ಜಮ್ಮುಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ವಿವಾದ
ನ್ಯೂಯಾರ್ಕ್, ಎ.25: ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಭಾರತವು ರದ್ದುಪಡಿಸಿರುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಚರ್ಚೆ ನಡೆಸುವ ಸಾಧ್ಯತೆಯಿದೆಯೆಂದು ಜಿಯೋ ನ್ಯೂಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ‘‘ ಜಮ್ಮುಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಭದ್ರತಾ ಮಂಡಳಿಯು ಬಹುತೇಕ ಆಗಸ್ಟ್ 16ರಂದು ಗೌಪ್ಯವಾಗಿ ಚರ್ಚಿಸಲಿದೆ ಎಂದು ವಿಶ್ವಸಂಸ್ಥೆಯ ಅಧ್ಯಕ್ಷ ಜೊವಾನ್ನ ವ್ರೊನೆಕಾ ವರದಿಗಾರರಿಗೆ ತಿಳಿಸಿದ್ದಾರೆ.
ಜಮ್ಮುಕಾಶ್ಮೀರದಲ್ಲಿ ಭಾರತದ ‘ಕಾನೂನುಬಾಹಿರ’ ಕ್ರಮಗಳ ಬಗ್ಗೆ ಚರ್ಚಿಸಲು ತಾನು ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಬೇಕೆಂದು ಕೋರಿ ತಾನು ಪ್ರೊನೆಕಾ ಅವರಿಗೆ ಪತ್ರ ಬರೆದಿರುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಶಿ ತಿಳಿಸಿದ, ಕೆಲವು ದಿನಗಳ ಆನಂತರ ಭದ್ರತಾ ಮಂಡಳಿ ಈ ಹೇಳಿಕೆ ನೀಡಿದೆ.
ಪೊಲೆಂಡ್ ಆಗಸ್ಟ್ ತಿಂಗಳಿನಿಂದ ಭದ್ರದತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ. ಕಾಶ್ಮೀರ ವಿವಾದವನ್ನು ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒಯ್ಯುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಘೋಷಿಸಿದ್ದರು. ಒಂದು ವೇಳೆ ಭಾರತ ಹಾಗೂ ಪಾಕ್ ನಡುವೆ ಯುದ್ಧ ಸ್ಫೋಟಿಸಿದಲ್ಲಿ ಈ ವಿಷಯವಾಗಿ ಮೂಕಪ್ರೇಕ್ಷಕರಾಗಿ ಕುಳಿದತಿರುವ ಎಲ್ಲಾ ಅಂತಾರಾಷ್ಟ್ರೀಯ ಸಂಘಟನೆಗಳು ಅದಕ್ಕೆ ಹೊಣೆಗಾರರಾಗಲಿವೆಯೆಂದು ಅವರು ಎಚ್ಚರಿಕೆ ನೀಡಿದ್ದರು.
ಜಮ್ಮುಕಾಶ್ಮೀರದಲ್ಲಿನ ಬೆಳವಣಿಗೆಗಳು ಸಂಪೂರ್ಣವಾಗಿ ಒಂದು ಆಂತರಿಕ ವಿಚಾರವೆಂದು ಭಾರತ ಪುನರುಚ್ಚರಿಸುತ್ತಲೇ ಬಂದಿದೆ.
ಈ ಮಧ್ಯೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾದ ರಶ್ಯವು, ಕಾಶ್ಮೀರ ವಿಷಯದಲ್ಲಿ ಭಾರತದ ಕ್ರಮಗಳನ್ನು ಸಮರ್ಥಿಸಿಕೊಂಡಿದೆ. ಈ ವಿವಾದವನ್ನು ದ್ವಿಪಕ್ಷೀಯವಾಗಿ ಬಗೆಹರಿಸಬೇಕಾಗಿದೆ. ಈ ವಿವಾದದಲ್ಲಿ ವಿಶ್ವಸಂಸ್ಥೆಗೆ ಯಾವುದೇ ಪಾತ್ರವಿಲ್ಲವೆಂದು ರಶ್ಯವು ಬುಧವಾರ ಪ್ರಕಟಿಸಿದ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.