ಅ.ನ.ಸು. ಕಲಾಮಂದಿರಕ್ಕೆ ನೂರು ವರ್ಷ

Update: 2019-08-17 18:31 GMT

ಬ್ರಿಟಿಷರ ಆಡಳಿತದ ಆ ಶಾಲೆಯಲ್ಲಿ ನೆಪಮಾತ್ರವಾಗಿದ್ದ ಕಲಾ ಶಿಕ್ಷಣದಿಂದ ಬೇಸತ್ತ ಅ.ನ.ಸು. ಸರ್ ಎಂ. ವಿಶ್ವೇಶ್ವರಯ್ಯನವರಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಾಗ ಬಂದ ಪ್ರತಿಕ್ರಿಯೆ: ‘‘ಆ ಶಾಲೆ ನಿನಗೆ ಇಷ್ಟವಾಗದಿದ್ದಲ್ಲಿ ನಿನ್ನದೇ ಆದ ಒಂದು ಕಲಾ ಶಾಲೆ ಆರಂಭಿಸಬಾರದೇಕೆ?’’ ಇದರಿಂದ ಪ್ರೇರಣೆ ಪಡೆದ ಅ.ನ.ಸು. 1919ರಲ್ಲಿ ಬೆಂಗಳೂರಿನ ಬಳೇ ಪೇಟೆಯ ಸುಗ್ರೀವ ಮಂದಿರದ ಪಕ್ಕದ ಮಳಿಗೆಯಲ್ಲಿ ಕಲಾಮಂದಿರ ಕಲಾ ಶಾಲೆ ಪ್ರಾರಂಭಿಸಿದರು. ಹೀಗೆ ಶುರುವಾದ ಕಲಾಮಂದಿರದ ಕಲಾ ಪಯಣ ಕರ್ನಾಟಕದ ಚಿತ್ರಕಲೆ ಮತ್ತು ಕಲಾ ಶಿಕ್ಷಣದ ಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯ.


ಕರ್ನಾಟಕದ ಮಂಡ್ಯ ಸಕ್ಕರೆಯ ಸಿಹಿ ಸಿಹಿ ಜಿಲ್ಲೆಯಷ್ಟೆ ಅಲ್ಲ, ಕಲೆ-ಕಾವ್ಯ-ಸಾಹಿತ್ಯಗಳ ಸವಿಸವಿಯ ಜಿಲ್ಲೆಯೂ ಹೌದು. ಜಿಲ್ಲೆಯ ಅಕ್ಕಿ ಹೆಬ್ಬಾಳು, ಕಿಕ್ಕೇರಿ ದೇಶದ ಸಾಂಸ್ಕೃತಿಕ ನಕ್ಷೆಯಲ್ಲಿ ಅಜರಾಮರವಾದ ಸ್ಥಾನವನ್ನು ಗಳಿಸಿವೆ. ಕನ್ನಡದ ಹೆಮ್ಮೆಯ ಕವಿ, ‘ಮೈಸೂರು ಮಲ್ಲಿಗೆ’ ಖ್ಯಾತಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಕಿಕ್ಕೇರಿಯವರು. ಕನ್ನಡ ಪ್ರಬಂಧ ಸಾಹಿತ್ಯದ ಪಿತಾಮಹರೆಂದೇ ಖ್ಯಾತರಾದ ಎ.ಎನ್.ಮೂರ್ತಿರಾಯರು, ಮತ್ತೊಬ್ಬ ಪ್ರಖ್ಯಾತ ಪ್ರಬಂಧಕಾರ ಅ.ರಾ.ಮಿತ್ರ ಅಕ್ಕಿ ಹೆಬ್ಬಾಳಿನವರು. ವರ್ಣಚಿತ್ರ ಕಲೆ ಮತ್ತು ಕಲಾ ಶಿಕ್ಷಣದಲ್ಲಿ ಭೀಷ್ಮರೆನಿಸಿದ ಅ.ನ.ಸುಬ್ಬರಾಯರು ಅಕ್ಕಿ ಹೆಬ್ಬಾಳಿನವರು. ಅಕ್ಕಿ ಹೆಬ್ಬಾಳದಿಂದ ಪ್ರಾರಂಭವಾದ ಅ.ನ.ಸುಬ್ಬರಾಯರ ಕಲಾ ಪಯಣದ ಮೇರು ಚಿಹ್ನೆ ಕಲಾಮಂದಿರ. ಅವರು ಸ್ಥಾಪಿಸಿ, ಅದಕ್ಕೆ ತಮ್ಮ ಇಡೀ ಜೀವಮಾನವನ್ನು ಧಾರೆ ಎರೆದು ಕಟ್ಟಿ ಬೆಳಸಿದ ಕಲಾಮಂದಿರಕ್ಕೆ ಈಗ ಶತಮಾನೋತ್ಸವದ ಸಂಭ್ರಮ.

