ಬಡ್ಡಿ ದರಗಳು ಮತ್ತು ಭಾರತದ ಆರ್ಥಿಕ ಪುನಶ್ಚೇತನ
ಕೆಳಮುಖವಾಗಿ ಚಲಿಸುತ್ತಿರುವ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಅದನ್ನು ಮೇಲ್ಮುಖವಾಗಿ ಚಲಿಸುವಂತೆ ಮಾಡುವ ನೀತಿಗಳ ಅಗತ್ಯವಿದೆ. ಅಂತಹ ಪರಿಣಾಮವನ್ನು ಬೀರಬಲ್ಲ ಕ್ರಮಗಳು ಈಗಿರುವ ಆರ್ಥಿಕತೆಗಿಂತ ಬಾಹ್ಯಮೂಲದಿಂದಲೇ ಬರಬೇಕು. ಆದರೆ ಬಡ್ಡಿ ದರ ಕಡಿತಗಳು ಆರ್ಥಿಕತೆಗೆ ಅತ್ಯಗತ್ಯವಾಗಿರುವ ಮೇಲ್ಮುಖ ಚಲನೆಗೆ ಉತ್ತೇಜನವನ್ನು ನೀಡಬಲ್ಲದೆ?
ಜಾಗತಿಕ ಆರ್ಥಿಕತೆಯನ್ನು ಅಪ್ಪಳಿಸಲು ಮತ್ತೊಂದು ಆರ್ಥಿಕ ಹಿಂಜರಿತವು ಕಾಯುತ್ತಿದೆಯೇ? ಅಮೆರಿಕ ಹಾಗೂ ಇನ್ನಿತರ ಶಕ್ತ ರಾಷ್ಟ್ರಗಳ ನಡುವೆ ನಡೆಯುತ್ತಿರುವ ವಾಣಿಜ್ಯ ಯುದ್ಧಗಳ ಹಿನ್ನೆಲೆಯಲ್ಲಿ ಮತ್ತು ಅಮೆರಿಕ ಸರಕಾರದ ಅಲ್ಪಾವಧಿ ಬಾಂಡ್ಗಳು ಒದಗಿಸುತ್ತಿರುವ ಲಾಭಾಂಶಕ್ಕೆ ಹೋಲಿಸಿದಲ್ಲಿ ದೀರ್ಘಾವಧಿ ಬಾಂಡ್ಗಳ ಲಾಭಾಂಶ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಸಂಭವನೀಯ ಆರ್ಥಿಕ ಹಿಂಜರಿತದ ಬಗ್ಗೆ ಅಮೆರಿಕದ ಮಾಧ್ಯಮಗಳು ಗಂಭೀರವಾಗಿ ಚರ್ಚಿಸುತ್ತಿವೆ. ಮತ್ತೊಂದು ತೀವ್ರತರವಾದ ಆರ್ಥಿಕ ಹಿಂಜರಿತ ಕಾಯುತ್ತಿದೆಯೇ ಎಂಬುದು ಒಂದು ಊಹಾಪೋಹದ ವಿಷಯವಾಗಿರಬಹುದು. ಅದರೂ ಅದನ್ನು ಒಂದು ಕ್ರಿಯಾಶೀಲ ನೀತಿ ಮತ್ತು ಯೋಜನೆಗಳ ಮೂಲಕ ಬರದಂತೆ ತಡೆಗಟ್ಟಲು ಸಾಧ್ಯವೇ? ಈ ಹಿಂದೆ ಎದುರಾಗಿದ್ದ 2008ರ ಬಿಕ್ಕಟ್ಟನ್ನು ಎದುರಿಸಲು ಜಾಗತಿಕ ಆರ್ಥಿಕತೆಗೆ ಬೇಕಿದ್ದದ್ದು ನೈಜ ವಿತ್ತೀಯ ಉತ್ತೇಜನ. ಆದರೆ ಆಗ ಜಗತ್ತಿನ ಸರಕಾರಗಳು ವಿತ್ತೀಯ ಉತ್ತೇಜನದ ಬದಲಿಗೆ ಹಣಕಾಸಿನ ಹರಿವನ್ನು ಸುಗಮಗೊಳಿಸುವ ಮೂಲಕ ಬಿಕ್ಕಟ್ಟನ್ನು ನಿಭಾಯಿಸಲು ಯತ್ನಿಸಿದ ರೀತಿಯನ್ನು ನೋಡಿದರೆ ಮುಂದೆ ಬರಬಹುದಾದ ಬಿಕ್ಕಟ್ಟನ್ನು ಎದುರಿಸಲು ಬೇಕಾದ ಕ್ಷಮತೆಯ ಬಗ್ಗೆ ಯಾವುದೇ ವಿಶ್ವಾಸವೂ ಹುಟ್ಟುವುದಿಲ್ಲ. ಜಾಗತಿಕ ಆರ್ಥಿಕ ಹಿಂದ್ಸರಿತವನ್ನು ಎದುರಿಸುವಲ್ಲಿ ಹಣಕಾಸು ಹರಿವಿನ ನೀತಿಗಳು ಜಾಗತಿಕವಾಗಿ ವಿಫಲವಾಗಿರುವ ಅನುಭವಗಳಿಂದ ಭಾರತ ಸರಕಾರವು ಸಹ ಏನೂ ಕಲಿತಂತಿಲ್ಲ. ಆರ್ಥಿಕ ನೀತಿ ಕರ್ತೃಗಳ ನಡುವೆ ಬಡ್ಡಿ ದರಗಳನ್ನು ಬದಲಾಯಿಸುವ ಮೂಲಕ ಆರ್ಥಿಕ ವ್ಯವಹಾರಗಳನ್ನು ನಿಭಾಯಿಸಬಹುದೆಂಬ ಬಗ್ಗೆ ಸರ್ವಸಮ್ಮತಿ ಏರ್ಪಟ್ಟಿದೆ. ಆದರೆ ಸಾರ್ವತ್ರಿಕ ಅನುಭವವು ಮಾತ್ರ ಅದಕ್ಕೆ ತದ್ವಿರುದ್ಧವಾಗಿದೆ. ಭಾರತದ ರಿಸರ್ವ್ ಬ್ಯಾಂಕು ಸರಕಾರದ ಈ ನೀತಿ ಧೋರಣೆಯನ್ನು ಒಪ್ಪಿಕೊಂಡು ತನ್ನ ಇತ್ತೀಚಿನ ಹಣಕಾಸು ಪುನರಾವಲೋಕ ಸಭೆಯಲ್ಲಿ ರೆಪೋ ದರವನ್ನು 0.35ರಷ್ಟು ಇಳಿಸಿದೆ. ಸಾಲದ ಮೇಲಿನ ಬಡ್ಡಿ ದರವನ್ನು ಇಳಿಸುವುದರಿಂದ ಸುಲಭ ದರದಲ್ಲಿ ಸಾಲಮೂಲದ ಹಣಕಾಸು ಒದಗುವುದರಿಂದ ಖಾಸಗಿ ಹೂಡಿಕೆ ಮತ್ತು ವೆಚ್ಚಗಳು ಹೆಚ್ಚಾಗಿ ಆರ್ಥಿಕತೆ ಪುನಶ್ಚೇತನಗೊಳ್ಳುವುದೆಂದು ನಿರೀಕ್ಷಿಸಲಾಗಿದೆ. ಆದರೆ ಆರ್ಥಿಕ ತಜ್ಞರಾದ ಕೇನ್ಸ್ ಅಂತಹವರಿಗೂ ಇದರ ಬಗ್ಗೆ ಭಿನ್ನಾಭಿಪ್ರಾಯ ಇರಲು ಸಾಧ್ಯವಿದೆ. ಹಣಕಾಸು ಹರಿವಿನ ಸಡಿಲಿಕೆ ನೀತಿಯ ವಿಸ್ತರಣೆಯಿಂದಾಗಿ ಕೈಗೆ ಸಿಕ್ಕಿದ್ದು ಬಾಯಿಗೆ ದಕ್ಕುವ ನಡುವೆ ಸಾಕಷ್ಟು ಎಡವಟ್ಟುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಭಾವಿಸುತ್ತಿದ್ದರು. ಕೆಳಮುಖವಾಗಿ ಚಲಿಸುತ್ತಿರುವ ಭಾರತದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಅದನ್ನು ಮೇಲ್ಮುಖವಾಗಿ ಚಲಿಸುವಂತೆ ಮಾಡುವ ನೀತಿಗಳ ಅಗತ್ಯವಿದೆ. ಅಂತಹ ಪರಿಣಾಮವನ್ನು ಬೀರಬಲ್ಲ ಕ್ರಮಗಳು ಈಗಿರುವ ಆರ್ಥಿಕತೆಗಿಂತ ಬಾಹ್ಯಮೂಲದಿಂದಲೇ ಬರಬೇಕು. ಆದರೆ ಬಡ್ಡಿ ದರ ಕಡಿತಗಳು ಆರ್ಥಿಕತೆಗೆ ಅತ್ಯಗತ್ಯವಾಗಿರುವ ಮೇಲ್ಮುಖ ಚಲನೆಗೆ ಉತ್ತೇಜನವನ್ನು ನೀಡಬಲ್ಲದೇ?
