ಬಿಸ್ಕೆಟ್ ಕಂಪೆನಿಯನ್ನೇ ಚಹಾದಲ್ಲಿ ಮುಳುಗಿಸಿದರು ಸಾರ್....

Update: 2019-08-24 18:48 GMT

ಅವರೆಲ್ಲ ಉದ್ಯೋಗದ ಸಂದರ್ಶನಕ್ಕಾಗಿ ಕ್ಯೂ ನಿಂತಿದ್ದರು. ಬೇರೆ ಬೇರೆ ಕಂಪೆನಿಗಳಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರು ಅಲ್ಲಿ ನೆರೆದಿದ್ದರು. ಸಾಲು ತುಂಬಾ ದೊಡ್ಡದಿತ್ತು. ಸಂದರ್ಶಕ ಒಂದು ಕೈಯಲ್ಲಿ ಸೌಟು ಮತ್ತೊಂದು ಕೈಯಲ್ಲಿ ಪಕೋಡಾ ಮೈದಾ ರುಬ್ಬುತ್ತಾ ಒಬ್ಬೊಬ್ಬರನ್ನೇ ಪ್ರಶ್ನಿಸುತ್ತಿದ್ದ.
ಸಂದರ್ಶಕ: ಮೊದಲು ಎಲ್ಲಾದರೂ ಕೆಲಸ ಮಾಡಿದ ಅನುಭವ ಇದೆಯಾ?
ಅಭ್ಯರ್ಥಿ 1: ಹೌದು ಸಾರ್.
ಸಂದರ್ಶಕ: ಎಷ್ಟು ಸಮಯದಿಂದ...
ಅಭ್ಯರ್ಥಿ: ಕಳೆದ 25 ವರ್ಷಗಳ ಅನುಭವ ಇದೆ ಸಾರ್...
ಸಂ.: ಯಾವ ಕಂಪೆನಿಯಲ್ಲಿ....
ಅಭ್ಯರ್ಥಿ: ಬಿಸ್ಕೆಟ್ ಕಂಪೆನಿಯಲ್ಲಿ ಸಾರ್...
ಸಂ.: ಯಾವ ಬಿಸ್ಕೆಟ್...
ಅಭ್ಯರ್ಥಿ: ಪಾರ್ಲೆ ಜಿ ಸಾರ್...
ಸಂ.: ಹೂಂ...ನೋಡಿ....ನಮ್ಮ ಪಕೋಡಾ ಬಂದ ಮೇಲೆ ಚಹಾಕ್ಕೆ ಜನರು ಬಿಸ್ಕೆಟ್ ಬಳಸೋದನ್ನೇ ನಿಲ್ಲಿಸಿದ್ದಾರೆ. ನಿಮ್ಮ ಪಾರ್ಲೆಜಿಗೆ ಏನಾಯಿತು...
ಅಭ್ಯರ್ಥಿ: ಸಾರ್...ಮೊದಲೆಲ್ಲ ಜನರು ಚಹಾಕ್ಕೆ ಬಿಸ್ಕೆಟ್ ಮುಳುಗಿಸಿ ತಿನ್ತಾ ಇದ್ದರು. ಈಗ ಅದ್ಯಾರೋ ಒಬ್ಬ ಚಾಯ್‌ವಾಲಾ ಬಂದು, ಇಡೀ ಬಿಸ್ಕೆಟ್ ಕಂಪೆನಿಯನ್ನೇ ಚಹಾಕ್ಕೆ ಮುಳುಗಿಸಿ ತಿಂದಿದ್ದಾರೆ ಸಾರ್. ನಾವೆಲ್ಲ ಬೀದಿಪಾಲಾಗಿದ್ದೇವೆ....
ಸಂ.: ಪಕೋಡಾ, ಬಿಸ್ಕೆಟ್ ಇವೆರಡೂ ಚಹಾದ ಜೊತೆಗೆ ಹೊಂದಾಣಿಕೆಯಾಗುತ್ತೆ. ಆದುದರಿಂದ ನೀನು ಓಕೆ. ಸರಿ...ಬಿಸ್ಕೆಟ್ ಕಂಪೆನಿಯಲ್ಲಿ ಏನು ಮಾಡ್ತಾ ಇದ್ದೀಯಾ?
ಅಭ್ಯರ್ಥಿ: ಸರ್, ಪ್ರೊಡಕ್ಷನ್ ಮ್ಯಾನೇಜರ್ ಸಾರ್...
ಸಂ.: ಪಕೋಡಾ ಕಟ್ಟೋದಕ್ಕೆ ಬರತ್ತ?
ಅಭ್ಯರ್ಥಿ: ಇಲ್ಲ ಸಾರ್...