  
ಅ.ನ.ಸುಬ್ಬರಾಯರು ಹುಟ್ಟಿದ್ದು 1881ರಲ್ಲಿ-ಅಕ್ಕಿ ಹೆಬ್ಬಾಳು ಗ್ರಾಮದಲ್ಲಿ. ನಾಗಮಂಗಲದಲ್ಲಿ ವಾರಾನ್ನದ ಬಾಲಕನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಸುತ್ತಮುತ್ತಣ ಹೊಯ್ಸಳ ಶಿಲ್ಪಕಲೆಯಿಂದ ಆಕರ್ಷಿತರಾದರು. ಅದರ ಅಚ್ಚಳಿಯದ ಪ್ರಭಾವದಿಂದಾಗಿ ತಾನೂ ಕಲಾವಿದನಾಗಬೇಕೆಂಬ ಬಯಕೆ ಬಾಲಕನಲ್ಲಿ ಮೊಳೆಯಿತು. ಬಡತನದ ಕಷ್ಟಕಾರ್ಪಣ್ಯಗಳಿಂದಾಗಿ ಓದಿಗೆ ಅರ್ಧಕ್ಕೇ ವಿದಾಯ ಹೇಳಿ ಹಳ್ಳಿಗೆ ಹಿಂದಿರುಗಿ, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸು’ ಎಂಬ ಉಕ್ತಿಯಂತೆ ನೇಗಿಲು ಹಿಡಿದರು. ಆದರೆ ಕಲೆಯ ಗೀಳು ಬಿಡಲಿಲ್ಲ. ಅಕ್ಕಿಹೆಬ್ಬಾಳಿನಿಂದ ಮೈಸೂರಿಗೆ ಪಯಣ. ಅಲ್ಲಿ ಹತ್ತನೆಯ ತರಗತಿಯ ಓದು ಮುಗಿಸಿ ವರ್ಣ ಚಿತ್ರಕಲೆ ಕಲಿಯಲು ಜಯಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ಸೇರಿದರು. ಚಿತ್ರಕಲೆಯಲ್ಲಿ ಡಿಪ್ಲೊಮಾ ಪಡೆದ ಯುವಕ ಅ.ನ.ಸು.ಅವರನ್ನು ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಕೈಬೀಸಿ ಕರೆಯಿತು. ಅಲ್ಲಿ ಚಿತ್ರಕಲಾ ಶಿಕ್ಷಕರಾಗಿ ಉದ್ಯೋಗ ಆರಂಭಿಸಿದರು. ಬ್ರಿಟಿಷರ ಆಡಳಿತದ ಆ ಶಾಲೆಯಲ್ಲಿ ನೆಪಮಾತ್ರವಾಗಿದ್ದ ಕಲಾ ಶಿಕ್ಷಣದಿಂದ ಬೇಸತ್ತ ಅ.ನ.ಸು. ಸರ್ ಎಂ. ವಿಶ್ವೇಶ್ವರಯ್ಯನವರಲ್ಲಿ ತಮ್ಮ ಅಸಮಾಧಾನ ತೋಡಿಕೊಂಡಾಗ ಬಂದ ಪ್ರತಿಕ್ರಿಯೆ: ‘‘ಆ ಶಾಲೆ ನಿನಗೆ ಇಷ್ಟವಾಗದಿದ್ದಲ್ಲಿ ನಿನ್ನದೇ ಆದ ಒಂದು ಕಲಾ ಶಾಲೆ ಆರಂಭಿಸಬಾರದೇಕೆ?’’ ಇದರಿಂದ ಪ್ರೇರಣೆ ಪಡೆದ ಅ.ನ.ಸು. 1919ರಲ್ಲಿ ಬೆಂಗಳೂರಿನ ಬಳೇ ಪೇಟೆಯ ಸುಗ್ರೀವ ಮಂದಿರದ ಪಕ್ಕದ ಮಳಿಗೆಯಲ್ಲಿ ಕಲಾಮಂದಿರ ಕಲಾ ಶಾಲೆ ಪ್ರಾರಂಭಿಸಿದರು. ಹೀಗೆ ಶುರುವಾದ ಕಲಾಮಂದಿರದ ಕಲಾ ಪಯಣ ಕರ್ನಾಟಕದ ಚಿತ್ರಕಲೆ ಮತ್ತು ಕಲಾ ಶಿಕ್ಷಣದ ಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯ. ಶುರುವಾದಾಗ ನಾಲ್ಕೇನಾಲ್ಕು ವಿದ್ಯಾರ್ಥಿಗಳ ಸಂಖ್ಯೆಯು ಒಂದೇ ವರ್ಷದಲ್ಲಿ ಹದಿನೆಂಟಕ್ಕೇರಿತು. ಒಂದೇ ವರ್ಷದಲ್ಲಿ ಅ.ನ.ಸು. ಸುಲ್ತಾನ್ ಪೇಟೆಯ ಶಾಮಣ್ಣ ಬಂಗ್ಲೆಯಲ್ಲಿ ಅಖಿಲ ಭಾರತ ಕಲಾಪ್ರದರ್ಶನವನ್ನು ನಡೆಸುವ ಸಾಹಸ ಮಾಡಿದರು. ಈ ಪ್ರದರ್ಶನವನ್ನು ಉದ್ಘಾಟಿಸಿದ ಅಂದಿನ ಮೈಸೂರು ದಿವಾನರಾದ ಮಿರ್ಜಾ ಇಸ್ಮಾಯೀಲ್ ಸಾಹೇಬರು ಕಲಾಮಂದಿರಕ್ಕೆ ಐವತ್ತು ರೂಪಾಯಿ ಮಾಸಿಕ ಸಹಾಯಧನ ಮಂಜೂರು ಮಾಡಿದರು. 1938ರಲ್ಲಿ ಕಲಾಮಂದಿರ ಕಲಾ ಶಾಲೆ ಪುಟ್ಟಣ್ಣಚೆಟ್ಟಿ ಪುರಭವನದ ಸಮೀಪದ ಶಾರದಾ ಟಾಕೀಸಿಗೆ ಸ್ಥಳಾಂತರಗೊಂಡಿತು. ಅಲ್ಲಿಂದ 1944ರಲ್ಲಿ ಗಾಂಧಿಬಜಾರಿಗೆ ಪಯಣ. ಕೊನೆಗೆ ಅ.ನ.ಸು. ಅವರ ಇಳಿ ಪ್ರಾಯದಲ್ಲಿ ಕಲಾಮಂದಿರ ಹನುಮಂತ ನಗರದಲ್ಲಿ ಸ್ವಂತ ನೆಲೆಯನ್ನು ಕಂಡುಕೊಂಡಿತು. ಕಲಾವಿದನ ಕಲ್ಪನೆ ಮತ್ತು ವಾಸ್ತವ ಬದುಕಿನ ಅಪೂರ್ವ ಸಂಯೋಗ ಈ ಕಲಾಮಂದಿರ. ಇದರ ರೂವಾರಿ ಅ.ನ.ಸುಬ್ಬರಾಯರು

           
  ಸೃಜನಶೀಲ ಪ್ರತಿಭೆಯ ಕಲಾವಿದರೂ ಕಾಯಕ ಧರ್ಮದ ಕರ್ಮಯೋಗಿಗಳೂ ಆಗಿದ್ದರು. ಕಲಾಮಂದಿರ ಮತ್ತು ಸೈಕಲ್ ಸುಬ್ಬರಾಯರ ಹೆಸರಿನೊಂದಿಗೆ ಸಮಾನಾರ್ಥಕವಾದುವು. ಬೆಂಗಳೂರಿನ ಎಲ್ಲ ತುದಿಗಳ ವರೆಗೆ ಸೈಕಲ್ ಹೊಡೆಯುತ್ತ (ತೊಂಬತ್ತನೆಯ ವಯಸ್ಸಿನವರೆಗೆ) ಕಲಾಮಂದಿರವನ್ನು ಚಿತ್ರಕಲೆ, ನಾಟಕ, ಸಾಹಿತ್ಯ, ಸಂಗೀತ, ಪತ್ರಿಕೋದ್ಯಮ ಮೊದಲಾದ ಬದುಕಿನ ಸೃಜನಶೀಲ ಕಲಾ ಚಟುವಟಿಕೆಗಳ ಕೇಂದ್ರವನ್ನಾಗಿ ಬೆಳೆಸಿದ ಅ.ನ.ಸು. ಕಲೆ ಮತ್ತು ಶ್ರಮಜೀವನದ ನೊಗಕ್ಕೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು, ಶುರುವಿನಿಂದಲೇ ಚಿತ್ರಕಲೆಯ ಶಿಕ್ಷಣದ ಜೊತೆಗೆ ಅವರು ವಿದ್ಯಾರ್ಥಿಗಳಿಗೆ ಭಿತ್ತಿ ಪತ್ರಗಳು-ಫಲಕಗಳ ರಚನೆ, ಪೀಠೋಪಕರಣಗಳ ತಯಾರಿಕೆ ಮೊದಲಾದ ಕುಶಲ ಕಸುಬುಗಳನ್ನು ಕಲಿಸುತ್ತಿದ್ದರು. ಹೀಗೆ ಕಲೆ ಮತ್ತು ಶ್ರಮ, ಅಂತರಂಗ ತೃಪ್ತಿ ಮತ್ತು ಜೀವನ ನಿರ್ವಹಣೆ ಅವರ ಕಲಾ ಪಠ್ಯದಲ್ಲಿ ಮೇಳವಿಸಿದ್ದವು. ಕಲಾಮಂದಿರದ ನೂರು ವರ್ಷಗಳ ಇತಿಹಾಸವನ್ನು ಮುಖ್ಯವಾಗಿ ಮೂರು ಮಜಲುಗಳಲ್ಲಿ ಗುರುತಿಸಬಹುದು. ಬಳೇಪೇಟೆ ಮತ್ತು ಶಾರದಾ ಟಾಕೀಸ್ ನೆಲೆಗಳದು ಮೊದಲನೆಯ ಮಜಲಾದರೆ, ಗಾಂಧಿಬಜಾರ್ ನೆಲೆಯದು ಎರಡನೆಯ ಮಜಲು. ಮೂರನೆಯ ಮಜಲು ಖಾಯಂ ನಿವಾಸವಾದ ಹನುಮಂತನಗರದ್ದು. ಕಲಾಮಂದಿರ ಹಾಗೂ ಅ.ನ.ಸು. ಅವರ ವೈಯಕ್ತಿಕ ಬದುಕು ಈ ಎರಡೂ ನಿಟ್ಟಿನಿಂದಲೂ ಮೊದಲೆರಡು ಮಜಲುಗಳು, ಕಲೆ, ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟಗಳ ಐತಿಹಾಸಿಕ ದೃಷ್ಟಿಯಿಂದ ಮಹತ್ವಪೂರ್ಣವಾದುವು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ಆಕರ್ಷಿಸಿದಂತೆಯೇ ಅವರ ಸ್ವದೇಶೀ ಪರಿಕಲ್ಪನೆಯಿಂದಲೂ ಅ.ನ.