ಮೊದಲಿಗೆ ಗ್ರಾಹಕ ಬಳಕೆ ಮತ್ತು ವೆಚ್ಚವನ್ನು ಗಮನಿಸೋಣ. ಹಾಲಿ ಆದಾಯವು ಕಡಿಮೆಯಾಗುತ್ತಿರುವುದರಿಂದ ಮತ್ತು ಸದ್ಯದ ಭವಿಷ್ಯದಲ್ಲಿ ಅದು ಉತ್ತಮಗೊಳ್ಳುವ ಅವಕಾಶವೂ ಇಲ್ಲದಿರುವುದರಿಂದ ಹಾಲಿ ಆದಾಯ ಮತ್ತು ವೆಚ್ಚಗಳ ನಡುವಿನ ಸಂಬಂಧಗಳು ದೇಶದ ಸ್ಥೂಲ ಆರ್ಥಿಕ ಪರಿಸ್ಥಿತಿಯಲ್ಲಿರುವ ಸಂಬಂಧಗಳನ್ನು ಯಥಾವತ್ ಪುನರಾವರ್ತಿಸುತ್ತಿದೆ. ಆದ್ದರಿಂದಲೇ ಕುಸಿಯುತ್ತಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವಲ್ಲಿ ಬಳಕೆಯ ಕ್ಷೇತ್ರವು ಸಕ್ರಿಯವಾದ ಅಂಶವಾಗುವುದಿಲ್ಲವೆಂದು ಕೇನ್ಸ್ ಹೇಳುತ್ತಾರೆ. ವೆಚ್ಚವು ಆದಾಯದ ಮೇಲೆ ಆಧಾರಪಟ್ಟಿರುವುದರಿಂದ ಅದು ಆರ್ಥಿಕತೆಯಲ್ಲಿ ವರ್ತುಲತೆಯ ಅಂಶವನ್ನು ಪರಿಚಯಿಸುತ್ತದೆ. ಹೀಗಾಗಿ ಅದು ಆರ್ಥಿಕತೆಯ ಪುನಶ್ಚೇತನಕ್ಕೆ ಸೂಕ್ತವಾದ ಸಾಧನವಾಗುವುದಿಲ್ಲ. ಇನ್ನು ಹೂಡಿಕೆಯ ವಿಷಯಕ್ಕೆ ಬರುವುದಾದರೆ ಅದು ನಿರೀಕ್ಷಿತ ಲಾಭಗಳ ಪ್ರಮಾಣ ಮತ್ತು ಬಡ್ಡಿ ದರವನ್ನು ಆಧರಿಸಿರುತ್ತದೆ. ಅಸ್ತಿತ್ವದಲ್ಲಿರುವ ಕಾರ್ಖಾನೆಗಳೇ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಬಡ್ಡಿ ದರಗಳು ಕಡಿಮೆಯಾದ ಮಾತ್ರಕ್ಕೆ ಅದು ತನ್ನಂತೆ ತಾನೇ ಕಾರ್ಖಾನೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಬೇಕಾದ ಪ್ರೇರಣೆಯನ್ನೇನು ಒದಗಿಸುವುದಿಲ್ಲ. ಸಾಲ ಮತ್ತು ಕಡಿಮೆ ದರದ ಸಾಲಗಳು ಬಂಡವಾಳ ಹೂಡಿಕೆ ಮಾಡಲು ಅಗತ್ಯವಿರುವ ಅಂಶಗಳಲ್ಲ್ಲಿ ಒಂದೇ ವಿನಾ ಅದೊಂದರಿಂದಲೇ ಹೂಡಿಕೆಯನ್ನು ಉತ್ತೇಜಿಸಲು ಸಾಧ್ಯವಿಲ್ಲ. ಹೀಗಾಗಿ ಹೂಡಿಕೆಯೂ ಸಹ ಪರೋಕ್ಷವಾಗಿ ಹಿಂದಿನ ಹಾಗೂ ಹಾಲಿ ಬೇಡಿಕೆಯನ್ನೇ ಆಧರಿಸಿದೆ. ಆದ್ದರಿಂದ ಅದನ್ನು ಆರ್ಥಿಕತೆಯ ಮೇಲ್ಮುಖ ಚಲನೆಗೆ ಬೇಕಾದ ಬಾಹ್ಯ ಒತ್ತಡವನ್ನು ಒದಗಿಸುವ ಅಂಶವೆಂದು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಇದರಲ್ಲಿರುವ ಮತ್ತೊಂದು ಲೋಪವನ್ನು ಗಮನಿಸಬೇಕು. ಈವರೆಗೆ ಈ ಬಗ್ಗೆ ನಡೆದಿರುವ ಎಲ್ಲಾ ಚರ್ಚೆಗಳು ಸಾಲವನ್ನು ತೆಗೆದುಕೊಳ್ಳುವ ವರನ್ನೂ ಮಾತ್ರ ಗಮನದಲ್ಲಿಟ್ಟುಕೊಂಡಿದೆ. ಆದರೆ ಯಾವುದೇ ಸಾಲ ವ್ಯವಹಾರದಲ್ಲಿ ಸಾಲ ತೆಗೆದುಕೊಳ್ಳುವವರಷ್ಟೇ ಮುಖ್ಯವಾಗಿ ಸಾಲ ಕೊಡುವವರ ಅಂಶವೂ ಇರುತ್ತದೆ. ಅಂದರೆ ಬ್ಯಾಂಕುಗಳು ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳು. ರಿಸರ್ವ್ ಬ್ಯಾಂಕ್ ಇಳಿಸಿದ ರೆಪೋ ದರದ ಲಾಭವು ಅಂತಿಮವಾಗಿ ಸಾಲ ತೆಗೆದುಕೊಳ್ಳುವವರ ತನಕ ಇಳಿದು ಹೋಗಬೇಕೆಂದರೆ ಸಾಲ ನೀಡುವ ಹಣಕಾಸು ಸಂಸ್ಥೆಗಳೂ ಸಹ ತಾವು ನೀಡುವ ಸಾಲದ ಬಡ್ಡಿ ದರವನ್ನು ಇಳಿಸಬೇಕಾಗುತ್ತದೆ. ಆದರೆ ಹಲವಾರು ಕಾರಣಗಳಿಂದಾಗಿ ಹಾಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ತಮ್ಮ ಬ್ಯಾಂಕುಗಳಲ್ಲಿ ಶೇಖರವಾಗುತ್ತಿರುವ ವಾಪಸ್ ಆಗದ ಸಾಲಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನೆಲಕಚ್ಚುತ್ತಿರುವ ಕಠಿಣ ಸಂದರ್ಭದಲ್ಲಿ ಸಾಲ ನೀಡುವ ಹಣಕಾಸು ಸಂಸ್ಥೆಗಳು ತಮ್ಮ ಸಾಲಕ್ಕೆ ಹೆಚ್ಚಿನ ಮಟ್ಟದ ಭದ್ರತೆಯನ್ನು ಕಾಪಿಟ್ಟುಕೊಳ್ಳಲು ಮುಂದಾಗಬಹುದು.
ಕೆಲವು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಮಾಡುತ್ತಿರುವಂತೆ ಒಂದೊಮ್ಮೆ ಬ್ಯಾಂಕುಗಳು ತಮ್ಮ ಸಾಲದ ದರವನ್ನು ಇಳಿಸಿದರೂ ಸಹ ತಾವು ನೀಡುತ್ತಿದ್ದ ಸಾಲದ ಗಾತ್ರವನ್ನು ತಗ್ಗಿಸಬಹುದು. ಉದ್ದಿಮೆಗಳ ವಿಸ್ತರಣೆಗೆ ಬಡ್ಡಿದರದ ಇಳಿಕೆ ಮಾತ್ರ ಸಾಲುವುದಿಲ್ಲ. ಅದರ ಜೊತೆಗೆ ಸಾಕಷ್ಟು ಪ್ರಮಾಣದ ಸಾಲದ ಮೊತ್ತವೂ ಅಗತ್ಯವಿರುತ್ತದೆ. ಹೀಗಾಗಿ ಬ್ಯಾಂಕುಗಳು ಬಡ್ಡಿ ದರವನ್ನು ಇಳಿಸಿದರೂ ಸಾಲ ಮರುಪಾವತಿ ಸಾಮರ್ಥ್ಯ ವುಳ್ಳವರನ್ನು ಹೊರತು ಪಡಿಸಿ ಉಳಿದವರಿಗೆ ಅಗತ್ಯವಿರುವಷ್ಟು ಮೊತ್ತದ ಸಾಲವನ್ನು ಕೊಡಲು ನಿಧಾನಿಸಬಹುದು. ಹೀಗಾಗಿ ಇದು ಅನುಕೂಲಕರ ಪರಿಸ್ಥಿತಿಯನ್ನಿರಲಿ ಅತ್ಯಗತ್ಯವಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲೂ ಸಹ ವಿಫಲವಾಗುತ್ತದೆ.