ಸಂ.: ಸರಿ....ಮೊದಲ ಆರು ತಿಂಗಳು ಟ್ರೇನಿಂಗ್ ಪಿರೇಡ್...ಮೋದಿಯವರ ಸಣ್ಣ ಉದ್ದಿಮೆಗಳ ಯೋಜನೆಗಳಡಿಯಲ್ಲಿ ಪಕೋಡಾ ಕಟ್ಟುವುದಕ್ಕೆ ತರಬೇತಿ ನೀಡಲಾಗುತ್ತದೆ....ನಿನ್ನ ವಿದ್ಯಾರ್ಹತೆಯ ಸರ್ಟಿಫಿಕೇಟ್‌ಗಳಿವೆಯಾ?
ಅಭ್ಯರ್ಥಿ: ಸರ್ ಬೇರೆ ಬೇರೆ ಸಬ್ಜೆಕ್ಟ್‌ನಲ್ಲಿ ಎಂಎ ಮಾಡಿದ ಸರ್ಟಿಫಿಕೇಟ್‌ಗಳಿವೆ ಸಾರ್. ರ್ಯಾಂಕ್ ಬಂದಿದ್ದೇನೆ ಸಾರ್...
ಸಂ.: ಸರಿ. ಮೊದಲು ಪಕೋಡಾ ಕಟ್ಟುವುದಕ್ಕೆ ಆ ಸರ್ಟಿಫಿಕೇಟ್‌ಗಳನ್ನೇ ಬಳಸು. ಸುಮ್ಮನೆ ಒಳ್ಳೆಯ ಕಾಗದಗಳನ್ನು ವೇಸ್ಟ್ ಮಾಡುವುದು ಬೇಡ. ಆ ಸರ್ಟಿಫಿಕೇಟ್‌ಗಳಲ್ಲಿ ಪಕೋಡಾಗಳನ್ನು ಕಟ್ಟುವುದಕ್ಕೆ ಕಲಿತ ಬಳಿಕ ...ಮೋದಿಯವರು ಪಕೋಡಾ ಕಟ್ಟುವುದಕ್ಕಾಗಿಯೇ ಕೆಲವು ಪತ್ರಿಕೆಗಳನ್ನು ಸಾಕುತ್ತಿದ್ದಾರೆ. ಒಳ್ಳೆ ಕ್ವಾಲಿಟಿ ಪೇಪರ್. ಎಣ್ಣೆ ಅಷ್ಟು ಸುಲಭವಾಗಿ ಎಳೆಯುವುದಿಲ್ಲ....ಅವುಗಳನ್ನುಕಟ್ಟಬೇಕು....ಸರಿ...ನಾಳೆಯಿಂದ ಟ್ರೇನಿಂಗ್ ಪಿರೇಡ್...
ಅಭ್ಯರ್ಥಿ ಕೆಲಸ ಸಿಕ್ಕಿದ ಸಂಭ್ರಮದಿಂದ ರೋಮಾಂಚನಗೊಂಡ. ಪಕೋಡಾ ಗೂಡಂಗಡಿಯ ಮಾಲಕನಿಗೆ ಉದ್ದಂಡ ನಮಸ್ಕಾರ ಹಾಕಿದ.
***
ಅಭ್ಯರ್ಥಿ 2: ನಮಸ್ಕಾರ ಸಾರ್...
ಸಂದರ್ಶಕ: ಬೇರೆಲ್ಲಾದರೂ ಕೆಲಸ ಮಾಡಿದ ಅನುಭವ ಇದೆಯಾ?
ಅಭ್ಯರ್ಥಿ: ಇದೆ ಸಾರ್...ಏರ್ ಇಂಡಿಯಾದಲ್ಲಿ ಕೆಲಸ ಮಾಡಿದ್ದೆ ಸಾರ್....
ಸಂದರ್ಶಕ: ಪಕೋಡಾ ಅಂಗಡಿಯಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಆದ್ಯತೆ. ಈ ಏರ್ ಇಂಡಿಯಾ ಅಂದರೆ....ಇನ್ನೊಂದು ಬಿಸ್ಕೆಟ್ ಅಂಗಡಿಯ ಹೆಸರಾ?
ಅಭ್ಯರ್ಥಿ: ಅಲ್ಲ ಸಾರ್...ಅದು ಮೇಲೆ ಆಕಾಶದಲ್ಲಿ ಹಾರ್ತದಲ್ಲಾ ಅದು...ನಮ್ಮ ಮೋದಿ ಸಾಹೇಬರು ಫಾರಿನ್ ಟೂರಿಗೆ ಹೋಗೋದೆಲ್ಲ ಅದರಲ್ಲೆ....
ಸಂದರ್ಶಕ: ಅವರು ಫಾರಿನ್ ಟೂರಿಗೆ ಅದರಲ್ಲೇ ಹೋದದ್ದರಿಂದ ಲಾಸ್ ಆಯ್ತ?