ಸು. ಗಾಢವಾಗಿ ಪ್ರಭಾವಿತರಾಗಿದ್ದರು. ಕಲಾಮಂದಿರ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳ ಕೇಂದ್ರವೂ ಆಗಿತ್ತು. ಭೂಗತ ಹೋರಾಟಗಾರರ ಗುಪ್ತ ಆಶ್ರಯ ತಾಣವೂ ಆಗಿತ್ತು. ಕಲಾಮಂದಿರ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಹುರಿದುಂಬಿಸುವ ಕರಪತ್ರಗಳು, ಭಿತ್ತಿಚಿತ್ರಗಳು, ದೃಶ್ಯಾವಳಿಗಳ ಕಾರ್ಯಾಗಾರವೂ ಆಯಿತು. ಸ್ವದೇಶಿ ಪರಿಕಲ್ಪನೆ ಕಲಾಶಿಕ್ಷಣದ ಪಠ್ಯಕ್ರಮದಲ್ಲಿ ಸ್ಥಾನ ಪಡೆಯಿತು. ಕುಶಲ ಕಸುಬುಗಳ ಜೊತೆ ಕೊಟ್ಟಣದಕ್ಕಿ ತಯಾರಿಕೆ ಮೊದಲಾದ ದೇಶೀಯ ನಿತ್ಯೋಪಯೋಗಿ ವಸ್ತುಗಳ ತಯಾರಿಕೆಯ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಕೇಂದ್ರವೂ ಆಗಿ ಬೆಳೆಯಿತು. ಇದೇ ನಿಟ್ಟಿನಲ್ಲಿ ಕಲಾಮಂದಿರ 1930-1945ರ ಅವಧಿಯಲ್ಲಿ ಬಾಟಿಕ್ ಹಾಗೂ ಫೋಟೋಗ್ರಫಿ ಕಾರ್ಯಾಗಾರಗಳನ್ನು ನಡೆಸಿದ್ದು, ಈ ವಿಷಯಗಳಲ್ಲಿ ಡಿಪ್ಲೊಮಾ ಶಿಕ್ಷಣ ಆರಂಭಿಸಿ ಉದ್ಯೋಗಾವಕಾಶಗಳಿಗೆ ಹಾದಿ ತೋರಿಸಿದ್ದು ಕಲಾಮಂದಿರದ ಸ್ತುತ್ಯಾರ್ಹ ಕ್ರಮಗಳಲ್ಲಿ ಗಮನಾರ್ಹವಾದುದು. ಕಲಾಮಂದಿರ ಕಲಾ ಶಾಲೆಯ ವಿದ್ಯಾರ್ಥಿಗಳ ಕಲಾಕೃತಿಗಳ ಪ್ರದರ್ಶಿಸುವ ಸಲುವಾಗಿ ಅ.ನ.ಸು. 1921ರಲ್ಲಿ ಅಖಿಲ ಭಾರತ ಕಲಾ ಪ್ರದರ್ಶನವನ್ನು ಏರ್ಪಡಿಸಿದ್ದರು. 1927ರಲ್ಲಿ ಮೈಸೂರು ಸರಕಾರದ ನೆರವಿನಿಂದ ನಡೆದ ಕಲಾಮಂದಿರದ ದ್ವಿತೀಯ ಅಖಿಲ ಭಾರತ ಕಲಾ ಪ್ರದರ್ಶನವನ್ನು ನೇಪಾಳದ ದೊರೆ ರಾಜಾ ಜೈಬಹಾದುರ್ ಸಿಂಗ್ ಉದ್ಘಾಟಿಸಿದ್ದು, ದೇಶದ ಆಗಿನ ಪ್ರಸಿದ್ಧ ಕಲಾವಿದರಾದ ಅಬ್ದುಲ್ ರೆಹಮಾನ್ ಚುಗ್ತಾಯ್, ದೇವಿಪ್ರಸಾದ್ ರಾಯ್ ಚೌಧುರಿ, ನಂದಲಾಲ್ ಬೋಸ್, ವೈ ಸುಬ್ರಹ್ಮಣ್ಯ ರಾಜು ಮೊದಲಾದವರ ಕಲಾಕೃತಿಗಳು ಹಾಗೂ ಆಗಿನ ಬಾಂಬೆಯ ಪ್ರಖ್ಯಾತ ಛಾಯಾಗ್ರಾಹಕರಾದ ಉನ್ವಾಲ ಸಹೋದರರ ಛಾಯಾಚಿತ್ರಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ದವು. 1929ರಲ್ಲಿ ಕಲಾಮಂದಿರ ಇನ್ನಷ್ಟು ವ್ಯಾಪಕವಾದ ಕಲಾ ಪ್ರದರ್ಶನವನ್ನು ಏರ್ಪಡಿಸಿತ್ತು. 1934ರಲ್ಲಿ ಮಹಾತ್ಮಾ ಗಾಂಧಿಯವರನ್ನು ತನ್ನ ಮನೆಯಂಗಳಕ್ಕೆ ಬರಮಾಡಿಕೊಂಡ ಹಿರಿಮೆ ಕಲಾಮಂದಿರದ್ದು. ಅ.ನ.ಸು. ಅವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜೊತೆಗೂಡಿ ವ್ಯವಸ್ಥೆಮಾಡಿದ ಖಾದಿ ಕಲಾ ಪ್ರದರ್ಶನಕ್ಕೆ ಮಹಾತ್ಮಾ ಗಾಂಧಿ ಮತ್ತು ಆನಿಬೆಸೆಂಟ್ ಅವರು ಭೇಟಿ ನೀಡಿದ್ದು ಕಲಾಮಂದಿರದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

ಅ.ನ.ಸು. ಕಲಾ ಪತ್ರಕರ್ತರೂ ಆಗಿದ್ದರು. ಕಲೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಏಕಕಾಲದಲ್ಲಿ ಕಲಾವಿದರು ಮತ್ತು ಜನಸಾಮಾನ್ಯರಿಬ್ಬರಿಗೂ ಉಪಯುಕ್ತವಾಗುವಂತಹ ಪತ್ರಿಕೆಯೊಂದರ ಅಗತ್ಯವನ್ನು ಮನಗಂಡ ಅ.ನ.ಸು. 1930ರಲ್ಲಿ ‘ಕಲಾ’ ನಿಯತಕಾಲಿಕವನ್ನು ಹೊರತಂದರು. ವರ್ಣಚಿತ್ರಕಲೆ, ಶಿಲ್ಪ ಕಲೆ, ಆಧುನಿಕ ಚಿತ್ರಕಲೆ, ಸಾಹಿತ್ಯ, ರಂಗಭೂಮಿ ಇವುಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ಕಲೆಯನ್ನು ಅರ್ಥೈಸುವ ಮಾಧ್ಯಮವಾಗಿ, ಪ್ರೌಢ ಚಿಂತನೆಗೆ, ವಿಮರ್ಶೆಗೆ ವೇದಿಕೆಯಾಗಿ ‘ಕಲಾ’ ಆ ಕಾಲಕ್ಕೆ ಪ್ರಪ್ರಥಮ ಕಲಾ ಪತ್ರಿಕೆ ಎನ್ನುವ ಅಗ್ಗಳಿಕೆಗೆ ಪಾತ್ರವಾಯಿತು. ದೇವುಡು ನರಸಿಂಹ ಶಾಸ್ತ್ರಿ, ವಿ.ಸೀತಾರಾಮಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಅ.ನ.ಕೃ., ಡಿ.ವಿ.ಜಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರಂಥ ಆ ಕಾಲದ ಘನತೆವೆತ್ತ ಲೇಖಕರು ‘ಕಲಾ’ಗೆ ಬರೆಯುತ್ತಿದ್ದರು ಎಂಬುದೇ ಅದರ ಗರಿಮೆಗೆ ಸಾಕ್ಷಿ. ಅ.ನ.ಸುಬ್ಬರಾಯರು ಚಿತ್ರಕಲೆಯಲ್ಲದೆ ಬರವಣಿಗೆಯಲ್ಲೂ ಪ್ರಯೋಗಶೀಲರಾಗಿದ್ದರು. ‘ದೃಗ್ ದರ್ಶನ’ ರೇಖಾ ವಿನ್ಯಾಸಗಳನ್ನು ಕುರಿತ ಕೃತಿಯಾದರೆ, ‘ಒಂದೇ ಒಂದು’, ‘ಸಂಬಂಧ ಸಮಸ್ಯೆ’, ‘ಕೂಲಿ’, ‘ನೇಕಾರ’, ‘ಅವಾಂತರ’, ‘ತಿರುಗಿ ಬಂದ ಭೂಪತಿ’, ‘ರಾಜಿಕಬೂಲಿ’, ‘ಬಣ್ಣದ ಗಡಿಗೆ’, ‘ಕಾಬೂಲಿವಾಲ’, ‘ಮಾಯಾವರ’, ‘ಶಾಂತಿ ಸಂದೇಶ’, ‘ಅರುಂಧತಿ’ ಅ.ನ.ಸು. ಅವರ ನಾಟಕ ಕೃತಿಗಳು. ರಂಗಭೂಮಿಯಲ್ಲಿ ಅ.ನ.ಸು. ತೀವ್ರ ಆಸಕ್ತಿ ಹೊಂದಿದ್ದರೆಂಬುದಕ್ಕೆ ಅವರ ನಾಟಕ ಸಾಹಿತ್ಯವೇ ನಿದರ್ಶನ. ಅ.ನ.ಸು. ಇದೇ ವೇಳೆಯಲ್ಲಿ ಬೆಂಗಳೂರಿನ ಶಿವಾನಂದ ಥಿಯೇಟರಿನಲ್ಲಿ ಪೌರಾಣಿಕ, ಚಾರಿತ್ರಿಕ ಮತ್ತು ಸಾಮಾಜಿಕ ನಾಟಕಗಳನ್ನು ಕುರಿತ ವಿಚಾರ ಸಂಕಿರಣವೊಂದನ್ನು ನಡೆಸಿದ್ದು, ಗರುಡ ಸದಾಶಿವರಾಯರು ಈ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ರಂಗಭೂಮಿಯ ಏಕಮೇವಾದ್ವಿತೀಯರೆನ್ನಿಸಿದ ಗುಬ್ಬಿ ವೀರಣ್ಣ,ಪೀರ್ ಸಾಹೇಬರು, ಬಳ್ಳಾರಿ ರಾಘವಾಚಾರ್, ದೇವುಡು ನರಸಿಂಹ ಶಾಸ್ತ್ರಿ, ಸಿ.ಕೆ.ವೆಂಕಟರಾಮಯ್ಯ, ತಿ.ತಾ.ಶರ್ಮ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರೆಂಬುದು ಐತಿಹಾಸಿಕವಾಗಿ ಒಂದು ವಿಶೇಷ ಸಂಗತಿಯೇ ಸರಿ.