ಹಾಗಿದ್ದಲ್ಲಿ ಈ ಪರಿಸ್ಥಿತಿಯಿಂದ ಮುಕ್ತವಾಗಲು ದಾರಿಯೇನು? ದೇಶವೊಂದರ ಆರ್ಥಿಕ ಚಟುವಟಿಕೆಗಳನ್ನು ನೇರವಾಗಿ ಪ್ರಭಾವಿಸುವುದರಿಂದ ಇಂತಹ ಸಂದರ್ಭಗಳಲ್ಲಿ ಬೇರೆಲ್ಲಾ ನೀತಿಗಳಿಗಿಂತ ವಿತ್ತೀಯ ನೀತಿಗಳು ಹೆಚ್ಚು ಪರಿಣಾಮಕಾರಿ. ಈ ಇಳಿಮುಖದ ವರ್ತುಲವನ್ನು ನಿಲ್ಲಿಸಿ ಮೇಲ್ಮುಖ ಚಲನೆಗೆ ಬೇಕಾದ ಬಾಹ್ಯ ಪ್ರೇರಣೆಯನ್ನು ವಿತ್ತೀಯ ವೆಚ್ಚಗಳು ನೀಡುತ್ತದೆ. ಆದರೆ ದುರದೃಷ್ಟವಶಾತ್, ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯ ಕಾರಣದಿಂದಾಗಿ ಆ ಆವಕಾಶವನ್ನು ಕೈಬಿಡಲಾಗಿದೆ. ಕಳೆದ ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನು ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.3.3ಕ್ಕೆ ಸೀಮಿತಗೊಳಿಸಿಕೊಳ್ಳುವುದಾಗಿ ಘೋಷಿಸಲಾಗಿದೆ. ಅಂದರೆ ಸರಕಾರ ಮಾಡುವ ವೆಚ್ಚವೂ ಸಹ ಅದರ ಹಾಲಿ ಆದಾಯಕ್ಕೆ ಅನುಗುಣವಾಗಿರುತ್ತದೆ. ಇದು ಬಾಹ್ಯಪ್ರೇರಣೆಯನ್ನು ನೀಡಬೇಕೆಂಬ ತತ್ವಕ್ಕೆ ತದ್ವಿರುದ್ಧವಾಗಿದೆ. ಸ್ವಯಂ ವಿಧಿಸಿಕೊಂಡ ಈ ಅಡೆತಡೆಗಳನ್ನು ಮುರಿದುಕೊಳ್ಳದೆ ಆರ್ಥಿಕತೆಯು ಪುನಶ್ಚೇತನಗೊಳ್ಳದು. ಆಗ ಆರ್ಥಿಕತೆಯು ಪುನಃ ಸುಧಾರಣೆ ಕಾಣಬೇಕೆಂದರೆ ಆರ್ಥಿಕ ಹಿಂದ್ಸರಿತದ ವೃತ್ತವನ್ನು ಸಂಪೂರ್ಣವಾಗಿ ಹಾದುಹೋಗಬೇಕಾಗುತ್ತದೆ. ಆದರೆ ಸಾಂಪ್ರ ದಾಯಿಕವಾದ ವಿತ್ತೀಯ ಪ್ರೇರಣೆಗಳು ಕೇವಲ ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡಬಲ್ಲವು. ಭಾರತದ ಆರ್ಥಿಕತೆಯು ರೂಢಿಗತವಾದ ಏರಿಳಿತವನ್ನು ಮಾತ್ರ ಅನುಭವಿಸುತ್ತಿಲ್ಲ. ಬದಲಿಗೆ ಅದರ ಆರ್ಥಿಕ ವ್ಯವಸ್ಥೆಯೇ ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅಂದರೆ ಅದು ಅರ್ಥಿಕ ವರ್ತುಲದ ಬಿಕ್ಕಟ್ಟನ್ನು ಮತ್ತು ಪ್ರಧಾನ ಆರ್ಥಿಕ ಚಲನೆಯ ಬಿಕ್ಕಟ್ಟನ್ನೂ ಒಟ್ಟಾಗಿ ಎದುರಿಸುತ್ತಿದೆ. ವರ್ತುಲ ಏರಿಳಿವುಗಳ ಬಿಕ್ಕಟ್ಟನ್ನು ವಿತ್ತೀಯ ನೀತಿಗಳ ಅಲ್ಪಸ್ವಲ್ಪ ಮಾರ್ಪಾಡಿನ ಮೂಲಕ ಸರಿಪಡಿಸಬಹುದು. ಆದರೆ ಇಡೀ ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟನ್ನು ಸರಿಪಡಿಸಲು ಇನ್ನೂ ಆಳವಾದ ಮಧ್ಯಪ್ರವೇಶಗಳೇ ಬೇಕಾಗುತ್ತವೆ. ಸಮಾನ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಒದಗಿಸಬಲ್ಲ ಮೂಲಗಳನ್ನು ಪತ್ತೆಹಚ್ಚುವ ಅಗತ್ಯಬೀಳುತ್ತದೆ. ಪ್ರಾಯಶಃ ಇದು ಒಂದು ಹೊಸ ಹಸಿರು ಒಪ್ಪಂದ ಮಾಡಿಕೊಳ್ಳಲು ಸೂಕ್ತವಾದ ಸಮಯವಾಗಿದೆ. ಸರಕಾರವು ತಾನು ತೆಗೆದುಕೊಳ್ಳಬಹುದಾದ ಇನ್ನಿತರ ಕ್ರಮಗಳ ಜೊತೆಗೆ ಹಸಿರು ಮೂಲಭೂತ ಸೌಕರ್ಯಗಳಲ್ಲಿ ಹೂಡಿಕೆ ಮಾಡುವುದನ್ನು ಸಹ ಒಂದು ನಿರ್ದಿಷ್ಟ ವಿತ್ತೀಯ ಮಧ್ಯಪ್ರವೇಶ ಕ್ರಮವೆಂದು ಪರಿಗಣಿಸಬಹುದು. ಅಂಥ ವೆಚ್ಚಗಳು ಎಂದಿನಂತೆ ಪರಿಣಾಮಗಳನ್ನು ಗುಣಿತಗೊಳಿಸುವ ಆಯಾಮವನ್ನು ಹೊಂದಿರುವು ದಲ್ಲದೆ ಇನ್ನಿತರ ಹಲವಾರು ಪೂರಕ ಲಾಭಗಳನ್ನು ಒದಗಿಸುತ್ತವೆ. ಹಸಿರು ಅಭಿವೃದ್ಧಿಯು ಹೆಚ್ಚಿನ ಉದ್ಯೋಗ ಸಾಧ್ಯತೆಗಳ ಕಾರಣದಿಂದಾಗಿ ಮತ್ತು ಪರಿಸರ ಸಂರಕ್ಷಣಾ ಕಾರಣಗಳಿಂದಾಗಿ ಹೆಚ್ಚು ಒಳಗೊಳ್ಳುವ ಗುಣವನ್ನು ಹೊಂದಿರುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಭಾರತದ ಆರ್ಥಿಕತೆಯ ಭವಿಷ್ಯದ ಬಗ್ಗೆ ಸಮಗ್ರವಾದ ಒಂದು ಯೋಜನೆಯಿಲ್ಲದೆ ತತ್ಕ್ಷಣಕ್ಕೆ ಬೇಕಾದ ಕ್ರಮಗಳಿಗೆ ಮಾತ್ರ ಮುಂದಾಗುವುದರಿಂದ ಹೆಚ್ಚಿನ ಪ್ರಯೋಜನವೇನೂ ಇಲ್ಲ. ಆದರೆ ಹಾಲಿ ಸರಕಾರಕ್ಕೆ ಯೋಜನೆಯೆಂಬ ಕ್ರಮದಲ್ಲೇ ವಿಶ್ವಾಸವಿಲ್ಲವಲ್ಲ!