ಅಭ್ಯರ್ಥಿ: ಹಾಗೇನಿಲ್ಲ ಸಾರ್....ಈ ದೇಶ ಅಭಿವೃದ್ಧಿಯಾಗಿದೆ. ಕಲಿತೋರೆಲ್ಲ ನೆಹರೂ ಕಾಲದಲ್ಲಿ ವಿದೇಶಕ್ಕೆ ವಲಸೆ ಹೋಗ್ತಾ ಇದ್ರು. ಈಗ ಎಲ್ಲರೂ ವಲಸೆ ಹೋಗುವುದನ್ನು ನಿಲ್ಲಿಸಿ ಇಲ್ಲೇ ಕೆಲಸ ಉದ್ಯೋಗ ಮಾಡ್ತಾ ಇದ್ದಾರೆ. ಆದುದರಿಂದ ಏರ್ ಇಂಡಿಯಾ ಬಿಸಿನೆಸ್ ಡಲ್ ಆಗಿ ಮುಚ್ಚಿ ಹೋಯಿತು ಸಾರ್...
ಸಂದರ್ಶಕ: ಪಕೋಡಾ ಅಂಗಡಿಯಲ್ಲಿ ಕೆಲಸ ಮಾಡಲು ನಿನ್ನ ಏರ್‌ಇಂಡಿಯಾ ಅನುಭವ ಎಲ್ಲ ಸಾಕಾಗಲ್ಲ....ಮತ್ತೆ ನೋಡೋಣ...
ಅಭ್ಯರ್ಥಿ: ಸಾರ್...ಪ್ಲೀಸ್ ಸಾರ್, ಕಲ್ತುಕೋತೀನಿ ಸಾರ್...
ಸಂದರ್ಶಕ: ಮನೆ ಮನೆಗೆ ಪಕೋಡಾ ವಿತರಣೆ ಮಾಡೋ ಮುಖ್ಯ ಕೆಲಸ ಇದೆ....ಆದರೆ ಅದಕ್ಕೆ ಎರಡು ಲಕ್ಷ ರೂಪಾಯಿ ಡಿಪಾಸಿಟ್ ಕಟ್ಬೇಕಾಗತ್ತೆ....
ಅಭ್ಯರ್ಥಿ: ಥ್ಯಾಂಕ್ಯೂ ಸಾರ್....ನನ್ನ ಒಂದು ಕಿಡ್ನಿ ಮಾರಿ ಡಿಪಾಸಿಟ್ ಕಟ್ತೀನಿ ಸಾರ್....ಆ ಕೆಲಸ ನನಗೇ ಕೊಡಿ ಸಾರ್....
***
ಅಭ್ಯರ್ಥಿ 3: ನಮಸ್ಕಾರ ಸಾರ್...
ಸಂದರ್ಶಕ: ಅನುಭವ ಇದೆಯಾ?
ಅಭ್ಯರ್ಥಿ: ಇದೆ ಸಾರ್...
ಸಂದರ್ಶಕ: ಏನು ಅನುಭವ?
ಅಭ್ಯರ್ಥಿ: ಮುಳುಗಿಸಿದ ಅನುಭವ ಸಾರ್...
ಸಂದರ್ಶಕ: ಪಕೋಡಾವನ್ನು ಎಣ್ಣೆಯಲ್ಲಿ ಮುಳುಗಿಸಿದ್ದಾ?
ಅಭ್ಯರ್ಥಿ: ಅಲ್ಲಾ ಸಾರ್....ಚಹಾದಲ್ಲಿ ಮುಳುಗಿಸಿದ್ದು...
ಸಂದರ್ಶಕ: ಯಾವುದನ್ನು...
ಅಭ್ಯರ್ಥಿ: ದೇಶವನ್ನು ಸಾರ್....
ಸಂದರ್ಶಕ: ನೀವು ಯಾರು?
ಅಭ್ಯರ್ಥಿ: ನೋಟು ನಿಷೇಧ ಕಾಲದಲ್ಲಿ ಆರ್‌ಬಿಐ ಗವರ್ನರ್ ಆಗಿದ್ದದ್ದು ನಾನೇ ಸಾರ್....ಮುಳುಗಿಸುವ ಯಾವ ಕೆಲಸವನ್ನೂ ಚೆನ್ನಾಗಿ ಮಾಡುತ್ತೇನೆ ಸಾರ್...
ಸಂದರ್ಶಕ: ನೀನು ಪಕೋಡಾವನ್ನು ಎಣ್ಣೆಯಲ್ಲಿ ಮುಳುಗಿಸಿದರೆ ಕರಟಿ ಹೋದೀತು...ಅಳಿದುಳಿದ ಪಕೋಡಾ ಉದ್ಯಮವನ್ನಾದರೂ ಬಿಟ್ಟು ಬಿಡು ಮಾರಾಯ... (ಎಂದವನೇ ಸೌಟು ಹಿಡಿದು ಅಭ್ಯರ್ಥಿಯನ್ನು ಓಡಿಸತೊಡಗಿದ)

 

Writer - *ಚೇಳಯ್ಯ chelayya@gmail.com

contributor

Editor - *ಚೇಳಯ್ಯ chelayya@gmail.com

contributor

Similar News