  


ಕಲಾಮಂದಿರ ಗಾಂಧಿ ಬಜಾರ್ ತಲುಪುವ ವೇಳೆಗೆ ಹೆಚ್ಚು ಪ್ರಬುದ್ಧವೂ ವಿಕಸನಶೀಲವೂ ಆಗಿತ್ತೆಂಬುದನ್ನು ಅದರ ಕಾರ್ಯಚಟುವಟಿಕೆಗಳ ವಿನ್ಯಾಸ ಮತ್ತ ವಿಸ್ತಾರಗಳಿಂದಲೇ ಮನಗಾಣಬಹುದಾಗಿದೆ. ಗಾಂಧಿಬಜಾರಿಗೆ ಬಂದನಂತರದ ಅರವತ್ತು-ಎಂಬತ್ತರ ದಶಕಗಳ ನಡುವಣ ಅವಧಿ ಕಲಾಮಂದಿರದ ನೂರು ವರ್ಷಗಳ ಇತಿಹಾಸದಲ್ಲಿ ಅತ್ಯಂತ ಫಲಪ್ರದವಾದ ವರ್ಷಗಳು. ಈ ವರ್ಷಗಳಲ್ಲಿ ಬೆಳಗಿನಿಂದ ಬೈಗಿನವರೆಗೆ ವರ್ಣಚಿತ್ರ ಕಲೆ, ಶಿಲ್ಪ ಕಲೆ, ಸಾಹಿತ್ಯ ಸಂವಾದ, ಸಂಗೀತ, ರಂಗಭೂಮಿ ಮೊದಲಾದ ಸಾಂಸ್ಕೃತಿಕ ಚಟುವಟಿಕೆಗಳ ಜೇನುಗೂಡಾಗಿರುತ್ತಿತ್ತು ಕಲಾಮಂದಿರ. ಬೆಳಗಿನಿಂದ ಸಂಜೆಯವರೆಗೆ ಪೈಂಟಿಂಗ್, ಶಿಲ್ಪ ಕಲೆ, ರೇಖಾಚಿತ್ರ ಕಲೆ, ಕುಶಲ ಕಲೆಗಳಲ್ಲಿ ತರಬೇತಿ-ಚರ್ಚೆ-ಸಮಾಲೋಚನೆ. ಇಳಿ ಸಂಜೆ ಪತ್ರಿಕಾ ವ್ಯವಸಾಯದ ಖ್ಯಾತನಾಮರಾದ ಪಿ.ಆರ್.ರಾಮಯ್ಯ, ತಿ.ತಾ.ಶರ್ಮ, ಅ.ನ.ಕೃ, ನಿರಂಜನ, ಶಿಶು ಸಾಹಿತ್ಯದ ಅಶ್ವತ್ಥನಾರಾಯಣ, ಚಿತ್ರ ನಿರ್ದೇಶಕರಾದ ಕು.ರಾ.ಸೀತಾರಾಮ ಶಾಸ್ತ್ರಿ, ಎಸ್.ರಾಮನಾಥನ್, ಕನ್ನಡ ಚಳವಳಿಗಾರರು ಮೊದಲಾದವರ ಸವಾರಿ ಚಿತ್ತೈಸುತ್ತಿತ್ತು. ದೇಶದ ವಿದ್ಯಮಾನಗಳ ಬಗ್ಗೆ, ಪ್ರಚಲಿತ ವಿಷಯಗಳ ಬಗ್ಗೆ 5-7ಗಂಟೆಯ ವರೆಗೆ ಗಂಭೀರ ಚರ್ಚೆ. ಅಧ್ಯಕ್ಷ ಸ್ಥಾನದಲ್ಲಿ ಅ.ನ.ಸು. ಕೆಲವೊಮ್ಮೆ ಅನಕೃ, ನಿರಂಜನ ಅವರಿಂದ ಕನ್ನಡ ಭಾಷೆ, ಸಾಹಿತ್ಯ ಕುರಿತು ಕಳಕಳಿಯ, ವಿಮರ್ಶೆಯ ಮಾತುಗಳು. ಈ ಅನೌಪಚಾರಿಕ ಗೋಷ್ಠಿಗಳಿಗೆ ನನ್ನಂತಹ ಅನಾಹ್ವಾನಿತ ಖಾಯಂ ಸದಸ್ಯರು. ನಸುಗತ್ತಲಾದಂತೆ ಮೈಸೂರು ಅನಂತಸ್ವಾಮಿ, ಎಸ್.ಜಿ.ರಘುರಾಂ ಅವರಿಂದ ಕನ್ನಡ ಕವಿತೆಗಳಿಗೆ ರಾಗ ಸಂಯೋಜನೆ, ಗಾಯನ.ಮೈಸೂರು ಅನಂತಸ್ವಾಮಿ ಇಂದು ಪ್ರಖ್ಯಾತವಾಗಿರುವ ಸುಗಮ ಸಂಗೀತಕ್ಕೆ ಬುನಾದಿ ಹಾಕಿದ್ದು ಇದೇ ಕಲಾಮಂದಿರದಲ್ಲೇ. ಇದೇ ವೇಳೆಗೆ ಅ.