ಚೀನಾ ಬೆಂಬಲದೊಂದಿಗೆ ಭದ್ರತಾ ಮಂಡಳಿಯಲ್ಲಿ ಪ್ರಶ್ನೆ: ಪಾಕ್

Update: 2019-08-11 16:41 GMT

ಇಸ್ಲಾಮಾಬಾದ್, ಆ. 11: ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತೆಯನ್ನು ರದ್ದುಪಡಿಸಿ, ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸುವ ಭಾರತದ ಕ್ರಮವನ್ನು ಖಂಡಿಸಿ ಚೀನಾದ ಬೆಂಬಲದೊಂದಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯವೊಂದನ್ನು ಮಂಡಿಸುವುದಾಗಿ ಪಾಕಿಸ್ತಾನ ಶನಿವಾರ ಹೇಳಿದೆ ಎಂದು ‘ಡಾನ್’ ವರದಿ ಮಾಡಿದೆ.

‘‘ಈ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಯ್ಯಲು ನಾವು ಬಯಸಿದ್ದೇವೆ ಎಂದು ಚೀನಾಕ್ಕೆ ನಾನು ತಿಳಿಸಿದ್ದೇನೆ’’ ಎಂದು ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಹೇಳಿದರು.

ಚೀನಾ ವಿದೇಶ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡುವುದಕ್ಕಾಗಿ ಬೀಜಿಂಗ್‌ ಗೆ ಕ್ಷಿಪ್ರ ಪ್ರವಾಸ ಕೈಗೊಂಡ ಒಂದು ದಿನದ ಬಳಿಕ ಪಾಕ್ ವಿದೇಶ ಸಚಿವ ಈ ವಿಷಯ ತಿಳಿಸಿದರು.

‘‘ಅವರು (ಚೀನಾ ನಾಯಕತ್ವ) ನಮಗೆ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ನಾನು ದೇಶಕ್ಕೆ ತಿಳಿಸಬಯಸುತ್ತೇನೆ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯ ನಮ್ಮ ಪ್ರತಿನಿಧಿಯೊಂದಿಗೆ ಸಂಪರ್ಕದಲ್ಲಿರುವಂತೆ ಹಾಗೂ ಸಮಾಲೋಚನೆಗಳನ್ನು ಮುಂದುವರಿಸುವಂತೆ ಅವರ ಪ್ರತಿನಿಧಿಗೆ ಅವರು ಸೂಚನೆಯನ್ನೂ ನೀಡಿದ್ದಾರೆ’’ ಎಂದರು.

ಭಾರತದ ನಿರ್ಧಾರಗಳ ಬಗ್ಗೆ ತಾನು ‘ಗಂಭೀರ ಕಳವಳ’ ಹೊಂದಿರುವುದಾಗಿ ಶುಕ್ರವಾರ ಮಾತುಕತೆಯ ಬಳಿಕ ಚೀನಾ ಹೇಳಿದೆ ಹಾಗೂ ವಿಶ್ವಸಂಸ್ಥೆಯ ಒಡಂಬಡಿಕೆ ಮತ್ತು 1972ರ ಶಿಮ್ಲಾ ಒಪ್ಪಂದಕ್ಕೆ ಅನುಗುಣವಾಗಿ ವಿವಾದಗಳನ್ನು ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳುವಂತೆ ಅದು ಭಾರತ ಮತ್ತು ಪಾಕಿಸ್ತಾನಗಳನ್ನು ಒತ್ತಾಯಿಸಿದೆ.

ಉಭಯ ದೇಶಗಳ ಮಹಾನಿರ್ದೇಶಕರ ಮಟ್ಟದ ಅಧಿಕಾರಿಗಳು ‘ಜಂಟಿ ತಂತ್ರಗಾರಿಕೆ’ಯೊಂದನ್ನು ರೂಪಿಸುತ್ತಾರೆ ಎಂದು ಪಾಕ್ ವಿದೇಶ ಸಚಿವರು ತಿಳಿಸಿದರು.

ಕಾಶ್ಮೀರದಲ್ಲಿನ ಭಾರತದ ಕ್ರಮಗಳು ಏಕಪಕ್ಷೀಯವಾಗಿದೆ ಎಂಬುದಾಗಿ ಚೀನಾ ಪರಿಗಣಿಸುತ್ತದೆ ಎಂದು ಕುರೇಶಿ ಹೇಳಿದರು.

ಭಾರತದ ಕ್ರಮಗಳು ವಲಯದಲ್ಲಿನ ಶಾಂತಿ ಮತ್ತು ಭದ್ರತೆಗೆ ಎದುರಾದ ‘ಹೆಚ್ಚುವರಿ ಬೆದರಿಕೆ’ಯಾಗಿದೆ ಎಂದು ಕುರೇಶಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News