರು ನಮ್ಮ ಸಂವಿಧಾನದ ಮೌಲ್ಯಗಳನ್ನು, ಆಶಯಗಳನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.
ಸಂವಿಧಾನ ಮೌಲ್ಯಗಳು, ಆಶಯಗಳಿಗೆ ಧಕ್ಕೆ ಬಂದಾಗಲೆಲ್ಲ ದನಿ ಎತ್ತಿದ್ದಾರೆ. ಸಾಹಿತ್ಯ-ಕಲೆಗಳ ಸಾಮಾಜಿಕ ಬದ್ಧತೆಯ ಇಂತಹ ಕರ್ತವ್ಯಗಳಲ್ಲಿ ತೊಡಗಿರುವ ಸಾಹಿತಿ, ಕಲಾವಿದರಿಗೆ ಕಿರುಕುಳಕೊಡುವುದು, ಅವರ ದನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ಇದಕ್ಕೆ ಇತ್ತೀಚಿನ ಉದಾಹರಣೆ, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ‘ಜೈ ಶ್ರೀರಾಮ್’ ಯುದ್ಧ ಘೋಷಣೆಯಾಗಿರುವುದರತ್ತ ಪ್ರಧಾನ ಮಂತ್ರಿಗಳ ಗಮನಸೆಳೆದಿರುವ ಸಾಹಿತಿಕಲಾವಿದರಲ್ಲಿ ಒಬ್ಬರಾದ ಅಡೂರು ಗೋಪಾಲಕೃಷ್ಣನ್ ಅವರ ಮೇಲೆ ಕೇರಳ ಬಿಜೆಪಿ ಘಟಕ ಹರಿಹಾಯ್ದಿರುವುದು. ದೇಶದಲ್ಲಿ ಹಾಲಿ ಇರುವ ಪರಿಸ್ಥಿತಿಯಲ್ಲಿ ಕವಿಗಳು, ಸಾಹಿತಿಗಳು ಮತ್ತು ಕಲಾವಿದರು ಸರಕಾರದ ಹಂಗು ಋಣಗಳನ್ನು ತಿರಸ್ಕರಿಸಿ ಬಹುತ್ವ, ಸಾಂಸ್ಕೃತಿಕ ವೈವಿಧ್ಯತೆ, ಜಾತ್ಯತೀತತೆಯಂತಹ ಸಂವಿಧಾನಾತ್ಮಕ ಮೌಲ್ಯಗಳು ಮತ್ತು ಆಶಯಗಳನ್ನು ಕಾಪಾಡುವ ಕಾಯಕದಲ್ಲಿ ಕ್ರಿಯಾಶೀಲರಾಗಬೇಕಿದೆ.
ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಮತ್ತು ಶೋಷಿತರ ಪರ ದನಿ ಎತ್ತಬೇಕಾಗಿದೆ. ಸರಕಾರದ ಮೂಗಿನಡಿಯಲ್ಲಿ ಅಕಾಡಮಿಗಳು ನೀಡುವ ಪ್ರಶಸ್ತಿ, ಬಹುಮಾನ ಮತ್ತು ಇತರ ಸವಲತ್ತುಗಳನ್ನು ಒಪ್ಪಿಕೊಂಡು ಸರಕಾರದ ಎಲ್ಲ ಪಾಪಗಳಲ್ಲಿ, ಪ್ರಮಾದಗಳಲ್ಲಿ ಭಾಗಿಯಾಗುವ ಬದಲು ಅವುಗಳನ್ನು ತಿರಸ್ಕರಿಸಿ ಸರಕಾರದ ವಿರುದ್ಧ ಎದ್ದು ನಿಲ್ಲುವುದೊಂದೇ ಸಾಹಿತಿ, ಕಲಾವಿದರಿಗಿರುವ ನ್ಯಾಯಮಾರ್ಗ. ಸರಕಾರದ ಕೃಪೆ ತಿರಸ್ಕರಿಸಿ ಸಾಹಿತಿ, ಕಲಾವಿದರು ಮಾಡುವ ತ್ಯಾಗ ಸಮಾಜದ ಒಟ್ಟು ದೃಷ್ಟಿಯಿಂದ ದೊಡ್ಡದಾಗುತ್ತದೆ. ರಘುನಂದನ್ ಮತ್ತು ಇತರರು ವಿನಯಪೂರ್ವಕವಾಗಿಯೇ ಪ್ರಶಸ್ತಿಗಳನ್ನು ತಿರಸ್ಕರಿಸಿ, ಸಮಾಜದಲ್ಲಿ ದೇವರು, ಧರ್ಮಗಳ ಹೆಸರಿನಲ್ಲಿ ತಲೆಎತ್ತಿರುವ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ಹಲ್ಲೆಯಂತಹ ಅಮಾನುಷ ಪ್ರವೃತ್ತಿಯ ವಿರುದ್ಧ ಅಹಿಂಸಾತ್ಮಕ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಇಂತಹ ಭಿನ್ನ ದನಿಗಳನ್ನು, ಅಹಿಂಸಾತ್ಮಕ ಪ್ರತಿಭಟನೆ, ವಿರೋಧಗಳನ್ನು ಸರಕಾರ ‘ದೇಶದ್ರೋಹ’ ಎನ್ನುವುದಾದಲ್ಲಿ ಮುಂಬರುವ ದಿನಗಳಲ್ಲಿ ಇಂತಹ ‘ದೇಶದ್ರೋಹಗಳು’ ಹೆಚ್ಚುಹೆಚ್ಚು ಪ್ರಸ್ತುತವಾಗಬಹುದು.