ನ.ಸು. ಮಗ ಎ.ಎಸ್.ಮೂರ್ತಿ ನಾಟಕಕಾರರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದರು. ಅವರ ಚಿತ್ರ ಕಲಾವಿದರು ನಾಟಕ ತಂಡ ಕಲಾಮಂದಿರದ ಇನ್ನೊಂದು ಆಯಾಮ. ದೊಡ್ಡ ಹಾಲನ್ನೇ ಅರ್ಧಕ್ಕೆ ವಿಭಜಿಸಿ ಚಿತ್ರಾ ಕಲಾವಿದರ ರಂಗ ತಾಲೀಮು ಶುರುವಾಗುತ್ತಿತ್ತು. ದಾಶರಥಿ ದೀಕ್ಷಿತ್, ನವರತ್ನರಾಮ್, ಲೋಕನಾಥ್, ಶಿವರಾಮ್, ಸಿಂಹ ಮೊದಲಾದವರು ತಾಲೀಮಿಗೋ ರಂಗಭೂಮಿ ಹರಟೆಗೋ ತಪ್ಪದೆ ಹಾಜರಾಗುತ್ತಿದ್ದರು. ರವಿವಾರಗಳಂದು ಕಲಾಮಂದಿರ ಪ್ರಖ್ಯಾತರ ಹಾಗೂ ಉದಯೋನ್ಮುಖರ ಸಾಹಿತ್ಯ ಕೃತಿಗಳ ವಾಚನಕ್ಕೆ, ಚರ್ಚೆಗೆ ವೇದಿಕೆಯಾಗುತ್ತಿತ್ತು. ಗಿರೀಶ್ ಕಾರ್ನಾಡರು ‘ಹಿಟ್ಟಿನ ಹುಂಜ’ ನಾಟಕ ಮೊದಲು ವಾಚಿಸಿದ್ದು ಇಲ್ಲೇ. ಗೋಪಾಲಕೃಷ್ಣ ಅಡಿಗರು, ಗೋಕಾಕರು, ಕಂಬಾರರು, ಬಿ.ವಿ.ಕಾರಂತರು, ಲಂಕೇಶ್-ಹೀಗೆ ಹೊಸ ಹಾಗೂ ಹಳೆಯ ತಲೆಮಾರಿನ ಪ್ರಮುಖ ಲೇಖಕ-ಕಲಾವಿದರೆಲ್ಲ ಕಲಾಮಂದಿರದ ಚಟುವಟಿಕೆಗಳಲ್ಲಿ ಭಾಗಿಯಾದವರು. ಬೀದಿ ನಾಟಕ, ಸೂತ್ರದ ಬೊಂಬೆಯಾಟಗಳು ಒಂದು ಸಾಮಾಜಿಕ ಜಾಗೃತಿಯ ಮಾಧ್ಯಮವಾಗಿ ಬೆಳೆಯಬೇಕೆಂಬ ಪರಿಕಲ್ಪನೆ ಮೊಳೆತದ್ದು ಇಲ್ಲೇ.ಕಲಿಯುವವರ, ಬೋಧಿಸುವವರ, ಪಂಡಿತರ, ಪರಿಣಿತರ, ಪಡ್ಡೆ ಹುಡುಗ ಹುಡುಗಿಯರ ಸಮಾಗಮ. ಖ್ಯಾತ ನಾಮರ ದರ್ಶನಕ್ಕಾಗಿಯೇ ಕಲಾಮಂದಿರಕ್ಕೆ ಬರುತ್ತಿದ್ದ ಅಭಿಮಾನಿಗಳಿಗೇನೂ ಕಮಿ ್ಮಇರುತ್ತಿರಲಿಲ್ಲ. ಈ ಅವಧಿಯಲ್ಲಿ ಕಲಾಮಂದಿರದ ಚಿತ್ರ ಕಲಾವಿದರು, ನಾಟಕ ತಂಡದ ಸಕ್ರಿಯ ಸದಸ್ಯನಾಗಿದ್ದ ಈ ಅಂಕಣಕಾರನಿಗೆ ಇದನ್ನೆಲ್ಲ ಸನಿಹದಿಂದ ನೋಡಿ ಕಲಿಯುವ ಅವಕಾಶ ದೊರೆತದ್ದು ಒಂದು ಅವಿಸ್ಮರಣೀಯ ಅನುಭವ. ಈ ಅಂಕಣಕಾರ ಪಿ.ಆರ್.ರಾಮಯ್ಯ, ತಿ.ತಾ.ಶರ್ಮಾ ಅವರ ಜೊತೆ ಚರ್ಚೆ, ಸಲಿಗೆಯ ಮಾತುಕತೆ ಬೆಳೆಸಿಕೊಂಡದ್ದು, ಸ್ವಾತಂತ್ರ್ಯಪೂರ್ವ ಪತ್ರಿಕೋದ್ಯಮದ ಒಳನೋಟಗಳನ್ನು ಅವರಿಂದ ಪಡೆದುಕೊಂಡದ್ದು ಇದೇ ಕಲಾಮಂದಿರದಲ್ಲೇ. ಅ.ನ.ಸುಬ್ಬರಾಯರ ಕಲಾಮಂದಿರದಲ್ಲಿ ಕಲಿತು ಪ್ರಖ್ಯಾತರಾದವರ ಯಾದಿ ದೊಡ್ಡದೇ ಇದೆ. ರುಮಾಲೆ ಚೆನ್ನಬಸವಯ್ಯ, ಎಸ್.ಎಸ್.ಕುಕ್ಕೆ, ಸುಬ್ಬುಕೃಷ್ಣ, ಎಸ್.ಆರ್.ಸ್ವಾಮಿ, ಬಿ.ಕೆ.ಎಸ್.ವರ್ಮಾ, ಎಂ.ಎಸ್.ಮೂರ್ತಿ, ವೆಂಕಟಾಚಲಪತಿ, ಕನಕಾ ಮೂರ್ತಿ ಮೊದಲಾದವರು ಹಾಗೂ ಚಲಚಿತ್ರ ರಂಗದ ಎಸ್.ರಾಮನಾಥನ್, ಎಸ್.ಶಿವರಾಮ್ ಕರ್ನಾಟಕ ಹೆಮ್ಮೆಪಡಬಹುದಾದಂಥ ಕಲಾಮಂದಿರದ ಕೊಡುಗೆ. ಸುಬ್ಬರಾಯರು 1981ರ ಮೇ 21ರಂದು ಕಾಲವಶವಾದರು. ಮುಂದೆ ಕೆಲವು ವರ್ಷಗಳ ನಂತರ ಕಲಾಮಂದಿರ ಹನುಮಂತ ನಗರದಲ್ಲಿ ಸ್ವಂತ ನೆಲೆ ಕಂಡುಕೊಂಡಿತು. ಈ ಸ್ವಂತ ನೆಲೆ ಅ.ನ.ಸು. ಅವರ ಕನಸಿನ ಕಲಾವಿಶ್ವವಿದ್ಯಾನಿಲಯದ ಕ್ಯಾಂಪಸ್ ಮಾದರಿಯದು. ಇಲ್ಲಿ ಕಲಾಮಂದಿರದ ಕಲಾ ಶಾಲೆ ಇದೆ, ಚಿತ್ರ ಕಲಾವಿದರು ಇದ್ದಾರೆ, ಬೀದಿ ನಾಟಕವಿದೆ, ಅಭಿನಯ ತರಂಗವಿದೆ, ಮಕ್ಕಳಿಗೆ ನಾಟ್ಯ ಕಲೆ ಕಲಿಸುವ ‘ಬಿಂಬ’ವಿದೆ. ನವ ಚೈತನ್ಯದ ನಾಯಕತ್ವವಿದೆ. ಅ.ನ.ಸು. ಅವರ ಮೊಮ್ಮಗ ಎಂ.ಎಸ್.ಪ್ರಕಾಶ್ ಈಗ ಕಲಾಮಂದಿರದ ಅಧ್ವರ್ಯು. ವರ್ಣ ಚಿತ್ರ, ಶಿಲ್ಪಕಲೆಗಳಲ್ಲಿ ಡಿಪ್ಲೊಮ ಶಿಕ್ಷಣ ನೀಡುತ್ತಿದ್ದ ಕಲಾಮಂದಿರ ಇಂದು ಹಂಪಿ ವಿಶ್ವವಿದ್ಯಾನಿಲಯದ ಪದವಿ ನಿಡುವ ಕರ್ನಾಟಕದ ಏಕೈಕ ಕಲಾ ಶಾಲೆ. ಕಳೆದ ಅಕ್ಟೋಬರ್‌ನಲ್ಲಿ ಆರಂಭಗೊಂಡ ಕಲಾಮಂದಿರದ ಶತಮಾನೋತ್ಸವದ ಸಮಾರೋಪ ಸಮಾರಂಭ ಇದೇ 25ರಂದು ನಡೆಯಲಿದೆ 

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News

ಸಂವಿಧಾನ -75